Advertisement

Panchayat Raj;10% ಸೇವೆಯನ್ನೂ ಜನರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ: ಪ್ರಿಯಾಂಕ್‌ ಬೇಸರ

12:06 AM Oct 20, 2024 | Team Udayavani |

ಬೆಂಗಳೂರು: ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳು ಸಮನ್ವಯತೆ, ಸಮಯಪ್ರಜ್ಞೆ, ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ ಹಾಗೂ ಹೊಣೆಗಾರಿಕೆ ಈ ಪಂಚಸೂತ್ರಗಳನ್ನು ಇರಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಪಂಚಾಯತ್‌ ರಾಜ್‌ ಮತ್ತು ಐಟಿ ಸಚಿವ ಪ್ರಿಯಾಂಕ್‌ ಖರ್ಗೆ ಅಧಿಕಾರಿಗಳಿಗೆ ಸಲಹೆ ನೀಡಿದರು.

Advertisement

ನಗರದಲ್ಲಿ ಆಯೋಜಿಸಲಾಗಿದ್ದ ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದ ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುತ್ತ, ರಾಜ್ಯದ ಜನರಿಗೆ ಸ್ವಾಭಿಮಾನ ಬದುಕು ನೀಡುವ ಕೆಲಸವನ್ನು ಪಂಚಾಯತ್‌ ರಾಜ್‌ ಇಲಾಖೆ ಮಾಡಬೇಕಿದೆ. ಸರಕಾರದ ಮೂಲ ಸೌಕರ್ಯ ಯೋಜನೆಗಳ ಅನುಷ್ಠಾನ ಮಾತ್ರವಲ್ಲದೆ, ಜನರ ಬದುಕಲ್ಲಿ ಬದಲಾವಣೆ ತರುವ ಶಕ್ತಿ ಈ ಇಲಾಖೆಗಿದೆ. ಆದರೆ ಇಲಾಖೆಯ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತಮ್ಮ ಸೇವೆ ಸಲ್ಲಿಸುತ್ತಿಲ್ಲ. ನಮ್ಮಲ್ಲಿ ತಂತ್ರಜ್ಞಾನ, ಸವಲತ್ತು, ಸಂಪನ್ಮೂಲಗಳೆಲ್ಲ ಇದ್ದರೂ ಕೂಡ ನಾವು ಶೇ.10 ಸೇವೆಯನ್ನು ಜನರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ನಾವು ಶೇ. 90 ಬಾರಿ ವಿಫ‌ಲರಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಇಲಾಖೆಯ ಅಧಿಕಾರಿಗಳ ಮಧ್ಯೆ ಸಮನ್ವಯತೆ ಇಲ್ಲ. ಆದರೆ ಕಾಂಟ್ರ್ಯಾಕ್ಟರ್‌ಗಳ ಜತೆಗೆ ಸಮನ್ವಯತೆ ಇದೆ. ಕಾಂಟ್ರ್ಯಾಕ್ಟರ್‌ಗಳ ಮಧ್ಯೆ ಇರುವ ಸಮನ್ವಯತೆಯ ಶೇ. 50ರಷ್ಟು ನಮ್ಮ ಇಲಾಖೆಯ ಅಧಿಕಾರಿಗಳ ಮಧ್ಯೆ ಇದ್ದರೂ ಸಾಕಿತ್ತು. ಪ್ರತಿ ತಿಂಗಳು ಪರಾಮರ್ಶೆ ಸಭೆ ನಡೆಸಿದಾಗ ಮಕ್ಕಳಿಗೆ ಹೇಳಿದ ಹಾಗೆ ಹೇಳಿದರೂ ಸಹ ಏನೊಂದು ಪ್ರಗತಿ ಕಂಡು ಬಂದಿಲ್ಲ. ನಾನು ಸಭೆ ನಡೆಸಿದಾಗ ನನಗೆ ನಾನು ಗ್ರಾಮೀಣಾಭಿವೃದ್ಧಿ ಸಚಿವನಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದೇನಾ ಎಂಬ ಪ್ರಶ್ನೆ ಬರುತ್ತದೆ. ನಿಮ್ಮ ವಿಫ‌ಲತೆ ನನ್ನ
ಮೇಲೆ ಪ್ರತಿಬಿಂಬಿತವಾಗುತ್ತಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.

