ತರಗತಿ ಸಾಲಿನ ನಡುವೆ ಹಚ್ಚ ಹಸುರಿನ ನಾಲ್ಕು ಮೂಲೆಯ ಚಚೌಕದ ಆವರಣ. ಅಲ್ಲಿಂದ ಆಕಾಶ ದಿಟ್ಟಿಸುವಷ್ಟು ಬೆಳಕಿನ ನೆಗೆತ. ಪ್ರಾಂಗಣದಲ್ಲಿದ್ದ ಅದೊಂದು ಮರ ಎಲೆಯುದಿರಿಸಿ ಇನ್ನೇನು ಒಣಗುವ ಹಾಗೆ ಕೃಶವಾಗಿತ್ತು. ಅದಕ್ಕೆಂದೇ ಕಟ್ಟಿದ್ದ ಕಟ್ಟೆ ಕಳೆಕಳೆದುಕೊಂಡದ್ದು ಒಣತರೆಗೆಲೆಗಳನ್ನು ಹೊದ್ದುಕೊಂಡಿದ್ದಕ್ಕೇ ಏನೋ! ಡಿಸೆಂಬರ್ ಆರಂಭವಾಗಿ-ಮುಗಿದು, ಧನುರ್ಮಾಸದ ಕುಳಿರ್ಗಾಳಿಯ ಆಗಮನ, ಹೊಸವರ್ಷದ ಚಳಿಗೆ ಎಂಬಂತೆ ಅಲ್ಲೊಂದು ಇಲ್ಲೊಂದು ಕೆಂಪು ಮೊಗ್ಗುಗಳು ಟಿಸಿಲೊಡೆಯುತ್ತಿತ್ತು.
ಅವು ಮುತ್ತಿನಂತಹ ಮೊಗ್ಗುಗಳು. ಅತ್ತಿಂದಿತ್ತ ಅಲೆಯುತ್ತಿದ್ದ ವಿದ್ಯಾರ್ಥಿವೃಂದಕ್ಕೆ ಇದು ಕೌತುಕದ ವಿಷಯ. ಮೊಗ್ಗು ಅರಳಿ ಕೆನ್ನೀಲಿಯ ಹೂಗಳು ಒಂದಾದ ಮೇಲೆ ಒಂದರಂತೆ ಪುಟಿಯ ತೊಡಗಿದವು. ಒಂದೂ ಎಲೆಯಿಲ್ಲದ ಈ ಪರ್ಣಪಾತಿ ಮರದಲ್ಲೀಗ ಬರಿಯ ಪನ್ನೇರಳೆಯ ಹೂವುಗಳೇ.
ಬಲು ಅಪರೂಪದ ಈ ಹೂವುಗಳು ತಬೆಬುಯಾ ಕುಲದವು. ವಸಂತ ರಾಣಿ, ಗುಲಾಬಿ ತಬೂಬಿಯಾ ಎಂಬುದು ನಮ್ಮ ನೆಲದವರು ಕರೆದ ಹೆಸರಂತೆ. ಈ ಮರವು ದಕ್ಷಿಣ ಅಮೆರಿಕಾಕ್ಕೆ ಸೇರಿದ್ದು ಮತ್ತು ಪರಾಗ್ವೆಯ ರಾಷ್ಟ್ರೀಯ ಮರವಾಗಿದೆ. ಇದಕ್ಕೆ “ಲ್ಯಾವೆಂಡರ್ ಟ್ರಂಪೆಟ್ ಟ್ರೀ’, “ಪಿಂಕ್ ಟ್ರಂಪೆಟ್ ಟ್ರೀ’, “ಐಪೆ ರೊಕೊÕ’, “ತಹೇಬೂ ಟ್ರೀ’ ಹೀಗೆ ನೂರೆಂಟು ನಾಮಾವಳಿಗಳು.
ತುಸು ದಿನದ ಹಿಂದಷ್ಟೇ ಅಲಕ್ಷ್ಯಿಸಿದವರು ದಿಟ್ಟಿಸುವಷ್ಟು ಆಕರ್ಷಕ ಈಗ. ಹೂವುಗಳು ಉದ್ದನೆಯ ತುರುಬಿನ ರೀತಿಯಲ್ಲೋ, ಕದಿರಿನ ತರಹವೋ, ಅಟ್ಟಳಿಗೆಯಂತಹುದಲ್ಲ. ಅಷ್ಟೂ ಹೂವುಗಳು ಮುನ್ನೂರರವತ್ತು ದಿಕ್ಕಿನಲ್ಲಿ ಅರಳಿ ಗುಂಡನೆಯ ಮಂಜರಿ ಸೃಷ್ಟಿಯಾಗುವುದು. ಫೋಟೋ ಕ್ಲಿಕ್ಕಿಸಿ ಸಮೀಪಿಸಿ ನೋಡಿದರೆ ಒಂದೊಂದೂ ಹೂವು ಅಪೂರ್ವ.
