ಬೇಗ ಶಾಲೆ ತಲುಪಬೇಕೆಂದು ನಾನು ಜೋರಾಗಿ ಪೆಡಲ್ ತುಳಿದಿದ್ದೆ. ಸುಂಯ್ ಎನ್ನುತ್ತಿದ್ದ ಗಾಳಿಯ ಸದ್ದೂ ನನ್ನೊಡನೆ ಸ್ಪರ್ತೆಗಿಳಿದಿತ್ತು. ಸ್ವಲ್ಪ ದೂರ ಹೋಗಿ ಏನೋ ಹೇಳಲೆಂದು ಹಿಂದೆ ತಿರುಗಿ ನೋಡಿದರೆ ಕ್ಯಾರಿಯರ್ ಮೇಲೆ ಕುಳಿತಿದ್ದ ಗೆಳೆಯ ಕಣ್ಮರೆಯಾಗಿದ್ದ…
ಸೈಕಲ್..! ನನ್ನ ಬಾಲ್ಯದ ಗೆಳೆಯ. ಒಂದು ಹೊತ್ತಿನ ಊಟ ಬಿಟ್ಟರೂ ಸೈಕಲ್ ತುಳಿಯುವುದನ್ನು ಮಾತ್ರ ನಾನು ನಿಲ್ಲಿಸುತ್ತಿರಲಿಲ್ಲ. ಅದೇನೋ ಆಕರ್ಷಣೆ. ನಾಲ್ವರ ಗುಂಪು ಕಟ್ಟಿಕೊಂಡು ಪ್ರತಿದಿನ ನಾಲ್ಕು ರೌಂಡ್ಸ್ ಹಾಕಿದರೇನೆ ಮನಸ್ಸಿಗೆ ಸಮಾಧಾನ. ಕೆಲವೊಮ್ಮೆ ಅದನ್ನು ಓಡಿಸುತ್ತಿದ್ದ ರಭಸಕ್ಕೆ ಅದರ ಬಿಡಿಭಾಗಗಳು ಎಲ್ಲೆಲ್ಲೋ ಹಾರಿ ಹೋಗುತ್ತಿದ್ದವು. ಅದರೂ ಇಂದಿಗೂ ಸೈಕಲ್ ಸವಾರಿಯ ಗೀಳು ಬಿಟ್ಟಿಲ್ಲ.
ಅದು, ನಾನು ಹೈಸ್ಕೂಲ್‌ಗೆ ಹೋಗುತ್ತಿದ್ದ ಸಮಯ. ಬೆಳಗ್ಗೆ 9 ಗಂಟೆಗೆ ಸರಿಯಾಗಿ ತರಗತಿಗೆ ಹಾಜರಾಗಬೇಕಿತ್ತು. ಚಳಿಗಾಲದ ಸಮಯವಾದ್ದರಿಂದ ಹಾಸಿಗೆಯಿಂದ ಏಳಲೇ ಮನಸ್ಸಾಗುತ್ತಿರಲಿಲ್ಲ. ಅಪ್ಪ- ಅಮ್ಮನಿಂದ ಸಹಸ್ರ ನಾಮಾರ್ಚನೆಯಾದ ನಂತರ ಕಷ್ಟಪಟ್ಟು ಎದ್ದು ಎಲ್ಲಾ ಕೆಲಸಗಳನ್ನು ಅವಸರವಾಗಿಯೇ ಮುಗಿಸಿಕೊಂಡು ಅಮ್ಮ ಕೊಟ್ಟ 2 ಚಪಾತಿಯನ್ನು ಹಿಡಿದುಕೊಂಡು ಸೈಕಲ್ ಏರಿದನೆಂದರೆ ಕುದುರೆಗೂ ಕೂಡ ಪೈಪೋಟಿ ಕೊಡುವಂತಿತ್ತು ನನ್ನ ಸವಾರಿ. ಒಮ್ಮೆ ಹೀಗೇ ತಡವಾಗಿ ಹೊರಟಿದ್ದೆ. ಇಳಿಜಾರಿನ ರಸ್ತೆಗಳೇ ಹೆಚ್ಚಾಗಿದ್ದರಿಂದ ವೇಗವಾಗಿ ಸಾಗುತ್ತಿತ್ತು ಪ್ರಯಾಣ. ದಾರಿಮಧ್ಯೆ ನನ್ನ ಸ್ನೇಹಿತನೊಬ್ಬ ಸಿಕ್ಕಿದ್ದರಿಂದ ಆತನನ್ನು ಹಿಂಬದಿ ಕೂರಿಸಿಕೊಂಡು ಸೈಕಲ್ ತುಳಿಯುತ್ತಿದ್ದೆ. ಯಾಕೋ ಗೊತ್ತಿಲ್ಲ; ಸೈಕಲ್ ನನ್ನ ನಿಯಂತ್ರಣಕ್ಕೆ ಸಿಕ್ಕದೆ ಯದ್ವಾತದ್ವಾ ಓಡುತ್ತಿತ್ತು.
