Advertisement

ಕೊಳಸಾ ಫೈಲ್‌ ಸ್ಮಶಾನ ಅಭಿವೃದ್ದಿ ಯಾವಾಗ?

11:32 AM Dec 04, 2021 | Team Udayavani |

ಶಹಾಬಾದ: ದಲಿತರಿಗೆ ಮೀಸಲಿಟ್ಟ ಸ್ಮಶಾನಕ್ಕೆ ಅನೇಕ ವರ್ಷಗಳಿಂದ ದಾರಿಯೇ ಇಲ್ಲ. ಸ್ಮಶಾನದ ತುಂಬ ಮುಳ್ಳಿನ ಗಿಡ, ಜಾಲಿ ಕಂಟಿ ಬೆಳೆದು ನಿಂತಿವೆ. ಹೀಗಾಗಿ ಈ ಬಡಾವಣೆಯಲ್ಲಿ ದಲಿತರು ಸತ್ತರೇ ಸಾವಿನ ಶೋಕಕ್ಕಿಂತ ಸ್ಮಶಾನಕ್ಕೆ ಶವ ಸಾಗಿಸುವ ನೋವೇ ಹೆಚ್ಚು ಬಾಧಿಸುತ್ತದೆ. ಇದು ನಗರಸಭೆ ವ್ಯಾಪ್ತಿಯ ಕೊಳಸಾ ಫೈಲ್‌ ಬಡಾವಣೆಗೆ ಸಂಬಂಧಿಸಿದ ದಲಿತರ ಸ್ಮಶಾನದ ದುಸ್ಥಿತಿ.

Advertisement

ಈ ಬಡಾವಣೆಯಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರು ಹಾಗೂ ಬಡವರೇ ಇದ್ದಾರೆ. ಈ ಕುರಿತು ಅನೇಕ ಬಾರಿ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಶವ ಹೊತ್ತು ಸ್ಮಶಾನಕ್ಕೆ ಹೋಗಬೇಕಾದರೆ ಸರ್ಕಸ್‌ ಮಾಡಬೇಕಾಗುತ್ತದೆ. ಈ ರುದ್ರಭೂಮಿಯಲ್ಲಿ ಕೊಳವೆ ಬಾವಿ, ಕೋಣೆಗಳು ಇಲ್ಲ. ಅರ್ಧ ಕಾಂಪೌಂಡ್‌ ಕಟ್ಟಿ, ಇನ್ನರ್ಧ ಹಾಗೆ ಬಿಡಲಾಗಿದೆ.

ಮಳೆಗಾಲದಲ್ಲಿ ಯಾರಾದರೂ ಸತ್ತರೇ ಸ್ಮಶಾನಕ್ಕೆ ಹೋಗಲು ಆತಂಕ ಪಡುವಂತೆ ಪರಿಸ್ಥಿತಿ ಇರುತ್ತದೆ. ಮೊಣಕಾಲುದ್ದ ನೀರು, ಕಾಲು ಜಾರುವ ಭಯದಲ್ಲಿ ಹೆಣ ಹೊತ್ತು ಸಾಗುವಂಥ ಪರಿಸ್ಥಿತಿ ಇಲ್ಲಿದೆ. ಶವ ಹೂಳುವ ಮೊದಲು ತಗ್ಗು ತೋಡಲು ಹಾಗೂ ಮುಳ್ಳು ಕಂಟಿಗಳನ್ನು ತೆಗೆಯಲು ಹೆಚ್ಚಿನ ಹಣ ಪಾವತಿಸಬೇಕಾದ ಪ್ರಸಂಗ ಇಲ್ಲಿನ ಬಡ ಕುಟುಂಬಗಳಿಗೆ ಬಂದಿದೆ. ಗ್ರಾಮಕ್ಕೊಂದು ಸ್ಮಶಾನ ಎಂದು ಹೇಳುವ ಬದಲು ಇದ್ದ ಸ್ಮಶಾನಕ್ಕೆ ದಾರಿ ಒದಗಿಸಿ, ಮೂಲ ಸೌಲಭ್ಯ ಒದಗಿಸಿದರೇ ಸಾಕಾಗಿದೆ ಎಂದು ಬಡಾವಣೆ ಜನರು ಅಳಲು ತೋಡಿಕೊಳ್ಳುತ್ತಾರೆ.

ಸ್ಮಶಾನದಲ್ಲಿನ ಮುಳ್ಳು ಕಂಟಿಗಳನ್ನು ತೆರವುಗೊಳಿಸಿ, ಮೂಲಸೌಲಭ್ಯ ಒದಗಿಸಿ ಕೊಡಬೇಕು. ಅಲ್ಲದೇ ಸ್ಮಶಾನಕ್ಕೆ ದಾರಿ ಮಾಡಿಕೊಡುವ ಮೂಲಕ ದಲಿತರಿಗೆ ಕೂಗಿಗೆ ನಗರಸಭೆ ಅಧಿಕಾರಿಗಳು ಧ್ವನಿಯಾಗಬೇಕು ದಲಿತ ಮುಖಂಡರು, ಕೊಳಸಾ ಫೈಲ್‌ ಬಡಾವಣೆ ನಿವಾಸಿಗಳು ಮನವಿ ಮಾಡಿದ್ದಾರೆ.

ಕೊಳಸಾ ಫೈಲ್‌ ರುದ್ರಭೂಮಿಗೆ ಹೋಗಲು ದಾರಿಯಿಲ್ಲದೇ ಸಂಕಷ್ಟ ಪಡುವಂತಾಗಿದೆ. ಶವದ ಅಂತ್ಯ ಸಂಸ್ಕಾರಕ್ಕೂ ತೊಡಕು ಉಂಟಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೇ ಎನ್ನುತ್ತಿಲ್ಲ. ಆದ್ದರಿಂದ ಮುಂದೆ ಯಾರಾದರೂ ಸತ್ತರೇ ಶವದೊಂದಿಗೆ ನಗರಸಭೆ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ. ಮನೋಹರ್ಮೇತ್ರೆ, ನಿವಾಸಿ, ಕೊಳಸಾ ಫೈಲ್ಬಡಾವಣೆ

Advertisement

ಈಗಾಗಲೇ ನಗರದ ಕೆಲವೊಂದು ರುದ್ರಭೂಮಿಗಳನ್ನು ಅಭಿವೃದ್ಧಿ ಪಡಿಸಲು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಉಳಿದ ಇನ್ನು ಕೆಲವು ರುದ್ರಭೂಮಿಗಳನ್ನು ಹಂತ-ಹಂತವಾಗಿ ಅಭಿವೃದ್ಧಿ ಮಾಡಲಾಗುವುದು. ಡಾ| ಕೆ.ಗುರಲಿಂಗಪ್ಪ, ಪೌರಾಯುಕ್ತ, ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next