Advertisement

ರಸ್ತೆಗುಂಡಿ ಶಾಶ್ವತ ಪರಿಹಾರ ಯಾವಾಗ? 

12:43 PM Oct 01, 2018 | |

ವಾಹನಗಳ ಸುಗಮ ಸಂಚಾರಕ್ಕೆ ರಸ್ತೆಗಳು ಬೇಕು. ರಸ್ತೆಗಳೇ ವಾಹನಗಳಿಗೆ ತ್ರಾಸದಾಯಕವಾದರೆ ಅದರಿಂದ ಆಗುವ ನಷ್ಟ ಅಪಾರ. ಇದನ್ನು ಅರಿತ  ಹೈಕೋರ್ಟ್‌ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಬೆಂಬಿಡದೆ ಕಾಡಿದೆ. ರಸ್ತೆ ಗುಂಡಿಗಳನ್ನು ಮುಚ್ಚದೇ ಇದ್ದರೆ ಅಗತ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ. ಇದೇ ವೇಳೆ ರಸ್ತೆ ಗುಂಡಿಗಳಾದರೂ ಮತ್ತೆ ಮತ್ತೆ ಏಕಾಗುತ್ತವೆ ಎಂಬ ಪ್ರಶ್ನೆ ಕಾಡದೇ ಇರದು. ಇದರ ಹಿಂದಿರುವ ಕಾರಣವೇನು? ಕೈ ಗೊಳ್ಳಬಹುದಾದ ಕ್ರಮಗಳ ಬಗ್ಗೆ ಉದಯವಾಣಿ ಸಮೀಕ್ಷೆ ನಿಮ್ಮ ಮುಂದೆ.

Advertisement

ರಾಜಧಾನಿ ಬೆಂಗಳೂರಿನ ರಸ್ತೆಗಳ ಅಭಿವೃದ್ಧಿಗಾಗಿ ಪ್ರತಿವರ್ಷ ನೂರಾರು ಕೋಟಿ ರೂ. ನೀರಿನಂತೆ ಹರಿಯುತ್ತಿದೆ. ಆದರೆ, ಕಳಪೆ ಕಾಮಗಾರಿ, ಅನಧಿಕೃತ ರಸ್ತೆ ಅಗೆತ, ಅಧಿಕಾರಿಗಳ ಬೇಜವಾಬ್ದಾರಿಯಿಂದ ರಸ್ತೆಗಳು ಗುಂಡಿಮಯವಾಗುತ್ತಿದ್ದು, ತೆರಿಗೆದಾರರ ಹಣ ಮಳೆಯಲ್ಲಿ ಹೋಮ ಮಾಡಿದಂತಾಗಿದೆ. ಇತ್ತೀಚೆಗೆ ಹೈಕೋರ್ಟ್‌ ಇದೇ ರಸ್ತೆ ಗುಂಡಿ ವಿಚಾರದಲ್ಲಿ ಬಿಬಿಎಂಪಿಗೆ ಚಾಟಿ ಬೀಸಿತ್ತು. 

ನಗರದ ಆರ್ಟಿರಿಯಲ್‌, ಸಬ್‌ ಆರ್ಟಿರಿಯಲ್‌ ಹಾಗೂ ವಾರ್ಡ್‌ ರಸ್ತೆಗಳ ಪುನರ್‌ ನಿರ್ಮಾಣ ಹಾಗೂ ಅಭಿವೃದ್ಧಿಗಾಗಿಯೇ ಕಳೆದ 10 ವರ್ಷಗಳಲ್ಲಿ ಐದು ಸಾವಿರ ಕೋಟಿ ರೂ.ವರೆಗೆ ವ್ಯಯಿಸಲಾಗಿದೆ. ವರ್ಷದಿಂದ ವರ್ಷಕ್ಕೆ ರಸ್ತೆ ಅಭಿವೃದ್ಧಿಗೆ ನೀಡುವ ಅನುದಾನ ಹೆಚ್ಚುತ್ತಿರುವುದು ಒಂದೆಡೆಯಾದರೆ, ಅದನ್ನು ಮೀರಿಸಲು ರಸ್ತೆಗುಂಡಿಗಳೂ ಹೆಚ್ಚುತ್ತಿರುವುದು ವಿಪರ್ಯಾಸದ ಸಂಗತಿ.

