Advertisement

ಯಾವ ಯಾವ ರಾಜ್ಯಗಳಲ್ಲಿ ಸೌಲಭ್ಯ- ಕೊಡುಗೆಗಳ ಮಹಾಪೂರ ಜಾರಿಯಲ್ಲಿವೆ? ಇಲ್ಲಿದೆ ಮಾಹಿತಿ

12:48 AM Jun 02, 2023 | Team Udayavani |

ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳು ಭರಪೂರ ಉಚಿತ ಕೊಡುಗೆಗಳನ್ನು ಘೋಷಿಸುವುದು ಮಾಮೂಲಿ. ಇದಕ್ಕಾಗಿಯೇ ಅವು ಪ್ರಣಾಳಿಕೆಯನ್ನು ಚುನಾವಣೆಗೂ ಮುನ್ನ ಘೋಷಿಸುತ್ತವೆ. ಆದರೆ ಈ ಪ್ರಣಾಳಿಕೆಗಳಲ್ಲಿನ ಅಂಶಗಳು ಎಷ್ಟೋ ಬಾರಿ ಜಾರಿಯಾಗುವುದೇ ಇಲ್ಲ. ಅದಕ್ಕಾಗಿಯೇ ಕಾಂಗ್ರೆಸ್‌ ಈ ಬಾರಿ ಕರ್ನಾಟಕ ಮತ್ತು ಹಿಮಾಚಲ ಪ್ರದೇಶದಲ್ಲಿ ಗ್ಯಾರಂಟಿ ಹೆಸರಲ್ಲಿ ಭರವಸೆ ನೀಡಿದೆ. ಅವುಗಳ ಜಾರಿಗೆ ಸರ್ಕಸ್‌ ಕೂಡ ಮಾಡುತ್ತಿದೆ. ಹಾಗಾದರೆ ಯಾವ ಯಾವ ರಾಜ್ಯಗಳಲ್ಲಿ ಈ ರೀತಿಯ ಉಚಿತ ಕೊಡುಗೆಗಳು/ಸೌಲಭ್ಯಗಳು ಜಾರಿಯಲ್ಲಿವೆ? ಈ ಬಗ್ಗೆ ಒಂದು ನೋಟ ಇಲ್ಲಿದೆ. 

Advertisement

1.ಆಂಧ್ರಪ್ರದೇಶ
ಆಂಧ್ರದಲ್ಲಿರುವ ಜಗನ್‌ ಮೋಹನ್‌ ರೆಡ್ಡಿ ಸರಕಾರವು ರೈತರಿಗಾಗಿ ವೈಎಸ್‌ಆರ್‌ ರೈತು ಭರೋಸಾ ಎಂಬ ಹೆಸರಲ್ಲಿ ವಾರ್ಷಿಕ 12,500 ರೂ. ನೀಡುತ್ತಿದೆ. ಹಾಗೆಯೇ ಜಗನಣ್ಣ ಅಮ್ಮಾವೋದಿ ಯೋಜನೆ ಹೆಸರಲ್ಲಿ 1ರಿಂದ 12ನೇ ತರಗತಿ ವರೆಗೆ ಶಾಲೆಗೆ ಹೋಗುವ ಮಕ್ಕಳ ತಾಯಂದರಿಗೆ ವಾರ್ಷಿಕ 15,000 ರೂ. ನೀಡುತ್ತಿದೆ. ಜತೆಗೆ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ, ಕಾಪು, ಇಬಿಸಿ ಮತ್ತು ದಿವ್ಯಾಂಗ ಮಕ್ಕಳ ಶಾಲಾ ಶುಲ್ಕವನ್ನು ವಾಪಸ್‌ ತೆಗೆದುಕೊಳ್ಳುವ ಸೌಲಭ್ಯ ಒದಗಿಸಲಾಗಿದೆ. ಜತೆಗೆ ಪ್ರತಿಯೊಬ್ಬ ವಿದ್ಯಾರ್ಥಿಗೂ 20,000 ರೂ. ಹಣಕಾಸಿನ ಸಹಾಯ ನೀಡಲಾಗುತ್ತಿದೆ.  ಜತೆಗೆ ವೈಎಸ್‌ಆರ್‌ ಪೆಳ್ಳಿ ಕನುಕಾ ಯೋಜನೆಯಲ್ಲಿ ಬಡವರು, ಹಿಂದುಳಿದ ವರ್ಗ, ಎಸ್‌, ಎಸ್‌ಟಿ ಪಂಗಡದ ಯುವತಿಯರಿಗೆ ವಿವಾಹದ ವೇಳೆ 1.50ರಿಂದ 2 ಲಕ್ಷದ ವರೆಗೆ ಸಹಾಯ ಧನ ಸಿಗುತ್ತಿದೆ.

