ಜೀವನ ಎಂಬುದು ನೀರಿನ ಮೇಲಿನ ಗುಳ್ಳೆ. ಯಾವಾಗ ಒಡೆದು ಹೋಗುವುದೋ ತಿಳಿಯದು.
ಜೀವನವೆಂಬ ಈ ಮೂರು ದಿನದ ಸಂತೆಯನ್ನು ಸಂತೋಷದಿಂದ ಕಳೆಯಬೇಕಾದರೆ ಮೂರು ಸರಳ ಮಾರ್ಗಗಳಿವೆ. ಮೊದಲನೆಯ ಮಾರ್ಗ “ನಗು’. ಖುಷಿ ಇರಲಿ, ದುಃಖವಿರಲಿ ನಿನ್ನ ಮುಖದಲ್ಲಿ ಒಂದು ನಗುವಿರಲಿ. ನೀನು ನಿನ್ನ ನಗುವನ್ನು ಇತರರಿಗೆ ಹಂಚಿದರೆ, ಆ ನಗು ನಿನಗೆ ಹಿಂತಿರುಗಿ ಸಿಗುತ್ತದೆ ಎಂಬ ನಂಬಿಕೆ ಇರಲಿ. ನಾವು ಇತರರಿಗೆ ನೀಡುವ ಖುಷಿಯಾಗಲಿ, ದುಃಖವಾಗಲಿ ಅದು ಹಿಂತಿರುಗಿ ಮತ್ತೆ ನಮಗೇ ಯಾವತ್ತಾದರು ಒಂದು ದಿನ ಸಿಗುತ್ತದೆ. ಆದ್ದರಿಂದ ದುಃಖಕ್ಕಿಂತ ಹೆಚ್ಚು ಖುಷಿಯನ್ನೇ ಇತರರಿಗೆ ಹಂಚೋಣ.
ಎರಡನೇ ಮಾರ್ಗ “ಸ್ವ ಪ್ರೀತಿ;. ಇಡೀ ಪ್ರಪಂಚ ನಿನ್ನ ಶತ್ರುವಾದರೂ ಪರವಾಗಿಲ್ಲ, ನೀನಗೆ ನೀನೇ ಶತ್ರುವಾಗಬಾರದು. ಇಡೀ ಪ್ರಪಂಚ ನಿನ್ನ ಶತ್ರುವಾದರೂ ಬದುಕಬಹುದು ಆದರೆ ನಿನಗೆ ನೀನೇ ಶತ್ರುವಾದರೆ ಬದುಕಿದ್ದೂ ಸತ್ತಂತೆ.
ಮೂರನೇ ಮಾರ್ಗ “ಆಗುವುದೆಲ್ಲ ಒಳ್ಳೆಯದಕ್ಕೆ’. ಖುಷಿಯ ಸಂದರ್ಭವಿರಲಿ, ದುಃಖದ ಸನ್ನಿವೇಶವಿರಲಿ ಎಲ್ಲ ಕಷ್ಟಗಳು ನನಗೇ ಏಕೆ ಬರುತ್ತಿದೆ? ಎಂದು ಅಂದುಕೊಳ್ಳದೆ ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಮಾತನ್ನು ನೆನಪಿಸಿಕೊಳ್ಳೋಣ. ಆಗ ಮಾತ್ರ ನಮ್ಮ ಬದುಕು ಸುಂದರವಾಗಿರಲು ಸಾಧ್ಯ. ಕಷ್ಟ, ಸುಖ ಒಂದು ನಾಣ್ಯದ ಎರಡು ಮುಖವಿದ್ದಂತೆ. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಜೀವಿಸುವುದೇ ಸರಳ ಸುಂದರ ಬದುಕಿನ ಗುಟ್ಟು.
-ನಿಖೀತಾ ಕಡೇಶಿವಾಲಯ
ಸರಕಾರಿ ಮಹಿಳಾ ಕಾಲೇಜು, ಪುತ್ತೂರು