ಕುಷ್ಟಗಿ: ಯುಗಾದಿ ಪಾಡ್ಯದ ಶೋಭಕೃತ ನಾಮ ಸಂವತ್ಸರ ಬುಧವಾರ ಪಟ್ಟಣದ ಆರಾಧ್ಯದೈವ ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಗುಗ್ಗಳ ಮಹೋತ್ಸವ ಭಕ್ತ ಜನಸಾಗರದ ಮಧ್ಯೆ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ 6 ಗಂಟೆಗೆ ಶ್ರೀ ವೀರಭದ್ರೇಶ್ವರ ದೇವರಿಗೆ ಮಹಾರುಧ್ರಾಭಿಷೇಕ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಪುರವಂತರಿಂದ ಹೋಮ ಹವನಾದಿ ಧಾರ್ಮಿಕ ಕಾರ್ಯಕ್ರಮ ಅಗ್ನಿಕುಂಡ ಸ್ಥಾಪನೆ ಗುಗ್ಗಳೋತ್ಸವ ನಡೆಯಿತು. ವೀರಭದ್ರ ದೇವರು ಮೂರ್ತಿ, ಅಗ್ನಿ ಕುಂಡಗಳೊಂದಿಗೆ ನಂಧಿ ಧ್ವಜಾ ಕುಣಿತ, ವೀರಗಾಸೆ, ಡೊಳ್ಳು, ಸಾಂಬಳ ವಾದ್ಯದೊಂದಿಗೆ ಪಟ್ಟಣದ ಪ್ರಮುಖ ಬೀಧಿಗಳಲ್ಲಿ ಮೆರವಣಿಗೆ ನಡೆಯಿತು.
ಜಾತ್ರೆಯ ಪ್ರಯುಕ್ತ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಪುರವಂತರು ತಮ್ಮ ವಿವಿಧ ಪೌರಾಣಿಕ ಒಡಪುಗಳ ಮೂಲಕ ಕೈಯಲ್ಲಿ ಖಡ್ಗ ಹಿಡಿದು ಝಳಪಿಸುತ್ತ ಜಾತ್ರೆಯಲಿ ಸೇರಿದ್ದ ಜನರನ್ನು ಬೆರಗುಗೊಳಿಸಿದರಲ್ಲದೇ ತಮ್ಮ ಅದ್ಬುತ ಪುರವಂತಿಕೆ ಕಲೆಯನ್ನು ಪ್ರದರ್ಶಿಸಿದರು. ಭಕ್ತಾಧಿಗಳು ಮಹಿಳೆಯರು, ಮಕ್ಕಳಾಧಿಯಾಗಿ ಶಾಸ್ತ್ರ ಹಾಕಿಸಿಕೊಂಡು ಪ್ರಸನ್ನರಾದರು.
ಗುಗ್ಗಳ ದೇವಸ್ಥಾನ ತಲುಪುತಿದ್ದಂತೆ ದೇವಸ್ಥಾನದಲ್ಲಿನ ಅಗ್ನಿ ಕುಂಡವನ್ನು ಭಕ್ತಾದಿಗಳು ಹಾಯ್ದು ಭಕ್ತಿಯ ಪರಾಕಾಷ್ಠೆ ಮೆರವೆದರು. ಇದೇ ಸಂಧರ್ಭದಲ್ಲಿ ಮದ್ನಾಹ್ನ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಊರುಗಳಿಂದ ಆಗಮಿಸಿದ್ದ ಭಕ್ತಾಧಿಗಳು ಅನ್ನ ಸಂತರ್ಪಣೆ ನಡೆಯಿತು.