ಪಾಲಿಕೆಯ ವ್ಯಾಪ್ತಿಯ 797 ಕಿ.ಮೀ. ಉದ್ದದ ರಸ್ತೆಗಳ ಅಭಿವೃದ್ಧಿಗಾಗಿ 2016-17, 2017-18ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ 1600 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಆ ಅನುದಾನದಲ್ಲಿ ಅಭಿವೃದ್ಧಿಪಡಿಸಿರುವ ರಸ್ತೆಗಳಲ್ಲಿ ಒಂದೇ ವರ್ಷದಲ್ಲಿ ಸಾವಿರಾರು ಗುಂಡಿಗಳು ಸೃಷ್ಟಿಯಾಗಿದ್ದು, ಅವುಗಳ ದುರಸ್ತಿಗೆ ಮತ್ತೆ ಕೋಟ್ಯಂತರ ರೂ. ವೆಚ್ಚ ಮಾಡುವ ಸ್ಥಿತಿ ಬಂದಿದೆ.

ಮಳೆಗಾಲ ಆರಂಭಕ್ಕೂ ಮೊದಲೇ ರಸ್ತೆಗುಂಡಿಗಳನ್ನು ಗುರುತಿಸಿ ದುರಸ್ತಿಪಡಿಸುವುದು ಪಾಲಿಕೆ ಕರ್ತವ್ಯ. ಆದರೆ, ಗುಂಡಿಗಳಿಂದ ಅಪಘಾತಗಳು ಸಂಭವಿಸಿ ಜನರಿಂದ ತೀವ್ರ ಟೀಕೆಗಳು ವ್ಯಕ್ತವಾದ ನಂತರದಲ್ಲಿ ಅಧಿಕಾರಿಗಳು ದುರಸ್ತಿ ಕಾರ್ಯಕ್ಕೆ ಮುಂದಾಗುತ್ತಾರೆ. ಇನ್ನು ಮಳೆಗಾಲದ ಕಾಮಗಾರಿ ರಸ್ತೆಗುಂಡಿ ಮತ್ತಷ್ಟು ಕಿತ್ತು ಬರಲು ಕಾರಣವಾಗಿದೆ.

Advertisement

ಗುಂಡಿ ಮುಚ್ಚಲು 70 ಕೋಟಿ ರೂ.: ಪಾಲಿಕೆಯ ವ್ಯಾಪ್ತಿಯ ಮುಖ್ಯರಸ್ತೆಗಳು ಹಾಗೂ ವಾರ್ಡ್‌ ರಸ್ತೆಗಳಲ್ಲಿ ಸೃಷ್ಟಿಯಾಗುವ ಗುಂಡಿಗಳ ದುರಸ್ತಿಗಾಗಿ ಪ್ರತಿವರ್ಷ 70 ಕೋಟಿ ರೂ. ನೀಡಲಾಗುತ್ತಿದೆ. ಹಳೆಯ ವಾರ್ಡ್‌ಗಳಿಗೆ 20ಲಕ್ಷ ರೂ. ಹಾಗೂ ಹೊಸ ವಾರ್ಡ್‌ಗಳಿಗೆ 30 ಲಕ್ಷ ರೂ.ಗಳಂತೆ ಪಾಲಿಕೆಯಿಂದ ನೀಡುವ ಅನುದಾನ ಖಾಲಿಯಾದರೂ, ಗುಂಡಿ ಸಮಸ್ಯೆಗೆ ಮಾತ್ರ ಈವರೆಗೆ ಪರಿಹಾರ ಸಿಕ್ಕಿಲ್ಲ. ಇನ್ನು ಅತ್ಯಾಧುನಿಕ ತಂತ್ರಜ್ಞಾನದ ಪೈಥಾನ್‌ ಯಂತ್ರ ಬಳಸಿ ಕಾಮಗಾರಿ ನಡೆಸಲಾಗುತ್ತಿದ್ದರೂ, ಶೀಘ್ರ ಗುಂಡಿ ಮುಚ್ಚಲು ಯಂತ್ರದಿಂದ ಸಾಧ್ಯವಾಗುತ್ತಿಲ್ಲ.

