ಬೆಂಗಳೂರು: ಕೃಷಿ ಮತ್ತು ತೋಟಗಾರಿಕೆ ವಲಯದಲ್ಲಿ ರೈತ ಸಮುದಾಯಕ್ಕೆ ಉಪಯುಕ್ತವಾಗುವ ಇಸ್ರೇಲ್ ಮಾದರಿ
ನೀರಾವರಿ ಯೋಜನೆ ಜಾರಿಗೆ ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧದ ವರದಿ ಸಲ್ಲಿಕೆಗೆ ಸಚಿವರು ಸೇರಿದಂತೆ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ಇಸ್ರೇಲ್‌ಗೆ ತೆರಳಿದೆ.
ಕೃಷಿ ಸಚಿವ ಶಿವಶಂಕರ್ ರೆಡ್ಡಿ, ತೋಟಗಾರಿಕೆ ಸಚಿವ ಎಂ.ಸಿ. ಮನಗೊಳಿ, ಕೃಷಿ ಇಲಾಖೆಯ ಕಾರ್ಯದರ್ಶಿ, ಮಹೇಶ್ವರ ರಾವ್ ಮತ್ತು ಸಮಿತಿಯ ಅಧ್ಯಕ್ಷರಾದ ಮನೋಜ್ ರಾಜನ್ ಅವರನ್ನು ಒಳಗೊಂಡ ನಿಯೋಗವು ಸೆ. 2ರಂದು ಪ್ರವಾಸ ತೆರಳಿದ್ದು, ಹೊಸ ತಂತ್ರಜ್ಞಾನ, ತ್ಯಾಜ್ಯ ನೀರಿನ ಬಳಕೆ ಮತ್ತು ರಸಗೊಬ್ಬರಗಳ ಬಳಕೆ ಮತ್ತಿತರ ವಿಷಯಗಳ ಕುರಿತು ಅಧ್ಯಯನ ನಡೆಸಲಿದೆ.
ಈಗಾಗಲೇ ಇಸ್ರೇಲ್ ದೇಶದ ರೈತರೊಂದಿಗೆ ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಲ್ಲಿನ ಕೃಷಿ ಪದ್ಧತಿ ಹಾಗೂ ಮಾರುಕಟ್ಟೆ ಲಭ್ಯತೆ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಕೃಷಿ ಮತ್ತು ತೋಟಗಾರಿಕೆ ವಲಯದ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿರುವ ನುರಿತ ತಜ್ಞರು ಮತ್ತು ಸಂಸ್ಥೆಗಳೊಂದಿಗೆ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ನೀರಾವರಿ ಪದ್ಧತಿ ಅನುಷ್ಟಾನಕ್ಕೆ ಬೇಕಾದ ಅಗತ್ಯ ತಂತ್ರಜ್ಞಾನ ಸೇರಿದಂತೆ ಇತರ ವಿಷಯಗಳ ಕುರಿತು ಚರ್ಚಿಸಿ ಮಾಹಿತಿ ಪಡೆಯಲಾಗಿದೆ. ಅದರಲ್ಲೂ ಮುಖ್ಯವಾಗಿ ನಗರ ಪ್ರದೇಶಗಳಿಂದ ಲಭ್ಯವಾಗುವ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಶುದ್ಧೀಕರಿಸಿ ಕೃಷಿ ವಲಯಕ್ಕೆ ಈ ನೀರನ್ನು ಬಳಕೆ ಮಾಡುವ ಘಟಕಗಳಿಗೆ ಭೇಟಿ ನೀಡಲಾಗಿದೆ. ವೈಜ್ಞಾನಿಕವಾಗಿ ತ್ಯಾಜ್ಯ ನೀರನ್ನು ಕೃಷಿ ವಲಯಕ್ಕೆ ಬಳಕೆ ಮಾಡುತ್ತಿರುವ ಕ್ರಮಗಳು ಅತ್ಯದ್ಭುತವಾಗಿವೆ ಎಂದು ಸಮಿತಿ ಅಧ್ಯಕ್ಷ ಮನೋಜ್ ರಾಜನ್ ತಿಳಿಸಿದರು.