Advertisement

ಗೋಧಿ ಬೆಳೆ ನುಂಗಿ ಹಾಕಿದ ಕಡಲೆ ಪಟ್ಟಿ

12:56 PM Nov 11, 2021 | Team Udayavani |

ಧಾರವಾಡ: ಸಂಪ್ರದಾಯ ಬದ್ಧ ಜವಾರಿ ಕೃಷಿ ಸದ್ದು ಇಲ್ಲದೇ ಬದಲಾಗುತ್ತ ಸಾಗುತ್ತಿರುವುದಕ್ಕೆ ಅನೇಕ ಉದಾಹರಣೆಗಳು ಕಣ್ಣ ಮುಂದಿದ್ದು, ಈ ಪೈಕಿ ಇದೀಗ ಜಿಲ್ಲೆಯ ಗೋಧಿ ಬೆಳೆ ಕೂಡ ತೆರೆಗೆ ಸರಿಯುತ್ತ ಸಾಗಿದೆ. ಹೌದು. ಭತ್ತದ ನೆಲವನ್ನು ಕಬ್ಬು ಅತಿಕ್ರಮಿಸಿದಂತೆ, ರಾಗಿಯ ನೆಲವನ್ನು ಸೋಯಾ-ಅವರೇ ಅತಿಕ್ರಮಿಸಿದಂತೆ, ಆಹಾರ ಬೆಳೆಯಾದರೂ ವಾಣಿಜ್ಯ ಬೆಳೆಗಳಷ್ಟೇ ಆಸೆಯನ್ನು ರೈತರಲ್ಲಿ ಹುಟ್ಟಿಸಿರುವ ಕಡಲೆ ಬೆಳೆ ಇದೀಗ ಹಿಂಗಾರಿಯ ಪ್ರಧಾನ ಬೆಳೆಯಾಗಿ ಜಿಲ್ಲೆಯ ಸಂಪೂರ್ಣ ಪ್ರದೇಶವನ್ನು ಅತಿಕ್ರಮಿಸಿಕೊಳ್ಳುತ್ತಿದೆ.

Advertisement

ಅಷ್ಟೇಯಲ್ಲ ಪ್ರತಿ ಮನೆಯಲ್ಲೂ ಬೆಳಗಿನ ನಾಷ್ಟಾ ಪೌಷ್ಟಿಕ ಭರಿತ ಉಪ್ಪಿಟ್ಟು ಮಾಡುವ ಜವಾರಿ ತಳಿಯ ಗೋಧಿ ಬೆಳೆ ಸಂಪೂರ್ಣ ಮಾಯವಾಗುತ್ತಿದೆ. 2010 ರಲ್ಲಿ ಅಂದರೆ ಸರಿಯಾಗಿ ಹತ್ತು ವರ್ಷಗಳ ಹಿಂದಷ್ಟೇ ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದ ಗೋಧಿ ಬೆಳೆ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಲೇ ಬಂದಿದ್ದು, ಈ ವರ್ಷದ 2021ನೇ ಸಾಲಿನ ಹಿಂಗಾರಿ ಬೆಳೆಯಾಗಿ ಬರೀ 12 ಸಾವಿರ ಎಕರೆ ಪ್ರದೇಶಕ್ಕೆ ಸೀಮಿತವಾಗಿದೆ. ಅಪ್ಪಟ ಜವಾರಿ ಆಹಾರದ
ಬೆಳೆಯೊಂದು ಸದ್ದುಗದ್ದಲವಿಲ್ಲದೇ ನೇಪತ್ಯಕ್ಕೆ ಸರಿಯುತ್ತಿದೆ ಎನಿಸುತ್ತಿದೆ.

