Advertisement

ಪಾಪಪ್ರಜ್ಞೆ ಇಲ್ಲದಿದ್ದಾಗ ಭಂಡತನ ಜತೆಯಾಗುತ್ತದೆ…

12:20 AM Jul 30, 2023 | Team Udayavani |

“ಛೆ ಛೆ, ಹೀಗೆ ಆಗಬಾರದಾಗಿತ್ತು. ತುಂಬಾ ಅನ್ಯಾಯ ಇದು…” ತಮ್ಮಷ್ಟಕ್ಕೆ ತಾವು ಹೀಗೆ ಮಾತಾಡುತ್ತಲೇ ವರಾಂಡದಲ್ಲಿ ಶತಪಥ ತಿರುಗುತ್ತಿದ್ದರು ಅಂಜನಪ್ಪ. ಅವರ ಮಾತಿನಲ್ಲಿ ಅಸಹನೆಯಿತ್ತು. ಧ್ವನಿಯಲ್ಲಿ ಸಂಕಟವಿತ್ತು. ನೋಟದಲ್ಲಿ ಬೇಸರದ ಛಾಯೆ ಎದ್ದು ಕಾಣುತ್ತಿತ್ತು. ಯಾವ ಕಾರಣಕ್ಕೆ ಇಷ್ಟೊಂದು ಡಿಸ್ಟರ್ಬ್ ಆಗಿದ್ದರೆಂದು ಗೊತ್ತಾಗಲಿಲ್ಲ. ಹಾಗಾಗಿಯೇ ಕೇಳಿದೆ: “ಸರ್‌, ಯಾಕೆ ಸಿಟ್ಟಾಗಿದ್ದೀರಿ? ಏನಾಯಿತು?”

Advertisement

“ಓಹ್‌, ಇನ್ನೂ ಪೇಪರ್‌ ಓದಿಲ್ವಾ? ಎಂಥಾ ದುರಂತ ನಡೆದಿದೆ ನೋಡಿ, ಅನ್ನುತ್ತಾ ಅಲ್ಲಿದ್ದ ಪತ್ರಿಕೆಯನ್ನು ತೆಗೆದುಕೊಟ್ಟರು. ಕಳಪೆ ಕಾಮಗಾರಿಯ ಕಾರಣದಿಂದ ನಿರ್ಮಾಣ ಹಂತದಲ್ಲಿದ್ದ ಶಾಲಾ ಕೊಠಡಿಯ ಗೋಡೆ ಕುಸಿದು ವಿದ್ಯಾರ್ಥಿಯೊಬ್ಬ ಮೃತಪಟ್ಟ ಸುದ್ದಿ ಅಲ್ಲಿತ್ತು. ಇದಕ್ಕೆ ಹೇಗೆ ಪ್ರತಿಕ್ರಿಯಿಸುವುದೋ ಗೊತ್ತಾಗದೆ ನಿಂತಿದ್ದಾಗ ಅಂಜನಪ್ಪನವರೇ ಹೇಳಿದರು: “ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಆ ದಿನಗಳಲ್ಲಿ ಗುತ್ತಿಗೆದಾರರಿಗೂ ಸಾಮಾಜಿಕ ಕಳಕಳಿಯಿತ್ತು. ಸ್ಕೂಲ್‌ ಅಥವಾ ಆಸ್ಪತ್ರೆ ಕಟ್ಟಿಸುವ ಸಂದರ್ಭದಲ್ಲಿ ಕಮಿಷನ್‌ ವಿಷಯವನ್ನು ಪಕ್ಕಕ್ಕಿಟ್ಟು ಕೆಲಸ ಮಾಡ್ತಿದ್ವಿ. ಅದರಲ್ಲೂ ಸ್ಕೂಲ್‌ ಬಿಲ್ಡಿಂಗ್‌ ಕಟ್ಟಿಸುವ ಕಾಂಟ್ರಾಕ್ಟರ್‌ ಸಿಕ್ಕಿದರೆ, ಅದನ್ನು ಸರಸ್ವತಿ ಸೇವೆ ಅಂದುಕೊಂಡು ಬಹಳ ಮುತುವರ್ಜಿಯಿಂದ ಮಾಡಿ ಮುಗಿಸ್ತಾ ಇದ್ವಿ. ನಮ್ಮ ಮಕ್ಕಳು ಕಲಿಯೋ ಜಾಗ ಇದು ಅನ್ನುವ ಸೆಂಟಿಮೆಂಟ್‌ ಕೂಡ ಇರ್ತಿತ್ತು. ಆದ್ರೆ ಇವತ್ತು ಹೇಗಾಗಿ ಹೋಗಿದೆ ನೋಡಿ…”

