ಮಾಗಡಿ: ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ತವರೂರು ಮಾಗಡಿಯಲ್ಲಿ ನೀರಿನ ಬವಣೆ ನಿವಾರಣೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಏಕೆಂದರೆ ಸುದೀರ್ಘ ಹೋರಾಟದ ಫಲವಾಗಿ ತಾಲೂಕಿಗೆ ಹೇಮಾವತಿ ಹರಿಸಲು ಚಾಲನೆ ಪಡೆದುಕೊಂಡಿದ್ದ ಶ್ರೀರಂಗ ಏತ ನೀರಾವರಿ ಯೋಜನೆ ಕಾಮಗಾರಿ ವೇಗ ಪಡೆದುಕೊಂಡಿಲ್ಲ. ಬೆಂಗಳೂರಿಗೆ ಕೇವಲ 50 ಕಿ.ಮೀ ಸಮೀಪ ಇರುವ ಮಾಗಡಿ ಕ್ಷೇತ್ರ ನಂಜುಂಡಪ್ಪ ವರದಿ ಆಧಾರದಂತೆ ಹಿಂದುಳಿದ ಪ್ರದೇಶ. ಇಲ್ಲಿ ಬಹುತೇಕ ಮಂದಿ ವ್ಯವಸಾಯವನ್ನೇ ನಂಬಿ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ತಾಲೂಕಿನಲ್ಲಿ ಪ್ರಸಿದ್ಧ ತಿಪ್ಪಗೊಂಡನ ಹಳ್ಳಿ, ಎತ್ತಿನ ಮನೆ ಗುಲಗಂಜಿ ಗುಡ್ಡ, ಮಂಚನಬೆಲೆ ಯಂತಹ 3 ಜಲಾಶಯಗಳಿವೆ. ಆದರೂ ಜನತೆಯ ಬಾಯಾರಿಕೆ ಇಂಗಿಸಲು ಸಾಧ್ಯವಾಗಿಲ್ಲ.
ಅಂತರ್ಜಲ ಕುಸಿತ: ಇತ್ತೀಚೆಗೆ ಮಂಚನಬೆಲೆ ಜಲಾ ಶಯದಿಂದ ಪಟ್ಟಣದ ಜನತೆಯ ಬಾಯಾರಿಕೆ ಇಂಗಿಸುತ್ತಿದೆ. ನಾಡಪ್ರಭು ಕಟ್ಟಿದ್ದ ಅನೇಕ ಕೆರೆಕಟ್ಟೆಗಳು ನೀರಿಲ್ಲದೆ ಭತ್ತಿ ಹೋಗಿವೆ. ಬಹುತೇಕ ಕೆರೆಗಳು ಕಣ್ಮರೆಯಾಗಿವೆ. ಇರುವ ಕೆರೆಗಳು ಅಂತರ್ಜಲ ಕುಸಿತದಿಂದ ಕಾಯಕಲ್ಪಕ್ಕೆ ಕಾದು ನಿಂತಿವೆ. ಇತ್ತ ಅಂತರ್ಜಲ ಕುಸಿತದಿಂದ ರೈತರ ಭೂಮಿ ಬರಡಾಗಿದೆ. ಕೊಳೆವೆ ಬಾವಿ ಕೊರೆಸಿದರೂ ಒಂದು ಸಾವಿರದ ಅಡಿಗೆ ಕಡಿಮೆ ನೀರು ಭೂಮಿಗೆ ಚುಮ್ಮದು. ಇಷ್ಟೊಂದು ಆಳದಿಂದ ನೀರೆತ್ತಲಾಗದೆ ರೈತರು ಬೆಳೆ ಬೆಳೆಯಲಾಗದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ವ್ಯವಸಾಯ ನಂಬಿದ್ದ ಬಹುತೇಕ ಯುವ ಪೀಳಿಗೆ ನೀರಿನ ಆಸರೆಯಿಲ್ಲದೆ ವ್ಯವಸಾಯ ಮಾಡಲಾಗದೆ ನಗರಕ್ಕೆ ಉದ್ಯೋಗ ಹರಸಿ ಗೂಳೆ ಹೊರಟಿದ್ದಾರೆ.
