ಬಿಳಿ ಹೊಟ್ಟೆ ನೀಲಿ ಮೈ ಹುಳಹಿಡುಕ ಎಂದೂ ಇದನ್ನು ಕರೆಯುತ್ತಾರೆ. ಇದು 15 ಸೆಂ.ಮೀ ಉದ್ದವಿರುವ -ಈ ಪಕ್ಷಿ ಹಾರುವ ರೆಕ್ಕೆ ಹುಳಗಳನ್ನು ತಿನ್ನುತ್ತದೆ. ನಿತ್ಯ ಹರಿದ್ವರ್ಣ ಕಾಡೇ ಇದರ ಇರುನೆಲೆ. ಎತ್ತರದ ಗುಡ್ಡದಲ್ಲಿ, ದೊಡ್ಡ ಮರ ಇರುವ ನೆರಳಿನ ಪ್ರದೇಶ ಈ ಹಕ್ಕಿಗೆ ಪ್ರಿಯ. ನಿತ್ಯ ಹರಿದ್ವರ್ಣ, ಎತ್ತರದ ಮರಗಳಿರುವ ಕಾಡಿನಲ್ಲಿ, ಹಳ್ಳಗಳ ಅಕ್ಕ ಪಕ್ಕ, ಅರೆ ಮಲೆನಾಡು ಪ್ರದೇಶದಲ್ಲಿ ಇದು ಕಾಣುವುದು ಹೆಚ್ಚು.
ಜೇನು ಹಿಡುಕ , ಡ್ರಾಂಗೋ ಹಕ್ಕಿಗಳಂತೆ ಕುಳಿತಲ್ಲಿಂದಲೇ- ನೇರ ಹಾರಿ ಗಾಳಿಯಲ್ಲಿ ಓಡುವ ರೆಕ್ಕೆ ಹುಳಗಳನ್ನು ಮಾರ್ಗ ಮಧ್ಯದಲ್ಲೆ ಹಿಡಿದು ಮತ್ತೆ ತನ್ನ ಇರುನೆಲೆಗೆ ಬಂದು ತಿನ್ನುತ್ತದೆ. ದೊಡ್ಡ ಮರಗಳಿರುವ ಕಾಡುಗಳಲ್ಲಿ ರೆಕ್ಕೆ ಹುಳಗಳು ಅಧಿಕವಾಗಿರುವುದರಿಂದ ಅಲ್ಲೆಲ್ಲಾ ಇವು ಹಾಜರಾಗಿರುತ್ತವೆ.
ಕುಮಟಾದ ಮೂರೂರು, ಹೊನ್ನಾವರ, ಗೇರುಸೊಪ್ಪಾ, ಸಪ್ಪಿನ ಹೊಸಳ್ಳಿ, ಬಡಾಳ ,ಅಘನಾಷಿನಿ ನದಿಯ ಸುತ್ತಮುತ್ತಲ ಕಾಡಿನಲ್ಲಿ ಬಿಳಿ ಹೊಟ್ಟೆಯ ನೀಲಿ ಹುಳಗುಳಕಗಳನ್ನು ಕಾಣಬಹುದು. ಹಾರುವಾಗಲೆಲ್ಲಾ ಚಿಚೀಚಿ ಎಂಬ ಭಿನ್ನ ಸಂಗೀತದ ಸಿಳ್ಳೆ ಹೊರಡಿಸುತ್ತದೆ. ಗಂಡಿಗೆ – ಅಚ್ಚ ನೀಲಿ ಮೈಬಣ್ಣ , ಹುಬ್ಬು ಮುಂದೆಲೆಯಲ್ಲಿ ತಿಳಿ ನೀಲಿ ಮಚ್ಚೆ ಇರುತ್ತದೆ. ಹೊಟ್ಟೆಯ ಮಧ್ಯ ಬಿಳಿ ಬಣ್ಣವಿದ್ದು ಸುತ್ತಲು ಬೂದು ಮಿಶ್ರಿತ ಬಿಳಿ ಬಣ್ಣ ಇದೆ. ಉದ್ದ ಬಾಲದ ಗರಿ, ಉದ್ದ ಕಾಲು ಹೊಳೆವ ಕಣ್ಣಿದೆ ಕಣ್ಣಿನ ಸುತ್ತಲೂ ತಿಳಿ ನೀಲಿ ಬಣ್ಣ. ಇದನ್ನು ಇತರ ಈ ವರ್ಗದ ಹಕ್ಕಿಗಳಿಂದ ಪ್ರತ್ಯೇಕಿಸಲು ವೈವಿಧ್ಯ ಬಣ್ಣಗಳು ಸಹಾಯಕವಾಗಿವೆ. ಹೆಣ್ಣು ಹಕ್ಕಿಯ ಬಣ್ಣ ಬೇರೆ ಇದೆ. ಹೆಣ್ಣಿಗೆ ಎದೆ -ತಿಳಿ ಇಟ್ಟಿಗೆ ಕೆಂಪು ಬಣ್ಣ ಇದೆ. ತಿಳಿ ಕಂದು ಹಸಿರು ಬೆನ್ನು, ಬಾಲದ ಪುಕ್ಕದ ಮೇಲಾºಗದಲ್ಲಿದೆ. ಇದನ್ನೇ ಹೋಲುವ ಅಲ್ಟ್ರಾ ಮರಿನ್ ನೀಲಿಬಣ್ಣದ ಹುಳ ಹಿಡುಕ ಹಕ್ಕಿ ಸಹ ಇದೆ.