ಅಂಜನಪ್ಪ ನಮ್ಮ ತಾಲೂಕಿನ ಹಳೆಯ ಗುತ್ತಿಗೆದಾರರು. ವಯಸ್ಸಾದ ಕಾರಣದಿಂದ ಕಾಂಟ್ರಾಕ್ಟಿಂಗ್‌ಗೆ ಗುಡ್‌ಬೈ ಹೇಳಿದ್ದರು. ಚಿಕ್ಕದೊಂದು ಶಾಪಿಂಗ್‌ ಕಾಂಪ್ಲೆಕ್ಸ್‌ ಕಟ್ಟಿಸಿ ಬಾಡಿಗೆಗೆ ಕೊಟ್ಟಿದ್ದರು. ಊರಿನಲ್ಲಿ ಯಾವುದೇ ಕಾರ್ಯಕ್ರಮವಾದರೂ ತಪ್ಪದೇ ಪಾಲ್ಗೊಳ್ಳುತ್ತಿದ್ದರು. ಚಿಕ್ಕಮೊತ್ತದ ದೇಣಿಗೆ ಕೊಡುತ್ತಿದ್ದರು. ಮುಖ್ಯವಾಗಿ, ಬಡವರ ಕಷ್ಟಗಳಿಗೆ ಕಿವಿಯಾಗುತ್ತಿದ್ದರು. ತಮಗಿದ್ದ ಹಳೆಯ ಸಂಪರ್ಕಗಳ ಮೂಲಕ ಬಡವರ/ರೈತಾಪಿ ಜನರ ಕೆಲಸಗಳನ್ನು ಮಾಡಿಸಿಕೊಡುತ್ತಿದ್ದರು. ಇದೇ ಕಾರಣಕ್ಕೆ ಎಲ್ಲರಿಗೂ ಬೇಕಾದವರಾಗಿದ್ದರು. ಕಷ್ಟ-ಸುಖ ಮಾತಾಡಲು, ಸಮಸ್ಯೆ ಹೇಳಿಕೊಳ್ಳಲು ಅವರ ಮನೆಗೆ ಯಾರು ಬೇಕಾದರೂ ಹೋಗಬಹುದಿತ್ತು. ಇಂಥ ಮನುಷ್ಯ, ತಮ್ಮ ವೃತ್ತಿಬಾಂಧವರ ಕಳಪೆ ಕೆಲಸದಿಂದ ಉಂಟಾದ ಅನಾಹುತ ಕಂಡು ಖನ್ನರಾಗಿದ್ದರು.