ಖರ್ಚು ಮತ್ತು ಆಳಿನ ಕೊರತೆ : ಗೋಧಿ ಬೆಳೆ ಜಿಲ್ಲೆಯ ಅದರಲ್ಲೂ ಧಾರವಾಡ, ನವಲಗುಂದ, ಹುಬ್ಬಳ್ಳಿ, ಅಣ್ಣಿಗೇರಿ ತಾಲೂಕಿನಲ್ಲಿ ಹಿಂಗಾರಿಯಲ್ಲಿ ಅತ್ಯಂತ ಪ್ರಧಾನ ಬೆಳೆಯಾಗಿತ್ತು. 2010ರಲ್ಲಿ ಜಿಲ್ಲೆಯಲ್ಲಿ ಒಟ್ಟು 46 ಸಾವಿರ ಎಕರೆ ಪ್ರದೇಶದಲ್ಲಿ ಗೋಧಿ ಬೆಳೆಯಲಾಗಿತ್ತು. ನಂತರದ ವರ್ಷಗಳಲ್ಲಿ ಗೋಧಿ ಬೆಳೆಯುವುದನ್ನು ರೈತರು ಕಡಿಮೆ ಮಾಡುತ್ತಲೇ ಬರುತ್ತಿದ್ದಾರೆ.

ಒಕ್ಕಲು ಮತ್ತು ಆಳಿನ ಕೊರತೆಯೇ ಗೋಧಿ ಬೆಳೆಯಿಂದ ರೈತರು ಹಿಂದಕ್ಕೆ ಸರಿಯಲು ಪ್ರಮುಖ ಕಾರಣವಾಗಿದೆ. ಗೋಧಿ ಬೆಳೆ ಬಿತ್ತನೆಯಿಂದ ಹಿಡಿದು ಬೆಳೆದು ಅದನ್ನು ಒಕ್ಕಲು ಮಾಡಿ ಮಾರುಕಟ್ಟೆಗೆ ಸಾಗಿಸುವವರೆಗೂ ಕೆಲಸ- ನಿರ್ವಹಣೆ ಅಗತ್ಯವಿದೆ. ಒಕ್ಕಲು ಸಂದರ್ಭದಲ್ಲಂತೂ ಗೋಧಿಯನ್ನು ಮೂರ್‍ನಾಲ್ಕು ಬಾರಿ ಹಂತ ಹಂತವಾಗಿ ಬೇರ್ಪಡಿಸಿ ಒಕ್ಕಲು ಮಾಡಬೇಕು. ಅದಕ್ಕೆ ಯಂತ್ರಗಳ ಸಹಾಯಬೇಕು. ಮಿತಿಮೀರಿದ ಶ್ರಮ ಹಾಕುವ ಅಗತ್ಯವಿದೆ. ಇದೆಲ್ಲದಕ್ಕೂ ರೈತರು ಸಾಕಷ್ಟು ಖರ್ಚು ಮಾಡಬೇಕು. ಖರ್ಚು ಮಾಡಲು ಸಜ್ಜಾಗಿದ್ದರೂ ಕೃಷಿ ಕೂಲಿಯಾಳುಗಳ ಕೊರತೆ ಕಾಡುತ್ತಿದೆ. ಹೀಗಾಗಿ ರೈತರು ಗೋಧಿ ಬೆಳೆಯುವುದನ್ನೇ ತಿರಸ್ಕರಿಸುತ್ತಿದ್ದಾರೆ.

