Advertisement

ಮಾರುಕಟ್ಟೆಗಳ ಕಾಯಕಲ್ಪ ಯಾವಾಗ?

12:07 PM Aug 06, 2018 | |

ಸಿಂದಗಿ: ಸಿಂದಗಿ ಪಟ್ಟಣದ ನಗರ ಪಾಲಿಕೆಯಾಗುವಷ್ಟು ಬೆಳೆಯುತ್ತಿದೆ. ಆದರೆ ಇಲ್ಲಿ ಸುಸಜ್ಜಿತವಾದ ಒಂದು ಮಾರುಕಟ್ಟೆಯಿಲ್ಲ. ರೈತರಿಗೆ ಮತ್ತು ಬಾಗವಾನರಿಗೆ ಕಾಯಿಪಲ್ಲೆ ಮತ್ತು ಹಣ್ಣು ಮಾರಾಟ ಮಾಡಲು ಸುಸಜ್ಜಿತವಾದ ಮತ್ತು ನಗರ ವಾಸಿಗಳಿಗೆ ಅನಕೂಲಕರವಾದ ಸ್ಥಳದಲ್ಲಿ ಮಾರಕಟ್ಟೆಯಾಬೇಕು ಎಂಬುವುದು ರೈತರ, ಬಾಗವಾನರ ಮತ್ತು ಪಟ್ಟಣ ವಾಸಿಗಳ ಬಹುದಿನಗಳ ಬೇಡಿಕೆ ಕನಸಾಗಿ ಉಳಿದಿದೆ.

Advertisement

ಸಿಂದಗಿ ಪಟ್ಟಣದ ಬಸ್‌ ನಿಲ್ದಾಣದ ಹತ್ತಿರ ಮುಖ್ಯ ರಸ್ತೆ ಬದಿಗಳಲ್ಲಿ ಒತ್ತು ಗಾಡಿಗಳಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ಅದರಂತೆ ಟಿಪ್ಪು ಸುಲ್ತಾನ್‌ ವೃತ್ತದಿಂದ ಪುರಸಭೆ ಹತ್ತಿರದಲ್ಲಿನ ಸಿಂಡಿಕೇಟ್‌ ಬ್ಯಾಂಕ್‌ ವರೆಗಿನ ಮುಖ್ಯ ರಸ್ತೆ ಎರಡು ಬದಿಗಳಲ್ಲಿ ಕಾಯಿಪಲ್ಲೆ ಮಾರಾಟ ಮಾರುತ್ತಾರೆ. ಟಿಪ್ಪು ಸುಲ್ತಾನ್‌ ವೃತ್ತದ ಬಳಿ ಮಟನ್‌ ಮಾರಟ ಮಾಡುತ್ತಾರೆ. ಇದರಿಂದ ಜನಸಂದಣಿ ಹೆಚ್ಚಾಗಿರುತ್ತದೆ. ರಸ್ತೆಯ ಅರ್ಧದಷ್ಟು ಭಾಗ ಮಾರಾಟಗಾರರು ಅಕ್ರಮಿಸಿದಾಗ ವಾಹನಗಳು ಸಂಚಾರಕ್ಕೂ ತೊಂದರೆಯಾಗುತ್ತಿದೆ. ಪದಾಚಾರಿಗಳಿಗೆ ಸಾಕಷ್ಟು ತೊಂದರೆಯಾಗುವ ದುಸ್ಥಿತಿ ಇಲ್ಲಿ ಉಂಟಾಗಿದೆ.

ಟಿಪ್ಪು ಸುಲ್ತಾನ್‌ ವೃತ್ತದಿಂದ ಪುರಸಭೆ ಹತ್ತಿರದಲ್ಲಿನ ಮುಖ್ಯ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತದೆ. ಮಾರುಕಟ್ಟೆಯನ್ನು ಸ್ಥಳಾಂತರಿಸಿ ಎಂದು ಸಂಘಟನೆಗಳು ಹಾಗೂ ಸಾರ್ವಜನಿಕರು ಪುರಸಭೆ ಮತ್ತು ತಹಶೀಲ್ದಾರ್‌ ಗೆ ಮನವಿ ಕೊಟ್ಟರು ಪ್ರಯೋಜನವಾಗಿಲ್ಲ. ಪುರಸಭೆ ವ್ಯಾಪ್ತಿಯಲ್ಲಿನ ಹಳೆ ಬಜಾರದಲ್ಲಿನ ಮಾರುಕಟ್ಟೆ ಮತ್ತು ಮಲಘಾಣ ಕ್ರಾಸ್‌ ಬಳಿ ನಿರ್ಮಾಣ ಮಾಡಿದ ಉದ್ಘಾಟನೆಯಾಗದೇ ಉಳಿದ ಮಟನ್‌ ಮಾರುಕಟ್ಟೆಗಳು ಹಾಳು ಬಿದ್ದಿವೆ.