ಅನುಮಾನ ಬಂದು ಪರಿಶೀಲಿಸಿದಾಗ ಸ್ನೇಹಿತ ಕುಳಿತಿದ್ದ ಹಿಂಬದಿ ಸೀಟ್‌ನ ಬೋಲ್ಟ್ ಸಡಿಲವಾಗಿತ್ತು. ಅದನ್ನು ಬಿಗಿಗೊಳಿಸುವಷ್ಟು ಸಮಯ ನಮ್ಮಲ್ಲಿರಲಿಲ್ಲ. ಅದಕ್ಕಾಗಿ ಆತನ ಕೈಗೇ ಒಂದು ಸ್ಪ್ಯಾನರನ್ನು ನೀಡಿ “ನಾನು ಸೈಕಲ್ ತುಳಿಯುತ್ತಲೇ ಇರ್ತೇನೆ. ನೀನು ಕೂತಿದ್ದೇ ನಟ್ ಬಿಗಿಗೊಳಿಸುತ್ತಾ ಇರು. ಸೈಕಲ್ ನಿಲ್ಲಿಸಿ ರಿಪೇರಿ ಮಾಡೋಕೆ ಹೋದರೆ ಶಾಲೆಗೆ ತಡವಾಗುತ್ತದೆ’ ಎಂದು ಹೇಳಿ ಇನ್ನಷ್ಟು ವೇಗವಾಗಿ ತುಳಿಯಲಾರಂಭಿಸಿದೆ. ಮತ್ತೆ ಇಳಿಜಾರಿನ ರಸ್ತೆ ಬಂತು.
ಚಳಿಗಾಲದ ತಂಗಾಳಿ ಬಲವಾಗಿ ಬೀಸುತ್ತಿತ್ತು. ಸುಯ್ಯನೆ ಬೀಸುವ ಗಾಳಿಯೊಂದಿಗೆ ನಾನು ಸಮತಟ್ಟು ರಸ್ತೆಗೆ ಬಂದೆ. ಸೈಕಲ್ ಈಗ ಮೊದಲಿನ ತರಹ ಯದ್ವಾತದ್ವಾ ಅಲ್ಲಾಡುತ್ತಿರಲಿಲ್ಲ. ಇದಕ್ಕೆ ಈವಾಗಲಾದರೂ ಬುದ್ದಿ ಬಂತಲ್ಲ ಎಂದು ಮೆಲ್ಲಗೆ ಹಿಂದಕ್ಕೆ ತಿರುಗಿ ನೋಡಿದೆ. ನನ್ನ ಸ್ನೇಹಿತನೇ ಅಲ್ಲಿರಲಿಲ್ಲ… ಗಾಬರಿಯಾಯ್ತು. ಇಷ್ಟುಹೊತ್ತು ನನ್ನ ಹಿಂದೇನೇ ಕುಳಿತಿದ್ದವನು ಎಲ್ಲಿ ಹಾರಿಹೋದ ಎಂದು ಸಿಡಿಮಿಡಿಗೊಂಡು ಸೈಕಲನ್ನು ಅಲ್ಲೇ ನಿಲ್ಲಿಸಿ ಹಿಂದಕ್ಕೆ ಓಡೋಡಿ ಬಂದೆ… ಆತ ರಸ್ತೆ ಬದಿಯಲ್ಲಿ ಹಾಕಿದ್ದ ಮರಳಿನ ಮೇಲೆ ಕುಳಿತುಕೊಂಡು ನನ್ನನ್ನೇ ಪಿಳಿಪಿಳಿ ನೋಡುತ್ತಿದ್ದ. “ಏನಾಯ್ತು? ಏಕೆ ಇಲ್ಲಿ ಕುಳಿತಿದ್ದಿ? ಸೈಕಲ್‌ನಿಂದ ಯಾಕೆ ಇಳಿದೆ?’ ಎಂದು ಜೋರುಮಾಡಿದಾಗ ಆತ, “ಇನ್ನು ಮುಂದೆ ನಿನ್ನ ಸೈಕಲ್‌ನಲ್ಲಿ ಬರುವುದಿಲ್ಲ ಮಾರಾಯಾ. ಮೊದಲು ಹೋಗಿ ಅದನ್ನು ಗುಜರಿಗೆ ಹಾಕಿ ಹೊಸದನ್ನು ತೆಗೆದುಕೊ’ ಎಂದ.
ನಡೆದದ್ದಿಷ್ಟು..! ನಾನು ಆತನಿಗೆ ಸೀಟ್‌ನ ಬೋಲ್ಟ್ ಬಿಗಿಗೊಳಿಸುತ್ತಾ ಇರು, ಇಲ್ಲದಿದ್ದರೆ ಸಡಿಲವಾಗುತ್ತೆ ಎಂದಿದ್ದೆನಲ್ಲ; ದುರಾದೃಷ್ಟವಶಾತ್, ಆ ಇಳಿಜಾರಿನಲ್ಲಿ ಹೋಗುವ ರಭಸದಲ್ಲಿ ಆತನಿಗೆ ಆ ಕೆಲಸ ಮಾಡಲು ಆಗಿರಲಿಲ್ಲ. ಪರಿಣಾಮ, ಆತ ಕುಳಿತಿದ್ದ ಸೀಟ್ ಕಳಚಿಕೊಂಡಿತ್ತು… ಅದರೊಡನೆ ಆತನೂ ಮರಳಿನ ಮೇಲೆ ಧೊಪ್ಪನೇ ಬಿದ್ದಿದ್ದ. ಇಲಿಜಾರು ಇದ್ದಿದ್ದರಿಂದ ಹಾಗೂ ಗಾಳಿಯೂ ಜೋರಾಗಿ ಬೀಸುತ್ತಿದ್ದುದರಿಂದ ಗೆಳೆಯ ಬಿದ್ದ ಸದ್ದಾಗಲಿ, ಸೈಕಲ್ ಹಗುರಾದ ಸಂಗತಿಯಾಗಲಿ ನನಗೆ ಗೊತ್ತಾಗಿರಲಿಲ್ಲ. ಈ ಘಟನೆಯಿಂದ ಶಾಲೆಗೆ ಒಂದು ಗಂಟೆ ತಡವಾಗಿ ಹೋಗಬೇಕಾಯಿತು. ಶಾಲೆಯಲ್ಲಿ ನಮ್ಮ ಕಥೆ ಕೇಳಿದ ಅಧ್ಯಾಪಕರೂ ಸಹಸ್ರನಾಮಾರ್ಚನೆ ಮಾಡಿದರು. ನಾವು ಮಾಡಿಕೊಂಡ ಎಡವಟ್ಟಿನ ಕಥೆ ಕೇಳಿ ಇಡೀ ತರಗತಿ ಬಿದ್ದು ಬಿದ್ದು ನಕ್ಕಿತು.
– ಮಿಥುನ್ ಪಿ.ಜಿ., ಮಡಿಕೇರಿ