ಹೈಕೋರ್ಟ್‌ ಚಾಟಿಗೆ ಬೆದರಿದ ಪಾಲಿಕೆ: ಸ್ವತಃ ಮುಖ್ಯಮಂತ್ರಿಗಳು ಗುಂಡಿ ರಸ್ತೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರೂ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ತೋರಿದ್ದ ಅಧಿಕಾರಿಗಳು ಹೈಕೋರ್ಟ್‌ ಬೀಸಿದ ಚಾಟಿಗೆ ಬೆದರಿದ್ದಾರೆ. ಪರಿಣಾಮ ಕೇವಲ 15 ದಿನಗಳಲ್ಲಿ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳ ದುರಸ್ತಿ ಕಾರ್ಯ ಮುಗಿಸಿದ್ದು, ಕೋರ್ಟ್‌ ಸೂಚನೆಯಂತೆ ಅ.4ರೊಳಗೆ ಎಲ್ಲ ಗುಂಡಿಗಳನ್ನು ಮುಚ್ಚಲು ಹಗಲು ರಾತ್ರಿ ಕಾರ್ಯನಿರ್ವಹಿಸಿ ಸಾಕಷ್ಟು ಕಸರತ್ತುಗಳಲ್ಲಿ ತೊಡಗಿದ್ದಾರೆ. ಪಾಲಿಕೆಯಿಂದ ಕೈಗೊಳ್ಳುವ ಕಾಮಗಾರಿ ಗುಣಮಟ್ಟ ಪರಿಶೀಲಿಸಲು ಹೈಕೋರ್ಟ್‌ ಆಯೋಗವನ್ನೂ ರಚಿಸಿರುವುದು ವಿಶೇಷ.

ಮೂಲೆಗುಂಪಾದ “ಫಿಕ್ಸ್‌ ಮೈ ಸ್ಟ್ರೀಟ್‌’: ಹಿಂದಿನ ಮೇಯರ್‌ ಆರ್‌.ಸಂಪತ್‌ರಾಜ್‌ ರೂಪಿಸಿದ್ದ “ಫಿಕ್ಸ್‌ ಮೈ ಸ್ಟ್ರೀಟ್‌’ ಆ್ಯಪ್‌ ಸಂಪೂರ್ಣವಾಗಿ ವಿಫ‌ಲವಾಗಿದೆ. ನಗರದಲ್ಲಿನ ತ್ಯಾಜ್ಯ, ರಸೆಗುಂಡಿಯಂತಹ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಆ್ಯಪ್‌ಗೆ ಚಾಲನೆ ನೀಡಲಾಗಿತ್ತು. ಆದರೆ, ಸಾರ್ವಜನಿಕರಿಂದ ನೂರಾರು ದೂರುಗಳು ಬಂದರೂ ಅಧಿಕಾರಿಗಳು ಮಾತ್ರ ಅದಕ್ಕೆ ಸ್ಪಂದಿಸುತ್ತಿಲ್ಲ. ಇದರಿಂದಾಗಿ ಆ್ಯಪ್‌ ಮೂಲೆಗೆ ಸೇರಿದೆ.

ವೈಟ್‌ಟಾಪಿಂಗ್‌ ರಸ್ತೆಗಳು ಗುಂಡಿಮುಕ್ತ: ರಸ್ತೆಗುಂಡಿಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಗರದ 29 ರಸ್ತೆ ಮತ್ತು 6 ಜಂಕ್ಷನ್‌ಗಳು ಸೇರಿ ಒಟ್ಟು 93.47 ಕಿ.ಮೀ ಉದ್ದದ ರಸ್ತೆಗಳನ್ನು 972.69 ಕೊಟಿ ರೂ. ವೆಚ್ಚದಲ್ಲಿ ವೈಟ್‌ಟಾಪಿಂಗ್‌ಗೊಳಿಸಲು ಪಾಲಿಕೆ ಟೆಂಡರ್‌ ನೀಡಿದೆ. ಆ ಹಿನ್ನೆಲೆಯಲ್ಲಿ ನಗರದಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ಪೂರ್ಣಗೊಂಡಿರುವ ರಸ್ತೆಗಳು ಗುಂಡಿಮುಕ್ತವಾಗಿದ್ದು, ವಾಹನ ಸಂಚಾರಕ್ಕೆ ಅನುಕೂಲವಾಗಿದೆ. ಆದರೆ, ಮೊದಲ ಹಂತದ 36 ಕಿ.ಮೀ. ಕಾಮಗಾರಿಯ ಪೈಕಿ 10 ಕಿಲೋ ಮೀಟರ್‌ಗಳಷ್ಟು ಕಾಮಗಾರಿ ಮುಗಿದಿದ್ದು, ಕಾಮಗಾರಿ ಪೂರ್ಣಗೊಳ್ಳದ ರಸ್ತೆಗಳಲ್ಲಿ ಸಂಚರಿಸುವುದು ಕಷ್ಟಕರವಾಗಿದೆ. 

