ಬೆಂಗಳೂರು: ಅಧಿಕಾರದಲ್ಲಿದ್ದಾಗ ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿ ಸೇವೆ ಸಲ್ಲಿಸುವ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ತಿಳಿಸಿದರು.
ಶುಕ್ರವಾರ ಸಿಟಿಸಿವಿಲ್ ಕೋರ್ಟ್‌ನ ವಕೀಲರ ಭವನದಲ್ಲಿ ನಡೆದ ವಕೀಲರ ಸಂಘದ ಸಾಹಿತ್ಯಕೂಟದ 2017-20ರವರೆಗಿನ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, “ಯಾವುದೇ ವ್ಯಕ್ತಿ ಅಧಿಕಾರದಲ್ಲಿದ್ದಾಗ ಪ್ರಾಮಾಣಿಕವಾಗಿ, ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸಬೇಕು. ಹೀಗಾದಾಗ ಮುಂದೆ ಆತ ಅಧಿಕಾರದಲ್ಲಿಲ್ಲದಿದ್ದರೂ ಜನ ಸ್ಮರಿಸಿಕೊಳ್ಳಲಿದ್ದಾರೆ.
ಹೀಗಾಗಿ ಅಧಿಕಾರದಲ್ಲಿದ್ದಾಗ ಉತ್ತಮ ಕಾರ್ಯ ನಿರ್ವಹಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು,’ ಎಂದು ಸಲಹೆ ನೀಡಿದರು. ಸಚಿವ ಎ. ಮಂಜು ಮಾತನಾಡಿ , ನನ್ನ ರಾಜಕೀಯ ಪಯಣದ ಯಶಸ್ಸಿಗೆ ವಕೀಲ ವೃತ್ತಿಯೂ ಕಾರಣವಾಗಿದೆ. ವಕೀಲರಿಂದ ಮಾತ್ರ ಶಿಸ್ತುಬದ್ಧ ರಾಜಕಾರಣ ಸಾಧ್ಯವಾಗಲಿದೆ. ಎಲ್ಲ ರೀತಿ ಜನರ ನಾಡಿಮಿಡಿತ ಬಲ್ಲವರಾಗಿರುವುದರಿಂದ, ರಾಜಕಾರಣದಲ್ಲಿ ವಕೀಲರು ಯಶಸ್ವಿಯಾಗಿರುತ್ತಾರೆ.
ಸದ್ಯ ರಾಜ್ಯ ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ವಕೀಲ ವೃತ್ತಿ ಹಿನ್ನೆಲೆಯಲ್ಲಿನ ಶಾಸಕರಿರುವುದು ಗಮನಾರ್ಹ ಎಂದರು. ಕಾರ್ಯಕ್ರಮದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಅಶ್ವತ್ಥನಾರಾಯಣ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನುಬಳಿಗಾರ್ ವಕೀಲ ಸಾಹಿತ್ಯಕೂಟದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಉಪಸ್ಥಿತರಿದ್ದರು.
ಯಾರನ್ನೋ ಜೈಲಿಗೆ ಕಳುಹಿಸಲು ಲೋಕಾಯುಕ್ತನಾಗಿಲ್ಲ: ಯಾರನ್ನೋ ಜೈಲಿಗೆ ಕಳುಹಿಸಿ ದಿನಪತ್ರಿಕೆಗಳಲ್ಲಿ ಸುದ್ದಿಯಾಗುವ ಉದ್ದೇಶ ನನಗಿಲ್ಲ ಎಂದು ಲೋಕಾಯುಕ್ತ ಪಿ. ವಿಶ್ವನಾಥ ಶೆಟ್ಟಿ ಹೇಳಿದ್ದಾರೆ. ಒಬ್ಬ ವ್ಯಕ್ತಿಯಿಂದ ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ ಇದಕ್ಕೆ ಎಲ್ಲರೂ ಸಹಕರಿಸಬೇಕಿದೆ.
ಲೋಕಾಯುಕ್ತನಾಗಿ, ಕೇಂದ್ರ ಹಾಗೂ ರಾಜ್ಯಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಈಗಾಗಲೇ 15 ಜಿಲ್ಲೆಗಳ ಪ್ರವಾಸ ಮಾಡಿದ್ದು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಬಡಜನರಿಗೆ ತೊಂದರೆಯಾಗದಂತೆ ಸೇವೆ ಸಲ್ಲಿಸುವಂತೆ ಸೂಚನೆ ನೀಡಿದ್ದೇನೆ ಎಂದರು.