ಭಾಲ್ಕಿ: ಭಾರತೀಯ ಸರ್ವೇಕ್ಷಣಾ ಇಲಾಖೆಯಡಿ ಬರುವ ತಾಲೂಕಿನ ಪುರಾತನ ಕೋಟೆಗಳ ಜೀರ್ಣೋದ್ಧಾರ ಕಾರ್ಯ ಕನಸಾಗಿಯೇ ಉಳಿದಿದೆ. ಹಳೆ ಪಟ್ಟಣ, ಭಾತಂಬ್ರಾ ಕೋಟೆಗಳು ಐತಿಹಾಸಿಕ ಕೋಟೆಗಳಾಗಿದ್ದು, ಸಿಥಿಲಾವಸ್ಥೆಯಲ್ಲಿರುವ ಇವುಗಳ ಜೀರ್ಣೋದ್ಧಾರ ಕಾರ್ಯ ನಡೆಯಬೇಕಾಗಿದೆ.
ಬೀದರನ ಬಹುಮನಿ ಸುಲ್ತಾನರ ಕಾಲದ ಕೋಟೆಗಳ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಂಡ (ಎಎಸ್‌ಐ) ಭಾರತೀಯ ಸರ್ವೇಕ್ಷಣಾ ಇಲಾಖೆ, ಭಾಲ್ಕಿ ಕೋಟೆಗಳ ಜೀರ್ಣೋದ್ಧಾರ ಕಾರ್ಯ ಮಾಡದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎನ್ನುತ್ತಾರೆ ತಾಲೂಕಿನ ಇತಿಹಾಸ ತಜ್ಞ ಸುಬ್ಬಣ್ಣ ಅಂಬೆಸಿಂಗೆ.
ಪಟ್ಟಣದ ಐತಿಹಾಸಿಕ ಕೋಟೆಯು ನಿಜಾಮನ ಆಡಳಿತಕ್ಕಿಂತ ಮುನ್ನದ ಅರಸರ ಕಾಲದ ಪಾಳೆಯಗಾರ ರಾಮಚಂದ್ರ ಜಾಧವ ಕಟ್ಟಿಸಿರುವುದಾಗಿ ಇತಿಹಾಸ ತಜ್ಞರು ಹೇಳುತ್ತಾರೆ. ಇತಿಹಾಸ ಪ್ರಸಿದ್ಧವಾದ ಈ ಕೋಟೆಯು ಇಂದು ಅಳಿವಿನ ಅಂಚಿನಲ್ಲಿದೆ. ಕೋಟೆಯ ಒಳಗೆ ಒಂದು ಮಜ್ಜಿದ್ ನಿರ್ಮಿಸಲಾಗಿದೆ. ಕೋಟೆಯ ಪಶ್ಚಿಮ ಮುಖ್ಯದ್ವಾರದಲ್ಲಿ ಗಣೇಶ ಮೂರ್ತಿ ಸ್ಥಾಪಿಸಲಾಗಿದೆ.
ಇದರಿಂದ ಹಿಂದೂ ಮುಸ್ಲಿಂ ಸಾಮರಸ್ಯ ಹದಗೆಡುವ ಸಂಭವ ಹೆಚ್ಚಾಗಿದೆ. ಮುಸ್ಲಿಮರ ರಂಜಾನ್, ಬಕ್ರಿದ್ ಹಾಗೂ ಹಿಂದೂಗಳ ಗಣೇಶ ಉತ್ಸವ, ಹೋಳಿ ಹಬ್ಬ ಸೇರಿದಂತೆ ಹಲವಾರು ಸಾರ್ವಜನಿಕ ಹಬ್ಬಗಳಲ್ಲಿ ಇಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡುವ ಅನಿರ್ವಾಯತೆ ಇದೆ. ಇದಕ್ಕೆಲ್ಲ ಕಡಿವಾಣ ಹಾಕಿ, ಕೋಟೆ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳಬೇಕಾದ ಭಾರತೀಯ ಸರ್ವೇಕ್ಷಣಾ ಇಲಾಖೆ ನಿದ್ರಾವಸ್ತೆಯಲ್ಲಿದೆ ಎನ್ನುತ್ತಾರೆ ಭಾಲ್ಕಿಯ ಚಿಂತಕ ಓಂಪ್ರಕಾಶ ರೊಟ್ಟೆ.
ಕೋಟೆಯ ಮೂರು ಬದಿಗಳಲ್ಲಿ ರಸ್ತೆಗಳಿದ್ದು, ಪೂರ್ವ ಭಾಗಕ್ಕೆ ವೀರಭದ್ರೇಶ್ವರ ದೇವರ ರಥೋತ್ಸವ ನಡೆಸುವ ಮೈದಾನವಿದೆ. ಕೆಲವು ದಿನಗಳ ಹಿಂದೆ ಈ ಸ್ಥಳದಲ್ಲಿ ವಾರಕ್ಕೊಮ್ಮೆ ಅಂಗಡಿಗಳು ತುಂಬುತ್ತಿದ್ದವು. ಪಟ್ಟಣದ ನಾಗರಿಕರು ತಮಗೆ ಬೇಕಾದ ವಸ್ತುಗಳನ್ನು ಈ ಸ್ಥಳದಲ್ಲಿಯೇ ಖರೀದಿಸುತ್ತಿದ್ದರು. ಈಗ ಅದು ಸ್ಥಗಿತವಾಗಿದೆ. ಕೋಟೆಯ ಒಳಗಡೆ ಸತ್ಯನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆ ನಡೆಸಲಾಗುತ್ತಿದ್ದು, ಈಗ ಪ್ರೌಢಶಾಲೆ ತನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಿದೆ.
ಪ್ರಾಥಮಿಕ ಶಾಲೆ ಇನ್ನೂ ಅಲ್ಲಿಯೇ ನಡೆಯುತ್ತಿದೆ. ಕೋಟೆಯ ಒಳಗೆ ರಾಣಿ ಮಹಲ್, ಕುದುರೆ ಶಾಲೆ ಎಲ್ಲವೂ ಇದೆ. ಸುಮಾರು ವರ್ಷಗಳ ಹಿಂದೆ ಪೂರ್ವ ಭಾಗದ ಮುಖ್ಯದ್ವಾರದ ಮೇಲಿದ್ದ ಒಂದು ಕಟ್ಟಡ ಸ್ಫೋಟವಾಗಿ ಬಿದ್ದುಬಿಟ್ಟಿತ್ತು. ಕಾರಣ ಅದರಲ್ಲಿ ಮದ್ದು ಗುಂಡು ತುಂಬಿತ್ತು ಎನ್ನುತ್ತಾರೆ ಭಾಲ್ಕಿಯ ಹಿರಿಯರು. ಒಟ್ಟಿನಲ್ಲಿ ಪುರಾತನ ಕೋಟೆ ಜೀರ್ಣಾವಸ್ಥೆಯಲ್ಲಿದ್ದು, ಪುರಾತತ್ವ ಇಲಾಖೆಯಾಗಲಿ, ಭಾರತೀಯ ಸರ್ವೇಕ್ಷಣಾ ಇಲಾಖೆಯಾಗಲಿ, ಇತ್ತ ಗಮನ ಹರಿಸಿ ಕೋಟೆಯ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳಬೇಕು ಎನ್ನುವುದು ಪಟ್ಟಣದ ಹಿರಿಯ ನಾಗರಿಕರ
ಒತ್ತಾಸೆಯಾಗಿದೆ.
ಜಯರಾಜ ದಾಬಶೆಟ್ಟಿ