ಇದೊಂದು ಹಾಡು ಹಕ್ಕಿ. ಸುಮಧುರವಾಗಿ ಭಿನ್ನ ದನಿ ಹೊರಡಿಸುತ್ತದೆ. ಒಮ್ಮೊಮ್ಮೆ ಸಿಳ್ಳೆ ಹಾಕುತ್ತದೆ. ಕೆಲವೊಮ್ಮೆ ಮೆಲು ದನಿಯಲ್ಲಿ ಚೀ,ಚೀ ಚಿಚ್, ಚಿಚ್ ಹೀಗೆ ದನಿ ಹೊರಡಿಸುತ್ತದೆ. ಇದರ ಸಂಭಾಷಣೆ ಹಾಗೂ ಹಾಡಿನ ಅಧ್ಯಯನ ನಡೆದರೆ ಅವುಗಳ ಅರ್ಥ, ಯಾವಾಗ ಯಾವರೀತಿ ದನಿ ಹೊರಡಿಸುತ್ತದೆ ಮುಂತಾದ ವಿಷಯಗಳನ್ನು ತಿಳಿಯಬಹುದು. ಹೀಗೆ ಸಂತೋಷ ವ್ಯಕ್ತಪಡಿಸುವುದು- ಇಲ್ಲವೇ ವೈರಿಗಳಿಂದ ತನ್ನ ಮರಿ, ಗೂಡು ರಕ್ಷಿಸಿಕೊಳ್ಳುವುದಕ್ಕೆ ದನಿ ಬಳಸುತ್ತದೆ. ಕಾಡಿನ ಮರಗಳ ರಕ್ಷಣೆಯಲ್ಲಿ ಇದರ ಪಾತ್ರ ದೊಡ್ಡದು. ಮರಗಳನ್ನು ಕೊರೆವ ಗೆದ್ದಲುಗಳನ್ನು ತಿಂದು ಕಾಡಿನ ಮರ ರಕ್ಷಿಸುತ್ತದೆ. ಹಣ್ಣು ಬಿಡುವ ಮರ, ಸಾಂಬಾರು ಮರಗಳನ್ನು ರಕ್ಷಿಸಿ ಮನುಷ್ಯರಿಗೆ ಬಹು ಉಪಕಾರ ಮಾಡುತ್ತದೆ. 19 ಡಿಗ್ರಿ ಉಷ್ಣತೆ ಇರುವ 1500 ಮೀ. ಎತ್ತರದ ಪಶ್ಚಿಮ ಘಟ್ಟದ ಕಾಡು ಇದರ ಇರುನೆಲೆ . ಗೋವಾ, ಕರ್ನಾಟಕ, ತಮಿಳುನಾಡು, ಬಿಳಿಗಿರಿರಂಗನ ಬೆಟ್ಟದ ಕಾಡುಗಳಲ್ಲಿ ಈ ಪ್ರಬೇಧದ ಹಕ್ಕಿ ಇದೆ.
ಪಿ.ವಿ.ಭಟ್ ಮೂರೂರು