ಬೇಡಿಕೆ: ಹಳೆ ಬಜಾರದಲ್ಲಿನ ಕಾಯಿಪಲ್ಲೆ ಮಾರುಕಟ್ಟೆ ಈಗ ಹಾಳು ಬಿದ್ದಿದ್ದನ್ನು ಪುನಶ್ಚೇತನ ಮಾಡಬೇಕು. ಇದರಿಂದ ಸಾರ್ವಜನಿಕರಿಗೆ ಉಪಯುಕ್ತವಾಗುತ್ತದೆ. ಈ ಹಾಳು ಬಿದ್ದ ಮಾರುಕಟ್ಟೆ ಪಟ್ಟಣದ ಮಧ್ಯ ಭಾಗದಲ್ಲಿದ್ದು ಇಲ್ಲಿ ಮೊದಲು ಕಾಯಿಪಲ್ಲೆ ಮತ್ತು ಹಣ್ಣು ಮಾರಾಟ ಮಾಡಲಾಗುತ್ತಿತ್ತು. ನಂತರ ದಿನಗಳಲ್ಲಿ ಮಾರುಕಟ್ಟೆ ಹಳೆ ಬಜಾರ್‌ದಿಂದ ಹಳೆ ಎಸ್‌ಬಿಐ ರಸ್ತೆಗೆ ಹೋದ ನಂತರ ಈ ಮಾರುಕಟ್ಟೆ ಪಾಳು ಬಿದ್ದಿದೆ. ಇಲ್ಲಿನ ಮಾರುಕಟ್ಟೆ ಪುನಶ್ಚೇತನ ಮಾಡಬೇಕು ಎಂಬುದು ಸಾರ್ವಜನಿಕರ ಬೇಡಿಕೆ.

ಪಟ್ಟಣದ ಮಧ್ಯಭಾಗ ವಿನಾಯಕ ಚಿತ್ರ ಮಂದಿರದ ಎದುರಿಗಿದ್ದ ಹಳೆ ಪೋಲಿಸ್‌ ಠಾಣೆ ಜಾಗೆ ಈಗ ಖಾಲಿ ಇದೆ. ಇಲ್ಲಿ ಮಾರುಕಟ್ಟೆ ಮಾಡಲು ಅತ್ಯಂತ ಸೂಕ್ತ ಜಾಗ. ಇಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಿದಲ್ಲಿ ಒಂದು ಮಾದರಿ ಮಾರುಕಟ್ಟೆಯಾಗಿ ಸಾರ್ವಜನಿಕರಿಗೆ ಅನಕೂಲಕರವಾಗುತ್ತದೆ. ಈ ಸ್ಥಳದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಬೇಕು ಎಂದು ರ್ಸಾಜನಿಕರು ಒತ್ತಾಯಿಸಿದ್ದಾರೆ.

Advertisement

ಬಸ್‌ ನಿಲ್ದಾಣದ ಎದುರಿನ ಹಳೆ ಪ್ರವಾಸಿ ಮಂದಿರದ ಸ್ಥಳದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಿಕೊಟ್ಟು ಕಾಯಿಪಲ್ಲೆ, ಹಣ್ಣುಹಂಪಲು ಮಾರಾಟ ಮಾಡಿ ಉಪಜೀವನ ನಡೆಸುವ ಮಾರಾಟಗಾರರಿಗೆ ಅನಕೂಲಕರ ಮಾಡಿಕೊಡಬೇಕು ಎಂಬುದು ಮಾರಾಟಗಾರರು ಪುರಸಭೆಗೆ ಬೇಡಿಕೆ ಇಟ್ಟಿದ್ದಾರೆ.

ತೋಟಗಾರಿಕೆ ಬೆಳೆಗಳಾದ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡುವ ಬಡ ಕುಟುಂಬಗಳಿಗೆ ಅನುಕೂಲಕರವಾಗುವಂತೆ ಸಿಂದಗಿ ಪಟ್ಟಣದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡಿಕೊಡಲಾಗುವುದು. ಮಾರುಕಟ್ಟೆ ನಿರ್ಮಾಣಕ್ಕೆ ಸ್ಥಳ ನಿಗದಿಪಡಿಸಿ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು. 
ಎಂ.ಸಿ. ಮನಗೂಳಿ, ಜಿಲ್ಲಾ ಉಸ್ತುವಾರಿ ಸಚಿವ

ರೈತರು ಅಲ್ಪಾವಧಿ ತೋಟಗಾರಿಕೆ ಬೆಳೆ ತರಕಾರಿಯನ್ನು ಬೆಳೆದು ದಿನೆ ದಿನೆ ಮಾರಾಟ ಮಾಡಿ ಬದುಕು ಸಾಗಿಸುತ್ತಾರೆ.
ಅವರಿಗೆ ಪುರಸಭೆಗೆ ಸೇರಿದ ಜಾಗದಲ್ಲಿ ಸುಸಜ್ಜಿತ, ಮೂಲಭೂತ ಸೌಕರ್ಯಗಳುಳ್ಳ ಮಾರುಕಟ್ಟೆ ನಿರ್ಮಾಣ ಮಾಡಬೇಕು.
 ಡಾ| ಸಂಗಮೇಶ ಪಾಟೀಲ, ಭಾವಿಕಟ್ಟಿ ಆಸ್ಪತ್ರೆ, ಸಿಂದಗಿ

ಸಿಂದಗಿ ಪಟ್ಟಣದಲ್ಲಿ ಹೈಟೆಕ್‌ ಮಾರುಕಟ್ಟೆ ನಿರ್ಮಾಣ ಮಾಡುವ ಕುರಿತು ಸಂಬಂ ಧಿಸಿದ ಇಲಾಖೆಗೆ ಮತ್ತು ತೋಟಗಾರಿಕೆ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅವರಲ್ಲಿ ಮನವಿ ಮಾಡಿಕೊಂಡಿದ್ದು ಸಚಿವರ ಮಾರ್ಗದರ್ಶನ ತೆಗೆದುಕೊಂಡು ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು.
 ಬಾಷಾಸಾಬ ತಾಂಬೋಳಿ, ಪುರಸಭೆ ಅಧ್ಯಕ್ಷ

ರಮೇಶ ಪೂಜಾರ

Advertisement

Udayavani is now on Telegram. Click here to join our channel and stay updated with the latest news.

Next