Advertisement
ಪ್ರಕೃತಿ ನಿಜಕ್ಕೂ ಕರುಣಾಮಯಿ. ಪೃಥ್ವಿಯಲ್ಲಿ ಮೂರನೇ ಒಂದರಷ್ಟು ಭೂಭಾಗವಿದ್ದರೆ ಮೂರನೇ ಎರಡು ಭಾಗದಷ್ಟು ನೀರು ಇದೆ. ಭಾರತ ಪರ್ಯಾಯ ದ್ವೀಪ. ಮೂರು ಕಡೆ ನೀರು. ಕರ್ನಾಟಕದಲ್ಲಿ ಕಾವೇರಿ, ಕೃಷ್ಣೆ, ತುಂಗೆ, ಭದ್ರೆ, ಹೇಮಾವತಿ, ಶರಾವತಿ, ನೇತ್ರಾವತಿ, ಕುಮಾರಧಾರಾ, ನಂದಿನಿ, ಸೀತಾ ಎಷ್ಟೊಂದು ನದಿಗಳಿವೆ. ಬಿಜಾಪುರ ಜಿಲ್ಲೆಯಂತೂ ಐದು ನದಿಗಳನ್ನು ಹೊಂದಿರುವ ಕಾರಣದಿಂದ ಕರ್ನಾಟಕದ ಪಂಜಾಬ್ ಎನ್ನಿಸಿಕೊಂಡಿದೆ. ಇಷ್ಟೆಲ್ಲ ಇದ್ದೂ ನೀರಿಲ್ಲ ಎಂದರೆ ಏನರ್ಥ? ಈ ಅನರ್ಥಕ್ಕೆ ಕಾರಣವೇನು? ನೀರು, ವಾಯು ಪ್ರಾಕೃತಿಕ ಕೊಡುಗೆಗಳಾದ್ದರಿಂದ ನಾವು ಯಾವತ್ತೂ ಇವನ್ನು ಅರ್ಥಪೂರ್ಣವಾಗಿ ಬಳಸುವ ಬದಲು ಬೇಕಾಬಿಟ್ಟಿಯಾಗಿ ಬಳಸಿಕೊಂಡಿದ್ದೇವೆ. ಜನಸಂಖ್ಯೆ ಏರಿಕೆಗೆ ತಕ್ಕಂತೆ ಭೂಮಿಯ ವಿಸ್ತಾರ ಹೆಚ್ಚುವುದಿಲ್ಲ. ಜಲ ಮೂಲ ವಿಸ್ತೃತಗೊಳುವುದಿಲ್ಲ ಎಂಬ ಕನಿಷ್ಟ ಅರಿವೂ ಇಲ್ಲದಂತೆ ಭಂಡ ನಿರ್ಲಕ್ಷ್ಯದಿಂದ ನಡೆದುಕೊಂಡಿದ್ದೇವೆ. ಹೀಗೇ ಆದರೆ 2025ರ ಹೊತ್ತಿಗೆ ಜಗತ್ತಿನಾದ್ಯಂತ ಹಾಹಾಕಾರ ಶುರುವಾಗುತ್ತದೆ. ನೀರಿಗಾಗಿ ಯುದ್ಧಗಳೂ ಸಂಭವಿಸುವ ಸಾಧ್ಯತೆ ಇದೆ ಎಂದು ವಿಶ್ವ ಸಂಸ್ಥೆಯ ಅಧ್ಯಯನ ತಿಳಿಸಿದೆ. ಕಾವೇರಿಗಾಗಿ ಕರ್ನಾಟಕ- ತಮಿಳುನಾಡು ನಡುವಿನ ವಿವಾದ ಗೊತ್ತಿದೆ. ಆದರೆ ಕಾಶ್ಮೀರದಲ್ಲಿನ ಜಲಕ್ಕಾಗಿ ಮುಂದೆ ಭಾರತ-ಪಾಕ್ ನಡುವೆ ಯುದ್ಧ ಸಂಭವಿಸಬಹುದು ಎನ್ನುತ್ತಾರೆ ತಜ್ಞರು.
Related Articles
Advertisement
ಮಳೆಗಾಲದಲ್ಲಿ ನದಿಗಳು ತುಂಬಿ ಸಮುದ್ರ ಸೇರುವ ಹೆಚ್ಚುವರಿ ನೀರನ್ನು ಅಲ್ಲಲ್ಲಿ ಸರೋವರ ನಿರ್ಮಿಸಿ ನೀರು ಸಂಗ್ರಹಿಸುವಂತೆ ಸರಕಾರ ಕಡಿಮೆ ವೆಚ್ಚದಲ್ಲಿ ಯೋಜನೆಗಳನ್ನು ರೂಪಿಸಬಹುದು. ಅಲ್ಲಲ್ಲಿ ಪುಟ್ಟ ಸರೋವರಗಳು ನಿರ್ಮಾಣವಾದರೆ ಹಳ್ಳಿಗಳೇ ಮುಳುಗಡೆಯಾಗುವಂತಹ, ಆಗಿಂದಾಗ್ಗೆ ಭೂಕಂಪ ಸೃಷ್ಟಿಸುವಂತಹ ಭಾರೀ ಜಲಾಶಯಗಳು ಬೇಕಾಗುವುದಿಲ್ಲ ಎಂದು ಕೆಲವು ಜಲತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪಟ್ಟಣ ಮತ್ತು ನಗರ ಪ್ರದೇಶಗಳ ವಿವಿಧ ಬಡಾವಣೆಗಳಲ್ಲಿ ಮಳೆ ನೀರು ಸಂಗ್ರಹಿಸುವ ಟ್ಯಾಂಕ್‌ಗಳನ್ನು ನಿರ್ಮಿಸುವ ಬಗ್ಗೆಯೂ ಸರಕಾರ ಚಿಂತನೆ ನಡೆಸಬೇಕು. ಅತೀ ಕಡಿಮೆ ಖರ್ಚಿನಲ್ಲಿ ನೀರಿನ ಉಳಿತಾಯ, ಸಂಗ್ರಹ ಮತ್ತು ಮಿತವ್ಯಯಕ್ಕೆ ಜನ ಜಾಗೃತಿ ಕಾರ್ಯಕ್ರಮಗಳನ್ನು ಸರಕಾರ ಹಮ್ಮಿಕೊಳ್ಳಬೇಕು. ನೀರನ್ನು ಖನಿಜ ಎಂದು ಪರಿಗಣಿಸಿ ಕೂಡಲೇ ಸರಕಾರ ಈ ಬಗ್ಗೆ ಆದೇಶ ಹೊರಡಿಸಬೇಕು.