ಅವೈಜ್ಞಾನಿಕ ದುರಸ್ತಿ: ಪಾಲಿಕೆಯ ಅಧಿಕಾರಿಗಳು ರಸ್ತಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚುತ್ತಿಲ್ಲ ಎಂಬ ಆರೋಪವೂ ಇದೆ. ರಸ್ತೆ ಗುಂಡಿ ಕಾಣಿಸಿಕೊಂಡಾಗ ಹಳೆಯ ಹಾಗೂ ಹೊಸ ಪದರ ಕೂಡಿಕೊಳ್ಳುವಂತೆ ಲೇಪನ ಮಾಡಬೇಕು. ನಂತರದಲ್ಲಿ ವೈಜ್ಞಾನಿಕವಾಗಿ ದುರಸ್ತಿಪಡಿಸಬೇಕು. ಆದರೆ, ಪಾಲಿಕೆಯ ಸಿಬ್ಬಂದಿ ಬಹುತೇಕ ಕಡೆಗಳಲ್ಲಿ ಅವೈಜ್ಞಾನಿಕವಾಗಿ ಗುಂಡಿ ದುರಸ್ತಿ ಪಡಿಸುತ್ತಿರುವುದರಿಂದ ಗುಂಡಿ ಸಮಸ್ಯೆ ಮುಂದುವರಿಯುತ್ತಿದೆ ಎಂಬುದು ಸಂಚಾರ ತಜ್ಞರ ಅಭಿಪ್ರಾಯ. ಅನೇಕ ರೀತಿಯ ರಸ್ತೆ ಕಾಮಗಾರಿಯಾದರೂ, ಪ್ರತಿವರ್ಷ ಮಳೆಗಾಲದಲ್ಲಿ ಕೇಂದ್ರ ಭಾಗದ ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ವಲಯಗಳಲ್ಲಿಯೇ ಅತಿಹೆಚ್ಚು ಗುಂಡಿಗಳು ಸೃಷ್ಟಿಯಾಗುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ. 

ಗುಂಡಿ ಸೃಷ್ಟಿಯಾಗುವುದು ಹೇಗೆ?: ಆರ್ಟಿರಿಯಲ್‌ ಹಾಗೂ ಸಬ್‌ ಆರ್ಟಿರಿಯಲ್‌ ರಸ್ತೆಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ರಸ್ತೆ ಅಗೆದು ದುರಸ್ತಿಪಡಿಸದ ಹಾಗೂ ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದ ಗುಂಡಿಗಳು ಸೃಷ್ಟಿಯಾಗುತ್ತವೆ. ಇನ್ನು ವಾರ್ಡ್‌ ರಸ್ತೆಗಳಲ್ಲಿ ಸಾರ್ವಜನಿಕರು ಕುಡಿಯುವ ನೀರು, ಒಳಚರಂಡಿ ಸಂಪರ್ಕಕ್ಕಾಗಿ ರಸ್ತೆ ಅಗೆದು ವೈಜ್ಞಾನಿಕವಾಗಿ ಮುಚ್ಚುವುದಿಲ್ಲ. ಇನ್ನು ಮಳೆನೀರು ರಸ್ತೆಗಳಲ್ಲಿ ಹೆಚ್ಚಿನ ಸಮಯ ನಿಲ್ಲುವುದರಿಂದ ಡಾಂಬರೀಕರಣ ಕಿತ್ತುಬರಲಿದ್ದು, ನಂತರದಲ್ಲಿ ಗುಂಡಿಗಳಾಗಿ ಪರಿವರ್ತನೆಯಾಗುತ್ತವೆ.