ಗುಲಾಬಿ ಹೂವಿಗೆ ಹಳದಿಯ ಕೊಳವೆಯಂತಹ ಪರಾಗ ನಳಿಕೆ. ದಳಗಳು ನಸು ನೆರಿಗೆಯ ಮೃದುತ್ವ ಹೊಂದಿವೆ. ತಬೂಬಿಯಾ ಪಂಗಡಕ್ಕೆ ಸೇರಿದ ಬಹುತೇಕ ಹೂವುಗಳು ಕಹಳೆಯಾಕಾರದಲ್ಲಿವೆ. ಗಂಟೆಯಾಕಾರದ್ದೂ ಹೌದು. ಈ ವಿಶೇಷಣದಿಂದಲೇ ಟ್ರಂಪೆಟ್ ಫ್ಲವರ್ ಎಂದು ಪಾಶ್ಚಾತ್ಯರು ಕರೆದದ್ದು. ಮಾಗುವ ಕಾಲಕ್ಕೆ ಗರಿಗೆದರುವ ಲ್ಯಾವೆಂಡರ್ ಟ್ರಂಪೆಟ್ ಮರವು ವಸಂತಾಗಮನದ ವರೆಗೂ ಸುಮರಾಶಿಯನ್ನು ಹೊತ್ತು, ಉದುರಿಸಿ ನಳನಳಿಸುತ್ತವೆ.
ಈಗ ಅದೇ ಕಾರಿಡಾರಿಗೆ ಬಂತೊಂದು ಕಳೆ. ಪಾಠ-ಪ್ರವಚನಗಳ ಅನಂತರ ವಿದ್ಯಾರ್ಥಿಗಣಕ್ಕೆ ಟ್ರಂಪೆಟ್ ಮರವನ್ನೇ ದಿಟ್ಟಿಸುವ ಸರದಿ. ತಮ್ಮ ಛಾಯಾಗ್ರಹಣ ಶಕ್ತಿಯನ್ನು ಪರೀಕ್ಷಿಸುವ ಹೊತ್ತು. ರೀಲ್ಸ್, ಸ್ಟೋರಿ, ಸ್ಟೇಟಸ್ ಎಲ್ಲದರಲ್ಲೂ ತಬೂಬಿಯಾ ಹೂವೇ.
ದಿನಕ್ಕೆ ನಾಲ್ಕಾರು ವಾರ್ತಾಲಾಪಗಳು ನಡೆಯುವುದು ಈ ಮರ-ಹೂವಿನ ಬಗೆಗೆಯೇ. ಮರದಲ್ಲಿ ಹೂವಿದ್ದರೂ ಅದೇ ಆಕರ್ಷಣೆ, ಹೂ ಉದುರಿ ನೆಲದಲ್ಲಿ ಚೆದುರಿದರೂ ಅದೇ ಸೆಳೆತ. ನಮ್ಮ ಪ್ರಾಂಗಣದ ಮಹಡಿಯ ಯಾವುದೇ ಮೂಲೆಯಿಂದ ನೋಡಿದರೂ ತಬೂಬಿಯಾ ಹೂಗಳು ನಸುನಗುವುದೇ ಹಾಗೆ. ನಡೆದಾಡುವವರು ಅನಾವಶ್ಯಕವಾಗಿ ನಿಂತು ನೋಡುವುದು, ತಾವು ಹೇಳುವ ಉದಾಹರಣೆಗಳಲ್ಲಿ ತಬೂಬಿಯಾ ಹೂವನ್ನೆಳೆಯುವುದು, ನಾಳೆ ಮರದ ಹೂ ಹಂದರ ಹೇಗಿರಬಹುದು ಎಂಬೆಲ್ಲಾ ಆಪ್ತತೆಗೆ ತುತ್ತೂರಿ ಹೂಗಳು ಸಾಕ್ಷಿಯಾಗುವವು.
