Advertisement

ಸ್ವಚ್ಛ ಭಾರತದ ಹೆಸರಲ್ಲಿ ಬೀದಿ ಗುಡಿಸಿದವರು ಇಲ್ಲೇಕೆ ಮೌನ?

03:05 PM Oct 30, 2017 | |

ಮಹಾನಗರ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾದ ಸ್ವಚ್ಛ ಭಾರತ ಅಭಿಯಾನಕ್ಕೆ ದೇಶವೇ ತಲೆಬಾಗಿದೆ. ಬಿಜೆಪಿಯ ನಾಯಕರು, ಕಾರ್ಯಕರ್ತರು ಮಂಗಳೂರು ನಗರದ ಬೀದಿ- ಬೀದಿಗಳಲ್ಲಿಯೂ ಸ್ವಚ್ಛ ಭಾರತಕ್ಕೆ ಸಾಥ್‌ ನೀಡುವ ಮೂಲಕ ಜಾಗೃತಿ ಮೂಡಿ ಸುತ್ತಿದ್ದಾರೆ.ಆದರೆ, ತಮ್ಮ ಜಿಲ್ಲಾ ಕೇಂದ್ರ ಕಚೇರಿಯ ಮುಂಭಾಗದಲ್ಲೇ ಸಾರ್ವಜನಿಕ ಶೌಚಾಲಯದ ದುಃಸ್ಥಿತಿ ಬಗ್ಗೆ ಕಣ್ಣೆತ್ತಿಯೂ ನೋಡುತ್ತಿಲ್ಲ ಎನ್ನುವುದೇ ವಿಪರ್ಯಾಸ.

Advertisement

ಬಿಜೆಪಿಯವರು ಸ್ವಚ್ಛ ಭಾರತದ ಹೆಸರಿನಲ್ಲಿ ನಗರದ ಹಲವೆಡೆ ಪೊರಕೆ ಹಿಡಿದು ಬೀದಿಗಳನ್ನು ಸ್ವಚ್ಛಗೊಳಿಸಿದ್ದರೂ ಅವರ ಕಾರ್ಯಾಲಯದ ಮುಂಭಾಗದಲೇ ಇರುವ ಸಾರ್ವಜನಿಕ ಶೌಚಾಲಯ ಹಲವು ತಿಂಗಳುಗಳಿಂದ ದುರ್ನಾತ ಬೀರುತ್ತಿದ್ದರೂ ಅತ್ತ ಕಡೆ ಸ್ವಚ್ಛತೆಯ ಗಮನ ಹರಿಸಿಲ್ಲ!

ಪಿವಿಎಸ್‌ ವೃತ್ತದ ಬಳಿಯಿರುವ ಬಿಜೆಪಿ ಜಿಲ್ಲಾ ಕಾರ್ಯಾಲಯದ ಮುಂಭಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ದಶಕದ ಹಿಂದೆಯೇ ಮಹಾನಗರ ಪಾಲಿಕೆಯು ಸುಸಜ್ಜಿತವಾದ ಶೌಚಾಲಯ ನಿರ್ಮಿಸಿದೆ. ಇಲ್ಲಿ ಸ್ನಾನಗೃಹವೂ ಇತ್ತು. ಆದರೆ, ಸೂಕ್ತ ನಿರ್ವಹಣೆ ಇಲ್ಲದೆ ಇದು ಪಾಳುಬಿದ್ದಿದ್ದು, ಸಾಕಷ್ಟು ಜನಸಂದಣಿ ಈ ಪ್ರದೇಶದಲ್ಲಿ ಶೌಚಾಲಯವೊಂದು ನಿರುಪಯುಕ್ತ ವಾಗಿರುವುದು ನಿಜಕ್ಕೂ ಶೋಚನೀಯ. ಬಿಜೆಪಿಯವರು ಮೊದಲು ಈ ಶೌಚಾಲಯವನ್ನು ಸುಸ್ಥಿತಿಗೆ ತಂದರೆ ಸ್ವಚ್ಛ ಭಾರತ ಅಭಿಯಾನದ ಉದ್ದೇಶ ನಿಜಕ್ಕೂ ಈಡೇರಿದಂತಾದೀತು ಎನ್ನುತ್ತಾರೆ ಸಾರ್ವಜನಿಕರು.