2.ಅಸ್ಸಾಂ
ಅಸ್ಸಾಂ ಸರಕಾರವು ಆರ್ಥಿಕವಾಗಿ ಹಿಂದುಳಿದವರಿಗೆ ವಿವಾಹವಾಗುವ ವೇಳೆಯಲ್ಲಿ ಒಂದು ತೊಲ ಬಂಗಾರವನ್ನು ನೀಡುವ ಯೋಜನೆ ರೂಪಿಸಿದೆ. ಬ್ಯಾಂಕ್‌ ಅಕೌಂಟ್‌ ಒಪನ್‌ ಮಾಡುವ ಟೀ ತೋಟದ ಕೆಲಸಗಾರರ ಅಕೌಂಟ್‌ಗೆ 5 ಸಾವಿರ ರೂ. ಧನಸಹಾಯ.

3.ಛತ್ತೀಸ್‌ಗಢ
ಛತ್ತೀಸ್‌ಗಢದಲ್ಲಿರುವ ಕಾಂಗ್ರೆಸ್‌ ಸರಕಾರವು, ನಿರುದ್ಯೋಗಿ ಯುವಕರಿಗೆ ಪ್ರತೀ ತಿಂಗಳು 2,500 ರೂ. ನೀಡುತ್ತಿದೆ. ಭೂರಹಿತ ಕೂಲಿ ಕಾರ್ಮಿಕರಿಗೆ ವಾರ್ಷಿಕ 6,000 ರೂ. ನಗದು, ಎರಡನೇ ಹೆಣ್ಣು ಮಗು ಹೆರುವ ತಾಯಂದಿರಿಗೆ ಒಂದು ಬಾರಿಯ ಆರ್ಥಿಕ ಸಹಾಯವೆಂಬಂತೆ 5,000 ರೂ. ಸಹಾಯ ಧನ ನೀಡಲಾಗುತ್ತಿದೆ.

4.ದಿಲ್ಲಿ
ಮೊಹಲ್ಲ ಕ್ಲಿನಿಕ್‌ ಮೂಲಕ ಉಚಿತವಾಗಿ ಎಲ್ಲರಿಗೂ ಆರೋಗ್ಯ. 200 ಯೂನಿಟ್‌ ವರೆಗೆ ವಿದ್ಯುತ್‌ ಉಚಿತ. 200ರಿಂದ 400 ಯೂನಿಟ್‌ ವರೆಗೆ ಶೇ.50ರಷ್ಟು ವಿನಾಯಿತಿ. ಹಾಗೆಯೇ ದಿಲ್ಲಿಯ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಸೌಲಭ್ಯ ನೀಡಲಾಗಿದೆ. ಜತೆಗೆ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನೂ ನೀಡಲಾಗುತ್ತಿದೆ.

Advertisement

5.ಗೋವಾ 
ಬಿಪಿಎಲ್‌ ಕಾರ್ಡ್‌ದಾರರಿಗೆ ವಾರ್ಷಿಕ ಮೂರು ಸಿಲಿಂಡರ್‌ ಉಚಿತವಾಗಿ ನೀಡಲಾಗುತ್ತಿದೆ. ಜತೆಗೆ 50 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಪ್ರವಾಸ ಭಾಗ್ಯ ಕರುಣಿಸಲಾಗಿದೆ. ರಾಜ್ಯದ ಎಲ್ಲ ಮನೆಗಳಿಗೂ ಉಚಿತವಾಗಿ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ನಿರುದ್ಯೋಗಿ ಯುವಕರಿಗೆ ಉಚಿತ ಟ್ಯಾಕ್ಸಿ ಸೇವೆಯನ್ನು ಒದಗಿಸಲು ಮುಂದಾಗಿದೆ.

6.ಗುಜರಾತ್‌ 
12ನೇ ತರಗತಿ ಮಕ್ಕಳಿಗೆ ಉಚಿತ ಟ್ಯಾಬ್ಲೆಟ್‌ ನೀಡಲಾಗುತ್ತಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಬಿಪಿಎಲ್‌ ಕುಟುಂಬಕ್ಕೆ ವಾರ್ಷಿಕ 2 ಸಿಲಿಂಡರ್‌ ಉಚಿತವಾಗಿ ನೀಡಲಾಗುತ್ತಿದೆ. ಅಂದರೆ ಸಿಲಿಂಡರ್‌ ಖರೀದಿ ಮಾಡಿದ ಮೂರು ದಿನಗಳ ಒಳಗೆ ಇವರ ಅಕೌಂಟ್‌ಗೆ ಸಿಲಿಂಡರ್‌ ಹಣ ತಲುಪಲಿದೆ.