ಕಡಲೆಗೆ ಜೈ ಜೈ: ಈ ಮಧ್ಯೆ ಗೋಧಿ ಬೈ ಬೈ ಹೇಳುವ ರೈತ ಸಮೂಹ ನೇರವಾಗಿ ಗೋಧಿಗೆ ಪರ್ಯಾಯವಾಗಿ ಕಡಲೆ ಬೆಳೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಕ್ಟೋಬರ್‌ ತಿಂಗಳಿನಲ್ಲಿ ಬಿತ್ತನೆಯಾಗಿ ಕೇವಲ 40-60 ದಿನಗಳಲ್ಲಿ ಪೊಗರುದಸ್ತಾಗಿ ಬೆಳೆದು ನಿಲ್ಲುವ ಹೈಬ್ರಿಡ್‌ ತಳಿಯ ಕಡಲೆಗೆ ರೈತರು ಹೆಚ್ಚು ಒತ್ತು ನೀಡುತ್ತಿದ್ದಾರೆ. ಕಾರಣ ಹಸಿ ಕಡಲೆ ಮಾರಾಟ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ರೈತರ ಕಡಲೆ ಹೊಲ(ಪಟ್ಟಿ) ಗಳನ್ನೇ ದಲ್ಲಾಳಿಗರು ನೇರವಾಗಿ ಹಣ ಕೊಟ್ಟು ಕೊಂಡುಕೊಳ್ಳುತ್ತಿದ್ದಾರೆ. ಹೀಗಾಗಿ ಕಳೆದ ಐದಾರು ವರ್ಷಗಳಿಂದ ಇತ್ತೀಚೆಗಂತೂ ಹಿಂಗಾರಿಯಲ್ಲಿ ಕರಿ ಮಣ್ಣಿನ ಹೊಲಗಳ ಬೆಳವಲು ನಾಡಿನ ಜನರೆಲ್ಲರೂ ಕೂಡ ಕಡಲೆಬೆಳೆಗೆ ಜೈ ಜೈ ಎನ್ನುತ್ತಿದ್ದಾರೆ.

Advertisement

ಹೆಚ್ಚುತ್ತಿದೆ ಕೀಟ ಕಾಟ: ಗೋಧಿ ಬೆಳೆಗೆ ಹೋಲಿಸಿದರೆ ಕಡಲೆ ಬೆಳೆಗೆ ಅತಿಯಾಗಿ ರಾಸಾಯನಿಕ ಸಿಂಪರಣೆ ರೈತರಿಗೆ ಅನಿವಾರ್ಯವಾಗಿ ಹೋಗಿದೆ. ಗೋಧಿಗೆ ಯಾವುದೇ ಕ್ರಿಮಿನಾಶಕ ಬಳಸುತ್ತಿರಲಿಲ್ಲ. ಆದರೆ ಕಡಲೆ ಬೆಳೆಗೆ ವರ್ಷದಿಂದ ವರ್ಷಕ್ಕೆ ಕೀಟಗಳು, ದೊಣ್ಣೆಹುಳುವಿನ ಕಾಟ ಅಷ್ಟೇಯಲ್ಲ, ಫಂಗಸ್‌ (ಹುಳಿ ಜಿಡ್ಡು) ರೋಗ ಹೆಚ್ಚುತ್ತಿದೆ. ಇದರಿಂದ ಹೊರಗೆ ಬರಲು ಮತ್ತು ಬೆಳೆಯನ್ನು ರಕ್ಷಿಸಿಕೊಳ್ಳಲು ಸಾಮಾನ್ಯವಾಗಿ ಎಲ್ಲಾ ರೈತರು ವಿಪರೀತ ಕ್ರಿಮಿನಾಶಕ ಬಳಸುವುದು ಅನಿವಾರ್ಯವಾಗುತ್ತಿದೆ.

