ನವದೆಹಲಿ: ಸಾಮಾಜಿಕ ಜಾಲತಾಣವಾದ ವ್ಯಾಟ್ಸಪ್(Whatsapp) ಮತ್ತು ಅದರ ಪೋಷಕ ಕಂಪನಿಯಾದ ಮೆಟಾ(Meta) ಭಾರತದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸುವ ಕುರಿತ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಇತ್ತೀಚೆಗೆ ರಾಜ್ಯಸಭೆಯಲ್ಲಿ ಅಶ್ವಿನ್ ವೈಷ್ಣವ್ ಅವರಿಗೆ ಕೇಳಲಾದ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದಾರೆ. ಭಾರತದಲ್ಲಿ ವಾಟ್ಸಪ್(Whatsapp) ಸೇವೆಯನ್ನು ಸ್ಥಗಿತಗೊಳಿಸುವ ಬಗ್ಗೆ ಸರ್ಕಾರಕ್ಕೆ ಯಾವುದೇ ಮಾಹಿತಿ ಕೊಟ್ಟಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸಂಸದ ವಿವೇಕ್ ಟಂಖಾ ಅವರು ವಾಟ್ಸಪ್(Whatsapp) ಕುರಿತ ಕೇಳಿದ ಪ್ರಶ್ನೆಗೆ ದಾಸ್ ಅವರು ಲಿಖಿತ ಉತ್ತರ ನೀಡಿರುವುದಾಗಿ ಪಿಟಿಐ ವರದಿ ತಿಳಿಸಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000, ಸೆಕ್ಷನ್ 69A ಪ್ರಕಾರ ಬಳಕೆದಾರರ ವಿವರವನ್ನು ಹಂಚಿಕೊಳ್ಳುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ವಾಟ್ಸಪ್ ಭಾರತದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸುವ ಚಿಂತನೆ ನಡೆಸಿದೆಯೇ ಎಂದು ಟಂಖಾ ಪ್ರಶ್ನಿಸಿದ್ದರು.
ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಯ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ, ವಾಟ್ಸಪ್(Whatsapp) ಸಂಸ್ಥೆಗೆ ಮಾಹಿತಿ ಹಂಚಿಕೊಳ್ಳುವಂತೆ ನಿರ್ದೇಶನ ನೀಡಿರುವುದಾಗಿ ಮಾಹಿತಿ ತಂತ್ರಜ್ಞಾನ ಸಚಿವ ಅಶ್ಚಿನ್ ಹೇಳಿದರು.
ಒಂದು ವೇಳೆ ಕೇಂದ್ರ ಸರ್ಕಾರ ಸಂದೇಶಗಳ ಎನ್ ಕ್ರಿಪ್ಶನ್ ಅನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರೆ ನಾವು ಭಾರತದಲ್ಲಿ ನಮ್ಮ(ವಾಟ್ಸಪ್) ಸೇವೆಯನ್ನು ಸ್ಥಗಿತಗೊಳಿಸುತ್ತೇವೆ ಎಂದು ಹೈಕೋರ್ಟ್ ನ ವಿಚಾರಣೆ ವೇಳೆ ತಿಳಿಸಿತ್ತು.