ಸಾರ್‌, ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಅನ್ನೋದು ಈಗ ಎಲ್ಲರ ಮಾತು. ನೀವು ಕಾಂಟ್ರಾಕ್ಟಿಂಗ್‌ ಮಾಡಿಸುತ್ತಿದ್ದ ಸಂದರ್ಭದಲ್ಲಿ ಈ ಥರಾ ಆಗ್ತಾನೇ ಇರಲಿಲ್ವ?- ಈ ಪ್ರಶ್ನೆ ಮುಗಿಯುವ ಮೊದಲೇ ಅವರು ಹೇಳಿದರು: ನೋಡೀ, ಗುತ್ತಿಗೆದಾರರು ಬಿಡ್‌ ರೂಪದಲ್ಲಿ ಸಿಕ್ಕಿದ ಒಟ್ಟು ಮೊತ್ತದಲ್ಲಿ ಕಮಿಷನ್‌ ಇತ್ಯಾದಿಯನ್ನು ಉಳಿಸಿಕೊಂಡು, ಆನಂತರ ಮಿಕ್ಕುವ ಹಣದಲ್ಲೇ ಕೆಲಸ ಮಾಡಿಸೋದು ಶುರುವಾಗಿ ಐವತ್ತು ವರ್ಷಾನೇ ಆಗಿದೆ ಅಂದುಕೊಳ್ಳಿ. ಆಗೆಲ್ಲಾ ನಯವಾಗಿ ಮಾತಾಡಿ ಜಾಸ್ತಿ ಕೆಲಸ ತೆಗೆಯಲು ಗೊತ್ತಿದ್ದ ಕಂಟ್ರಾಕ್ಟರ್‌ಗಳು ಜಾಸ್ತಿ ಕಾಸು ಮಾಡ್ಕೊಳ್ತಿದ್ರು.

ತಮಗೆ ಬಿಲ್‌ ಸ್ಯಾಂಕ್ಷನ್‌ ಮಾಡಿಸಿಕೊಡುವ ಎಂಜಿನಿಯರ್‌ಗೆ, ಆ ಕ್ಷಣದ ಖುಷಿಗೆ ಅನ್ನುವಂತೆ ಸಣ್ಣ ಮೊತ್ತ ಅಥವಾ ಗಿಫ್ಟ್‌ ಕೊಡುತ್ತಿದ್ದರು. ಆನಂತರದಲ್ಲಿ ಅದು ಹೇಗೆ ಹೇಗೋ ವಿಚಿತ್ರ ರೂಪು ತಳೆದು ಬಿಟ್ಟಿತು. ಜನಪರ ಯೋಜನೆಗಳಲ್ಲೂ ಕಾಸು ಮಾಡುವ ದುರ್ಬುದ್ಧಿ ಗುತ್ತಿಗೆದಾರರಿಗೆ ಬಂತು. ಒಂದು ಉದಾಹರಣೆ ಹೇಳ್ತೇನೆ ಕೇಳಿ: ನಲವತ್ತು ವರ್ಷಗಳ ಹಿಂದೆ, ಪ್ರತಿಯೊಂದು ಹಳ್ಳಿಯಲ್ಲೂ ಬೋರ್‌ವೆಲ್‌ ಕೊರೆಸಿ ಜನ, ಜಾನುವಾರುಗಳಿಗೆ ನೀರು ಒದಗಿಸುವ ಯೋಜನೆಯೊಂದು ಜಾರಿಗೆ ಬಂತು. ಬೋರ್‌ವೆಲ್‌ನ ಸುತ್ತ ಒಂದು ವೃತ್ತಾಕಾರದ ಕಟ್ಟೆಯನ್ನು, ಅದರ ಪಕ್ಕದಲ್ಲೇ ಜಾನುವಾರುಗಳಿಗೆ ನೀರು ಒದಗಿಸಲು ಒಂದು ತೊಟ್ಟಿಯನ್ನೂ ನಿರ್ಮಿಸುವುದೆಂದು ಪ್ಲ್ಯಾನ್‌ ಮಾಡಲಾಯಿತು. ಈ ಯೋಜನೆಯ ಮೂಲಕ ಹಳ್ಳಿಗಳಲ್ಲಿರುವ ಜನ-ಜಾನುವಾರುಗಳಿಗೆ ಹೆಚ್ಚಿನ ಅನುಕೂಲವಾಗಲಿ ಎಂಬ ಸದಾಶಯದಿಂದ, ಒಂದೊಂದು ಬೋರ್‌ವೆಲ್‌ಗ‌ೂ ತಲಾ ಐದು ಮೂಟೆ ಸಿಮೆಂಟ್‌ ಒದಗಿಸಲಾಯಿತು.