ರಸ್ತೆಗುಂಡಿ ಕರಿ ನೆರಳು: ನಗರದಲ್ಲಿ ಕಳೆದ ವರ್ಷ ಸುರಿದ ಮಳೆಯಿಂದಾಗಿ ಸೃಷ್ಟಿಯಾದ ರಸ್ತೆಗುಂಡಿಗಳು ಮೂವರು ಅಮಾಯಕ ಜೀವಗಳನ್ನು ಬಲಿ ಪಡೆದಿದ್ದವು. ಮೈಸೂರು ರಸ್ತೆಯ ಮೇಲ್ಸೇತುವೆಯ ಮೂಲಕ ಮನೆಗೆ ಬೈಕ್‌ನಲ್ಲಿ ತೆರಳುವ ವೇಳೆ ಗುಂಡಿ ತಪ್ಪಿಸಲು ಹೋಗಿ ಅಂಥೋಣಿ ಜೋಸೆಫ್ (55) ಹಾಗೂ ಪತ್ನಿ ಸಹಾಯ್‌ ಮೇರಿ (52) ಎಂಬುವರು ಮೃತಪಟ್ಟಿದ್ದರು. ಅದೃಷ್ಟವಶಾತ್‌ 5 ವರ್ಷದ ಮೊಮ್ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಳು. ಅದೇ ರೀತಿ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಎದುರಾದ ಗುಂಡಿ ತಪ್ಪಿಸಲು ಬ್ರೇಕ್‌ ಹಾಕಿದಾಗ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ರಾಧಾ (34) ಎಂಬುವವರು ಮೃತಪಟ್ಟಿದ್ದರು. 

25 ಸಾವಿರಕ್ಕೂ ಹೆಚ್ಚು ಗುಂಡಿಗಳು ಸೃಷ್ಟಿ: ಬಿಬಿಎಂಪಿ ದಾಖಲೆ ಪ್ರಕಾರ ನಗರದಲ್ಲಿ ಇಲ್ಲಿಯವರೆಗೆ 25,000 ಕ್ಕೂ ಗುಂಡಿಗಳು ಬಿದ್ದಿವೆ ಎಂದು ತಿಳಿದು ಬಂದಿದೆ. ಅದರಲ್ಲಿ 24,000 ಗುಂಡಿಗಳನ್ನು ಮುಚ್ಚಲಾಗಿದ್ದು, ಇನ್ನು ಕೇವಲ ಒಂದು ಸಾವಿರದಷ್ಟು ಗುಂಡಿಗಳು ಮಾತ್ರ ಬಾಕಿಯಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ವಾರ್ಡ್‌ ರಸ್ತೆಗಳು ಹಾಗೂ ಹೊರವಲಯದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳಿಗೆ ಮುಕ್ತಿ ಸಿಕ್ಕಿಲ್ಲ ಎಂದು ವಾಹನ ಸವಾರರು ಅಳಲು ತೋಡಿಕೊಳ್ಳುತ್ತಾರೆ.
 

-93 ಸಾವಿರ  ನಗರದಲ್ಲಿರುವ ಒಟ್ಟು ರಸ್ತೆಗಳು 
-14 ಸಾವಿರ ಕಿ.ಮೀ. ಒಟ್ಟು ರಸ್ತೆಗಳ ಉದ್ದ 
-2 ಸಾವಿರ ಕಿ.ಮೀ. ಆರ್ಟಿರಿಯಲ್‌ ಹಾಗೂ ಅಪ್‌ಆರ್ಟಿರಿಯಲ್‌ ರಸ್ತೆಗಳ ಉದ್ದ 
-12 ಸಾವಿರ ಕಿ.ಮೀ. ವಾರ್ಡ್‌ ರಸ್ತೆಗಳ ಉದ್ದ 
-2 ಕೋಟಿ ರೂ. ಹೊಸದಾಗಿ ಒಂದು ಕಿ.ಮೀ. ರಸ್ತೆ ನಿರ್ಮಾಣಕ್ಕೆ ತಗಲುವ ವೆಚ್ಚ 
-50-60 ಲಕ್ಷ ರೂ. ವಾರ್ಡ್‌ ರಸ್ತೆಗಳಲ್ಲಿ 1 ಕಿ.ಮೀ. ಕಾಮಗಾರಿಗೆ ತಗಲುವ ವೆಚ್ಚ 

