1990ರ ದಶಕದಲ್ಲಿ ಕನ್ನಡ ಚಿತ್ರರಂಗ ಕಂಡ ಸ್ಫುರದ್ರೂಪಿ ನಟಿ ಮಹಾಲಕ್ಷ್ಮಿ. ತನ್ನ ಅದ್ಭುತ ನಟನೆಯ ಮೂಲಕ ಕನ್ನಡ ಚಿತ್ರಪ್ರೇಮಿಗಳ ಮನಃಪಟಲದಲ್ಲಿ ಅಚ್ಚಳಿಯದೇ ಛಾಪನ್ನೊತ್ತಿದ್ದ ಕೀರ್ತಿ ಮಹಾಲಕ್ಷ್ಮಿ ಅವರದ್ದು. 1960ರ ದಶಕದ ಖ್ಯಾತ ನಟ ಷಣ್ಮುಗಸುಂದರಂ ಅವರ ಪುತ್ರಿ ಈ ಮಹಾಲಕ್ಷ್ಮಿ. ತಂದೆ, ತಾಯಿಗೆ ಮಗ ಷಣ್ಮುಗಸುಂದರಂ(ಎವಿಎಂ ರಾಜನ್) ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆ. ಅದಕ್ಕಾಗಿ ರಾಜನ್ ಮದ್ರಾಸ್ ಗೆ ಪರೀಕ್ಷೆ ಬರೆಯಲು ಬಂದಿದ್ದರು.
ಆದರೆ ಪರೀಕ್ಷೆಗೆ ಕುಳಿತುಕೊಳ್ಳದೆ. ಚೆನ್ನೈನ ಗಿಂಡಿಯಲ್ಲಿರುವ ರಾಜ್ ಭವನ್ ಹೋಟೆಲ್ ನಲ್ಲಿ ಕೆಲಸ ಮಾಡುತ್ತ, ಸಿನಿಮಾದಲ್ಲಿ ನಟಿಸಲು ಅವಕಾಶಕ್ಕಾಗಿ ಹಾತೊರೆಯುತ್ತಿದ್ದರು. ಕೊನೆಗೂ ಸಿನಿಮಾದಲ್ಲಿ ನಟಿಸಲು ಅವಕಾಶ ಒದಗಿಬಂದಿತ್ತು. ಹೀಗೆ ಎವಿಎಂ ನಿರ್ಮಾಣದ ನಾನೂಂ ಒರು ಪೆಣ್ಣ ಸಿನಿಮಾದಲ್ಲಿ ನಟಿಸಲು ಚಿತ್ರಕ್ಕೆ ಸಹಿ ಮಾಡಿದ್ದರು. ಅಲ್ಲಿಂದ ಷಣ್ಮುಗಸುಂದರಂಗೆ ಎವಿಎಂ ರಾಜನ್ ಹೆಸರು ಖಾಯಂ ಆಗಿತ್ತು. ರಾಜನ್ ಗೆ ಇಬ್ಬರು ಹೆಣ್ಣು ಮಕ್ಕಳು, ಹಿರಿಯ ಮಗಳು ಮಹಾಲಕ್ಷ್ಮಿ. ಎರಡನೇ ಮಗಳು ಅಭಿರಾಮಿ.
ಇದಿಷ್ಟು ಕನ್ನಡ ಚಿತ್ರರಂಗವನ್ನಾಳಿದ್ದ ನಟಿ ಮಹಾಲಕ್ಷ್ಮಿ ತಂದೆಯ ವಿವರ. 1990ರ ದಶಕದಲ್ಲಿ ಮಹಾಲಕ್ಷ್ಮಿ ವರನಟ ಡಾ.ರಾಜ್ ಕುಮಾರ್, ಟೈಗರ್ ಪ್ರಭಾಕರ್, ಅನಂತ್ ನಾಗ್, ಶಂಕರ್ ನಾಗ್, ಅಂಬರೀಶ್ ಸೇರಿದಂತೆ ಘಟಾನುಘಟಿ ನಟರ ಜತೆ ನಟಿಸಿ ಖ್ಯಾತಿ ಪಡೆದಿದ್ದಳು. ಕನ್ನಡದ ಪೂಜಾ ಫಲ, ಬಡ್ಡಿ ಬಂಗಾರಮ್ಮ, ಅಪರಂಜಿ, ಮದುವೆ ಮಾಡು ತಮಾಷೆ ನೋಡು, ಪರಶುರಾಮ್, ಸಂಸಾರ ನೌಕೆ ಸೇರಿದಂತೆ 30ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.