Advertisement

10 ವರ್ಷಗಳು ಕಳೆದರೂ ಸುಭದ್ರವಾಗಿ ಉಳಿಯುವಂಥ ಜಾನುವಾರುಗಳು ನೀರು ಕುಡಿಯುವ ಟ್ಯಾಂಕ್‌ ಮತ್ತು ಜನಸಾಮಾನ್ಯರು ಬಿಂದಿಗೆಗಳನ್ನು ಇಟ್ಟುಕೊಂಡು ನಿಲ್ಲಲು ಅವಕಾಶ ಮಾಡಿಕೊಡುವ ವೃತ್ತಾಕಾರದ ಕಟ್ಟೆ ನಿರ್ಮಿಸಲು ಹೇಳಲಾಯಿತು. ಆನಂತರ ಆಗಿದ್ದೇ ಬೇರೆ. ಈ ಯೋಜನೆಗೆ ಮಂಜೂರಾಗಿದ್ದ 5 ಮೂಟೆ ಸಿಮೆಂಟ್‌ನಲ್ಲಿ ಒಂದು ಮೂಟೆ ಎಂಜಿನಿಯರ್‌ ಮನೆಯಲ್ಲೇ ಉಳಿಯಿತು! ಇನ್ನೊಂದು ಕಂಟ್ರಾಕ್ಟರ್‌ರ ಮನೆ ಸೇರಿತು. ಯಥಾ ರಾಜಾ ತಥಾ ಪ್ರಜಾ ಅಲ್ಲವೆ? ಮೂರನೆಯದನ್ನು ಅಲ್ಲಿದ್ದ ಕೆಲಸಗಾರರು ಮಾರಿಕೊಂಡರು! ಉಳಿದಿದ್ದ ಎರಡು ಮೂಟೆ ಸಿಮೆಂಟ್‌ಗೆ ಮರಳು ಸೇರಿಸಿ “ಕೆಲಸ” ಮುಗಿಸಲಾಯಿತು! ಅವು ಎರಡು ವರ್ಷಗಳ ನಂತರ ಕಿತ್ತು ಹೋದವು. ಹಳ್ಳಿಗಳ ಜನ ಸುಮ್ಮನಿರುತ್ತಾರೆಯೇ? ಗುತ್ತಿಗೆದಾರರನ್ನು ಶಂಕಿಸಿದರು. “ಖದೀಮ ಕಂಟ್ರಾಕ್ಟರ್‌, ಊರಿನ ಕೆಲಸದಲ್ಲೂ ಕಾಸು ಹೊಡೆದ’ ಎಂದು ಆಡಿಕೊಂಡರು. ಬಡವರ ಮೂದಲಿಕೆಯಿಂದ, ಬೈಗುಳದಿಂದ ಸಿರಿವಂತರಿಗೆ ಸಣ್ಣ ತೊಂದರೆಯೂ ಆಗುವುದಿಲ್ಲ ಅಲ್ಲವೆ? ಇಲ್ಲೂ ಹಾಗೇ ಆಯಿತು. ಮುಂದೆ ಅಭಿವೃದ್ಧಿ ಕೆಲಸಗಳಲ್ಲಿ ಲಾಭ ಮಾಡಿಕೊಳ್ಳಲು ಬಯಸುವವರ ದೊಡ್ಡ ಹಿಂಡೇ ಸೃಷ್ಟಿಯಾಯಿತು.