ಜನ-ಜನುವಾರುವಿಗೂ ಪೌಷ್ಟಿಕತೆ
ಗೋಧಿ ಮತ್ತು ಕಡಲೆ ಎರಡು ಕೂಡ ಉತ್ತಮ ಪೌಷ್ಟಿಕತೆಯ ಆಗರವೇ ಆಗಿವೆ. ಕಡಲೆಗೆ ರಾಸಾಯನಿಕಗಳ ಹಾವಳಿ ಹೆಚ್ಚಾಗಿದೆ. ಆದರೆ ಗೋಧಿ ಬೆಳೆ ಗ್ರಾಮೀಣರ ಪೌಷ್ಟಿಕ ಆಹಾರಗಳ ಪೈಕಿ ಒಂದು. ಗ್ರಾಮಗಳಲ್ಲಿ ಗೋಧಿ ಹುಗ್ಗಿ, ಚಪಾತಿ ಸೇರಿದಂತೆ ಅನೇಕ ಭಕ್ಷéಬೋಜನಗಳನ್ನು ಇದರಿಂದ ಸಿದ್ಧಗೊಳಿಸಿ ತಿನ್ನುತ್ತಾರೆ. ಧಾರವಾಡ ಜಿಲ್ಲೆಯಲ್ಲಿ ಬೆಳೆಯುವ ಸ್ವರ್ಣಾ ತಳಿ ಸೇರಿದಂತೆ ಅನೇಕ ದೇಶಿ ತಳಿಗಳು ಪೌಷ್ಟಿಕತೆಯ ಆಗರವೇ ಆಗಿವೆ. ಆದರೆ ಇದೀಗ ಇವು ಹೊಲದಿಂದ ಕಣ್ಮರೆಯಾಗುತ್ತಿರುವುದು ಮಾತ್ರ ಅಪೌಷ್ಟಿಕತೆಗೆ ಮುನ್ನುಡಿ ಬರೆದಂತೆ ಎನಿಸುತ್ತಿದೆ. ಗೋಧಿಯನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ಒಕ್ಕಲು ಮಾಡುವಾಗ ಬರುವ ಹೊಟ್ಟು ಅತ್ಯಂತ ಉತ್ತಮ ಗುಣಮಟ್ಟದ್ದಾಗಿರುತ್ತದೆ. ಇದು ಜಾನುವಾರುಗಳಿಗೆ ಉತ್ತಮ ಹೊಟ್ಟು ಮೇವು ಕೂಡ.

ಪ್ರಸಕ್ತ ವರ್ಷ ಅತೀ ಹೆಚ್ಚು ಅಂದರೆ 80 ಸಾವಿರ ಹೆಕ್ಟೇರ್‌ನಲ್ಲಿ ಕಡಲೆ ಬೆಳೆಯಲಾಗಿದೆ. ರೈತರು ತಮಗೆ ಲಾಭವೆನಿಸಿದ ಬೆಳೆ ಬೆಳೆಯುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಗೋಧಿ ಸಂಪೂರ್ಣ ಕೈ ಬಿಟ್ಟಿಲ್ಲ 11 ಸಾವಿರ ಹೆಕ್ಟೇರ್‌ನಷ್ಟು ಬಿತ್ತನೆಯಾಗಿದೆ.
ರಾಜಶೇಖರ್‌, ಜಂಟಿ ಕೃಷಿ
ನಿರ್ದೇಶಕರು,ಧಾರವಾಡ ಜಿಲ್ಲೆ

ಗೋಧಿಗೆ ಖರ್ಚು ವೆಚ್ಚ ಮತ್ತು ಒಕ್ಕಲು ಪ್ರಕ್ರಿಯೆ ಕಿರಿಕಿರಿಗೆ ಹೊಂದಾಣಿಕೆಯಾಗುತ್ತಿಲ್ಲ. ಹೀಗಾಗಿ ಗೋಧಿಯನ್ನು ಕೈ ಬಿಟ್ಟು ಕಡಲೆ ಬಿತ್ತನೆ ಮಾಡಿದ್ದೇವೆ. ಗೋಧಿಯನ್ನು ನಮ್ಮ ಮನೆಗೆ ಬೇಕಾಗುವಷ್ಟು ಮಾತ್ರ ಬೆಳೆದುಕೊಳ್ಳುತ್ತಿದ್ದೇವೆ ಅಷ್ಟೇ.
ಸಿದ್ದಪ್ಪ ನರಗುಂದ,
ಯಾದವಾಡ ರೈತ.

*ಡಾ.ಬಸವರಾಜ ಹೊಂಗಲ್

Advertisement

Udayavani is now on Telegram. Click here to join our channel and stay updated with the latest news.

Next