ಹೊಸಪೇಟೆ: ಅಂಗವಿಕಲ ಪ್ರಯಾಣಿಕರ ಸುರಕ್ಷಿತ ದೃಷ್ಟಿಯಿಂದ ಹೊಸಪೇಟೆ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವ್ಹೀಲ್‌ಚೇರ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಂಗವಿಕಲ ಪ್ರಯಾಣಿಕರು ಮೆಟ್ಟಿಲು ತುಳಿಯದಂತೆ, ವ್ಹೀಲ್‌ಚೇರ್ ಮೂಲಕ ಸುಲಭವಾಗಿ ಬಸ್‌ನೊಳಗೆ ಪ್ರವೇಶ ಮಾಡುವಂತ ಸೌಲಭ್ಯವನ್ನು ಮೊದಲ ಬಾರಿಗೆ ಈಶಾನ್ಯ ಸಾರಿಗೆ ಸಂಸ್ಥೆ ಕೈಗೊಂಡಿದೆ.
70ನೇ ಗಣರಾಜ್ಯೋತ್ಸವ ಸಂಭ್ರಮದ ಅಂಗವಾಗಿ ಈ ಪರಿಸ್ನೇಹಿ ಸೌಲಭ್ಯವನ್ನು ಸಾರಿಗೆ ಸಂಸ್ಥೆ ಲೋಕಾರ್ಪಣೆಗೊಳಿಸಲು ಸಾರಿಗೆ ಸಂಸ್ಥೆ ಮುಂದಾಗಿದ್ದು, ಈಶಾನ್ಯ ವಲಯದಲ್ಲಿಯೇ ಈ ಯೋಜನೆ ಯಶ್ವಸಿಯಾಗಿ ಕಾರ್ಯ ರೂಪಕ್ಕೆ ಬಂದಿದೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಾರಿಗೆ ಬಸ್‌ನಲ್ಲಿ ಪ್ರಯಾಣ ಬೆಳೆಸುವ ಅಂಗವಿಕಲರು, ಪ್ರಯಾಸವಿಲ್ಲದಂತೆ ಸುರಕ್ಷಿತವಾಗಿ ಬಸ್‌ನೊಳಗೆ ತೆರಳಿ ಸುಖಕರ ಪ್ರಯಾಣ ಬೆಳೆಸಬೇಕು ಎಂಬ ಹಿನ್ನ್ನೆಲೆಯಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಹೊಸಪೇಟೆ ಉಪವಿಭಾಗ) ಈ ಸೌಲಭ್ಯವನ್ನು ಜಾರಿಗೆ ತಂದಿದೆ.
ನೇರವಾಗಿ ವ್ಹೀಲ್‌ಚೇರ್ ಬಸ್‌ನಲ್ಲಿ ತೆರಳಲು ಸುಸಜ್ಜಿತವಾದ ಕಬ್ಬಿಣದ ರ್‍ಯಾಂಪ್ ನಿರ್ಮಿಸಿ ರ್‍ಯಾಂಪ್‌ಗೆ ವ್ಹೀಲ್‌ಗಳನ್ನು ಅಳವಡಿಸಲಾಗಿದೆ. ಬಸ್‌ನೊಳಗೆ ತೆರಳಿದ ಬಳಿಕ ವ್ಹೀಲ್‌ಚೇರ್ ಹಾಗೂ ರ್‍ಯಾಂಪ್ ಬಸ್ಸಿನಿಂದ ಹೊರ ತೆಗೆಯಲಾಗುತ್ತದೆ. ಈ ಕಾರ್ಯವನ್ನು ಸಾರಿಗೆ ಸಂಸ್ಥೆ ಸಿಬ್ಬಂದಿಗಳು ನಿರ್ವಹಿಸುತ್ತಾರೆ. ಗುರುವಾರದಿಂದಲೇ ಬಸ್ ನಿಲ್ದಾಣದಲ್ಲಿ (ಜ.24) ಈ ವ್ಹೀಲ್‌ಚೇರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈಗಾಗಲೇ ಹತ್ತಾರು ಅಂಗವಿಕಲ ಪ್ರಯಾಣಿಕರು ವ್ಹೀಲ್‌ಚೇರ್ ಸಹಾಯದಿಂದ ಬಸ್‌ನೊಳಗೆ ತೆರಳಿ ಪ್ರಯಾಣ ಬೆಳಸಿದ್ದಾರೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಶೀನಯ್ಯ ತಿಳಿಸಿದ್ದಾರೆ.
