Advertisement

ಪಡುಬಿದ್ರಿ ಅಂಚೆ ಕಚೇರಿ ಕಟ್ಟಡ ನಿರ್ಮಾಣ ಎಲ್ಲಿ?

06:00 AM Jun 11, 2018 | Team Udayavani |

ಪಡುಬಿದ್ರಿ: ಹಲವು ಸಮಯಗಳಿಂದ ಸ್ವಂತ ಕಟ್ಟಡವಿಲ್ಲದೆ ದಿನ ದೂಡುತ್ತಿರುವ ಪಡುಬಿದ್ರಿ ಅಂಚೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಜಾಗ ಮಂಜೂರಾದರೂ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಪರಿಸ್ಥಿತಿ ಇದೆ. 

Advertisement

ಅಂಚೆ ಇಲಾಖೆ ಕಡತಗಳ ಪ್ರಕಾರ, ಈಗಾಗಲೇ ಪಡುಬಿದ್ರಿ ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿದೆ. ಇದಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮೀಸಲು ಆದೇಶ ನೀಡ ಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಅಸಲಿಗೆ ಈಗ ಅದರ ಹೆಸರಿನಲ್ಲಿ ಯಾವುದೇ ಜಾಗವಿಲ್ಲ!

ಯಾವುದೇ ಜಾಗ ಮೀಸಲಿಲ್ಲ!
ಸದ್ಯ ಗ್ರಾ.ಪಂ. ಕಡತಗಳ ಪ್ರಕಾರ, ಅಂಚೆ ಇಲಾಖೆಗೆ ಪ್ರತ್ಯೇಕ ಜಾಗ ಮೀಸಲಿರಿಸಿಲ್ಲ! ಪಹಣಿ ಪತ್ರದಲ್ಲೂ ಯಾವುದೇ ಮಾಹಿತಿಗಳಿಲ್ಲ. ಬದಲಿಗೆ ಅಂಚೆ ಇಲಾಖೆ ತನಗೆ ನೀಡಲಾಗಿದೆ ಎಂದು ಹೇಳುವ ಜಾಗದಲ್ಲಿ ಸರಕಾರಿ ಜಾಗ ಎಂದು ನಮೂದಾಗಿದೆ. ಆದ್ದರಿಂದ ಮತ್ತೆ ಜಾಗಕ್ಕಾಗಿ ಅಂಚೆ ಇಲಾಖೆ ಪತ್ರ ವ್ಯವಹಾರ ನಡೆಸುವುದು ಅನಿವಾರ್ಯವಾಗಿದೆ. 

ಇಲಾಖೆ ಜಾಗ ಎಲ್ಲಿದೆ? 
1990ರಲ್ಲಿ  ಅಂಚೆ ಇಲಾಖೆಗೆ ಪಡುಬಿದ್ರಿ ಪೊಲೀಸ್‌ ಠಾಣೆ ಮತ್ತು ಪಡುಬಿದ್ರಿ ಪ್ರಾ. ಆ. ಕೇಂದ್ರಗಳ ಬಳಿಯಲ್ಲಿನ ನಿವೇಶನವೊಂದನ್ನು  ವಿಂಗಡಿಸಿ ಕೊಟ್ಟದ್ದು ಹೌದು. ಆದರೆ  ಈ ಜಾಗದಲ್ಲಿ ಇದುವರೆಗೂ ಕಟ್ಟಡವನ್ನು ಅಂಚೆ ಇಲಾಖೆ ನಿರ್ಮಿಸಿಕೊಂಡಿಲ್ಲವಾದ್ದರಿಂದ ಅದು ವಾಪಸ್‌ ಸರಕಾರದ ಸುಪರ್ದಿಗೆ ಹೋಗಿದೆ. ಆದರೆ ಇಂದಿನ ಕಂದಾಯ ಇಲಾಖಾ ದಾಖಲೆಗಳಲ್ಲಿ  ಪಡುಬಿದ್ರಿಯ ನಡಾÕಲು ಗ್ರಾಮದಲ್ಲಿ ಯಾವುದೇ ಭೂಮಿ ಅಂಚೆ ಇಲಾಖೆ ಹೆಸರಲ್ಲಿಲ್ಲ. ಆದರೆ ಕೇಂದ್ರ ಅಂಚೆ ಇಲಾಖೆ ಮಾತ್ರ ಪಡುಬಿದ್ರಿಯ ತನ್ನ ಜಾಗದಲ್ಲಿ 2019ಕ್ಕೆ ಕಟ್ಟಡ ಕಟ್ಟಲು ಸನ್ನದ್ಧವಾಗಿದೆ. ಅಂಚೆ ಇಲಾಖೆಗೆ ನೀಡಿದ್ದ ಜಾಗ ಪಾರ್ಕಿಂಗ್‌ಗೆ, ವಾರದ ಮಾರುಕಟ್ಟೆ ಸಂದರ್ಭ ಗೂಡ್ಸ್‌ ವಾಹನಗಳ ಪಾರ್ಕಿಂಗ್‌ ಸ್ಥಳವಾಗಿ ಬಳಕೆಯಾಗುತ್ತಿದೆ. 

