Advertisement

UV Fusion: ಬದುಕಿನ ಸ್ವಾರಸ್ಯವೇ ಸಂಬಂಧವಾದಾಗ

12:29 PM Nov 21, 2023 | Team Udayavani |

ಸಂಬಂಧಗಳು ಅಂತ ಬಂದಾಗ ಮೊದಲು ನೆನಪಾಗುವುದು ಅಪ್ಪ-ಅಮ್ಮ, ಮಗ-ಮಗಳು, ಅಣ್ಣ-ತಂಗಿ, ಅಕ್ಕ-ತಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡ್ಡಮ್ಮ, ಅತ್ತೆ-ಮಾವ ಎಲ್ಲದಕ್ಕಿಂತ ಮುಖ್ಯವಾಗಿ ಗಂಡ-ಹೆಂಡತಿ ಸಂಬಂಧ.

Advertisement

ಸಂಬಂಧಗಳಿಗೆ ಬೆಲೆ ಅನ್ನೋದು ಅವರವರ ಮನಸ್ಥಿತಿ ಅನುಸಾರ, ಅವರು ವಾಸಿಸುವ ಸ್ಥಳದ ಅನುಸಾರ, ಬೆಳೆದು ಬಂದ ರೀತಿಯ ಅನುಸಾರ ನಿರ್ಧರಿತವಾಗಿರುತ್ತದೆ ಎಂದರೆ ತಪ್ಪಾಗಲಾರದು.

ಹೌದು ಖಂಡಿತವಾಗಿಯೂ ಸಂಬಂಧಗಳನ್ನು ಉತ್ತಮವಾಗಿ ಉಳಿಸಿಕೊಳ್ಳಲು ಮನಸ್ಥಿತಿ ತುಂಬಾ ಮುಖ್ಯ. ಅಂತೆಯೇ ನಮಗೆ ಯಾವುದೇ ಸ್ವಾರ್ಥವಿಲ್ಲದೆ, ಯಾವುದೇ ಬಯಕೆ ಇಲ್ಲದೆ, ನಮ್ಮಿಂದ ಏನನ್ನೂ ಅಪೇಕ್ಷಿಸದೇ, ಸದಾ ನಮಗೆ ಪ್ರೀತಿ-ವಾತ್ಸಲ್ಯ, ನಮ್ಮ ಕಾಳಜಿ ವಹಿಸುವ ಅತ್ಯಮೂಲ್ಯ ಸಂಬಂಧವೆಂದರೆ ಅಪ್ಪ-ಅಮ್ಮನದ್ದು. ಹುಟ್ಟಿನಿಂದಲೇ ಈ ಸಂಬಂಧವನ್ನು ನಾವು ಪಡೆದುಕೊಂಡು ಬರುತ್ತೇವೆ ಆದರೂ ಎಲ್ಲೋ ಈ ಸಂಬಂಧದ ಕುರಿತಾಗಿ ಸರಿಯಾದ ವ್ಯಾಖ್ಯಾನ ಮತ್ತು ಬೆಲೆಯನ್ನು ಅರ್ಥೈಸಿಕೊಳ್ಳುವಲ್ಲಿ ಸೋಲುತಿದ್ದೇವೆ.

ಬದುಕು ಎಂಬುದು ಪ್ರಾರಂಭವಾದ ಅನಂತರ ಸಂಬಂಧಗಳ ಆರಂಭ. ಪರಿಚಯ, ಅಂತ್ಯ ಇವೆಲ್ಲವೂ ಸರ್ವೇ ಸಾಮಾನ್ಯ. ಆದರೂ ಕೂಡ ಪ್ರತಿ ಸಂಬಂಧದಲ್ಲೂ ಸ್ವಾರ್ಥ, ವ್ಯಾಮೋಹ, ಅಸೂಯೆ, ಆಸೆ ಇವುಗಳನ್ನೆಲ್ಲ ಬುತ್ತಿಕಟ್ಟಿ ಇಟ್ಟಿರುತ್ತೇವೆ. ಸಂಬಂಧದಲ್ಲೂ ಕನಸುಗಳನ್ನು ಹೊತ್ತಿರುತ್ತೇವೆ. ಆದರೆ ಯಾವ ಸಂಬಂಧ ಕೂಡ ಶಾಶ್ವತವಾಗಿ ನಮ್ಮೊಂದಿಗಿರುವುದಿಲ್ಲ ಮತ್ತು ಸಂಬಂಧಿತ ಅಭಿವ್ಯಕ್ತಿಯಾಗಿರುವವರು ಕೂಡ ಅಂದರೆ ನಮ್ಮನ್ನು ಹೊರೆತುಪಡಿಸಿ ಎದುರಿಗಿರುವ ವ್ಯಕ್ತಿಯೂ ಕೂಡ ಆ ಸಂಬಂಧದ ಕುರಿತಾಗಿ ನಮ್ಮಂತೆಯೇ ಸ್ವಾರ್ಥ, ವ್ಯಾಮೋಹ, ಆಸೆ ಮತ್ತು ಆವಶ್ಯಕತೆಗಳನ್ನು ಹೊಂದಿರುತ್ತಾನೆ.