1983ರಲ್ಲಿ ತೆಲುಗು ಹಾಸ್ಯ ಸಿನಿಮಾ ರೆಂಡು ಜೆಲ್ಲಾ ಸೀತಾ ಸಿನಿಮಾದ ಮೂಲಕ ಸಿನಿ ಲೋಕಕ್ಕೆ ಪದಾರ್ಪಣೆ ಮಾಡಿದ್ದ ಮಹಾಲಕ್ಷ್ಮಿ ಬಳಿಕ ತೆಲುಗಿನ ಆನಂದ ಭೈರವಿ ಚಿತ್ರದಲ್ಲಿ ನಟಿಸಿದ್ದರು. ಮಲಯಾಳಂನ ಮೂರು ಸಿನಿಮಾಗಳಲ್ಲಿ ನಟಿಸಿದ ಬಳಿಕ ಮಹಾಲಕ್ಷ್ಮಿ ಕನ್ನಡ ಚಿತ್ರರಂಗದಲ್ಲಿಯೇ ನೆಲೆಯೂರಿದ್ದರು.
ಮಹಾಲಕ್ಷ್ಮಿ ನಟನೆ ಕನ್ನಡ ಚಿತ್ರಪ್ರೇಮಿಗಳಿಗೆ ಅಪಾರ ಮೆಚ್ಚುಗೆ ತಂದಿತ್ತು. 1970-80ರ ದಶಕದ ನಂತರ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಮಹಾಲಕ್ಷ್ಮಿ 90ರ ದಶಕದಲ್ಲಿ ಜನಪ್ರಿಯತೆ ಗಳಿಸಿಕೊಂಡ ನಟಿಯರಲ್ಲಿ ಒಬ್ಬರಾಗಿದ್ದರು. ಆದರೆ ಅಷ್ಟು ಖ್ಯಾತಿ ಪಡೆದಿದ್ದ ಮಹಾಲಕ್ಷ್ಮಿ ಚಿತ್ರರಂಗದಿಂದ ದಿಢೀರ್ ದೂರವಾಗಿದ್ದು ಯಾಕೆ? ಆಕೆ ಈಗ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದೇ ಸದ್ಯದ ಕುತೂಹಲದ ಪ್ರಶ್ನೆಯಾಗಿದೆ.
ಬೇಡಿಕೆಯ ಉತ್ತುಂಗದಲ್ಲಿದ್ದಾಗಲೇ ಪ್ರೇಮ ಪಾಶವೇ ಮುಳುವಾಯಿತೇ?
ಮಹಾಲಕ್ಷ್ಮಿ ನಟನೆಯಲ್ಲಿ ಎಷ್ಟು ಅದ್ಭುತವೋ, ರೂಪವತಿಯಾಗಿದ್ದ ಆಕೆ ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕರೊಬ್ಬರ ಪ್ರೇಮ ಪಾಶಕ್ಕೆ ಬಿದ್ದಿದ್ದರು ಎಂಬುದು ಗಾಂಧಿನಗರದಲ್ಲಿ ಅಂದು ಕೇಳಿಬಂದಿದ್ದ ಗಾಸಿಪ್ ಆಗಿತ್ತು. ಹೀಗೆ ಮಹಾಲಕ್ಷ್ಮಿ ಪ್ರೇಮ ಪ್ರಸಂಗ ಮನೆಯವರಿಗೆ ತಿಳಿದು ಮದುವೆ ಹಂತಕ್ಕೆ ಹೋದಾಗ…ಎರಡೂ ಕುಟುಂಬದ ನಡುವೆ ವಿರೋಧ. ಕೊನೆಗೆ ಪ್ರೇಮಿಗೆ ಮನೆಯವರು ಬೇರೆ ಯುವತಿ ಜತೆ ಮದುವೆ ನಿಶ್ಚಿಯ, ಆಕೆಯೊಂದಿಗೆ ಆತನ ವಿವಾಹವಾದ ನಂತರ ಮಹಾಲಕ್ಷ್ಮಿ ಆಘಾತಕ್ಕೊಳಗಾಗಿಬಿಟ್ಟಿದ್ದರು. ಹೀಗೆ ಪ್ರೇಮ ವೈಫಲ್ಯದಿಂದ ಮನನೊಂದ ಕನ್ನಡ ಚಿತ್ರರಂಗದ ಮಹಾಲಕ್ಷ್ಮಿಯಂತಿದ್ದ ನಟಿ ಚಿತ್ರರಂಗದಿಂದಲೇ ದೂರ ಸರಿದುಬಿಟ್ಟಿದ್ದರು.