ಹೀಗೆಲ್ಲ ಇದ್ದರೂ ಆ ದಿನಗಳಲ್ಲಿ ಕಂಟ್ರಾಕ್ಟರ್‌ಗಳಿಗೆ ಸ್ವಲ್ಪವಾದರೂ ಭಯವಿರುತ್ತಿತ್ತು. ಕಾರಣ, ಒಂದು ಕಾಮಗಾರಿ ಅಂದರೆ ಅದಕ್ಕೆ ಹತ್ತಾರು ಅಂಗಡಿಗಳಿಂದ ಅಗತ್ಯ ಸಾಮಗ್ರಿ ಕೊಳ್ಳಬೇಕಿತ್ತು. ಅಕಸ್ಮಾತ್‌ ಕಳಪೆ ಕಾಮಗಾರಿಯ ಮಾತು ಕೇಳಿಸಿದರೆ, ಕೆಲಸದಲ್ಲಿ ಜೊತೆಯಾಗಿದ್ದ ಎಲ್ಲರಿಗೂ ಕೆಟ್ಟ ಹೆಸರು ಬರುತ್ತಿತ್ತು. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡೇ ಗುತ್ತಿಗೆದಾರರು ಮುಂದುವರಿಯಬೇಕಿತ್ತು. ಹಾಗಾಗಿ, ಗುತ್ತಿಗೆದಾರರಲ್ಲೇ ಅತಿ ಬುದ್ಧಿವಂತರಾಗಿದ್ದ ಕೆಲವರು-“ರಸ್ತೆ ಮತ್ತು ಚರಂಡಿ ಕಾಮಗಾರಿಯನ್ನು ವರ್ಷಕ್ಕೆ ನಾಲ್ಕು ಸಲ ಬೇಕಾದರೂ ನಡೆಸಬಹುದು. ಆದರೆ, ಶಾಲೆ ಮತ್ತು ಆಸ್ಪತ್ರೆಯ ವಿಷಯದಲ್ಲಿ ಹಾಗೆ ಮಾಡಲು ಆಗದು. ಶಾಲೆಯಲ್ಲಿ ನಮ್ಮ ಮಕ್ಕಳೇ ಇರುತ್ತವೆ. ಆಸ್ಪತ್ರೆಗೆ ಮುಂದೊಮ್ಮೆ ನಾವೂ ಹೋಗಬೇಕಾಗಿ ಬರಬಹುದು. ಹಾಗಾಗಿ, ಈ ಎರಡೂ ಕಾಮಗಾರಿಯಲ್ಲಿ ಕಮಿಷನ್‌ಗೆ ಆಸೆಪಡದೆ ಅತ್ಯುತ್ತಮ ಅನ್ನಿಸುವಂತೆ ಕೆಲಸ ಮಾಡೋಣ. ರಸ್ತೆ, ಚರಂಡಿ ನಿರ್ಮಾಣದ ವೇಳೆ ಸ್ವಲ್ಪ ಕಾಸು ಮಾಡಿಕೊಳ್ಳೋಣ’ ಎಂದು ತಮ್ಮ ತಮ್ಮಲ್ಲಿಯೇ ತೀರ್ಮಾನಿಸಿಕೊಂಡರು.

ಮುಂದೆ ಇಸವಿಗಳು ಬದಲಾದವು. ನಗರಗಳು ಬೆಳೆದವು. ರಸ್ತೆಗಳು ಹೆಚ್ಚಿದವು. ಹಳ್ಳಿಗಳಲ್ಲೂ ಒಳಚರಂಡಿಗಳು ಕಾಣಿಸಿಕೊಂಡವು. ಅರಮನೆಯಂಥ ಶಾಲೆ, ಆಸ್ಪತ್ರೆ, ಕಾಲೇಜು, ಹತ್ತಾರು ಅಂತಸ್ತಿನ ಕಟ್ಟಡಗಳು ಎದ್ದುನಿಂತವು. ಅವೆಲ್ಲಾ ಖಾಸಗಿ ಒಡೆತನದವು ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ? ಬಡವರು ಮಾತ್ರ ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗೆ ಹೋಗುತ್ತಾರೆ ಅನ್ನುವಂತಾಯಿತು. ಶಾಲೆ, ಆಸ್ಪತ್ರೆಗಳಲ್ಲಿ ರಿಪೇರಿ ಕೆಲಸ ಪದೇ ಪದೆ ನಡೆಯುವಂತಾಯಿತು. ಪ್ರತಿ ಊರಲ್ಲಿ ಐದಾರು ಜನ ಗುತ್ತಿಗೆದಾರರು ಸೃಷ್ಟಿಯಾದರು. ಕಂಟ್ರಾಕ್ಟಿಂಗ್‌ ಅನ್ನುವುದು ದುಡ್ಡು ಮಾಡಲು ಇರುವ ಸುಲಭದ ದಾರಿ ಎಂಬಂತಾಯಿತು. ಅದರ ಬೆನ್ನಿಗೇ, ಸಮಾಜದ ಹಣ ನುಂಗಿದರೆ ಪಾಪ ಸುತ್ತಿಕೊಳ್ಳುತ್ತೆ ಎಂಬ ಮಾತೂ ಕೇಳಿಸಿತು.

