ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊಣೆ ಎಂದು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈಶಾನ್ಯ ದೆಹಲಿಯಲ್ಲಿ ಭಾರೀ ಹಿಂಸಾಚಾರ ಸಂಭವಿಸಿದೆ. ಘಟನೆಯಲ್ಲಿ 22 ಜನರು ಸಾವನ್ನಪ್ಪಿದ್ದು, 180 ಮಂದಿ ಗಾಯಗೊಂಡಿದ್ದರು.
ಕಳೆದ ಒಂದು ವಾರದಿಂದ ಗೃಹ ಸಚಿವರು ಏನು ಮಾಡುತ್ತಿದ್ದಾರೆ? ಪರಿಸ್ಥಿತಿ ಹದಗೆಡುತ್ತಿರುವುದನ್ನು ಪರಿಶೀಲಿಸಿದ ನಂತರವೂ ಮೊದಲೇ ಯಾಕೆ ಅರೆಸೇನಾ ಪಡೆಯನ್ನು ಕಳುಹಿಸಿಲ್ಲ? ಎಂದು ಸೋನಿಯಾ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ಈ ಹಿಂಸಾಚಾರ ಭುಗಿಲೇಳಲು ಕೇಂದ್ರ ಸರ್ಕಾರ ಮತ್ತು ಗೃಹ ಸಚಿವರೇ ಹೊಣೆಗಾರರು. ಈ ನಿಟ್ಟಿನಲ್ಲಿ ಶಾ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕೆಂದು ಕಾಂಗ್ರೆಸ್ ಪಕ್ಷ ಒತ್ತಾಯಿಸುತ್ತಿದೆ ಎಂದು ಹೇಳಿದರು.
ಕಳೆದ ಭಾನುವಾರದಿಂದ ಸಿಎಎ ಪರ ಹಾಗೂ ಸಿಎಎ ವಿರೋಧಿ ಪ್ರತಿಭಟನಾಕಾರರ ನಡುವೆ ನಡೆದ ಗಲಾಟೆ ತೀವ್ರ ಹಿಂಸಾಚಾರಕ್ಕೆ ತಿರುಗಿತ್ತು. ಹಲವು ವಾಹನ, ಅಂಗಡಿ, ಪೆಟ್ರೋಲ್ ಬಂಕ್ ಗೆ ಬೆಚ್ಚಿ ಹಚ್ಚಲಾಗಿತ್ತು. ಸುಮಾರು 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.
ಕಾಂಗ್ರೆಸ್ ಗೆ ಜಾವ್ಡೇಕರ್ ತಿರುಗೇಟು:
ಕಾಂಗ್ರೆಸ್ ಪಕ್ಷ ದಿಲ್ಲಿ ಗಲಭೆಯಾಗುವಾಗ ಅಮಿತ್ ಶಾ ಎಲ್ಲಿದ್ದರು ಎಂದು ಪ್ರಶ್ನಿಸುತ್ತಾರೆ. ಆದರೆ ಶಾ ಎಲ್ಲೇ ಇದ್ದರೂ ಅಲ್ಲಿಂದಲೇ ಕಾರ್ಯನಿರ್ವಹಿಸುತ್ತಾರೆ. ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪಿಸುತ್ತಿರುವುದು ಕೊಳಕು ರಾಜಕೀಯ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ತಿರುಗೇಟು ನೀಡಿದ್ದಾರೆ.
ಗಲಭೆ ಸಂಬಂಧ ಅಮಿತ್ ಶಾ ಸತತವಾಗಿ ಮೂರು ಸಭೆ ನಡೆಸಿದ್ದಾರೆ. ಗಲಭೆ ಹಿಂದೆ ಯಾರಿದ್ದಾರೆ ಎಂಬುದು ತನಿಖೆ ನಂತರ ಸತ್ಯಾಂಶ ಹೊರಬೀಳಲಿದೆ ಎಂದು ಹೇಳಿದರು.