ಒಂದರ ಹಿಂದೆ ಊಹಾಪೋಹಗಳು ಹಬ್ಬುತ್ತಲೇ ಹೋಗಿದ್ದು, ಮಹಾಲಕ್ಷ್ಮಿ ಚೆನ್ನೈನಲ್ಲಿ ಮದುವೆಯಾದರು, ವಿಚ್ಛೇದನ ನೀಡಿದರು. ಮರು ಮದುವೆಯಾದರು ಎಂಬ ಸುದ್ದಿ ಹರಿದಾಡತೊಡಗಿದ್ದವು. ಇವೆಲ್ಲಕ್ಕಿಂತ ಮುಖ್ಯವಾಗಿ 1991ರ ಬಳಿಕ ನಟಿ ಮಹಾಲಕ್ಷ್ಮಿ ನಿಜಕ್ಕೂ ಎಲ್ಲಿಗೆ ಹೋದರು…ಏನಾದರು ಎಂಬ ಕುತೂಹಲ ಹಾಗೆಯೇ ಮುಂದುವರಿದಿತ್ತು.
ಮನನೊಂದು ನನ್ ಆದ(ಕ್ರೈಸ್ತ ಸಿಸ್ಟರ್) ಮಹಾಲಕ್ಷ್ಮಿ:
ವೈಯಕ್ತಿಕ ಜೀವನದಲ್ಲಿ ಮನನೊಂದ ಮಹಾಲಕ್ಷ್ಮಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ಈಕೆಯ ತಂದೆ ಎವಿಎಂ ರಾಜನ್ ಕೂಡಾ ಕೊನೆ ದಿನಗಳಲ್ಲಿ ತಮ್ಮ ಜೀವಿತಾವಧಿಯಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿ ಸೇವಾ ಕಾರ್ಯದಲ್ಲಿ ತೊಡಗಿದ್ದರು. ಅದೇ ಹಾದಿಯಲ್ಲಿ ಮಗಳು ಕೂಡಾ ಮುಂದುವರಿದಿದ್ದರು. ಮಹಾಲಕ್ಷ್ಮಿ ಎಲ್ಲವನ್ನೂ ತೊರೆದು ಕ್ರೈಸ್ತ ಸನ್ಯಾಸಿ(ನನ್)ನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚೆನ್ನೈನ ಚರ್ಚ್ ವೊಂದರಲ್ಲಿ ತಾನು ಸ್ಟಾರ್ ನಟಿ ಎಂಬುದನ್ನು ಜಗತ್ತೇ ಮರೆತುಹೋಗುವಂತೆ ತಾನೂ ಕೂಡಾ ತನ್ನ ಪಾಡಿಗೆ ಹೊರಜಗತ್ತಿಗೆ ಯಾವುದೇ ಸುಳಿವು ಬಿಟ್ಟುಕೊಡದೆ ನಿಗೂಢವಾಗಿ ಬದುಕುತ್ತಿದ್ದಾರೆ. ಈವರೆಗೂ ಬಹಿರಂಗವಾಗಿ ಕಾಣಿಸಿಕೊಳ್ಳದ ನಟಿ ಮಹಾಲಕ್ಷ್ಮಿ ಯಾವುದೇ ಸಂದರ್ಶವನ್ನಾಗಲಿ, ತಮ್ಮ ನೋವನ್ನಾಗಲಿ ಹೇಳಿಕೊಂಡಿಲ್ಲ.
ಇತ್ತೀಚೆಗೆ ದಿ.ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಟಿಸಿದ್ದ, ನಾಗಶೇಖರ್ ನಿರ್ದೇಶಿಸಿದ್ದ “ಅಮರ್” ಚಿತ್ರಕ್ಕೆ ನಟಿ ಮಹಾಲಕ್ಷ್ಮಿಯ ನಿಜ ಜೀವನವೇ ಪ್ರೇರಣೆಯಾಗಿತ್ತು ಎಂಬುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ!
ನಿಜಕ್ಕೂ ಮಹಾಲಕ್ಷ್ಮಿ ಬಾಳಿನಲ್ಲಿ ಏನು ನಡೆಯಿತು? ಆಕೆಯ ಪ್ರೇಮ ವೈಫಲ್ಯಕ್ಕೆ ಕಾರಣ ಯಾರು? ಬಳಿಕ ಎರಡು ಮದುವೆಯಾಗಿದ್ದು ಹೌದೇ? ಇಷ್ಟಕ್ಕೂ ನಿಗೂಢವಾಗಿ ಬದುಕುತ್ತಿರುವುದು ಯಾತಕ್ಕಾಗಿ…ಹೀಗೆ ಮಹಾಲಕ್ಷ್ಮಿ ಎಂಬ ನಟಿ ಸಿಸ್ಟರ್ ರಾಶೆಲ್ ಆಗಿ ಬದಲಾದಂತೆ ಹಲವಾರು ಪ್ರಶ್ನೆಗಳು ಇಂದಿಗೂ ಪ್ರಶ್ನೆಯಾಗಿಯೇ ಉಳಿದುಬಿಟ್ಟಿದೆ…