ಭಯ ಜೊತೆಯಾದಾಗ ಮನುಷ್ಯ ಏನು ಮಾಡ್ತಾನೆ ಹೇಳಿ? ದೇವರ ಮೊರೆ ಹೋಗುತ್ತಾನೆ. ಪೂಜೆಗೆ ಕೂರುತ್ತಾನೆ. ಹರಕೆ ಕಟ್ಟಿಕೊಳ್ಳುತ್ತಾನೆ. ನಮ್ಮ ಕಾಲದ ಹಲವು ಗುತ್ತಿಗೆದಾರರೂ ಇದೇ ದಾರಿ ಹಿಡಿದರು. ದೇವರಿಗೆ ಕಾಣಿಕೆ ಒಪ್ಪಿಸಿ ಮನಸ್ಸಿಗೆ ಸಮಾಧಾನ ತಂದುಕೊಂಡರು. ಮುಂದೆ ಎಲ್ಲರಿಗೂ ಇದೇ ಅಭ್ಯಾಸ ಆಗಿ ಹೋಯಿತು. “ಕಾಣಿಕೆ ಒಪ್ಪಿಸಿದರೆ ಕಳ್ಳತನಕ್ಕೂ ಮಾಫಿ’ ಅನ್ನಿಸಿದಾಗ “ಕಾಸು ಹೊಡೆಯುವುದೇ” ಫ‌ುಲ್‌ ಟೈಮ್‌ ಕೆಲಸವಾಯಿತು. ಕೆಲಸಗಳ ಗುಣಮಟ್ಟ ಹಳ್ಳ ಹಿಡಿಯಿತು. ಒಂದು ಲಕ್ಷ ರೂ.ಗಳಲ್ಲಿ ಮುಗಿಸಬಹುದಾದ ಕೆಲಸವನ್ನು 40 ಸಾವಿರ ರೂಪಾಯಿಯಲ್ಲಿ ಮುಗಿಸಬೇಕು ಮತ್ತು ಮುಗಿಸಬಹುದು ಅನ್ನುವ ಮನಸ್ಥಿತಿ ಹಲವರಿಗೆ ಬಂತು. ಪರಿಣಾಮ: ಮಾಡಿದ್ದೇ ಕೆಲಸ, ಕೊಟ್ಟಿದ್ದೇ ಲೆಕ್ಕ ಅನ್ನುವಂತಾಗಿ ಹೋಯಿತು.

