Advertisement

ತ್ರಿಶಂಕು ಸ್ಥಿತಿಯಿಂದ ಸಿಬಿಐ ಪಾರಾಗುವುದು ಯಾವಾಗ?

07:37 AM Nov 29, 2018 | |

ರಾಷ್ಟ್ರವ್ಯಾಪ್ತಿಯಾಗಿ ಗಂಭೀರ ಸ್ವರೂಪದ ಪ್ರಕರಣಗಳನ್ನು ತನಿಖೆ ನಡೆಸಲು ಸ್ಥಾಪಿತವಾದ ಅತ್ಯಂತ ವಿಶ್ವಾಸಾರ್ಹ ತನಿಖಾ ಸಂಸ್ಥೆಯೆಂದೇ ಪರಿಗಣಿಸಲ್ಪಟ್ಟ ಏಕೈಕ ಸಂಸ್ಥೆ ಅಂದರೆ ಸಿಬಿಐ ಅರ್ಥಾತ್‌ ಕೇಂದ್ರಿಯ ತನಿಖಾ ದಳ. ಇದರ ಹುಟ್ಟು ಕೂಡಾ ಸ್ವಾತಂತ್ರ್ಯ ಪೂರ್ವದಲ್ಲಿಯೇ ಆಗಿರುವುದು ಅದರ ಪ್ರಾಮುಖ್ಯತೆಯನ್ನು ಇನ್ನಷ್ಟು ಜಾಹೀರುಗೊಳಿಸಿದೆ. 

Advertisement

ಸಿಬಿಐನ ಹುಟ್ಟು ಜಾತಕ ಅತ್ಯಂತ ರೋಚಕವಾದದ್ದು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷರ ಆಡಳಿತದ ಭಾರತದಲ್ಲಿ ಯುದ್ಧ ಮತ್ತು ಸಾಮಾಗ್ರಿಗಳ ಪೂರೈಕೆ ಇಲಾಖೆಯೊಂದಿಗೆ ವ್ಯವಹರಿಸುವ ಸಂದರ್ಭದಲ್ಲಿ ಲಂಚಗುಳಿತನ; ಭ್ರಷ್ಟಾಚಾರದಂತಹ ಪ್ರಕರಣಗಳನ್ನು ತನಿಖೆ ನಡೆಸಲು ಎಸ್‌.ಪಿ.ಇ. ಅಂದರೆ ಪೊಲೀಸ್‌ ವಿಶೇಷ ವಿಭಾಗ ಸ್ಥಾಪನೆಗೊಂಡಿತ್ತು. ಆದರೆ ಯುದ್ಧ ಮುಕ್ತಾಯದ ನಂತರವೂ ಕೂಡಾ ಲಂಚಗುಳಿತನ, ಯುದ್ಧ ಸಾಮಾಗ್ರಿಗಳ ನಿರ್ವಹಣೆಯಲ್ಲಿನ ಅವ್ಯವಹಾರಗಳನ್ನು ತನಿಖೆ ನಡೆಸಬೇಕಾದ ಅಗತ್ಯ ಈ ಸಂಸ್ಥೆಯ ಪಾಲಿಗೆ ಬಂತು. ಇನ್ನೊಂದು ವಿಪರ್ಯಾಸವೆಂದರೆ ಇದೇ ಸಂಸ್ಥೆಗೆ ಸ್ವಾತಂತ್ರೊéàತ್ತರದ ಕಾಲಘಟ್ಟದಲ್ಲಿ ಕೂಡಾ ಬೋಫೋರ್ಸ್‌ನಂತಹ ಗಂಭೀರ ಸ್ವರೂಪದ ಯುದ್ಧ ಸಾಮಗ್ರಿ ಖರೀದಿ ಕುರಿತಾಗಿ ಪ್ರಕರಣಗಳನ್ನು ತನಿಖೆ ಮಾಡಬೇಕಾದ ಪರಿಸ್ಥಿತಿ ಬಂದಿರುವುದು ಭಾರತದ ಇತಿಹಾಸದಲ್ಲಿ ಮರೆಯಲಾಗದ ಕಹಿ ಅನುಭವವೆಂದೇ ಭಾವಿಸಲಾಗಿದೆ. 

