Advertisement

ಹಣ್ಣುಗಳಲ್ಲಿ ಯಾವುದು ಕಹಿ ಯಾವುದು ಸಿಹಿ?

03:45 PM Apr 27, 2017 | Harsha Rao |

ಹಿಂದಿ ಭಾಷೆಯಲ್ಲಿ ಅನೇಕ ಭಕ್ತಿಗೀತೆಗಳನ್ನು ರಚಿಸಿರುವ ಪ್ರಖ್ಯಾತ ಸಂತ ರೈದಾಸ ಪರೋಪಕಾರಿ ಗುಣವನ್ನೂ ಹೊಂದಿದ್ದ. ಒಂದು ದಿನ ರೈತನೊಬ್ಬ ಅವನ ಬಳಿಗೆ ಬಂದು, “ಅಣ್ಣಾ, ನನಗೆ ತುರ್ತು ಕೆಲಸದ ಮೇಲೆ ಪಕ್ಕದ ಊರಿಗೆ ಹೋಗಬೇಕಾಗಿದೆ. ನನ್ನ ತೋಟದಲ್ಲಿರುವ ಹಣ್ಣಿನ ಗಿಡಗಳಲ್ಲಿ ಮಾಗಿದ ಫ‌ಸಲಿದೆ. ತೋಟ ಕಾಯುವವರು ಇಲ್ಲದಿದ್ದರೆ ಯಾರಾದರೂ ಅಪಹರಿಸಿಕೊಂಡು ಹೋಗಬಹುದು. ಹೀಗಾಗಿ ನಿನಗೆ ಸಾಧ್ಯವಿದ್ದರೆ ನಾನು ಬರುವವರೆಗೆ ತೋಟವನ್ನು ನೋಡಿಕೊಳ್ಳಲು ಸಾಧ್ಯವೇ?’ ಎಂದು ಕೇಳಿದ.

Advertisement

“ಅಯ್ಯೋ, ಅದಕ್ಕೇನಂತೆ! ನಾನು ಚಮ್ಮಾರ ವೃತ್ತಿಯವನು. ತೋಟದ ನೆರಳಿನಲ್ಲಿ ಕುಳಿತು ಮೆಟ್ಟು ಹೊಲಿಯುತ್ತ ನೀನು ಬರುವ ತನಕ ಅದರ ಕಾವಲು ಕಾಯುವ ಕೆಲಸ ಮಾಡುತ್ತೇನೆ’ ಎಂದು ಸಂತಸದಿಂದಲೇ ಒಪ್ಪಿಕೊಂಡ ರೈದಾಸ. ರೈತ ನೆಮ್ಮದಿಯಿಂದ ತೋಟದ ಹೊಣೆಗಾರಿಕೆಯನ್ನು ಅವನಿಗೆ ವಹಿಸಿ ಹೊರಟುಹೋದ. ಸ್ವಲ್ಪ$ಹೊತ್ತಿನಲ್ಲಿ ಒಬ್ಬ ಸರದಾರ ಆ ದಾರಿಯಾಗಿ ಕುದುರೆಯೇರಿಕೊಂಡು ಬಂದ. ತೋಟದಲ್ಲಿ ಕಳಿತ ಹಣ್ಣುಗಳನ್ನು ಕಂಡು ಅವನ ನಾಲಗೆಯಲ್ಲಿ ನೀರೂರಿತು. 

ಒಂದೆಡೆ ಹಸಿವು. ಇನ್ನೊಂದೆಡೆ ದಾಹದಿಂದ ಕಂಗೆಟ್ಟಿದ್ದ ಅವನು ತೋಟವನ್ನು ಕಾವಲು ಕಾಯುತ್ತಿದ್ದ ರೈದಾಸನನ್ನು ನೋಡಿ, “ಲೋ, ಮೊದಲು ತೋಟಕ್ಕೆ ಹೋಗಿ ಒಳ್ಳೆಯ ಹಣ್ಣುಗಳನ್ನು ತೆಗೆದುಕೊಂಡು ಬಾ’ ಎಂದು ಆಜಾnಪಿಸಿದ. ಆದರೆ ರೈದಾಸ ಅವನ ಕೋರಿಕೆಯನ್ನು ಪಾಲಿಸಲಿಲ್ಲ. “ಈ ತೋಟ ರೈತನದು. ಕಾವಲು ಕಾಯುವ ಹೊಣೆ ನನ್ನದು ವಿನಾ ಯಾರಿಗೂ ಉಚಿತವಾಗಿ ಕೊಡುವ ಹಕ್ಕು ನನ್ನದಲ್ಲ’ ಎಂದು ಉತ್ತರಿಸಿದ. ಸರದಾರನಿಗೆ ಆ ಮಾತಿನಿಂದ ಕೋಪ ಬಂತು. “ಒಬ್ಬ ಸೇನಾಪಡೆಯ ಮುಖ್ಯಸ್ಥನಲ್ಲಿ ಇಂಥ ಉದ್ಧಟತನವೆ? ಇದಕ್ಕಾಗಿ ನಿನ್ನನ್ನು ಶಿಕ್ಷಿಸಬೇಕಾಗುತ್ತದೆ’ ಎಂದು ಹೇಳಿದ. ಆ ಮಾತಿಗೆ ರೈದಾಸ ಬಗ್ಗಲಿಲ್ಲ. “ಪ್ರಾಮಾಣಿಕತನ ತಪ್ಪು ಎನ್ನುವ ಸರದಾರರನ್ನು ನಾನಿನ್ನೂ ನೋಡಿಲ್ಲ. ತಪ್ಪಿಗೆ ಶಿಕ್ಷೆ ಕೊಡುವುದು ನಿಮ್ಮ ಧರ್ಮವಾಗಿದ್ದರೆ ಹಾಗೆಯೇ ಆಗಲಿ’ ಎಂದು ನುಡಿದ.

“ಉಚಿತವಾಗಿ ಯಾರಿಗೆ ಬೇಕಾಗಿದೆ? ತೆಗೆದುಕೋ ಚಿನ್ನದ ನಾಣ್ಯ. ಇದಕ್ಕೆ ಎಷ್ಟು ಹಣ್ಣು ಸಿಗುವುದೋ ಅಷ್ಟನ್ನು ತಂದುಕೊಡು’ ಎಂದು ನಾಣ್ಯವನ್ನು ತೆಗೆದು ಅವನ ಮುಂದಿರಿಸಿದ. ರೈದಾಸ ತೋಟಕ್ಕೆ ಹೋಗಿ ಹಣ್ಣುಗಳನ್ನು ಕೊಯ್ದು ತಂದು ಅವನ ಮುಂದಿಟ್ಟ. ಸರದಾರ ಅದನ್ನು ರುಚಿ ನೋಡಿದ. ಆದರೆ ಎಲ್ಲ ಹಣ್ಣುಗಳೂ ಹುಳಿಯಾಗಿದ್ದವು. ಸರದಾರನಿಗೆ ಪಿತ್ತ ನೆತ್ತಿಗೇರಿತು. “ಎಲವೋ ಮೂರ್ಖ! ಹುಳಿ ಹಣ್ಣುಗಳನ್ನೇ ತಂದು ಕೊಟ್ಟಿದ್ದೀಯಲ್ಲ? ಸಿಹಿಯಿರುವುದನ್ನೇ ತಂದು ಕೊಡಬೇಕಿತ್ತಲ್ಲವೆ?’ ಎಂದು ಜೋರು ಮಾಡಿದ.

ರೈದಾಸ ವಿನಯದಿಂದಲೇ ಸರದಾರನಿಗೆ ಕೈ ಜೋಡಿಸಿದ- “ದೊಡ್ಡವರು ಕ್ಷಮಿಸಬೇಕು. ನಾನು ತೋಟವನ್ನು ಕಾವಲು ಕಾಯುತ್ತಿದ್ದೇನೆ. ಆದರೆ ಯಾವ ಮರದ ಹಣ್ಣು ಸಿಹಿಯಿದೆ, ಯಾವುದು ಹುಳಿಯಿದೆ ಎಂಬುದು ದೇವರಾಣೆ ನನಗೆ ತಿಳಿಯದು. ಈ ತೋಟದ ಒಡೆಯನಿಗೆ ಮಾತ್ರ ಅದರ ರುಚಿ ಗೊತ್ತಿದೆ’ ಎಂದು ಹೇಳಿದ. ರೈದಾಸನ ಪ್ರಾಮಾಣಿಕತನ ಕಂಡು ಸರದಾರನ ಕಣ್ಣು ಮಂಜಾಯಿತು. ಅವನು ಯಾರೆಂಬುದನ್ನು ಕೇಳಿ ತಿಳಿದುಕೊಂಡು ಅವನ ಕಾಲುಗಳಿಗೆ ಸಾಷ್ಟಾಂಗ ವಂದಿಸಿದ.

Advertisement

– ಪ. ರಾಮಕೃಷ್ಣ ಶಾಸ್ತ್ರೀ, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next