Advertisement

ರೌಡಿಗಳ ಹೆಡೆಮುರಿ ಕಟುವುದೇ ಖಾಕಿ?

11:19 AM Oct 04, 2018 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಸುಮಾರು 9,000 ರೌಡಿ ಶೀಟರ್‌ಗಳಿದ್ದಾರೆ! ಹಾಗಾಗಿ ಹೆಚ್ಚುತ್ತಿರುವ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಪ್ರಕ್ರಿಯೆ ಚುರುಕು ಗೊಂಡಿದೆ. ಕಳೆದ ಆರು ತಿಂಗಳಿನಿಂದ ಆರಂಭವಾಗಿರುವ ಈ
ಕೆಲಸ ವಿಧಾನಸಭೆ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾದ ಬಳಿಕ ಮತ್ತಷ್ಟು ಬಿರುಸುಗೊಂಡಿದ್ದು,
ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿ ರುವವರು ಸರಿದಾರಿಗೆ ಬರದಿದ್ದಲ್ಲಿ ಅಂಥವರಿಗೆ ಗುಂಡಿನ
ರುಚಿ ತೋರಿಸಿ ನಿಗ್ರಹಿಸಲು ಪೊಲೀಸರು ಮುಂದಾಗಿದ್ದಾರೆ.

Advertisement

ಇದಕ್ಕೆ ಉದಾಹರಣೆ ಎಂಬಂತೆ ಕಳೆದ ಐದಾರು ತಿಂಗಳಲ್ಲಿ ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗಿಕೊಂಡು
ಪೊಲೀಸರಿಗೇ ಬೆದರಿಕೆಯೊಡ್ಡಿರುವ 28 ಮಂದಿಯ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿದ್ದು, ಆ ಮೂಲಕ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಆರು ತಿಂಗಳ ಹಿಂದೆ ನಗರದಲ್ಲಿ ಸಮಾಜ ಘಾತುಕ ಶಕ್ತಿಗಳು ಪೊಲೀಸರ ರೈಫ‌ಲ್‌ ಕಸಿದು ಪರಾರಿಯಾದ ಘಟನೆ ಬಳಿಕ ಪೊಲೀಸರಿಗೆ ತಮಗೆ ಒದಗಿಸಿರುವ ಆಯುಧ ಬಳಸಲು ಸ್ವಲ್ಪ ಅವಕಾಶ ಸಿಕ್ಕಿತ್ತು. “ಪೊಲೀಸರಿಗೆ ಇಲಾಖೆ
ಪಿಸ್ತೂಲ್‌ ಕೊಟ್ಟಿರುವುದು ಜನರಿಗೆ ಕಂಟಕಪ್ರಾಯ ರಾಗಿರುವವರ ವಿರುದ್ಧ ಬಳಸಲೇ ಹೊರತು ತಮ್ಮ ಸೊಂಟದ
ಪಟ್ಟಿಯಲ್ಲಿಟ್ಟುಕೊಳ್ಳಲು ಅಲ್ಲ’ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ರಾಜು ಖಡಕ್‌ ಸೂಚನೆ
ಕೊಟ್ಟಿದ್ದ ಬೆನ್ನಲ್ಲೇ ಪೊಲೀಸರ ಪಿಸ್ತೂಲ್‌ಗ‌ಳು ಸದ್ದು ಮಾಡಲಾರಂಭಿಸಿದವು.

ಪರೇಡ್‌ ಸರದಿ: ಇನ್ನೊಂದೆಡೆ ರೌಡಿಗಳ ಪೆರೇಡ್‌ ನಡೆಸುವ ಮೂಲಕವೂ ಅವರನ್ನು ನಿಯಂತ್ರಿಸುವ ಕೆಲಸ ಕೂಡ
ಆರಂಭವಾಗಿದೆ. ಇತ್ತೀಚೆಗಂತೂ ಅದು ತೀವ್ರಗೊಂಡಿದ್ದು, ಕೇಂದ್ರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ
ಅಲೋಕ್‌ ಕುಮಾರ್‌ ರೌಡಿಗಳ ಪರೇಡ್‌ ನಡೆಸಿ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಮತ್ತೂಂದೆಡೆ ರೌಡಿಗಳ ದೌರ್ಜನ್ಯ
ಕುರಿತು ದೂರು ನೀಡಲು ಟೋಲ್‌ ಫ್ರೀ ನಂಬರ್‌ ತೆರೆಯಲಾಗಿದೆ. ಈ ಮೂಲಕ ರೌಡಿಗಳ ಚಟುವಟಿಕೆಗಳನ್ನು
ಮಟ್ಟ ಹಾಕಲು ನಗರ ಪೊಲೀಸರು ಟೊಂಕಕಟ್ಟಿ ನಿಂತಿದ್ದಾರೆ.