ಹೂವಾದರೆ ಹಸುರನ್ನು ಮರೆಯುವ ಹೂವಾಗಬೇಕು-ಇದು ಗುಲಾಬಿ ತಬೂಬಿಯಾಕ್ಕೆ ಸರಿಯಾಗಿ ಅನ್ವಯಿಸುವ ಮಾತು. ಗಿಳಿ ಪಚ್ಛೆಯ ವರ್ಣದ ಪರ್ಣ. ಚಿಗುರಿದರೆ ಮರವಿಡೀ ಹಸಿರು, ಬೋಳಾದರೆ ಗುಲಾಬಿ. ನಿಗದಿಯಾದ ಐದೆಲೆಯ ತೊಟ್ಟು, ಮಧ್ಯದ ಎಲೆ ಸ್ವಲ್ಪ ದೊಡ್ಡದು. ಹೂವು ಉದುರಿ ಕೋಡು ಇನ್ನೇನು ಬಲಿತಿತ್ತು ಎನ್ನುವಷ್ಟರಲ್ಲಿ ಹಸಿರಿನ ಹೊದಿಕೆಯನ್ನೇ ಹೊದ್ದುಬಿಡುತ್ತದೆ ಈ ಮರ. ಪರಿಸರದಲ್ಲೂ ಶಿಸ್ತಿನ ಛಾಯೆಯನ್ನು ತೋರಿಸುವ ಮರವಿದು ಎಂದು ಒಂದೊಮ್ಮೆ ವಿದ್ಯಾರ್ಥಿ ಮಿತ್ರನಿಗೆ ಹೇಳಿದ್ದೆ.
ಎಳೆಗೆಂಪಿನ ತಬೂಬಿಯಾ ಹೂವು ಉದುರುವ ವೇಳೆಗೆ ನೆಲವೂ ನೋಡಲು ಮನೋಹರ. ಹಸಿರ ಹುಲ್ಲಿನ ಹಾಸು, ಅದರ ಮೇಲೆ ಗುಲಾಬಿ ವರ್ಣದ ಹೂವುಗಳು ತದ್ವಿರುದ್ಧವಾಗಿದ್ದರೂ ಕೆಂಬಣ್ಣದ ರೇಶಿಮೆಯ ಹಾಸು ನೋಟಕ್ಕೆ ಸಿದ್ದ. ಎಲೆಗಳು ಮತ್ತು ಹೂವುಗಳಿಲ್ಲದ ಮರವು ಇದ್ದಕ್ಕಿದ್ದಂತೆ ತುತ್ತೂರಿಗಳಂತೆ ಕಾಣುವ ಹೂವುಗಳನ್ನು ನಿಧಾನಕ್ಕೆ ಮೈದುಂಬಿಕೊಳ್ಳುತ್ತಾ, ಚಳಿಗಾಲದ ಕೊನೆಗೆ ಮರವನ್ನೆಲ್ಲಾ ವ್ಯಾಪಿಸುತ್ತವೆ.
ತಾನು ನಿಂತ ನೆಲವನ್ನು ತನಗಿಂತಲೂ ಹೆಚ್ಚಾಗಿ ಸಿಂಗರಿಸುತ್ತದೆ. ತಬೆಬುಯಾ ಮರವು ಅರಳಿದಾಗ ಅದು ಚಳಿಗಾಲ ಮುಗಿದು ವಸಂತಕಾಲ ಬಂದಿದೆ ಎಂಬುದರ ಸಂಕೇತವೂ ಹೌದಂತೆ. ಹಿಂದಿಯ ಬಸಂತ ರಾಣಿ ಹೆಸರು ಅದಕ್ಕೇ ಇರಬಹುದೇನೋ.
ತರವಲ್ಲದ ಸನ್ನಿವೇಶದಲ್ಲಿ ಬರಿಯ ಕಾಂಡದಿಂದಲೇ ಕೋರೈಸಿ, ಹೂಮಂಡಲವನ್ನು ನಿರ್ಮಿಸುವ ತಬೂಬಿಯಾ ಒಂದು ಅಪೂರ್ವ ಸಸ್ಯಜಾತಿ. ನಾನಂತೂ ನನ್ನ ವಿದ್ಯಾರ್ಥಿ ಮಿತ್ರರೊಡಗೂಡಿ ಸುಮರಾಶಿಯನ್ನೂ, ಸುಮಪಾತವನ್ನೂ ಆಸ್ವಾದಿಸುವೆ. ಇನ್ನೇನು, ಊರಿಡೀ ಹಬ್ಬಿದ ತಬೂಬಯಾ ಮರಗಳು ಕೋರೈಸುವ ಹೂವುಗಳನ್ನು ದಂಡಿಯಾಗಿ ಬಿರಿಯಲು ಆರಂಭಿಸಿವೆ. ನೋಡಿ ಕಣ್ತುಂಬಿಕೊಳ್ಳಿ.
–
ವಿಶ್ವನಾಥ ಭಟ್
ಧಾರವಾಡ