7.ತಮಿಳುನಾಡು
ತಮಿಳುನಾಡಿನಲ್ಲಿ ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯವಿದೆ. ಸರಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಬೆಳಗಿನ ಉಪಹಾರ ನೀಡಲಾಗುತ್ತಿದೆ. ಅಮ್ಮ ದ್ವಿಚಕ್ರ ವಾಹನ ಯೋಜನೆ ಅಡಿಯಲ್ಲಿ 20 ಸಾವಿರ ರೂ. ಸಹಾಯಧನ, ನಿರುದ್ಯೋಗ ಭತ್ತೆ, ಅಂದರೆ 10ನೇ ತರಗತಿ ಫೇಲ್‌ ಆದವರಿಗೆ ಮಾಸಿಕ 200 ರೂ., 10ನೇ ತರಗತಿ ಪಾಸಾದವರಿಗೆ 300 ರೂ., 12ನೇ ತರಗತಿ ಪಾಸಾದವರಿಗೆ 400 ರೂ., ಪದವಿ ಪಡೆದವರಿಗೆ 600 ರೂ. ನೀಡಲಾಗುತ್ತದೆ. ಹಾಗೆಯೇ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ದಿವ್ಯಾಂಗರಿಗೆ ಹೆಚ್ಚಿನ ಹಣ ಸಿಗಲಿದೆ.  ಇನ್ನು ವಿವಾಹ ನೆರವು ಯೋಜನೆಯಲ್ಲಿ 20 ಸಾವಿರದಿಂದ 50 ಸಾವಿರ ರೂ.ವರೆಗೆ ಹಣ ಮತ್ತು 8 ಗ್ರಾಂ ತೂಕವುಳ್ಳ 22 ಕ್ಯಾರೆಟ್‌ ಚಿನ್ನದ ನಾಣ್ಯವನ್ನು ನೀಡಲಾಗುತ್ತಿದೆ. ದೇಗುಲಗಳಲ್ಲಿ ಇಡೀ ದಿನ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.

8.ಪಂಜಾಬ್‌
ಪಂಜಾಬ್‌ನಲ್ಲಿ 300 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಸೌಲಭ್ಯ ನೀಡಲಾಗುತ್ತಿದೆ. ಆಶೀರ್ವಾದ ಯೋಜನೆ ಅಡಿಯಲ್ಲಿ ಯುವತಿಯ ವಿವಾಹದ ವೇಳೆಯಲ್ಲಿ 51 ಸಾವಿರ ರೂ.ಗಳ ಸಹಾಯಧನವನ್ನು ನೀಡಲಾಗುತ್ತಿದೆ. ಯುಪಿಎಸ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್‌ ವ್ಯವಸ್ಥೆ ಮಾಡಲಾಗಿದೆ.

9.ಮಹಾರಾಷ್ಟ್ರ
75 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ. ಅಂಬೇಡ್ಕರ್‌ ಜಯಂತಿ ಮತ್ತು ಗುಡಿ ಪಾಡ್ವಾ ದಿನದಂದು ಬಡವರಿಗೆ ಉಚಿತ ಪಡಿತರ, ರೈತರಿಗೆ ವಾರ್ಷಿಕ 6000 ರೂ. ಸಹಾಯ ಧನ, ಆತ್ಮಹತ್ಯಾ ಕೇಸುಗಳು ಹೆಚ್ಚಾಗಿರುವ 14 ಜಿಲ್ಲೆಗಳ ರೈತರಿಗೆ ಪಡಿತರ ಧಾನ್ಯದ ಬದಲಿಗೆ 1,800 ರೂ. ಹಣಕಾಸಿನ ನೆರವು, ಪ್ರಯಾಣದ ವೇಳೆ ಮಹಿಳೆಯರಿಗೆ ಶೇ.50ರಷ್ಟು ಡಿಸ್ಕೌಂಟ್‌ ನೀಡಲಾಗುತ್ತಿದೆ.

10.ರಾಜಸ್ಥಾನ
ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಉಚಿತ ಕೋಚಿಂಗ್‌, ರಾಜ್ಯದ ಎಲ್ಲ ವಿದ್ಯುತ್‌ ಬಳಕೆದಾರರಿಗೆ 100 ಯೂನಿಟ್‌ ಉಚಿತ ವಿದ್ಯುತ್‌. ಶಾಲಾ ಮಕ್ಕಳಿಗೆ ಉಚಿತ ಸಮ ವಸ್ತ್ರ, ಹಾಲು, ರೈತರಿಗೆ 2000 ಯೂನಿಟ್‌ ಉಚಿತ ವಿದ್ಯುತ್‌ ಅನ್ನು ನೀಡಲಾಗುತ್ತಿದೆ.