ಬಹುಶಃ ಸಂಬಂಧ ಯಾವುದೋ ನಿಮಿತ್ತದಿಂದ ಪ್ರಾರಂಭವಾಗುವ ಕಾರಣಕ್ಕೋ ಏನೋ ಇವುಗಳು ಅರ್ಧದಲ್ಲೇ ಅಂತ್ಯ ಪಡೆಯುವುದೇ ಹೆಚ್ಚು.

Advertisement

ನಾವೆಲ್ಲರೂ ಬದುಕಿನ ಪ್ರಾರಂಭದ ಅನಂತರ ಹುಟ್ಟಿಕೊಳ್ಳುವ ಸಂಬಂಧಗಳಿಗೆ ಕೊಡುವಷ್ಟು ಸಮಯ, ಬೆಲೆ, ಪ್ರೀತಿ, ವಿಶ್ವಾಸ, ಪ್ರಾಮಾಣಿಕತೆಯನ್ನು ಹುಟ್ಟಿನಿಂದಲೇ ಜತೆಯಾಗಿರುವ ಅಪ್ಪ ಅಮ್ಮನಿಗೆ ಸಾಸಿವೆಕಾಳಷ್ಟು ನೀಡದೆ ಉಳಿಯುವುದು ವಿಪರ್ಯಾಸವಾಗಿದೆ.

ಎಲ್ಲೋ ಒಂದು ಕಡೆ ನನ್ನ ಮನಸ್ಥಿತಿಗೆ ಹತ್ತಿರವಾದ್ದೇನಿಸುವ ಸಂಬಂಧಗಳಲ್ಲಿ ಅಪ್ಪ-ಅಮ್ಮನ ಹೊರತುಪಡಿಸಿ ಇನ್ನೊಂದು ಅತ್ಯಮೂಲ್ಯ ಸಂಬಂಧವೆಂದರೆ ಗಂಡ ಹೆಂಡತಿ ಸಂಬಂಧ.

ಇದು ಕೂಡ ನಮ್ಮ ಬದುಕಿನ ಮಧ್ಯದ ಪಯಣದಲ್ಲೇ ಪ್ರಾರಂಭವಾದರೂ ನಮ್ಮ ಅಂತ್ಯದವರೆಗೂ ಜತೆಯಾಗಿ ನಿಲ್ಲುವುದೆನ್ನುವ ಕಾರಣಕ್ಕೆ ಈ ಸಂಬಂಧದ ಕುರಿತಾಗಿ ಅತೀವ ನಂಬಿಕೆ.

ಖಂಡಿತವಾಗಿಯೂ ಗಂಡ-ಹೆಂಡತಿ ಸಂಬಂಧದಲ್ಲಿವೂ ಸ್ವಾರ್ಥ, ಆಸೆ, ವ್ಯಾಮೋಹ, ಆವಶ್ಯಕತೆ ಇವುಗಳೆಲ್ಲವನ್ನೂ ಕಾಣಬಹುದಾಗಿದೆ, ಇದನ್ನೆಲ್ಲಾ ಹೊರತುಪಡಿಸಿಯು ಪ್ರೀತಿ, ಹೊಂದಾಣಿಕೆ, ನಂಬಿಕೆ ಎಂಬ ಮೂರು ಅತ್ಯಮೂಲ್ಯ ಅಂಶಗಳಿಂದ ಈ ಸಂಬಂಧ ಅತ್ಯಂತ ಬೆಲೆಯುಳ್ಳಂತಹದ್ದು ಮತ್ತು ಅಂತ್ಯದವರೆಗೆ ಜತೆಯಾಗುವಂತಹ ಬಾಳ ಸಂಗಾತಿಯನ್ನಾ ನೀಡುವುದಾಗಿದೆ.

ಈ ಸಂಬಂಧದ ಉಳಿಯುವಿಕೆಗೆ ಮನಸ್ಥಿತಿ, ಬದುಕಿನ ಬೆಳವಣಿಗೆಯ ರೀತಿ ಮತ್ತು ನಾವು ವಾಸಿಸುವ ಸ್ಥಳವೂ ಸಾಕ್ಷಿಯಾಗುತ್ತದೆ.

ಆಶ್ಚರ್ಯವೆಂದೆನಿಸಿದರೂ, ಇವುಗಳು ಸತ್ಯವಾಗಿದೆ.