ವಯಸ್ಸಿನ ಜೊತೆಯಲ್ಲಿ ನನಗೆ ಆರೋಗ್ಯ ಕೂಡ ಕ್ಷೀಣವಾಗಿದೆ. ಬಸ್ಸಿನ ಮೆಟ್ಟಿಲು ಹತ್ತಿ ಒಳ ನಡೆಯಲು ನನಗೆ ಶಕ್ತಿ ಆಗುತ್ತಿಲ್ಲ. ಬಸ್‌ನಲ್ಲಿ ಹೇಗೆ ಹತ್ತಬೇಕು ಎಂದು ಚಿಂತನೆಯಲ್ಲಿದ್ದಾಗ ನಿಲ್ದಾಣದಲ್ಲಿದ್ದ ವ್ಹೀಲ್‌ಚೇರ್‌ನ ಮೂಲಕ ನನ್ನನ್ನು ಸಾರಿಗೆ ಸಿಬ್ಬಂದಿಗಳು ಬಸ್‌ನೊಳಗೆ ಕಳುಹಿಸಿದರು. ಈ ವ್ಯವಸ್ಥೆ ವೃದ್ಧರಿಗೆ ಮಾತ್ರವಲ್ಲದೇ, ಅಂಗವಿಕಲರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ತುಂಬ ಅನುಕೂಲ.
•
ಹುಸೇನ್‌ಸಾಬ್, ಪ್ರಯಾಣಿಕರು.
ಸುಪ್ರೀಂ ಕೋರ್ಟ್ ಆದೇಶದ ಹಿನ್ನ್ನೆಲೆಯಲ್ಲಿ ಅಂಗವಿಕಲ ಪ್ರಯಾಣಿಕರಿಗಾಗಿ ಪರಿಸರ ಸ್ನೇಹಿ ಸೌಲಭ್ಯ ಕಲ್ಪಿಸಬೇಕು ಎಂಬ ಉದ್ದೇಶದಿಂದ ಹೊಸಪೇಟೆ ವಿಭಾಗೀಯ ವ್ಯಾಪ್ತಿಯಲ್ಲಿ ವ್ಹೀಲ್‌ಚೇರ್ ವ್ಯವಸ್ಥೆಯನ್ನು ಸಾರಿಗೆ ಸಂಸ್ಥೆ ಕೈಗೊಂಡಿದೆ. ಈಶಾನ್ಯ ವಲಯದಲ್ಲಿ ಪ್ರಥಮ ಬಾರಿಗೆ ಹೊಸಪೇಟೆಯಲ್ಲಿ ಈ ಸೌಲಭ್ಯ ಕಾರ್ಯ ರೂಪಕ್ಕೆ ತರಲಾಗಿದೆ. ಹಂತ, ಹಂತವಾಗಿ ಸಂಡೂರು, ಕೂಡ್ಲಿಗಿ, ಹರಿಬೊಮ್ಮನಹಳ್ಳಿ ಸೇರಿದಂತೆ ವಿಭಾಗೀಯ ವ್ಯಾಪ್ತಿಯಲ್ಲಿ ಈ ಸೌಲಭ್ಯ ಕಲ್ಪಿಸಲಾಗುವುದು.
•ಡಿ.ಶೀನಯ್ಯ,
ವಿಭಾಗೀಯ ನಿಯಂತ್ರಣಾಧಿಕಾರಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹೊಸಪೇಟೆ ಉಪವಿಭಾಗ
ಪಿ.ಸತ್ಯನಾರಾಯಣ