“ಓಹ್‌, ಮುಂದೆಯೂ ಇದೇ ಕ್ಷೇತ್ರದಲ್ಲಿ ಮುಂದುವರಿದರೆ ಮನಃಶಾಂತಿ ಸಿಗುವುದಿಲ್ಲ, ಸಮಾಜದಲ್ಲಿ ಮರ್ಯಾದೆಯೂ ಉಳಿಯುವುದಿಲ್ಲ ಅನಿಸಿದ್ದೇ ಆಗ. ನಾನು ತಡಮಾಡಲಿಲ್ಲ. ಮನಸ್ಸಿನ ಮಾತು ಕೇಳಿ ಆ ಕ್ಷೇತ್ರದಿಂದ ಹಿಂದೆ ಸರಿದೆ. ಹೊಟ್ಟೆಪಾಡು ನಡೆಯಬೇಕಲ್ಲವೆ? ಅದಕ್ಕಾಗಿ ಚಿಕ್ಕ ಕಾಂಪ್ಲೆಕ್ಸ್‌ ಕಟ್ಟಿಸಿ ಬಾಡಿಗೆಗೆ ಬಿಟ್ಟೆ. ಒಂದು ಕಾಲದಲ್ಲಿ ಬರಿಗೈ ದಾಸನಾಗಿದ್ದ ನನ್ನನ್ನು ಈ ಸಮಾಜ ಬೆಳೆಸಿತು, ಒಂದು ಐಡೆಂಟಿಟಿ ಕೊಟ್ಟಿತು. ನಾನೀಗ ಅದರ ಋಣ ತೀರಿಸಬೇಕು ಅನ್ನಿಸಿದಾಗ ದೇಣಿಗೆ ನೀಡುವುದನ್ನು ಅಭ್ಯಾಸ ಮಾಡಿಕೊಂಡೆ. ಸಧ್ಯ, ಸುತ್ತಲಿನ ಪ್ರಪಂಚ ನಾನು ಅಂದುಕೊಂಡಷ್ಟು ಕೆಟ್ಟದಾಗಿಲ್ಲ ಅಂದುಕೊಂಡೇ ಇದ್ದೆ.

ಆದರೆ, ಈಗ ಏನಾಗಿ ಹೋಗಿದೆ ನೋಡಿ. ನಿರ್ಮಾಣ ಹಂತದಲ್ಲಿದ್ದ ಶಾಲಾ ಕಟ್ಟಡವೇ ಬಿದ್ದು ಹೋಗಿದೆ. ಒಂದು ಮಗುವನ್ನು ಬಲಿ ತೆಗೆದುಕೊಂಡಿದೆ. ಯಾಕೆ ಹೀಗಾಯಿತು? ಶಾಲಾ ನಿರ್ಮಾಣದ ಕೆಲಸ ಅಂದರೆ, ಸರಸ್ವತಿ ಸೇವೆಗೆ ಸಿಗುವ ಅಪೂರ್ವ ಅವಕಾಶ ಅನ್ನುತ್ತಿದ್ದ ಗುತ್ತಿಗೆದಾರರು ಏನಾದರು ಎಂದು ವಿಚಾರಿಸಿದರೆ, ಸದ್ಯದ ಸಂದರ್ಭದಲ್ಲಿ ಅವರೂ ಅಸಹಾಯಕರು ಎಂಬ ಉತ್ತರ ಸಿಕ್ಕಿತು. ಹೀಗೂ ಉಂಟೆ? ಎಂದು ಅಚ್ಚರಿಪಡುತ್ತಲೇ ನಂಬಿಕಸ್ತ ಜನರನ್ನು ವಿಚಾರಿಸಿದರೆ-“ಈಗೇನಿದ್ರೂ ಕಮಿಷನ್‌ ರೂಪದಲ್ಲೇ ಅರ್ಧದಷ್ಟು ಹೋಗಿ ಬಿಡುತ್ತೆ. ಉಳಿದ ಹಣದಲ್ಲೇ ಕೆಲಸ ಮುಗಿಸಬೇಕು.