ಭಿನ್ನರಾಗ: ಕ್ಷೇತ್ರದ ರಾಜಕಾರಿಣಿಗಳಿಗೆ ಹೇಮಾವತಿ ನೀರಾವರಿ ಯೋಜನೆ ಪ್ರತಿಷ್ಠ ಪ್ರಶ್ನೆಯಾದರೂ, ವಿಪಕ್ಷಗಳ ನಾಯಕರು ಯೋಜನೆ ಕುರಿತು ಭಿನ್ನರಾಗ ಹಾಡಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬ ಸೇರಿದಂತೆ ಶಾಸಕ ಎಚ್.ಸಿ.ಬಾಲ ಕೃಷ್ಣ ಇವರು ಮನಸ್ಸು ಮಾಡಿದ್ದರೆ ಕ್ಷೇತ್ರಕ್ಕೆ ನೀರು ಹರಿಸಬಹುದಿತ್ತು ಎಂಬ ಭಿನ್ನರಾಗ ಇದ್ದೆ ಇದೆ.
86 ಕೆರೆ ತುಂಬಿಸುವ ಯೋಜನೆ: ವೀರಪ್ಪ ಮೊಯ್ಲಿ ಮಖ್ಯಮಂತ್ರಿಯಾಗಿದ್ದಾಗ ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಯೋಜನೆ ಅನುಷಾನಕ್ಕೆ ಎಚ್.ಎಂ. ರೇವಣ್ಣ ಅವರು ಪ್ರಸ್ತಾವನೆ ಸಲ್ಲಿಸಿ ಮಾಗಡಿ ಕ್ಷೇತ್ರಕ್ಕೆ ಹೇಮಾವತಿ ಹರಿಸಲು ಶ್ರೀರಂಗ ಏತ ನೀರಾವರಿ ಯೋಜನೆ ರೂಪಿಸಿದರು. ಯೋಜನೆ ಅನುಸಾರ ತುಮಕೂರು ಶಾಖಾ ನಾಲೆಯ 190 ಕಿ.ಮೀ ಅಂತರದಿಂದ ಏತ ನೀರಾವರಿ ಮೂಲಕ ತಾಲೂಕಿನ 86 ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಕನಿಷ್ಠ 0.9 ಟಿಎಂಸಿ ನೀರು ಅವಶ್ಯ ಯೋಜನೆ ರೂಪಗೊಂಡಿದ್ದು, ಸುಮಾರು 190 ಕಿ. ಮೀ. ದೂರದಿಂದ 131 ಕೂಸೆಕ್ ನೀರನ್ನು 120 ಮೀಟರ್ ಎತ್ತರಕ್ಕೆ ಲಿಪ್ಟ್ ಮಾಡಬೇಕಿದೆ.
ಯೋಜನೆ ಅನುಕೂಲತೆ: ಮಾಗಡಿ ಕ್ಷೇತ್ರಕ್ಕೆ ಹೇಮಾವತಿ ನೀರಾವರಿ ಯೋಜನೆಗೆ ಶ್ರೀರಂಗ ಏತ ನೀರಾವರಿ ಯೋಜನೆ ಎಂಬ ಹೆಸರಿಡಲಾಗಿತ್ತು. ಯೋಜನೆಯ ಅನುಷ್ಠಾನದಿಂದ ಮಾಗಡಿ ತಾಲೂಕಿನ 86 ಕೆರೆಗಳಿಗೆ ನೀರು ಹರಿಸುವುದು. ಅಂತರ್ಜಲ ಹೆಚ್ಚಿಸಲು ಜೊತೆಗೆ ತಾಲೂಕಿನ 11.015 ಎಕರೆ ಪ್ರದೇಶಗಳಿಗೆ ನೀರು ಹರಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲು ಹಾಗೂ 0.062 ಟಿಎಂಸಿ ನೀರು ಕುಡಿಯುವ ಬಳಕೆಗೆ ಮೀಸಲಿಡಲಾಗಿತ್ತು. ನನಗೆ ರಾಜಕೀಯ ಶಕ್ತಿ ನೀಡಿದ ಮಾಗಡಿ ಜನತೆಯ ಋಣ ತೀರಿಸಬೇಕು ಎಂಬ ಚಿಂತನೆಯಿಂದ ಸಣ್ಣ ಮತ್ತು ದೊಡ್ಡ ನೀರಾವರಿ ಇಲಾಖೆಯ ಎಂಜಿನಿಯರ್ ಅವರೊಂದಿಗೆ ಮಾಜಿ ಸಚಿವ ಎಚ್.ಎಂ.ರೇವಣ್ಣ ಚರ್ಚಿಸಿದ್ದರು. ನಂತರ ಆಗಿನ ಕೇಂದ್ರ ಕಾನೂನು ಮಂತ್ರಿಯಾಗಿದ್ದ ಡಾ.ಎಂ.ವೀರಪ್ಪ ಮೊಯ್ಲಿ ಅವರೊಂದಿಗೆ ಚರ್ಚಿಸಿದರು. ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಭರವಸೆ ಸಿಕ್ಕಿತು.