ವಾರದಲ್ಲಿ ನಾಲ್ಕು ದಿನವಾದರೂ ಸಂಸದರು ಜಿಲ್ಲಾ ಕಾರ್ಯಾಲಯದತ್ತ ಬರುತ್ತಾರೆ. ಆದರೆ ಇಲ್ಲಿನ ಗಬ್ಬು ವಾಸನೆ ಅಥವಾ ದುಃ ಸ್ಥಿತಿ ಅವರ ಗಮನಕ್ಕೆ ಬಂದಿಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.

ಪಕ್ಕದಲ್ಲೇ ಇದೆ ರಿಕ್ಷಾ ನಿಲ್ದಾಣ
ಸಮೀಪದಲ್ಲೇ ರಿಕ್ಷಾ ಸ್ಟಾಂಡ್‌ ಇದ್ದು, ಈ ಶೌಚಾಲಯ ಕಾರ್ಯನಿರ್ವಹಿಸದಿರುವುದು ಇಲ್ಲಿನ ಚಾಲಕರಿಗೂ ಸಾಕಷ್ಟು ತೊಂದರೆಯುಂಟು ಮಾಡುತ್ತಿದೆ. ಈ ಮಾರ್ಗವಾಗಿಯೇ ಸಂತ ಅಲೋಶಿಯಸ್‌ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದಿನವೂ ಸಂಚರಿಸುತ್ತಿದ್ದು, ಇಲ್ಲಿ ಸುಸಜ್ಜಿತ ಶೌಚಾಲಯದ ಅಗತ್ಯ ಅತಿ ಅಗತ್ಯ. 

Advertisement

ಸಂಘ ಸಂಸ್ಥೆಗಳು ಸ್ವಚ್ಛಗೊಳಿಸಿದ್ದವು
ಕೆಲವು ಸಂಘ-ಸಂಸ್ಥೆಗಳು ಹಲವು ಬಾರಿ ಈ ಶೌಚಾಲಯವನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿದ್ದರೂ ವಾರದೊಳಗೆ ಅದು ಮತ್ತೆ ಹಿಂದಿನ ಸ್ಥಿತಿಗೆ ತಲುಪುತ್ತದೆ. ಇಲ್ಲಿಗೆ ಒಂದು ಶಾಶ್ವತ ನಿರ್ವಹಣ ಯೋಜನೆ ಅಗತ್ಯವಿದೆ ಎಂಬುದು ಸ್ಥಳೀಯರ ಆಗ್ರಹ. ಎಲ್ಲೆಲ್ಲಿಯ ಸಂಘಟನೆಗಳು ಇಲ್ಲಿ ಕೆಲಸ ಮಾಡಿದ್ದರೂ ಬಿಜೆಪಿಯವರು ಯಾಕೆ ಮೌನ ವಹಿಸಿದ್ದಾರೆ ಎಂಬುದು ಸಾರ್ವಜನಿಕರ ಪ್ರಶ್ನೆ

ಪಾಲಿಕೆಗೂ ಇದೆ ಜವಾಬ್ದಾರಿ
ಈ ಶೌಚಾಲಯದ ನಿರ್ವಹಣೆ ಮಾಡಿ ಸಾರ್ವಜನಿಕರಿಗೆ ಬಳಕೆಗೆ ಯೋಗ್ಯವಾಗಿಸಬೇಕಾದ ಮಹಾನಗರ ಪಾಲಿಕೆಯೂ ಇತ್ತ ಗಮನ ಹರಿಸುತ್ತಿಲ್ಲ. ಅದು ತನ್ನ ಜವಾಬ್ದಾರಿಯೇ ಅಲ್ಲ ಎಂಬಂತೆ ವರ್ತಿಸುತ್ತಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಅಲ್ಲಲ್ಲಿ ಇ-ಟಾಯ್ಲೆಟ್‌ ನಿರ್ಮಿಸುತ್ತಿರುವ ಪಾಲಿಕೆಯವರಿಗೂ ಈ ಶೌಚಾಲಯವನ್ನು ಬಳಕೆಯೋಗ್ಯ ಮಾಡುವ ಯೋಚನೆ ಬಂದಿಲ್ಲ. 

