Advertisement

ಚುನಾವಣೆ ವೇಳೆ ಮನೆಗೆ ಬರುತ್ತಿದ್ದ  ಸಚಿವ ಖಾದರ್‌ ಈಗ ಎಲ್ಲಿ ?

01:27 PM Jan 18, 2018 | |

ಮಂಗಳೂರು: “ಚುನಾವಣೆ ಸಮಯದಲ್ಲಿ ಮನೆ ಮುಂದೆ ಬಂದು ಕಾಯುತ್ತಿದ್ದ ರಾಜ್ಯದ ಆಹಾರ ಸಚಿವ ಯು.ಟಿ. ಖಾದರ್‌ ಅವರು ನನ್ನ ಗಂಡ ಇಲ್ಯಾಸ್‌ ಹತ್ಯೆಯಾದ ಬಳಿಕ ಇತ್ತ ತಲೆಯೆತ್ತಿಯೂ ನೋಡಿಲ್ಲ. ಚುನಾವಣೆ ವೇಳೆ ತಮ್ಮ ಲಾಭಕ್ಕಾಗಿ ಅವರೆಲ್ಲ ಬರುತ್ತಿದ್ದರು. ಆದರೆ ಮನುಷ್ಯ ಸತ್ತ ಮೇಲೆ ಬೆಲೆಯೇ ಇಲ್ಲ ಎನ್ನುವುದು ಈಗ ನನಗೆ ಪೂರ್ಣವಾಗಿ ಮನವರಿಕೆಯಾಗಿದೆ’!

Advertisement

ಮಾಧ್ಯಮ ಜತೆ ಫ‌ಝಾìನಾ ಮಾತು: ಇದು ಕಳೆದ ಶನಿವಾರ ಜಪ್ಪು ಕುಡುಪಾಡಿಯ ಮನೆಯಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಕೊಲೆಯಾದ ರೌಡಿ ಶೀಟರ್‌ ಇಲ್ಯಾಸ್‌ನ ಪತ್ನಿ ಫಝಾìನಾ ಬಹಿರಂಗಪಡಿಸಿರುವ ಆಕ್ರೋಶ ಹಾಗೂ ನೋವಿನ ಮಾತು. ತನ್ನ ಮನೆಯೊಳಗೆಯೇ ಕುಟುಂಬಸ್ಥರ ಮುಂದೆ ದುಷ್ಕರ್ಮಿಗಳ ದಾಳಿಯಿಂದ ಬಲಿಯಾದ ಇಲ್ಯಾಸ್‌ನ ಪತ್ನಿ ಇದೇ ಮೊದಲ ಬಾರಿಗೆ ಮಾಧ್ಯಮಕ್ಕೆ ಮಾತನಾಡಿದ್ದು, “ಉದಯವಾಣಿ’ ಜತೆಗೆ ಗಂಡನನ್ನು ಕಳೆದುಕೊಂಡು ತಬ್ಬಲಿ ಯಾಗಿರುವ ಫಝಾìನಾ ತನ್ನ ನೋವನ್ನು ತೋಡಿಕೊಂಡಿದ್ದಾರೆ.

“ನನ್ನ ಗಂಡ ಬದುಕಿರುವಾಗ ಅವರನ್ನು ಭೇಟಿಯಾಗಲು ಅನೇಕ ಮಂದಿ ರಾಜಕೀಯ ವ್ಯಕ್ತಿಗಳು ನಮ್ಮ ಮನೆ ಬಾಗಿಲಿಗೆ ಬಂದು ಹೋಗುತ್ತಿದ್ದರು. ಹತ್ಯೆಯಾದ ಬಳಿಕ ಬಂದು ಸಾಂತ್ವನ ಹೇಳುವುದಕ್ಕೂ ಬಂದಿಲ್ಲ. ನನ್ನ ಗಂಡನ ಸಾವಿಗೆ ನ್ಯಾಯ ಕೊಡಿಸುವುದಕ್ಕೆ ಯಾರೂ ಇಲ್ಲ. ಬದಲಿಗೆ ಅಮಾಯಕನಾಗಿದ್ದ ನನ್ನ ಗಂಡನಿಗೆ ಇಲ್ಲದ ಅಪರಾಧಿ ಪಟ್ಟ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪೊಲೀಸರು ಕೂಡ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದಿದ್ದಾರೆ.

“ಸಚಿವ ಖಾದರ್‌ ಅವರ ಸಾಂತ್ವನದ ಮಾತುಗಳಿಂದ ನನಗೆ ಏನೂ ಸಿಗುವುದಿಲ್ಲ ಎನ್ನುವುದು ಗೊತ್ತಿದೆ. ಆದರೆ ನನ್ನ ಗಂಡನ ಜತೆ ಸಾಮಾನ್ಯವಾಗಿ ಯಾವತ್ತೂ ಇರುತ್ತಿದ್ದ ಕೆಲವರು ಈಗ ಇಲ್ಯಾಸ್‌ನ ಪರಿಚಯವೇ ಇಲ್ಲದಂತೆ ವರ್ತಿಸುತ್ತಿರುವುದನ್ನು ಗಮನಿಸಿದಾಗ ಅಚ್ಚರಿಯಾಗುತ್ತದೆ’ ಎಂದು ಫಝಾìನಾ ಅವರು ಸಚಿವ ಖಾದರ್‌ ಅವರ ವಿರುದ್ಧ ನೇರ ಆರೋಪ ಮಾಡಿದ್ದಾರೆ.