ಕಟ್ಟಡ ನಿರ್ಮಾಣ ಯೋಜನಾ  ಪಟ್ಟಿಯಲ್ಲಿ ಅಡಕ 
ಪಡುಬಿದ್ರಿ ಅಂಚೆ ಕಚೇರಿ ಕಟ್ಟಡ  ನಿರ್ಮಾಣಕ್ಕಾಗಿ ಪ್ರತೀ ವರ್ಷ ಬೇಡಿಕೆ ಪಟ್ಟಿಯನ್ನು ದಿಲ್ಲಿ  ನಿರ್ದೇಶನಾಲಯಕ್ಕೆ ರವಾನಿಸಲಾಗುತ್ತಿತ್ತು. ಆದರೆ ಯೋಜನಾ ಪಟ್ಟಿಯಲ್ಲಿ  ಸೇರಿರಲಿಲ್ಲ. ಆದರೆ 2019ರ ವಾರ್ಷಿಕ ಯೋಜನಾ ಪಟ್ಟಿಯಲ್ಲಿ ಇದನ್ನು ಸೇರಿಸಲಾಗಿದ್ದು, ಗ್ರಾ.ಪಂ. ಮೂಲಕ ಜಿಲ್ಲಾಡಳಿತ ನೀಡಿದ ಸ್ಥಳದಲ್ಲಿ  ಕಟ್ಟಡ ನಿರ್ಮಾಣವಾಗಲಿದೆ. 
– ರವಿ,ಅಂಚೆ ಇಲಾಖೆ  
ಸಹಾಯಕ ಅಧೀಕ್ಷಕರು,ಉಡುಪಿ  


ಪಹಣಿ ಪತ್ರವಿಲ್ಲ 

ನಡಾÕಲು ಗ್ರಾಮದ ಸ.ನಂಬ್ರ  47 – 8 ವಿಸ್ತೀರ್ಣ 1.32 ಎಕ್ರೆ  ಸರಕಾರಿ ಜಾಗದ ಕಾಲಂ  ನಂಬ್ರ  11ರಲ್ಲಿ  ಒಟ್ಟಾರೆ ವಿವಿಧ ಸರಕಾರಿ ಕಟ್ಟಡಗಳಿವೆ. ಇದರಲ್ಲಿ 15 ಸೆಂಟ್ಸ್‌ ಜಾಗ ವಿಂಗಡಣೆಯಾಗಿದ್ದರೂ ಅಂಚೆ ಕಚೇರಿಗೆ ನೀಡಿದ ಬಗ್ಗೆ ಯಾವುದೇ ವಿವರ ಇಲ್ಲ. ಅಂಚೆ ಕಚೇರಿಗೆ  ಕಟ್ಟಡ ಬೇಕಾದಲ್ಲಿ  ಪಂಚಾಯತ್‌ ಠರಾವು ಮಂಡಿಸಿ ಹೊಸ ಪ್ರಸ್ತಾವನೆಯನ್ನು ಜಿಲ್ಲಾಡಳಿತಕ್ಕೆ ರವಾನಿಸಬೇಕಿದೆ. 
– ಪಂಚಾಕ್ಷರಿ ಸ್ವಾಮಿ
ಪಡುಬಿದ್ರಿ ಗ್ರಾ. ಪಂ. ಪಿಡಿಒ 

Advertisement
Advertisement

Udayavani is now on Telegram. Click here to join our channel and stay updated with the latest news.

Next