10 ಇಂಚಿಗಿಂತ ಕಡಿಮೆ ಆಳದ ಗುಂಡಿ ದುರಸ್ತಿ ಹೇಗೆ?
– ಮೊದಲಿಗೆ ಗುಂಡಿ ಸ್ವತ್ಛಗೊಳಿಸಿ ಜಲ್ಲಿ ಮಿಶ್ರಣ ಹಾಕಬೇಕು
– ಗುಂಡಿಯನ್ನು ಚೌಕ ಇಲ್ಲವೇ ಆಯಾತಾಕಾರದಲ್ಲಿ ದುರಸ್ತಿಪಡಿಸಬೇಕು
– 12 ಎಂ.ಎಂ. ಗಾತ್ರದ ಬಿಟುಮಿನಸ್‌ ಕಾಂಕ್ರಿಟ್‌ ಹಾಕಬೇಕು
– ರೋಲರ್‌ನಿಂದ ಏಳೆಂಟು ಬಾರಿ ರೋಲ್‌ ಮಾಡಬೇಕು
– ಮಿಶ್ರಣ ಕೂಡಿಕೊಳ್ಳಲು ಕಾಲಾವಕಾಶ ನೀಡಬೇಕು. 
– ಗುಂಡಿ ದುರಸ್ತಿಯಾದ ಕಡೆ ನೀರು ನಿಲ್ಲದಂತೆ ಕ್ರಮವಹಿಸಬೇಕು

10 ಇಂಚಿಗಿಂತ ಹೆಚ್ಚು ಆಳದ ಗುಂಡಿ ದುರಸ್ತಿ ಹೇಗೆ?
– ಮೊದಲು ಗುಂಡಿ ಸ್ವತ್ಛಗೊಳಿಸಿ ವೆಟ್‌ಮಿಕ್ಸ್‌ ಹಾಕಬೇಕು
– ನಂತರ ಪ್ರೈಮರ್‌ ಕೋಟ್‌ ಮಾಡಬೇಕು
– ಆನಂತರ 24 ಗಂಟೆ ಹಾಗೇ ಬಿಡಬೇಕು
– ಬಳಿಕ 20 ಎಂ.ಎಂ. ಜಲ್ಲಿಯ “ಡೆನ್ಸ್‌ ಬಿಟುಮಿನ್‌ ಮಿಕ್ಸ್‌’ ಹಾಕಬೇಕು
– ಜತೆಗೆ ಮಿಶ್ರಣ ಕೂಡಿಕೊಳ್ಳಲು ಕಾಲಾವಕಾಶ ನೀಡಬೇಕು
– ಉಷ್ಣಾಂಶ ಕಡಿಮೆಯಾಗುವವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು

ರಸ್ತೆಗುಂಡಿ ದುರಸ್ತಿ ಬಳಿಕವೂ ಗುಂಡಿ ಸೃಷ್ಟಿಗೆ ಕಾರಣವೇನು?
– ಡಾಂಬರು ಮಿಶ್ರಣ ನಿಗದಿತ ಉಷ್ಣಾಂಶದಲ್ಲಿ ಬಳಸದಿರುವುದು 
– ಲೇಯಿಂಗ್‌ ಟೆಂಪರೇಚರ್‌, ರೋಲರ್‌ ಟೆಂಪರೇಚರ್‌ ಕಾಯ್ದುಕೊಳ್ಳದಿರುವುದು 
– ಗುಂಡಿ ದುರಸ್ತಿಯಾದ ತಕ್ಷಣ ವಾಹನ ಸಂಚಾರಕ್ಕೆ ಅವಕಾಶ
– ದುರಸ್ತಿಯಾದ ಕೆಲ ದಿನಗಳವರೆಗೆ ಭಾರಿ ವಾಹನಗಳು ಸಂಚರಿಸದಂತೆ ನೋಡಿಕೊಳ್ಳದಿರುವುದು

* ವೆಂ.ಸುನೀಲ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next