Advertisement

ಮಂಗಳೂರಿನಲ್ಲಿ ಬೈಕ್‌ನಲ್ಲಿ ವೀಲಿಂಗ್‌ ಸ್ಟಂಟ್‌: 6 ಮಂದಿ ಬಂಧನ

12:18 PM Mar 12, 2022 | Team Udayavani |

 ಮಂಗಳೂರು: ಬೈಕ್‌ ನಲ್ಲಿ ವೀಲಿಂಗ್‌ ಸ್ಟಂಟ್‌ ಮಾಡಿದ ಹಿನ್ನೆಲೆಯಲ್ಲಿ 6 ಮಂದಿ ವಿರುದ್ಧ ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಇಲ್ಯಾಸ್‌ ಜಿಯಾನ್‌ ಎಂಬಾತ ಮಾ.1ರಿಂದ 6ರವರೆಗೆ ನೋಂದಣಿ ಸಂಖ್ಯೆ ಇಲ್ಲದ ಬೈಕ್‌ನಲ್ಲಿ ಇಬ್ಬರನ್ನು ಕುಳ್ಳಿರಿಸಿಕೊಂಡು ತೊಕ್ಕೊಟ್ಟು ಓವರ್‌ ಬ್ರಿಡ್ಜ್ ನಿಂದ ಉಳ್ಳಾಲ ಬೈಲ್‌ ವರೆಗೆ ಹಾಗೂ ನಾಗುರಿಯಿಂದ ಸಂಚಾರ ದಕ್ಷಿಣ ಪೊಲೀಸ್‌ ಠಾಣೆಯವರೆಗೆ ವೀಲಿಂಗ್‌ ಸ್ಟಂಟ್‌ ಮಾಡುತ್ತಾ ಅಡ್ಡಾದಿಡ್ಡಿಯಾಗಿ ಇತರ ವಾಹನಗಳು, ಪಾದಚಾರಿಗಳಿಗೆ ಅಪಾಯ ಉಂಟಾಗುವ ರೀತಿಯಲ್ಲಿ ಸವಾರಿ ಮಾಡುತ್ತಿದ್ದ. ಈ ಕುರಿತಾದ ವೀಡಿಯೋವನ್ನು ಮಾ.10ರಂದು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದ. ಇದು ವೈರಲ್‌ ಆಗಿ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿತ್ತು.

ಪೊಲೀಸರು ಇಲ್ಯಾಸ್‌ ಜಿಯಾನ್‌, ಬೈಕ್‌ ಮಾಲಕ ಮತ್ತು ವೀಲಿಂಗ್‌ ಸ್ಟಂಟ್‌ ಅನ್ನು ವೀಡಿಯೋ ಮಾಡಿದ್ದ ಸರ್ಫಾನ್‌ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತರ 3 ಪ್ರಕರಣ ಅಡ್ಯಾರ್‌ ಸಮೀಪ ಮಾ.10ರಂದು ಬೈಕ್‌ನಲ್ಲಿ ವೀಲಿಂಗ್‌ ಮಾಡುತ್ತಿದ್ದ ವೀಡಿಯೋ ವೈರಲ್‌ ಆಗಿ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ವೀಲಿಂಗ್‌ ಮಾಡಿದ ಕಿಶನ್‌ ಶೆಟ್ಟಿ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಳ್ಳಾಲ ನಗರದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಅಪಾಯಕಾರಿಯಾಗಿ ವೀಲಿಂಗ್‌ ಮಾಡುತ್ತಿದ್ದ ತೌಸೀಫ್ ಮಹಮ್ಮದ್‌ ವಿರುದ್ಧ ಹಾಗೂ ವಾಮಂಜೂರು ಪ್ರದೇಶದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವೀಲಿಂಗ್‌ ಮಾಡುತ್ತಿದ್ದ ಮಹಮ್ಮದ್‌ ಆನೀಜ್‌ ವಿರುದ್ಧ ಕೂಡ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next