ಮುಂಡರಗಿ: ತಾಲೂಕಿನ ಶಿಂಗಟಾಲೂರು ತುಂಗಭದ್ರಾ ನದಿ ದಂಡೆಯ ಕಪ್ಪತ್ತಗುಡ್ಡದ ಅಂಚಿನ ಗುಡ್ಡದ ಮೇಲಿರುವ ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ದೇವರ ಮಹಾರಥೋತ್ಸವ ಬುಧವಾರ ಸಂಜೆ ಸಹಸ್ರಾರು ಭಕ್ತರ ಹರ್ಷೋದ್ಘಾರಗಳ ಮಧ್ಯೆ ಸಾಂಗವಾಗಿ ನೆರವೇರಿತು.
ಶ್ರೀಕ್ಷೇತ್ರ ವೀರಭದ್ರೇಶ್ವರ ದೇವರ ಮಹಾರಥೋತ್ಸವ ಇಳಿ ಹೊತ್ತಿನಲ್ಲಿ ಭಕ್ತರ ಉತ್ಸಾಹ, ಸಡಗರ, ಸಂಭ್ರಮ, ಜಯಘೋಷಗಳ ಮಧ್ಯೆ ಸಕಲ ಮಂಗಲ ವಾದ್ಯಗಳೊಂದಿಗೆ ಅದ್ಧೂರಿಯಾಗಿ ನೆರವೇರಿತು.
ಷ.ಬ್ರ.ಗುರು ಮುದುಕೇಶ್ವರ ಶಿವಾಚಾರ್ಯರ ದಿವ್ಯ ಸಾನ್ನಿಧ್ಯ ಹಾಗೂ ಷ.ಬ್ರ. ಡಾ| ಸುಜ್ಞಾನದೇವ ಶಿವಾಚಾರ್ಯರ ನೇತೃತ್ವದಲ್ಲಿ ಮಹಾರಥೋತ್ಸವ ಸಾಂಗವಾಗಿ ನೆರವೇರಿತು. ಭಕ್ತರು ಉತ್ತತ್ತಿ, ಬಾಳೆಹಣ್ಣು, ಟೆಂಗಿನಕಾಯಿ, ಹತ್ತು ಹಲವಾರು ವಿವಿಧ ರೀತಿಯ ಹಣ್ಣುಗಳನ್ನು ಅರ್ಪಿಸಿ ಶ್ರೀ ವೀರಭದ್ರೇಶ್ವರ ದೇವರ ಮಹಾರಥೋತ್ಸವವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ, ಕಮಿಟಿ ಸದಸ್ಯರಾದ ಶೇಖಣ್ಣ ಬಾಲೇಹೊಸೂರು, ಕೊಟ್ರೇಶ ಬಳ್ಳೋಳ್ಳಿ, ಬಸವರಾಜ ಬಿಳಿಮಗ್ಗದ, ಸಿದ್ರಾಮಯ್ಯ ಹಿರೇಮಠ, ಚನ್ನವೀರಪ್ಪ ಎಲಿಗಾರ, ಹುಚ್ಚಿರಪ್ಪ ಅಂಗಡಿ, ಗ್ರಾಪಂ ಅಧ್ಯಕ್ಷೆ ಮಂಜವ್ವ ಅಂಗಡಿ ಸೇರಿದಂತೆ ಹಾವೇರಿ, ದಾವಣಗೆರೆ, ಗದಗ, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ಪಾಲ್ಗೊಂಡಿದ್ದರು.
ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಸಕಲ ಭಕ್ತರಿಗೆ ದೇವಸ್ಥಾನದ ಕ್ರಿಯಾಶೀಲ ಅಧ್ಯಕ್ಷರು, ಕ್ಷೇತ್ರದ ಅಭಿವೃದ್ಧಿಯ ಹರಿಕಾರರೂ ಆದ ಕರಬಸಪ್ಪ ಹಂಚಿನಾಳ ನೇತೃತ್ವದ ದೇವಸ್ಥಾನದ ಆಡಳಿತ ಮಂಡಳಿಯವರು ಅಚ್ಚುಕಟ್ಟಾಗಿ ವಸತಿ, ನೀರು, ಪ್ರಸಾದ ವ್ಯವಸ್ಥೆ ಮಾಡಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಸೇವಾಕರ್ತರು ಸ್ವಯಂ ಇಚ್ಛೆಯಿಂದ ದಾಸೋಹ ಸೇವೆಯಲ್ಲಿ ಪಾಲ್ಗೊಂಡಿದ್ದರು.