ಬದುಕಿನ ರೀತಿಯಲ್ಲಿ ನಮ್ಮ ಬಾಳ ಸಂಗಾತಿಯೊಂದಿಗೆ ನಮ್ಮ ಹೊಂದಾಣಿಕೆ ಮತ್ತು ನಡವಳಿಕೆ ಇವುಗಳು ಮುಖ್ಯವಾಗುತ್ತದೆ.

ಇನ್ನು ವಾಸಿಸುವ ಪ್ರದೇಶವೆಂದು ಬಂದರೆ ಹಳ್ಳಿಗಳಲ್ಲಿನ ಮನಸ್ಥಿತಿಗಳಲ್ಲಿ ಗಂಡ-ಹೆಂಡತಿ ಸಂಬಂಧ ಸ್ವರ್ಗದಲ್ಲಿ ನಿಶ್ಚಿತವಾದದ್ದು ಎಂಬ ನಂಬಿಕೆ ಮತ್ತು ನಡುವೆ ಎಂತಹದ್ದೇ ಸಂಘರ್ಷ ಉಂಟಾದರೂ ಅದನ್ನು ನುಂಗಿಕೊಂಡು, ಹೊಂದಿಕೊಂಡು ಜತೆ ನಡೆಯುವ ಗುಣ ಹಳ್ಳಿಗರದ್ದು. ಇನ್ನು ಪೇಟೆಯ ಪ್ರೀತಿಯಲ್ಲಿ ನೋಡುವುದಾದರೆ ನಮಗೆ ಸ್ವಾತಂತ್ರ್ಯವಿದೆ.

ನಮ್ಮಲ್ಲಿ ಬದುಕಲು ಸ್ವಂತ ಕೆಲಸವಿದೆ ಮತ್ತು ಯಾರ ಮೇಲೂ ಕೂಡ ಅವಲಂಬಿತರಾಗಿರುವ ಆವಶ್ಯಕತೆ ಇಲ್ಲ ಎಂಬ ಕೆಲವೊಂದು ಆತುರದ ನಿರ್ಧಾರ ಮತ್ತು ನಿಷ್ಠರವಾದ ಮನಸ್ಥಿತಿಗಳು ಗಂಡ-ಹೆಂಡತಿ ಸಂಬಂಧವನ್ನು ನುಂಗಿ ಹಾಕುತ್ತಿರುವುದು ಕಾಣುತ್ತಿದ್ದೇವೆ.

ಹಾಗಾಗಿ ನಾನು ಮೊದಲೇ ಸಂಬಂಧಗಳಲ್ಲಿ ಉಳಿಸಿಕೊಂಡು ಹೋಗುವ ಮನಸ್ಥಿತಿ, ಬದುಕಿನ ರೀತಿ, ವಾಸಿಸುವ ಪ್ರದೇಶದ ಪ್ರಭಾವವಿದೆ ಎಂದು ಖಚಿತಪಡಿಸಿದ್ದು.

ಇನ್ನು ಆಧುನಿಕ ಯುಗದಲ್ಲಿ ಸಂಬಂಧಗಳ ಪ್ರಾಮುಖ್ಯತೆ, ಬೆಲೆ ಕಡಿಮೆಯಾಗುತಿರುವುದು ಕಾಣಬಹುದಾಗಿದೆ. ಇದಕ್ಕೆ ಕಾರಣ ಬದಲಾಗುತ್ತಿರುವ ಸಮಯವೋ, ಆಧುನಿಕತೆಯೋ, ಮನಸ್ಥಿತಿಯೋ ಅಥವಾ ಆವಶ್ಯಕತೆಯೋ ತಿಳಿಯದು.

ಏಕೆಂದರೆ ಈಗಿನ ಪ್ರತೀ ಸಂಬಂಧದ ಹುಟ್ಟು ಮತ್ತು ಅಂತ್ಯವು ಆವಶ್ಯಕತೆ ಹಾಗೂ ಸಂದರ್ಭದ ಮೇಲೆ ಅನುಗುಣವಾಗಿದೆ.

ಆವಶ್ಯಕತೆಗೆ ಹುಟ್ಟಿಕೊಳ್ಳುತ್ತಿರುವ ಈ ಆಧುನಿಕತೆಯ ಸಂಬಂಧಗಳು ಆವಶ್ಯಕತೆಯನ್ನು ಮೀರಿ ಅನಿವಾರ್ಯವಾಗಿ ಹುಟ್ಟಿಕೊಂಡು ಶಾಶ್ವತವಾಗಿ ಜತೆಯಾಗಿರಲಿ ಎನ್ನುವುದೇ ನನ್ನ ಆಶಯ.

-ಶಮ್ಮಿ ಶೆಟ್ಟಿ

ಕಬ್ಸೆ, ಶಿವಮೊಗ್ಗ

Advertisement

Udayavani is now on Telegram. Click here to join our channel and stay updated with the latest news.

Next