ಜಲ ಸಂಪನ್ಮೂಲ ತಜ್ಞ ಜಿ.ಎಸ್.ಪರಮಶಿವಯ್ಯನವರು 2002ರಲ್ಲಿ ರಾಜ್ಯದ ಸಮಗ್ರ ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ಧಿ ಸಂಬಂಧ ಸರಕಾರಕ್ಕೆ ವರದಿಯೊಂದನ್ನು ಸಲ್ಲಿಸಿದ್ದರು. ಅದರ ಪ್ರಕಾರ “ಊರಿಗೊಂದು ಕೆರೆ, ಆ ಕೆರೆಗೆ ನದಿ ನೀರು ಯೋಜನೆ’ ಹಮ್ಮಿಕೊಂಡು ಸರಕಾರ ಸಮೀಕ್ಷಾ ಕಾರ್ಯ ಪ್ರಾರಂಭಿಸಬೇಕು. ರಾಜ್ಯದಲ್ಲಿ ಈಗ 3438 ಟಿಎಂಸಿ ಜಲ ಸಂಪತ್ತಿದೆ. ರಾಜ್ಯದಲ್ಲಿ ಇರುವ 36,696 ಕೆರೆಗಳು ಮತ್ತು ಕೆರೆಗಳಿಲ್ಲದ ಗ್ರಾಮಗಳಲ್ಲಿ ಹೊಸದಾಗಿ 6,124 ಕೆರೆಗಳನ್ನು ನಿರ್ಮಿಸಿದರೂ ಒಟ್ಟು 42,820 ಕೆರೆಗಳ ಸಾಮರ್ಥ್ಯಕ್ಕೆ ಬೇಕಾಗುವ ನೀರು 300 ಟಿಎಂಸಿ. ಈ ಯೋಜನೆ ಯಶಸ್ವಿಯಾದರೆ ಯಾವುದೇ ಹೊಸ ನೀರಾವರಿ ಯೋಜನೆ ಅಗತ್ಯವಿಲ್ಲ ಎಂದು ಈ ವರದಿ ತಿಳಿಸಿತ್ತು. ಆದರೆ ವರದಿ ನೀಡಿ 16 ವರ್ಷಗಳೇ ಕಳೆದರೂ ಈ ವರದಿ ಇನ್ನೂ ಜಾರಿಯಾಗದಿರುವುದು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ.
ರಾಜ್ಯದ ಜಲ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ನಂತರ ಸಾವಿರಾರು ಟಿಎಂಸಿ ನೀರು ಸಮುದ್ರಕ್ಕೆ ಸೇರುತ್ತಿದೆ. ವಿದ್ಯುತ್ ಉತ್ಪಾದನೆಗೆ ಸೋಲಾರ್ ಸೇರಿದಂತೆ ಇತರ ಆಧುನಿಕ ವೈಜ್ಞಾನಿಕ ಆವಿಷ್ಕಾರಗಳನ್ನು ಬಳಸಿಕೊಂಡು ಜಲ ವಿದ್ಯುತ್ ಯೋಜನೆಗಳನ್ನು ಸ್ಥಗಿತಗೊಳಿಸುವುದರಿಂದಲೂ ಸಾಕಷ್ಟು ನೀರು ಉಳಿತಾಯವಾಗಲಿದೆ. ಸರಕಾರ ಅಂತರ್ಜಲ ಅಭಿವೃದ್ಧಿ ಜತೆಗೆ ಎಲ್ಲ ಪ್ರದೇಶಗಳಿಗೆ ಅಗತ್ಯ ಇರುವಷ್ಟು ನೀರನ್ನು ಪೂರೈಸಲು ಜನಪರ ಯೋಜನೆಗಳನ್ನು ಜಾರಿಗೊಳಿಸಬೇಕಾಗಿದೆ. ಆಗ ಮಾತ್ರ ನೀರಿನ ಸಮಸ್ಯೆಗೆ ನಿಜವಾದ ಪರಿಹಾರ ದೊರೆಯಬಹುದು. ಇತ್ತೀಚಿನ ಕೆಲವು ವರ್ಷಗಳಲ್ಲಿ ಏಪ್ರಿಲ್ ಮೇ ತಿಂಗಳುಗಳಲ್ಲಿ ಕೆಲವು ಬಾರಿ ಮಳೆಯಾಗುತ್ತಿದ್ದು ಪ್ರಕೃತಿಯ ಕೃಪೆಯು ಸರ್ವವ್ಯಾಪಿ ಎಂಬುದು ವ್ಯಕ್ತವಾಗುತ್ತದೆ.
ಅನೂಷಾ ಹೊನ್ನೇಕೂಲು