ಸ್ವಾತಂತ್ರ್ಯಪಡೆದ ಅನಂತರ ಭಾರತ ಸರಕಾರ ಇದರ ಮಹತ್ವವನ್ನು ಅರ್ಥ ಮಾಡಿಕೊಂಡು 1963, ಎ.1ರಂದು ಇದಕ್ಕೊಂದು ಶಾಸನೀಯ ನೆಲೆಯ ಅಧಿಕಾರ ನೀಡುವ ದೃಷ್ಟಿಯಿಂದ ಸಿಬಿಐ ಎಂದು ಮರುನಾಮಕರಣ ಮಾಡಿತು. ಮೊದಲ ಗೃಹ ಸಚಿವರಾದ ಸರ್ದಾರ್‌ ವಲ್ಲಭಾಯಿ ಪಟೇಲರು ಕೂಡಾ ಈ ಸಂಸ್ಥೆಯನ್ನು ಅತ್ಯಂತ ಪ್ರಬಲವಾಗಿ ಬಳಸಿಕೊಳ್ಳುವ ಅಗತ್ಯ ಇದೆ ಎಂದು ಮನಗಂಡು ತಮ್ಮ ಗೃಹ ಖಾತೆಯ ಜೊತೆಯಲ್ಲಿಯೇ ಕಾರ್ಯನಿರ್ವಹಿಸುವ ಅವಕಾಶವನ್ನು ಸಿಬಿಐಗೆ ರೂಪಿಸಿಕೊಟ್ಟರು. ಅಂದಿನ ಪ್ರಿನ್ಸಿ ರಾಜ್ಯಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ದುರಾಡಳಿತಕ್ಕೆ ಸರಿಯಾದ ಪಾಠ ಕಲಿಸಬೇಕೆಂಬ ಹಿನ್ನೆಲೆಯಲ್ಲಿ ಪೂರ್ವಾಶ್ರಮದ ಈ ಸಂಸ್ಥೆಯನ್ನು ಬಳಸಿಕೊಂಡರು. 

ಕೂಸು ಹುಟ್ಟುವಾಗಲೇ ಬಡವಾಯಿತು ಅನ್ನುವ ಹಾಗೆ ಸಿಬಿಐ ತನಿಖಾ ಸಂಸ್ಥೆ ಹುಟ್ಟುವಾಗಲೇ ಸಂವಿಧಾನದ ಪುಟಗಳಿಂದ ಹೊರಗೆ ಬೆಳೆದು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸಿಬಿಐನ ಇಂದಿನ ಎಲ್ಲ ಅವಾಂತರಗಳಿಗೂ ಇದೂ ಒಂದು ಕಾರಣ ಅಂದರೆ ತಪ್ಪಾಗಲಾರದು. 

ವಿಶೇಷ ಜವಾಬ್ದಾರಿ, ಘನತೆ, ಗಾಂಭೀರ್ಯ ಹೊತ್ತ ಈ ಸಂಸ್ಥೆ ಸಂವಿಧಾನದ ಮೂಲ ಚೌಕಟ್ಟಿನಿಂದ ಹೊರಗೆ ಬೆಳೆದು ಬರಬೇಕಾದ ಸಂದರ್ಭ ನಿರ್ಮಾಣವಾದ ಕಾರಣ ಇಂದು ಸಿಬಿಐ ಅತಂತ್ರ, ತ್ರಿಶಂಕು ಸ್ಥಿತಿಯಲ್ಲಿ ಕಾಣಬೇಕಾದ ಪರಿಸ್ಥಿತಿ ಬಂದಿದೆ. ಇಂತಹ ಮಹಾನ್‌ ಸಂಸ್ಥೆ ಪ್ರಾಮಾಣಿಕವಾಗಿರಬೇಕು, ನಿಷ್ಪಕ್ಷಪಾತವಾಗಿರಬೇಕು, ಸ್ವಾಯತ್ತತೆಯಿಂದಿರಬೇಕು, ರಾಜಕಾರಣಿಗಳ ಕಪಿಮುಷ್ಠಿಯಿಂದ ಮುಕ್ತವಾಗಿರಬೇಕು ಅನ್ನುವ ತತ್ವಗಳೆಲ್ಲವೂ ಕೂಡಾ ಕೇವಲ ಕಾಲ್ಪನಿಕ ನಿರ್ಧಾರಗಳೇ ಹೊರತು ಲಿಖೀತ ನಿರ್ಧಾರಗಳಲ್ಲ. ಅಂದು ಒಂದು ವೇಳೆ ನಮ್ಮ ಸಂವಿಧಾನದ ನಿರ್ಮಾತೃಗಳು ಈ ತನಿಖಾ ಸಂಸ್ಥೆಯನ್ನು ಸಂವಿಧಾನದ ಚೌಕಟ್ಟಿನಲ್ಲಿ ಜೋಡಿಸಿ ಓಂಬಡ್ಸ್‌ಮನ್‌ ತರದಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾಗಿ ರೂಪಿಸಿದ್ದರೆ ಇನ್ನೊಂದು ಲೋಕಪಾಲ ಅಥವಾ ಲೋಕಾಯುಕ್ತದ ಅನಿವಾರ್ಯತೆ ಇರುತ್ತಿರಲಿಲ್ಲ. 