ಒಂದು ಕೆಲಸ ಮುಗಿಸಲಿಲ್ಲ ಅಂದ್ರೆ ಇನ್ನೊಂದು ಕೆಲಸಕ್ಕೆ ಕಂಟ್ರಾಕ್ಟಿಂಗ್‌ ಸಿಗಲ್ಲ. ಹಾಗಾಗಿ ಈಗ ಎಲ್ಲ ಕಡೆ ಕಳಪೆ ಕಾಮಗಾರಿ ಮಾಮೂಲು” ಎಂಬ ಉತ್ತರ ಸಿಕ್ಕಿತು. ಈಗ ಎಲ್ಲವೂ ಎಷ್ಟೊಂದು ಯಾಂತ್ರಿಕ ಆಗಿಬಿಟ್ಟಿದೆ ಅಂದ್ರೆ-“ನನ್ನ ತಂಡದ ಕಳಪೆ ಕೆಲಸದಿಂದಾಗಿ ಒಂದು ಮಗುವಿನ ಜೀವ ಹೋಯ್ತು ಅನ್ನುವ ಪಾಪಪ್ರಜ್ಞೆ ಗುತ್ತಿಗೆದಾರನಿಗೆ ಇಲ್ಲ. ಜನ ಪ್ರಶ್ನಿಸಿದರೆ ಗತಿಯೇನು ಎಂಬ ಯೋಚನೆ ಇಲ್ಲ. ಶಿಕ್ಷೆಯಾದರೆ ಎಂಬ ಭಯವೂ ಇಲ್ಲ.

ದುರಂತದ ಸುದ್ದಿ ತಿಳಿದಾಗ ಆತ ಐದು ಲಕ್ಷ ಪರಿಹಾರ ಕೊಡ್ತೇನೆ ಅನ್ನುತ್ತಾರೆ. ಇನ್ಯಾರೋ ಬಂದು, ಸರ್ಕಾರದ ಕಡೆಯಿಂದಾನೂ ಕೊಡಿಸೋಣ ಅಂತಾರೆ. ಪರಿಹಾರದ ಹಣ ಅದೆಷ್ಟೇ ಇದ್ರೂ ಅದರಿಂದ ಹೋದ ಜೀವವನ್ನು ಮರಳಿ ತರಲು ಆಗಲ್ಲ ಅನ್ನುವ ಸಂಕಟದ ಭಾವ ಅವರನ್ನು ಕಾಡಬೇಕಲ್ಲವಾ? ಇನ್ಯಾವತ್ತೂ ನಾನು ಕಳಪೆ ಕಾಮಗಾರಿ ಮಾಡಿಸೋದಿಲ್ಲ ಅನ್ನುವ ಮನಸ್ಸು ಬರಬೇಕು ಅಲ್ಲವಾ? ಅಂಥದೊಂದು ಸಂದರ್ಭ, ಮನಸ್ಥಿತಿ ಸೃಷ್ಟಿಯಾಗುತ್ತಾ ಇಲ್ಲ. ಅಯ್ಯೋ, ಏನೋ ಕೆಟ್ಟ ಘಳಿಗೆ, ನನ್ನ ಹಣೆಬರಹ ಸರಿ ಇರಲಿಲ್ಲ ಅಷ್ಟೇ. ಎಲ್ಲಾ ವಿಧಿ ಲಿಖೀತ, ಅದರ ಮುಂದೆ ನಾನೆಷ್ಟರವನು ಅನ್ನುತ್ತಾ, ತಪ್ಪುಗಳಿಂದ ನುಣುಚಿಕೊಳ್ಳಲು ಜನ ಕಲಿತು ಬಿಟ್ಟಿದ್ದಾರೆ. ಪಾಪಪ್ರಜ್ಞೆ ಅನ್ನುವುದೇ ಈಗ ಇಲ್ಲವಾಗಿದೆ. ಅದು ನನ್ನ ಸಂಕಟ…

ಸುತ್ತಲಿನ ಸಮಾಜ, ಜನ ಹೀಗಾಗಿ ಬಿಟ್ಟರಲ್ಲ ಎಂಬ ಸಂಕಟದಲ್ಲಿಯೇ ಅಂಜನಪ್ಪ ಮಾತು ನಿಲ್ಲಿಸಿದರು. ಅವರಿಗೆ ಹೇಗೆ ಸಮಾಧಾನ ಹೇಳಬೇಕೋ ಗೊತ್ತಾಗಲಿಲ್ಲ.

– ಎ.ಆರ್‌. ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next