ನಗರದ ರೌಡಿಶೀಟರ್‌ಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಪ್ರಮುಖವಾಗಿ ಜಮೀನು ವ್ಯಾಜ್ಯಗಳು, ರಿಯಲ್‌ ಎಸ್ಟೇಟ್‌ ದಂಧೆ, ಹಫ್ತಾ ವಸೂಲಿಯಲ್ಲಿ ತೊಡಗಿರುವುದು ಕಂಡುಬಂದಿದೆ. ಒಳವರ್ತುಲ ರಸ್ತೆ ಹಾಗೂ ಹೊರ ವರ್ತುಲ ರಸ್ತೆಗಳಲ್ಲಿ ದರೋಡೆ ಎಸಗುತ್ತಿರುವ ರೌಡಿಗಳು ಅಪ್ರಾಪ್ತ ಯುವಕರನ್ನು ತಮ್ಮ ಕೃತ್ಯಗಳಿಗೆ ಬಳಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲದೆ, ತಕಾರರು ಇರುವಂತಹ ಜಮೀನುಗಳ ಮಾಲೀಕರ ಮೇಲೆ ದೌರ್ಜನ್ಯವೆಸಗಿ, ಬಳಿಕ ತಮ್ಮ ಹೆಸರಿನಲ್ಲಿಯೇ ದಾಖಲೆಗಳನ್ನು ಸೃಷ್ಟಿಸಿಕೊಂಡು ಹಣ ಸಂಪಾದಿಸುತ್ತಿದ್ದಾರೆ.

Advertisement

ನಗರ ಕಮಿಷನರೇಟ್‌ ವ್ಯಾಪ್ತಿಯ 8 ವಲಯಗಳ ಪೈಕಿ ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ವೈಟ್‌ಫೀಲ್ಡ್, ಈಶಾನ್ಯ
ವಲಯಗಳಲ್ಲಿಯೇ ರೌಡಿಗಳ ಹಾವಳಿ ಹೆಚ್ಚಾಗಿದೆ. ರೌಡಿಗಳು ರಿಯಲ್‌ ಎಸ್ಟೇಟ್‌ ದಂಧೆಯ ಜತೆಗೆ ರಾಜಕೀಯ ಮುಖಂಡರ ಜತೆ ಗುರುತಿಸಿಕೊಂಡು ತಮ್ಮ ಪ್ರಭಾವದಿಂದ ಸಾರ್ವಜನಿಕರ ಮೇಲೆ ದಬ್ಟಾಳಿಕೆ ನಡೆಸುತ್ತಿದ್ದಾರೆ ಎಂಬ
ಆರೋಪವಿದೆ.

ಬೀಟ್‌ ವ್ಯವಸ್ಥೆ ಕಡ್ಡಾಯ: ನಗರ ಪೊಲೀಸರು ಪ್ರತಿ ಬೀಟ್‌ ಸಿಬ್ಬಂದಿ ತಮ್ಮ ಸುಪರ್ದಿಯಲ್ಲಿರುವ ಪ್ರದೇಶಗಳಲ್ಲಿ ವಾಸವಾಗಿರುವ ಗಣ್ಯರು, ಅಪರಾಧ ಹಿನ್ನೆಲೆಯುಳ್ಳವರು, ರೌಡಿಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ರೌಡಿಗಳ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕು. ಜತೆಗೆ ರೌಡಿಪಟ್ಟಿಯಲ್ಲಿರುವ ವ್ಯಕ್ತಿ ಪ್ರತಿ 15 ದಿನಕ್ಕೊಮ್ಮೆ ಆಯಾ ಠಾಣೆಗೆ ಹಾಜರಾಗಿ ಸಹಿ ಮಾಡಬೇಕು. ಪ್ರಮುಖವಾಗಿ ತಮ್ಮ ಆದಾಯ ಮೂಲದ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.