“ಇಲ್ಯಾಸ್‌ ಟಾರ್ಗೆಟ್‌ ಗ್ರೂಪ್‌ ತೊರೆದು ಕೆಲವು ಸಮಯ ಕಳೆದಿದೆ. ಆದರೂ ಅವರ ಹೆಸರಿನಲ್ಲಿ ಕೆಲವರು ಆ ಗ್ರೂಪ್‌ ನಡೆಸಿ ನನ್ನ ಗಂಡನ ಹೆಸರಿಗೆ ಕಳಂಕ ತರುತ್ತಿದ್ದರು. ಕಾಂಗ್ರೆಸ್‌ ಉಪಾಧ್ಯಕ್ಷರಾದ ಮೇಲೆ ಅವರ ಗುರಿ ಕೇವಲ ಪಕ್ಷ ಮತ್ತು ಜನ ಸೇವೆಯ ಕಡೆಗೆ ತಿರುಗಿತ್ತು. ಆದರೆ ಹಣವಂತರ, ರಾಜಕೀಯ ಪುಡಾರಿಗಳ ಮಾತು ಕೇಳಿ ಹಿಂದೆ ಇಲ್ಯಾಸ್‌ ತಂಡದಲ್ಲಿಯೇ ಇದ್ದ ಕೆಲವರು ನನ್ನ ಗಂಡನನ್ನು ಹತ್ಯೆ ಮಾಡಿಸಿದ್ದಾರೆ’ ಎಂದು ದೂರಿದ್ದಾರೆ. 

Advertisement

ನ್ಯಾಯ ಸಿಗದಿದ್ದರೆ ಮಗು ಜತೆ ಆತ್ಮಹತ್ಯೆ
“ನನ್ನ ಗಂಡ ಇಲ್ಯಾಸ್‌ನನ್ನು ಹತ್ಯೆ ಮಾಡಿದವರ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ಈಗಾಗಲೇ ಪತ್ರ ಬರೆದು ಆರೋಪಿಗಳ ಬಗ್ಗೆ ವಿವರ ನೀಡಿದರೂ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಗಂಡನನ್ನು ಇಂಥವರೇ ಕೊಲೆ ಮಾಡಿಸಿದ್ದಾರೆ ಹೇಳಿ ಅವರ ಹೆಸರುಗಳನ್ನು ಕೂಡ ಈಗಾಗಲೇ ಪೊಲೀಸರಿಗೆ ಕೊಟ್ಟಿದ್ದೇನೆ. ಆದರೆ, ನನ್ನ ಗಂಡನ ಹತ್ಯೆಯನ್ನು ಅಧಿಕಾರಿಗಳು ಹಾಗೂ ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಅನುಮಾನ ನನಗೆ ಬಂದಿದೆ. ಇಲ್ಯಾಸ್‌ ಹತ್ಯೆಯ ಹಿಂದೆ ಪ್ರಭಾವೀ ರಾಜಕೀಯ ನಾಯ ಕರ ಕೈವಾಡವಿದೆ ಎನ್ನುವುದು ನನ್ನ ಅಭಿಪ್ರಾಯ. ನನ್ನ ಗಂಡನ ಹತ್ಯೆಗೆ ನ್ಯಾಯ ಸಿಗದೆ ಹೋದಲ್ಲಿ ನನ್ನ ಎರಡು ವರ್ಷದ ಮಗು ಜತೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಫಝಾìನಾ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಪುಟ್ಟ ಮಗು ನಿದ್ದೆಯಲ್ಲೂ ಹೆದ‌ರುತ್ತಿದೆ !
“ನನ್ನ ಗಂಡ ಮಂಚದಲ್ಲಿ ಮಲಗಿದ್ದರು. ಪಕ್ಕದಲ್ಲಿ ನನ್ನ ಎರಡು ವರ್ಷದ ಪುಟ್ಟ ಮಗು ಆಟವಾಡುತ್ತ ಇತ್ತು. ಆದರೆ, ದುಷ್ಕರ್ಮಿಗಳು ಏಕಾಏಕಿ ಮನೆಗೆ ನುಗ್ಗಿ ಆ ಮಗುವಿನ ಮುಂದೆಯೇ ಗಂಡನನ್ನು ಚೂರಿ ಇರಿದು ಕೊಂದಿದ್ದಾರೆ. ಎಳೆ ಮಗು ಮುಂದೆಯೇ ತಂದೆಯನ್ನು ಕೊಂದು ಹೋದ ಆ ಕೊಲೆಪಾತಕಿಗಳು ಎಷ್ಟೊಂದು ಕ್ರೂರಿಗಳಿರಬೇಕು. ತಂದೆ ಮೇಲೆ ದಾಳಿ ನಡೆಸಿದ್ದ ಆ ದೃಶ್ಯವನ್ನು ಕಣ್ಣಾರೆ ನೋಡಿದ್ದ ನನ್ನ ಮಗು ಈಗಲೂ ನಿದ್ದೆಯಲ್ಲಿ ಭಯಗೊಂಡು ಚೀರಾಡುತ್ತಿದೆ. ಅಪ್ಪನನ್ನು ಅವರು ಹೇಗೆ ಕೊಂದರು ಎನ್ನುವುದನ್ನು ತನ್ನ ತೊದಲು ಭಾಷೆಯಲ್ಲಿ ಹೇಳುತ್ತದೆ. ಈ ಘಟನೆಯಿಂದ ನನ್ನ ಮಗುವಿನ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಇದಕ್ಕೆಲ್ಲ ಯಾರು ಹೊಣೆ? ಅಪ್ಪನನ್ನು ಕಳೆದುಕೊಂಡ ಮಗುವಿನ ವರ್ತನೆ ನೋಡಿದಾಗ ನನಗೂ ದುಃಖ ತಡೆದುಕೊಳ್ಳಲು ಆಗುತ್ತಿಲ್ಲ’ ಎಂದು ಫಝಾìನಾ ಕಣ್ಣೀರು ಹಾಕಿದರು.

ಪ್ರಜ್ಞಾ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next