Advertisement

ಮೋದಿ ಮರೆತ ನೆಹರೂರನ್ನು ಆಜಾದ್‌ ಮತ್ತೆ ಸ್ಮರಿಸಿದರು

07:40 AM Aug 12, 2017 | |

ನವದೆಹಲಿ: “ಭಾರತದ ಸ್ವಾತಂತ್ರ್ಯಕ್ಕಾಗಿ ಬಡವರು ಮತ್ತು ಶ್ರೀಮಂತರು ಇಬ್ಬರೂ ಹೋರಾಡಿದ್ದಾರೆ. ಇಲ್ಲಿ ಬಡವ, ಶ್ರೀಮಂತ ಎಂಬ ಪ್ರಶ್ನೆಯನ್ನು ಬಿಟ್ಟುಬಿಡಬೇಕು. ತಮ್ಮ ಸಂಪತ್ತನ್ನು ದೇಶಕ್ಕಾಗಿ ತ್ಯಾಗ ಮಾಡಿ, ಸ್ವಾತಂತ್ರ್ಯಕ್ಕೆ ಹೋರಾಡುತ್ತಾ ಜೈಲು ಸೇರಿದ ಶ್ರೀಮಂತರ ಕೊಡುಗೆಯನ್ನೂ ನಾವು ಮರೆಯಬಾರದು.’

Advertisement

ಹೀಗೆಂದು ಹೇಳಿರುವುದು ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌. ತಮ್ಮ ಭಾಷಣದಲ್ಲಿ “ಜವಾಹರ್‌ಲಾಲ್‌ ನೆಹರೂ’ ಅವರನ್ನು ಮರೆತ ಪ್ರಧಾನಿ ಮೋದಿ ಅವರಿಗೆ ನೇರ ಉತ್ತರವಾಗಿ ಆಜಾದ್‌ ರಾಜ್ಯಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.

2 ದಿನಗಳ ಹಿಂದೆ ಕ್ವಿಟ್‌ ಇಂಡಿಯಾದ 75ನೇ ವರ್ಷಾಚರಣೆ ಸಂದರ್ಭ ಭಾಷಣ ಮಾಡಿದ್ದ ಪ್ರಧಾನಿ ಮೋದಿ ಹಾಗೂ ಸಚಿವ ಜೇಟಿÉ ಅವರು ದೇಶಕ್ಕೆ ಕೊಡುಗೆ ನೀಡಿದ ವಿವಿಧ ನಾಯಕರನ್ನು ಸ್ಮರಿಸಿಕೊಂಡರೂ, ಜವಾಹರ್‌ಲಾಲ್‌ ನೆಹರೂ ಅವರ ಹೆಸರನ್ನು ಎಲ್ಲಿಯೂ ಎತ್ತಿರಲಿಲ್ಲ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಗುಲಾಂ ನಬಿ ಆಜಾದ್‌ ಅವರು ನೆಹರೂ ಹೆಸರನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. 

ಇದೀಗ ಶುಕ್ರವಾರವೂ ಉಪರಾಷ್ಟ್ರಪತಿ ನಾಯ್ಡು ಅವರ ಅಧಿಕಾರ ಸ್ವೀಕಾರದ ಸಂದರ್ಭದಲ್ಲಿ ಇಂಥದ್ದೇ ಘಟನೆ ನಡೆಯಿತು. ನಾಯ್ಡು ಅವರಂಥ ಬಡ ಹಿನ್ನೆಲೆಯ ವ್ಯಕ್ತಿಗಳು ಸಾಂವಿಧಾನಿಕ ಹುದ್ದೆಗೇರುತ್ತಿರುವುದು ಪ್ರಜಾಪ್ರಭುತ್ವಕ್ಕೆ ನೀಡುತ್ತಿರುವ ಕಾಣಿಕೆ ಎಂಬ ಪ್ರಧಾನಿ ಹೇಳಿಕೆಗೆ ಪ್ರತಿಯಾಗಿ ಮಾತನಾಡಿದ ಗುಲಾಂ ನಬಿ ಅವರು, “ಬಡವರ ಜೊತೆಗೆ ಶ್ರೀಮಂತರು ಕೂಡ ದೇಶಕ್ಕೆ ಸಂವಿಧಾನವನ್ನು ಪರಿಚಯಿಸಿದ್ದಾರೆ. ಇದೇ ಸಂವಿಧಾನದಿಂದಾಗಿ ಈಗ ಬಡ ಹಿನ್ನೆಲೆಯುಳ್ಳವರು ಕೂಡ ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಹಾಗೂ ಸುಪ್ರೀಂ ಕೋರ್ಟ್‌ ಜಡ್ಜ್ಗಳಾಗಿ ನೇಮಕವಾಗಿರುವುದು,’ ಎಂದರು.

“ನೆಹರೂ ಅವರು ದೊಡ್ಡ ಲಾಯರ್‌ ಆಗಿದ್ದವರು. ಅವರು ಇಂದಿನ ಕರೆನ್ಸಿಯಲ್ಲಿ ಹೇಳುವುದಾದರೆ 7 ರಿಂದ 10 ಕೋಟಿ ರೂ.ಗಳಷ್ಟು ಆದಾಯ ಗಳಿಸುತ್ತಿದ್ದರು. ಆದರೆ, ಆ ಎಲ್ಲ ಸಂಪತ್ತನ್ನೂ ಅವರು ದೇಶಕ್ಕಾಗಿ ತ್ಯಾಗ ಮಾಡಿದರು. ಮಹಾತ್ಮ ಗಾಂಧಿ ಅವರೂ ದೊಡ್ಡ ವಕೀಲರು. ಅವರು ದೇಶಕ್ಕಾಗಿ ತಮ್ಮ ಉಡುಗೆ-ತೊಡುಗೆ ಮತ್ತು ಕುಟುಂಬವನ್ನೇ ತೊರೆದರು. ಅವರನ್ನು ಮತ್ತು ಅವರ ಕೊಡುಗೆಯನ್ನೂ ನಾವು ಮರೆಯಬಾರದು. ಇಂಥವರ ಪೈಕಿ ಸರ್ದಾರ್‌ ಪಟೇಲ್‌, ಸುಭಾಷ್‌ಚಂದ್ರ ಬೋಸ್‌, ಬಾಲ ಗಂಗಾಧರ್‌ ತಿಲಕ್‌, ಮೌಲಾನಾ ಆಜಾದ್‌ ಕೂಡ ಸೇರಿದ್ದಾರೆ,’ ಎಂದು ಗುಲಾಂ ನಬಿ ನುಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next