Advertisement

ಇಂದಿನ ಸಿಬಿಐ ಕಾನೂನಾತ್ಮಕವಾಗಿ ರಚಿತವಾಗಿದ್ದರೂ ಕೂಡಾ ಅದರ ಅಸ್ತಿತ್ವ, ಕಾರ್ಯವ್ಯಾಪ್ತಿಗಳ ಮೇಲೆ ಸಾಕಷ್ಟು ಅಪಸ್ವರ ಕೇಳಿಬರುತ್ತಿದೆ ಅನ್ನುವುದನ್ನು ಎಲ್ಲ ಪಕ್ಷಗಳ ಅಧಿಕಾರ ಅವಧಿಯಲ್ಲಿ ಒಪ್ಪಿಕೊಳ್ಳಬೇಕಾದ ಸತ್ಯ ಸಂಗತಿ. ಸಿಬಿಐನ ರಚನೆ, ಆಯ್ಕೆ ಅತ್ಯಂತ ಪಾರದರ್ಶಕವಾಗಿರಬೇಕು, ಉನ್ನತ ಮಟ್ಟ ಕಾಯ್ದುಕೊಳ್ಳಬೇಕು ಎಂಬ ನೆಲೆಯಲ್ಲಿ ಆಯ್ಕೆ ಸಮಿತಿಯಲ್ಲಿ ಪ್ರಧಾನಮಂತ್ರಿಗಳ ಅಧ್ಯಕ್ಷತೆಯಲ್ಲಿ ಪ್ರತಿಪಕ್ಷದ ನಾಯಕರನ್ನು ಒಳಗೊಂಡು; ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಅಥವಾ ಅವರು ಸೂಚಿಸಿದ ನ್ಯಾಯಾಧೀಶರುಗಳ ಆಯ್ಕೆ ಸಮಿತಿಯು, ಸಿಬಿಐನ ನಿರ್ದೇಶಕರನ್ನು, ಉಪನಿರ್ದೇಶಕರನ್ನು ಆಯ್ಕೆ ಮಾಡುವ ವಿಧಾನ ಅಳವಡಿಸಿಕೊಂಡು ಬರಲಾಗಿದೆ. 

ಇಷ್ಟಾದರೂ ಕೂಡಾ ಸಿಬಿಐನ ಅಧಿಕಾರ ಚಲಾವಣೆಯ ಸಂದರ್ಭದಲ್ಲಿ ಕೇಂದ್ರ ಸರಕಾರಗಳ ಹಸ್ತಕ್ಷೇಪವಿರುತ್ತದೆ ಎಂಬ ಅಪವಾದ ಎಲ್ಲ ಪಕ್ಷಗಳ ಅಧಿಕಾರಾವಧಿಯಲ್ಲಿಯೂ ಕೇಳಿ ಬಂದಿದೆ. ಅಂದು ಬೋಪೋರ್ಸ್‌ ಕೇಸಿನ ಸಂದರ್ಭದಲ್ಲಿ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಸಿಬಿಐಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎನ್ನುವ ದೊಡ್ಡ ಕೂಗು ಕೇಳಿ ಬಂದಿತ್ತು. ಸಿಬಿಐಯನ್ನು ಪ್ರತಿಪಕ್ಷದವರು ಕಾಂಗ್ರೆಸ್‌ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ ಎಂದು ವ್ಯಾಖ್ಯಾನಿಸಿದ್ದರು. ಸಿಬಿಐ ತನಿಖೆಗೆ ತೆಗೆದುಕೊಂಡ ಪ್ರಮುಖ ಪ್ರಕರಣಗಳೆಂದರೆ ಇಸ್ರೋ ಬೇಹುಗಾರಿಕೆ ಪ್ರಕರಣ. ಕಾಶ್ಮೀರದಲ್ಲಿನ ಭಯೋತ್ಪಾದಕರಿಗೆ ಸಂಬಂಧಪಟ್ಟ ಹವಾಲಾ ಪ್ರಕರಣ, ಪ್ರಿಯದರ್ಶಿನಿ ಮಟ್ಟೂ ಕೊಲೆ ಪ್ರಕರಣ; ಸಿಸ್ಟರ್‌ ಅಭಯ ಕೊಲೆ ಪ್ರಕರಣ; ಸೊಹ್ರಾಬುದ್ದೀನ್‌ ಪ್ರಕರಣ ಇತ್ಯಾದಿ. ಈ ಎಲ್ಲ ಪ್ರಕರಣಗಳಲ್ಲಿ ನಾವು ಪ್ರಮುಖವಾಗಿ ಗಮನಿಸಬೇಕಾದ ವಿಚಾರವೆಂದರೆ ಪ್ರಕರಣಗಳಿಗೆ ತಾರ್ಕಿಕವಾದ ಅಂತ್ಯ ಹಾಡುವಲ್ಲಿ ನಮ್ಮ ಆಡಳಿತ ವ್ಯವಸ್ಥೆಯಾಗಲಿ, ನ್ಯಾಯಾಂಗ ವ್ಯವಸ್ಥೆಯಾಗಲಿ ಎಷ್ಟರ ಮಟ್ಟಿಗೆ ಯಶಸ್ಸು ಕಂಡಿದೆ ಅನ್ನುವುದು. 