11.ತೆಲಂಗಾಣ
ದಕ್ಷಿಣ ಭಾರತದಲ್ಲಿ ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ತೆಲಂಗಾಣದಲ್ಲಿ ಉಚಿತ ಯೋಜನೆಗಳ ಭರಾಟೆ ಹೆಚ್ಚು. ಇಲ್ಲಿ ರೈತರು, ಮಹಿಳೆಯರು, ಮಕ್ಕಳು, ದಲಿತರು, ಹಿಂದುಳಿದವರಿಗೆ ನಾನಾ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಅಂದರೆ ಗರ್ಭಿಣಿಯರಿಗೆ ಪೌಷ್ಠಿಕಾಂಶ ಕಿಟ್‌ ಮೂಲಕ ಒಂದು ಕೆ.ಜಿ. ಖರ್ಜೂರ, ಅರ್ಧ ಕೆ.ಜಿ. ತುಪ್ಪ, ಮೂರು ಬಾಟೆಲ್‌ ಐರನ್‌ ಸಿರಪ್‌, ಪೌಷ್ಠಿಕಾಂಶ ಪುಡಿ ನೀಡಲಾಗುತ್ತಿದೆ. ದಲಿತ ಬಂದು ಯೋಜನೆ ಹೆಸರಿನಲ್ಲಿ ಒಂದು ಬಾರಿಯ ನೆರವಿನಂತೆ 10 ಲಕ್ಷ ರೂ. ನೀಡಲಾಗುತ್ತಿದೆ. ರೈತ ಬಂಧು ಯೋಜನೆ ಹೆಸರಿನಲ್ಲಿ ಪ್ರತೀ ಎಕ್ರೆಗೆ 5 ಸಾವಿರ ರೂ. ಹಣಕಾಸಿನ ನೆರವು ನೀಡುತ್ತಿದ್ದು, ಇದನ್ನು ಬಳಸಿಕೊಂಡು ಬಿತ್ತನೆ ಬೀಜ, ರಸಗೊಬ್ಬರ, ಕೂಲಿಕಾರರ ವೇತನವನ್ನು ನೀಡಬಹುದಾಗಿದೆ. ಕೆಸಿಆರ್‌ ಕಿಟ್‌ ಹೆಸರಿನಲ್ಲಿ ಗರ್ಭಿಣಿಯರಿಗೆ ಮೂರು ಕಂತುಗಳಲ್ಲಿ 12 ಸಾವಿರ ರೂ., ಒಂದು ವೇಳೆ ಇವರಿಗೆ ಹೆಣ್ಣು ಮಗು ಜನಿಸಿದರೆ ಒಂದು ಸಾವಿರ ರೂ. ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಎಸ್‌ಸಿ/ಎಸ್‌ಟಿ ಸಮುದಾಯದ ಹೆಣ್ಣು ಮಕ್ಕಳ ವಿವಾಹ ವೇಳೆ 1,00,116 ರೂ. ಗಳನ್ನು ಹಣಕಾಸಿನ ನೆರವು ರೂಪದಲ್ಲಿ ಸಹಾಯ, ಆಸರ ಪಿಂಚಣಿ ಯೋಜನೆ ಅಡಿಯಲ್ಲಿ ವೃದ್ಧರಿಗೆ, ವಿಧವೆಯರು, ಬೀಡಿ ಕಾರ್ಮಿಕರು, ಒಬ್ಬಂಟಿ ಮಹಿಳೆ, ನೇಕಾರರು, ಏಡ್ಸ್‌ ಸೋಂಕಿತರಿಗೆ 3,016 ರೂ. ನೀಡಲಾಗುತ್ತಿದೆ.

12.ಉತ್ತರ ಪ್ರದೇಶ
ಉತ್ತರ ಪ್ರದೇಶದಲ್ಲಿ ವೃದ್ಧರಿಗೆ ಪ್ರತೀ ತಿಂಗಳೂ 1,000 ರೂ. ಪಿಂಚಣಿ ನೀಡಲಾಗುತ್ತಿದೆ. ದಿವ್ಯಾಂಗರಿಗೆ 1000 ರೂ. ಹಣ, ವಿವಾಹವಾಗುವ ಹೆಣ್ಣು ಮಕ್ಕಳಿಗೆ 51 ಸಾವಿರ ರೂ. ನೆರವು, ರೈತರೇನಾದರೂ ಆಕಸ್ಮಿಕವಾಗಿ ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ 5 ಲಕ್ಷ ರೂ. ವಿಮೆ, ಸ್ವಾಮಿ ವಿವೇಕಾನಂದ ಸ್ವಾವಲಂಬನೆ ಯೋಜನೆ ಅಡಿಯಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌ ಅಥವಾ ಸ್ಮಾರ್ಟ್‌ಫೋನ್‌, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ಮಕ್ಕಳಿಗೆ ಉಚಿತ ತರಬೇತಿ, 25-40 ವರ್ಷದೊಳಗಿನ ನಿರುದ್ಯೋಗಿಗಳಿಗೆ ಮಾಸಿಕ 1,000 ರೂ. ಮಾಸಿಕ ಭತ್ತೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next