325 ಕೋಟಿ ರೂ. ಹಣ ಮಂಜೂರಾತಿ: ಎಸ್. ಎಂ.ಕೃಷ್ಣ ಸಿಎಂ ಆದ ನಂತರ ಯೋಜನೆಗೆ ಸುಮಾರು 96 ಕೋಟಿ ಅನುದಾನ ಬಿಡುಗಡೆಗೊಳಿಸಿ ಡಿಪಿಆರ್ ತಯಾರಿಸಲು ಸುಚಿಸಿದ್ದರು. ಹಾಗೂ ನಂತರದಲ್ಲಿ ಪರಿಸ್ಕೃತ ಅಂದಾಜು 124 ಕೋಟಿ ರೂ. ಗೆ ಹೆಚ್ಚಿಸಲಾಗಿತ್ತು.ಅದೇ ಸಮಯಕ್ಕೆ ಅವರ ಸರ್ಕಾರದ ಅವಧಿ ಮುಗಿದ ಕಾರಣ ಹೇಮಾವತಿ ಯೋಜನೆ ಮತ್ತೆ ಸ್ಥಗಿತಗೊಂಡಿತು. ಸಿದ್ದರಾಮಯ್ಯ ಸಿಎಂ ಆದ ನಂತರ ಲೋಕಸಭೆ ಉಪ ಚುನಾವಣೆ ಪ್ರಚಾರಕ್ಕೆ ಮಾಗಡಿಗೆ ಬಂದ ಸಮಯದಲ್ಲಿ ಹೇಮಾವತಿ ಯೋಜನೆಗೆ ಚಾಲನೆ ನೀಡುತ್ತೇನೆ ಎಂದು ಭರವಸೆ ನೀಡಿದ್ದರು.
ಅದರಂತೆ ಅಂದಾಜು 325 ಕೋಟಿ ರೂ. ಹಣ ಮಂಜೂರಾತಿ ನೀಡಿದ್ದಾರೆ. ಈಗಾಗಲೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. 20 ರಿಂದ 25 ವರ್ಷಗಳ ಕಾಲ ಎಚ್.ಎಂ.ರೇವಣ್ಣ ಸೇರಿದಂತೆ ವಿವಿಧ ರೈತಪರ, ಸಂಘಟನೆಗಳು ನೀರಾವರಿಗಾಗಿ ಹೋರಾಟ ಮಾಡಿದ ಫಲಕ್ಕೆ ಇನ್ನೂ ಪ್ರತಿಫಲ ದೊರಕದೆ ಇರುವುದು ವಿಪರ್ಯಾಸವೇ ಸರಿ. ಇನ್ನಾದರೂ ಜನಪ್ರತಿನಿಧಿಗಳು ಭಿನ್ನಾರಾಗ ಬಿಡಬೇಕು. ಎಲ್ಲರೂ ಒಗ್ಗಟ್ಟಿನಿಂದ ರೈತಪರವಾದ ಕಾಳಜಿ ವಹಿಸಿದರೆ ಮಾತ್ರ ರೈತರ ಬದುಕು ಹಸನಾಗಲಿದ್ದು, ಬೇಗ ಯೋಜನೆ ಪೂರ್ಣಗೊಂಡರೆ ರೈತರ ಬದುಕು ಹಸನಾಗಲಿದೆ.
* ತಿರುಮಲೆ ಶ್ರೀನಿವಾಸ್