ಇತ್ತೀಚೆಗೆ ಸಿಬಿಐ ಒಳಗೇನೆ ನಡೆಯುತ್ತಿರುವ ವಾಕ್‌ಸಮರ, ವೈಯಕ್ತಿಕ ನಿಂದನೆ ನೋಡುವಾಗ ಬೇಲಿಯೇ ಹೊಲವನ್ನು ಮೇಯುವ ಸ್ಥಿತಿ ಬಂದಿದೆ ಅನ್ನಿಸುತ್ತದೆ. ಇದರಿಂದಾಗಿ ಸಿಬಿಐ ವಿಶ್ವಾಸಾರ್ಹತೆ ಪ್ರಶ್ನಿಸುವ ಮಟ್ಟಿಗೆ ಬಂದು ನಿಂತಿದೆ. ಸಿಬಿಐ ನಿರ್ದೇಶಕರ ಗೌಪ್ಯ ಪ್ರತ್ಯುತ್ತರ ಸೋರಿಕೆಯಾಗಿದೆ ಎಂಬ ವಿಚಾರವನ್ನು ಸುಪ್ರೀಂ ಕೋರ್ಟ್‌ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. 

ಇಂದಿನ ಸಿಬಿಐ ಒಳಗಿನ ದುಃಸ್ಥಿತಿಯ ಪ್ರಯೋಜನವನ್ನು ಪಡೆದುಕೊಳ್ಳಲು ಕೆಲವೊಂದು ರಾಜ್ಯಗಳ ಮುಖ್ಯಮಂತ್ರಿಗಳು ತುದಿಗಾಲಿನಲ್ಲಿ ನಿಂತಿರುವುದು ಅಪಾಯಕಾರಿ ಬೆಳವಣಿಗೆಯೂ ಹೌದು. ಜೈಲನ್ನು ರಕ್ಷಿಸಬೇಕಾದ ಪೊಲೀಸರು ಜಗಳವಾಡಿಕೊಂಡಾಗ ಇಡೀ ಜೈಲೇ ಹಾಳಾಗಿದೆ ಅಂದುಕೊಂಡು ಜೈಲಿನಲ್ಲಿರುವ ಕೈದಿಗಳನ್ನು ಹೊರಗೆ ಬಿಡಲು ಸಾಧ್ಯವೇ? ಇದಾಗಲೇ ಈ ಕುರಿತು ಧ್ವನಿ ಎತ್ತಿದವರು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ; ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು; ಇನ್ನೂ ಸದ್ಯದಲ್ಲಿಯೇ ಕರ್ನಾಟಕದಿಂದಲೂ ಕೂಡಾ ಇದೇ ಅಪಸ್ವರ ಬಂದರೂ ಆಶ್ವರ್ಯವಿಲ್ಲ. ಸಿಬಿಐ ತನಿಖಾ ಪರಿಧಿ ರಾಜ್ಯಗಳಿಗೆ ಬರುವುದಿಲ್ಲ, ತಮ್ಮ ಪೂರ್ವಾನುಮತಿ ಇಲ್ಲದೆ ಯಾವುದೇ ತನಿಖೆ ಮಾಡಲು ನಾವು ಬಿಡುವುದಿಲ್ಲ ಎಂದು ಬಹು ಹಿಂದೆ ಸಿಕ್ಕಿಂ ಸರಕಾರ ಚಕಾರವೆತ್ತಿತ್ತು. ಆದರೆ ಸಿಬಿಐ ಕಾರ್ಯಾಚರಣೆಯ ನಿಯಮ ತಿಳಿಸುವುದೇನೆಂದರೆ 1946ರ ದಿಲ್ಲಿ ವಿಶೇಷ ಪೋಲಿಸ್‌ ಕಾಯಿದೆ ಅನ್ವಯ ದಿಲ್ಲಿಯಿಂದ ಹೊರಗೆ ತನಿಖೆ ನಡೆಸುವ ಅಧಿಕಾರ ಸಿಬಿಐಗೆ ಇದೆ. ಆದರೆ ರಾಜ್ಯಗಳ ವಿಷಯಗಳಿಗೆ ಸಂಬಂಧಪಟ್ಟ ರಾಜ್ಯಗಳ ಅನುಮತಿ ಅನಿವಾರ್ಯ. ಒಂದು ವೇಳೆ ರಾಜ್ಯದ ವಿಷಯಗಳಿಗೆ ಸಂಬಂಧಪಟ್ಟು ಸಿಬಿಐ ಪ್ರವೇಶಿಸಬೇಕಾದರೆ ಸ್ವಯಂ ರಾಜ್ಯವೇ ಬೇಡಿಕೆ ಸಲ್ಲಿಸಬೇಕು; ಅಥವಾ ಹೈಕೋರ್ಟು; ಸುಪ್ರೀಂ ಕೋರ್ಟು ನಿರ್ದೇಶನ ನೀಡಿದಾಗ ಸಿಬಿಐ ತನಿಖೆಗೆ ಒಳಪಡಿಸಬಹುದು. ಇಲ್ಲಿ ನಾವು ಬಹುಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕೇಂದ್ರದ ವ್ಯಾಪ್ತಿಗೆ ಒಳಪಡುವ ಹಣಕಾಸು, ಬ್ಯಾಂಕ್‌ ರಾಜ್ಯ-ರಾಜ್ಯಗಳ ನಡುವಿನ ಪ್ರಕರಣ, ಅಂತಾರಾಷ್ಟ್ರೀಯ ಸಂಬಂಧಗಳಿಗೆ ಸಂಬಂಧಿಸಿದ ಪ್ರಕರಣ, ದೇಶದ ರಕ್ಷಣೆ; ಭದ್ರತೆ ಮುಂತಾದ ವಿಷಯಗಳ ತನಿಖೆಗೆ ಸಿಬಿಐಗೆ ರಾಜ್ಯಗಳ ಅನುಮತಿ ಅಗತ್ಯವಿಲ್ಲ ಅನ್ನುವುದು ಕಾನೂನಿನಲ್ಲಿ ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ.

ಪ್ರಸ್ತುತ ಸಿಬಿಐಯ ಸಂಘರ್ಷ ಸ್ಥಿತಿಯಲ್ಲಿ ಆಗಬೇಕಾಗಿರುವ ಕಾಯಕಲ್ಪವೆಂದರೆ ಸಿಬಿಐ ತನ್ನ ವಿಶ್ವಾಸಾರ್ಹತೆ, ಗೌಪ್ಯತೆ, ನಿಷ್ಪಕ್ಷತನವನ್ನು ಉಳಿಸಿಕೊಳ್ಳಲು ರಾಜಕೀಯ ಹಸ್ತಕ್ಷೇಪದಿಂದ ಮುಕ್ತಿ ಪಡೆಯುವುದು. ಈ ಎಲ್ಲ ಘನತೆ ಗೌರವಗಳನ್ನು ಮೈಗೂಡಿಸಿಕೊಳ್ಳುವ ಸ್ವಯಂ ನಿರ್ಧಾರ ಸಿಬಿಐ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಸರಕಾರ ಕೂಡಾ ಸಿಬಿಐಯನ್ನು ಈ ಒಂದು ತ್ರಿಶಂಕು ಸ್ಥಿತಿಯಿಂದ ಮುಕ್ತಿಗೊಳಿಸಿ, ಸ್ವಾಯತ್ತ ಸಂಸ್ಥೆಯಾಗಿ ಸಾಂವಿಧಾನಿಕ ಚೌಕಟ್ಟಿನಲ್ಲಿ ಪುನರ್‌ ರಚಿಸಬೇಕಾದ ಕಾಲ ಕೂಡಿಬಂದಿದೆ. 

ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next