ರಾಜಕೀಯ ರಹಿತ ಕಾರ್ಯಕ್ಕೆ ಕೈ ಜೋಡಿಸಿ
‘ಸ್ವಚ್ಛ  ಭಾರತ ಅಭಿಯಾನ ರಾಜಕೀಯ ರಹಿತವಾದ ಕಾರ್ಯಕ್ರಮ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದರು. ಈ ಬಗ್ಗೆ ಕೆಲವು ಸಂಘ ಸಂಸ್ಥೆಗಳಿಗೆ ಇರುವ ಆಸಕ್ತಿ ಪಕ್ಷಗಳಿಗಿಲ್ಲ. ಬಿಜೆಪಿ ಕಚೇರಿ ಮುಂಭಾಗದ ಶೌಚಾಲಯವನ್ನು ಪ್ರೇರಣಾ ಸಂಸ್ಥೆ ಹಲವುಬಾರಿ ಶುಚಿಗೊಳಿಸಿದೆ. ಮುಂದೆಯೂ ಈ ಬಗ್ಗೆ ಗಮನಹರಿಸಲಾಗುವುದು.’ 
ಏಕಗಮ್ಯಾನಂದ ಸ್ವಾಮೀಜಿ,
  ರಾಮಕೃಷ್ಣಮಠ 

ಯಶಸ್ಸಿಗೆ ಆಸಕ್ತಿ ಬೇಕು
ಯಾವುದೇ ಕಾರ್ಯಕ್ರಮವನ್ನು ಜಾರಿಗೆ ತಂದಾಗ ಅದನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಹೆಚ್ಚಿನ ಮುತುವರ್ಜಿ ವಹಿಸಬೇಕು. ಕೇಂದ್ರ ಸರಕಾರಸ್ವಚ್ಛ ಭಾರತ ಅಭಿಯಾನದ ಬಗ್ಗೆ ಅವರ ಪಕ್ಷದವರಿಗೆ ಆಸಕ್ತಿ ಇಲ್ಲ ಎಂಬುದಕ್ಕೆ ಇದುವೇ ಸಾಕ್ಷಿ.
 – ಶಶಿಧರ್‌ ಹೆಗ್ಡೆ,
   ಮನಪಾ ಮುಖ್ಯ ಸಚೇತಕರು

ಗಮನ ಹರಿಸಲಾಗುವುದು
ಪ್ರಧಾನಿಯವರ ಸ್ವಚ್ಛ  ಭಾರತ ಪರಿಕಲ್ಪನೆ ಕೇವಲ ಪಕ್ಷಕ್ಕೆ ತಿಳಿಸಿದ್ದಲ್ಲ. ಪ್ರತಿ ನಾಗರಿಕನೂ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛ ವಾಗಿಡುವ ನಿಟ್ಟಿನಲ್ಲಿ ಗಮನಹರಿಸಬೇಕು. ಬಿಜೆಪಿ ಕಚೇರಿಯಲ್ಲಿ ಶೌಚಾಲಯವಿದೆ. ಹಾಗಾಗಿ, ಕಚೇರಿ ಮುಂಭಾಗದ ಶೌಚಾಲಯವನ್ನು ಬಳಸುತ್ತಿಲ್ಲ. ಆದರೂ ಈ ಬಗ್ಗೆ ಗಮನಹರಿಸಲಾಗುವುದು.
ಸಂಜೀವ ಮಠಂದೂರು,
  ಬಿಜೆಪಿ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next