ಕಲಬುರಗಿ: ಮಕ್ಕಳಿಗೆ ಪಾಠ ಹೇಳಿ ಕೊಡುವ ಪ್ರತಿಯೊಬ್ಬ ಶಿಕ್ಷಕ, ಶಿಕ್ಷಕಿ ತಾಯಿಯಂತಾಗಿ ಅಕ್ಷರ ಕಲಿಸುವ ಹೊಣೆಯನ್ನು ಶಿಕ್ಷಕ ಸಮೂಹ ಹೊತ್ತುಕೊಳ್ಳಬೇಕಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ ಹೇಳಿದರು. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಿದ್ದ 2016-17ನೇ ಸಾಲಿನ ಅರಳಲಿ ಬಾಲ್ಯ-ಬೆಳಗಲಿ ಭವಿಷ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಂದೋಲನದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಸಮಾಜಮುಖೀಯಾಗಿ ಬೆಳೆಯಬೇಕು. ಉಜ್ವಲ ಭವಿಷ್ಯದ ಜೊತೆಯಲ್ಲಿ ಜವಾಬ್ದಾರಿ ಹೊತ್ತುಕೊಳ್ಳುವರಾಗಬೇಕು. ಈ ರೀತಿ ಮಕ್ಕಳನ್ನು ನಿರ್ಮಾಣ ಮಾಡಬೇಕಾದ ಹೆಚ್ಚಿನ ಹೊಣೆ ಶಿಕ್ಷಕರ ಮೇಲಿದೆ. ಎಲ್ಲದಕ್ಕೂ ಪಾಲಕರ ಕಡೆಗೆ ಬೆಟ್ಟು ಮಾಡುವುದನ್ನು ಬಿಡಿ, ನಿಮಗೆ ಸಿಕ್ಕಿರುವ ಸಮಯದಲ್ಲಿ ಒಳ್ಳೆಯ ಮೌಲ್ಯ ಕಲಿಸಿ ಎಂದರು.
ಹೈಕೋರ್ಟ್‌ನ ಇನ್ನೋರ್ವ ನ್ಯಾಯಮೂರ್ತಿ ಬಿ.ಎ. ಪಾಟೀಲ ಮಾತನಾಡಿ, ಮಕ್ಕಳ ಮನಸ್ಸು ಮುಗ್ಧತೆಯಿಂದ ಹಸಿ ಮಣ್ಣಿನಂತಿರುತ್ತದೆ. ನೀವು ಅಲ್ಲಿ ಏನು ಒತ್ತುತ್ತಿರೋ ಹಾಗೆ ಭವಿಷ್ಯ ರೂಪುಗೊಳ್ಳುತ್ತದೆ ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್ ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗಟ್ಟುವ ಮಹತ್ತರ ಜವಾಬ್ದಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಶಿಕ್ಷಣ ಇಲಾಖೆಗಳ ಮೇಲಿದೆ. ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮುಖ್ಯೋಪಾಧ್ಯಾಯರು, ಮಕ್ಕಳ ರಕ್ಷಣಾಧಿಕಾರಿಗಳು ತಳಮಟ್ಟದಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಪಣ ತೊಡಗಬೇಕು.
ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಎಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ರತ್ನಕಲಾ, ಕಲಬುರಗಿ ಹೈಕೋರ್ಟ್ ಪೀಠದ ಹೆಚ್ಚುವರಿ ರಜಿಸ್ಟ್ರಾರ್ ಜನರಲ್ ಎಸ್.ಎಂ. ಪಾಟೀಲ, ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧಿಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ವಿ. ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿರುದ್ಧ ಶ್ರವಣ ಪಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ಪಾಲ್ಗೊಂಡಿದ್ದರು.
ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆ ಸಂಯೋಜಕ ಹರೀಶ ಜೋಗಿ ಮಕ್ಕಳ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ವಿ. ರಾಮನ್ ಮಾತನಾಡಿದರು. ಶಶಿಕಲಾ ಜಡೆ ನಿರೂಪಿಸಿದರು. ಜಿಲ್ಲಾ ಮಟ್ಟದ ಸ್ಪರ್ಧಾ ಪರೀಕ್ಷೆ, ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.