ಕೊಪ್ಪಳ: “ಹಂಪಿ ವಿವಿ ಕುಲಪತಿ ಮಲ್ಲಿಕಾ ಘಂಟಿ ಅವರು ಸೂಟ್‌ಕೇಸ್ ವಿಚಾರ ಕುರಿತು ಯಾವ ಅರ್ಥದಲ್ಲಿ ಹೇಳಿದ್ದಾರೆ ಅನ್ನುವುದು ನನಗೆ ಗೊತ್ತಿಲ್ಲ. ಅವರ ಬಳಿ ಸಾಕ್ಷಿಯಿದ್ದರೆ ತಂದು ಕೊಡಲಿ, ನಾವು ಕ್ರಮ ಕೈಗೊಳ್ಳುತ್ತೇವೆ. ಕುಲಪತಿ ಆ ರೀತಿ ಹೇಳಿದಾಕ್ಷಣ ಕುತ್ತಿಗೆ ತುಂಡರಿಸೋಕಾಗುತ್ತಾ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಪ್ರಶ್ನಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಹೈ-ಕ ವಿಮೋಚನಾ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
“ಮಲ್ಲಿಕಾ ಘಂಟಿ ನನ್ನ ಮೇಲೆ ಆರೋಪ ಮಾಡಿಲ್ಲ. ಸಿಎಂ ಸೇರಿ ಸರ್ಕಾರದ ಮೇಲೂ ಆರೋಪ ಮಾಡಿಲ್ಲ. ತಮ್ಮ ಹೇಳಿಕೆಯನ್ನು ಮಾಧ್ಯಮದಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಈಗಾಗಲೇ ಅವರೇ ಸ್ಪಷ್ಟನೆ ನೀಡಿದ್ದಾರೆ. ಕುಲಪತಿಗಳು ಹಾಗೆ ಹೇಳುತ್ತಾರೆ ಎಂದಾಕ್ಷಣ ಕುತ್ತಿಗೆ ಹಾರಿಸೋಕಾಗಲ್ಲ. ಕೆಲವು ಅಧಿ ಕಾರ ರಾಜ್ಯಪಾಲರಿಗೆ ಇರುತ್ತವೆ. ಇನ್ನೂ ಕೆಲವು ಸರ್ಕಾರಕ್ಕೆ ಇರುತ್ತವೆ. ಯಾರಾದರೂ ತಪ್ಪು ಮಾಡಿದರೆ ನಮ್ಮ ಇತಿಮಿತಿಯಲ್ಲಿ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.
“ಯಡಿಯೂರಪ್ಪ ಅವರು ಸಿಎಂ ಸಿದ್ದರಾಮಯ್ಯ ಸೇರಿ ಸಚಿವರ ಹಗರಣಗಳನ್ನು ದಾಖಲೆ ಸಮೇತ ಬಿಡುಗಡೆ ಮಾಡುವ ಕುರಿತು ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದಾರೆ. ಬಿಎಸ್‌ವೈ ಬಳಿ ದಾಖಲೆ ಇದ್ದರೆ ಅವರು ನ್ಯಾಯಾಲಯ ಮೊರೆ ಹೋಗಲಿ. ಮಾಧ್ಯಮಗಳ ಮುಂದೆ ಬಿಟ್ಟಿ ಪ್ರಚಾರ ತೆಗೆದುಕೊಳ್ಳುವುದನ್ನು ನಿಲ್ಲಿಸಲಿ. ಗೋ. ಮಧುಸೂಧನ್ ಅವರು ನನ್ನ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಅವರ ಬಳಿ ದಾಖಲೆಯಿದ್ದರೆ ಕೋರ್ಟ್ ಮೊರೆ ಹೋಗಲಿ’ ಎಂದರು.
ವಿಧಾನಸೌಧದ 3ನೇ ಮಹಡಿಯಿಂದ ಭ್ರಷ್ಟಾಚಾರ ಆರಂಭವಾಗುತ್ತೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ. ಭ್ರಷ್ಟಾಚಾರ ವಿಧಾನಸೌಧ, ವಿಕಾಸಸೌಧ, ಜಿಲ್ಲಾ ಧಿಕಾರಿ ಸೇರಿ ಇತರೆ ಕಚೇರಿಯಲ್ಲೂ ನಡೆಯುತ್ತದೆ. ಅದನ್ನು ತಡೆಯಲು ನಮ್ಮ ಸರ್ಕಾರ ಮುಂದಾಗಿದೆ. ವಿಧಾನಸೌಧ ಗಂಗೋತ್ರಿಯಲ್ಲ ಎಂದು ಸಚಿವ ರಮೇಶಕುಮಾರ ಹೇಳಿದ್ದನ್ನು ನಾನೂ ಒಪ್ಪಿಕೊಳ್ಳುತ್ತೇನೆ.
-ಬಸವರಾಜ ರಾಯರಡ್ಡಿ, ಸಚಿವ