ಆ್ಯಪ್‌ ಲೋಕಾರ್ಪಣೆ
ಕಾರ್ಯಕ್ರಮದಲ್ಲಿ ಗ್ರಾಮೀಣ ಕುಡಿಯುವ ನೀರಿನ ಕಾರ್ಯಾಚರಣೆ ಮತ್ತು ನಿರ್ವಹಣೆ ನೀತಿ, ಜೀವಜಲ ನೀರಿನ ಗುಣಮಟ್ಟ ಆ್ಯಪ್‌, ಸೇವಾ ದರ್ಶಕ ತಂತ್ರಾಂಶ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಆ್ಯಪ್‌ ಲೋಕಾರ್ಪಣೆ ಮಾಡಲಾಯಿತು.

ಮೊಬೈಲ್‌ ಬಳಕೆಗೆ ತರಾಟೆ
ಸರಕಾರಿ ಕಚೇರಿಯಲ್ಲಿ ಅಧಿಕಾರಿಗಳು, ಸಿಬಂದಿ ಕೇವಲ ಮೊಬೈಲಲ್ಲೇ ವ್ಯಸ್ತರಾಗಿರುತ್ತಾರೆ ಎಂಬ ಆರೋಪ ಜನಸಾಮಾನ್ಯರಲ್ಲಿದೆ. ಇಂದು ಖುದ್ದು ಈ ಅನುಭವ ಸಚಿವ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಪಂಚಾಯತ್‌ ರಾಜ್‌ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಆಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಲವು ಅಧಿಕಾರಿಗಳು ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದರೂ, ಇಲಾಖೆಯ ಸಚಿವರು, ಹಿರಿಯ ಅಧಿಕಾರಿಗಳು ಮಾತನಾಡುತ್ತಿದಾಗಲೂ ಮೊಬೈಲ್‌ನಲ್ಲೇ ಬ್ಯುಸಿಯಿದ್ದರು. ತಮ್ಮ ಭಾಷಣದಲ್ಲಿ ಇದನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾಂಕ್‌ ಖರ್ಗೆ, ಇಲ್ಲಿಯೂ ಮೊಬೈಲ್‌ನಲ್ಲಿ ಬ್ಯುಸಿ ಆಗಿದ್ದಾರೆ ಹೇಗೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿ, ಮುಂದಿನ ಕಾರ್ಯಕ್ರಮದಲ್ಲಿ ಮೊಬೈಲ್‌ನ್ನು ಹೊರಗಿಟ್ಟು ಬರಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಪ್ರಿಯಾಂಕ್‌ ಖರ್ಗೆ ಸೂಚನೆ ನೀಡಿದರು.

Advertisement

ಹಳ್ಳಿಗಳಲ್ಲಿ ಪ್ರತಿ ವರ್ಷ ನೀರಿನ ದರ ಪರಿಷ್ಕರಣೆ
ಗ್ರಾಮೀಣ ಭಾಗದಲ್ಲಿ ಖಚಿತವಾಗಿ ಕಾರ್ಯನಿರ್ವಹಿಸುವ, ಸುಸ್ಥಿರ ಮತ್ತು ನಂಬಿಗಸ್ಥ ಕುಡಿಯುವ ನೀರಿನ ವ್ಯವಸ್ಥೆಗೆ ಗ್ರಾಮೀಣ ಕುಡಿಯುವ ನೀರಿನ ಪೂರೈಕೆಯ ಕಾರ್ಯಾಚರಣೆ ಮತ್ತು ನಿರ್ವಹಣೆ ನೀತಿಯನ್ನು ಕಾರ್ಯಕ್ರಮದಲ್ಲಿ ಪ್ರಕಟಿಸಲಾಯಿತು. ಗ್ರಾಮ ಪಂಚಾಯತ್‌ಗಳು ಗ್ರಾಮೀಣ ಕುಡಿಯವ ನೀರು ಮತ್ತು ನೈರ್ಮಲೀಕರಣ ಇಲಾಖೆಗೆ ನೀರಿನ ಬಳಕೆಯ ಆಧಾರದಲ್ಲಿ ದರ ಪಾವತಿಸಬೇಕು. ಗ್ರಾ.ಪಂ. ಬಳಕೆದಾರರಿಂದ ಕಾರ್ಯಾಚರಣೆ, ನಿರ್ವಹಣೆ ವೆಚ್ಚ ವಸೂಲಿ ಆಗುವಂತೆ ದರ ನಿಗದಿ ಮಾಡಿ, ಮಾಸಿಕವಾಗಿ ಬಿಲ್‌ ಕಲೆಕ್ಟ್ ಮಾಡಬೇಕು ಎಂದು ನೀತಿಯಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next