ಮೈಸೂರು: ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರಕಾರ್ಮಿಕ ಮಹಾಸಂಘದ ಸದಸ್ಯರು ಗುರುವಾರ ನಗರದಲ್ಲಿ ಪೊರಕೆ ಚಳವಳಿ ನಡೆಸಿದರು.
2016ರಲ್ಲಿ ರಾಜ್ಯ ಸಚಿವ ಸಂಪುಟ ಸಬೆಯಲ್ಲಿ ಚರ್ಚಿಸಿ 2017ರ ಮಾರ್ಚ್ ತಿಂಗಳೊಳಗೆ ವಿಶೇಷ ನೇಮಕಾತಿ ನಿಯಮ ರೂಪಿಸಿ ಎಲ್ಲಾ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಲು ನಿರ್ಧರಿಸಿತ್ತು. ಆದರೆ ಇದುವರೆಗೂ ಯಾವುದೇ ನಿರ್ಧಾರ ಕೈಗೊಳ್ಳದಿರುವುದು ಖಂಡನೀಯ ಎಂದು ಆರೋಪಿಸಿ ಪೊರಕೆ ಚಳವಳಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಪೊರಕೆ ಚಳವಳಿ ನಡೆಸಲಾಗುತ್ತಿದ್ದು, ಈ ಹಿನ್ನೆಲೆ ಸರ್ಕಾರ ನಾಲ್ಕು ವರ್ಷಗಳಿಂದ ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಎಲ್ಲಾ ಪೌರಕಾರ್ಮಿಕರನ್ನು ಕಾಯಂ ಮಾಡುವುದಾಗಿ ನೀಡಿರುವ ಆಶ್ವಾಸನೆ ಅನುಷ್ಠಾನಕ್ಕೆ ತರಬೇಕು.
ಮುಂದಿನ 15 ದಿನಗಳೊಳಗೆ ರಾಜ್ಯ ಸರ್ಕಾರ ಸಚಿವ ಸಂಪುಟದ ತೀರ್ಮಾನದಂತೆ ಗುತ್ತಿಗೆ ಪದ್ಧತಿ ರದ್ದು ಮಾಡದಿದ್ದಲ್ಲಿ ಜೂನ್ 12ರಿಂದ ರಾಜ್ಯಾದ್ಯಂತ ಸ್ವತ್ಛತಾ ಕಾರ್ಯ ಸ್ಥಗಿತಗೊಳಿಸಿ, ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಸಿದರು. ಇದಕ್ಕೂ ಮುನ್ನ ನಗರದ ಪುರಭವನದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪೌರಕಾರ್ಮಿಕರು, ನಂತರ ಸಯ್ನಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.
ರಾಜ್ಯ ನಗರ ಪಾಲಿಕೆ, ನಗರಸಬೆ, ಪುರಸಭೆಗಳ ಪೌರಕಾರ್ಮಿಕ ಮಹಾಸಂಘದ ಉನ್ನತ ಸಮಿತಿ ಅಧ್ಯಕ್ಷ ಎನ್.ಮಾರ, ಪ್ರಮುಖರಾದ ಟಿ. ಶ್ರೀನಿವಾಸ್, ಎಸ್.ಮುರಗೇಶ್, ನರಸಿಂಹ, ಆರ್.ವಿಜಯ್, ಅರುಣ್‌ಕುಮಾರ್, ಕುಮಾರಸ್ವಾಮಿ, ಕೆ.ಪಳನಿ, ಎಂ.ರಾಜೀವ್, ಎನ್.ಗಣೇಶ್, ಎಂ.ಮಹದೇವು, ಧನರಾಜ್, ಜಿ.ಮಹದೇವ, ಅಶೋಕ್ ಇತರರು ಇದ್ದರು.