9 ಸಾವಿರ ರೌಡಿಶೀಟರ್‌ಗಳು: ಬೆಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸುಮಾರು 9 ಸಾವಿರ ರೌಡಿಶೀಟರ್‌ಗಳಿದ್ದು,
ಪ್ರತಿ ರೌಡಿಯ ಚಟುವಟಿಗೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಆಯಾ ವಲಯದ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಮುಖವಾಗಿ ರಿಯಲ್‌ ಎಸ್ಟೇಟ್‌, ಸಂಘಟನೆಗಳನ್ನು ಕಟ್ಟಿಕೊಂಡು ಅಮಾಯಕರ ಮೇಲೆ ದಬ್ಟಾಳಿಕೆ ನಡೆಸುವವರ ವಿರುದ್ಧವೂ ಕಾರ್ಯಾಚರಣೆ ನಡೆಯುತ್ತಿದೆ. ಕೆಲ ರೌಡಿಗಳು ಕೋಟ್ಯಂತರ ರೂ. ಹಣ ಮಾಡಿಕೊಂಡು ಸಮಾಜಘಾತುಕ ಕೃತ್ಯಗಳಲ್ಲಿ ತೊಡಗುತ್ತಿದ್ದು, ಇವರ ಬಗ್ಗೆಯೂ ನಿಗಾವಹಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ರೌಡಿ ನಿಗ್ರಹಕ್ಕೆ ಸಿಬ್ಬಂದಿ ಕೊರತೆ: ಕೇಂದ್ರ ಅಪರಾಧ ವಿಭಾಗದಲ್ಲಿರುವ ಸಂಘಟಿತ ಅಪರಾಧ ದಳ ಅಥವಾ ರೌಡಿ
ನಿಗ್ರಹ ಪಡೆ ನಗರದ ಪ್ರತಿ ರೌಡಿಶೀಟರ್‌ ಚಟುವಟಿಕೆಗಳ ಬಗ್ಗೆ ನಿಗಾವಹಿಸಬೇಕು. ಆದರೆ, ಸಿಬ್ಬಂದಿ ಕೊರತೆಯಿಂದ ಇದು ಸಾಧ್ಯವಾಗುತ್ತಿಲ್ಲ. ಮತ್ತೂಂದೆಡೆ ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚು ಅಪರಾಧ ಕೃತ್ಯಗಳಲ್ಲಿ ತೊಡಗುವ
ವ್ಯಕ್ತಿಗಳ ವಿರುದ್ಧ ರೌಡಿಪಟ್ಟಿ ತೆರೆದು, ಗೂಂಡಾಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗುತ್ತಿದೆ. ಆರಂಭದಲ್ಲಿ ಇಂತಹ
ವ್ಯಕ್ತಿಗಳ ಬಗ್ಗೆ ನಿಗಾವಹಿಸುವ ಓಸಿಡೂ ನಂತರ ಕೆಲಸದೊತ್ತಡದಿಂದ ನಿರ್ಲಕ್ಷ್ಯ ತೋರುತ್ತಿದೆ.

ಈ ಹಿನ್ನೆಲೆಯಲ್ಲಿ ಸಿಸಿಬಿಯಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದ್ದು, ಹೆಚ್ಚುವರಿ ಸಿಬ್ಬಂದಿ ನೀಡುವಂತೆ ಹಿರಿಯ ಅಧಿಕಾರಿಗಳಿಗೆ
ಹತ್ತಾರು ಬಾರಿ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಈ ಮಧ್ಯೆಯೂ ಕೆಲ ತಿಂಗಳಲ್ಲಿ ಈ ದಳ
ಕೆಲ ರೌಡಿಶೀಟರ್‌ಗಳ ಮೇಲೆ ಗುಂಡಿನ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. 

ಪ್ರತಿ ನಿತ್ಯ 10ಕ್ಕೂ ಹೆಚ್ಚು ಕರೆಗಳು ರೌಡಿ ಚಟುವಟಿಕೆ, ಹಫ್ತಾ ವಸೂಲಿಯಂತಹ ಅಪರಾಧ ಚಟುವಟಿಕೆಗಳ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆಯಲು ಸಿಸಿಬಿ ಪೊಲೀಸರು ತೆರೆದಿರುವ 94808 01555 ಟೋಲ್‌ ಫ್ರೀ ಸಂಖ್ಯೆಗೆ ಪ್ರತಿ ನಿತ್ಯ 10ಕ್ಕೂ ಹೆಚ್ಚು ಕರೆ ಬರುತ್ತಿದ್ದು, ಕೂಡಲೇ ಅಂತಹ ದೂರುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಸ್ಥಳೀಯ ಠಾಣೆಗಳಿಗೂ ಮಾಹಿತಿ ನೀಡಿ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ನಗರದಲ್ಲಿ ರೌಡಿ ಚಟುವಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ. ಜತೆಗೆ ರೌಡಿಗಳ ದೌರ್ಜನ್ಯ ತಡೆಯಲು ಟೋಲ್‌ ಫ್ರೀ ನಂಬರ್‌ ಕೂಡ ತೆರೆಯಲಾಗಿದೆ.
  ಅಲೋಕ್‌ ಕುಮಾರ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ (ಸಿಸಿಬಿ)

ಪುಂಡ ರೌಡಿಗಳಿಗೆ ಗುಂಡೇಟಿನ ರುಚಿ ಬಂಧಿಸಲು ತೆರಳಿದ ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಮುಂದಾ
ಗುತ್ತಿರುವ ರೌಡಿಗಳಿಗೆ ನಗರ ಪೊಲೀಸರು ಗುಂಡೇಟಿನ ರುಚಿ ತೋರಿಸಿ ಉತ್ತರ ನೀಡಿ ಬಂಧಿಸಿದ್ದಾರೆ. ಜನವರಿಯಿಂದ ಇದುವರೆಗೂ ಮಧ್ಯಪ್ರದೇಶ ಭಿಲ್‌ ಗ್ಯಾಂಗ್‌, ಕುಖ್ಯಾತ ರೌಡಿ ಶೀಟರ್‌ ಸೈಕಲ್‌ ರವಿ, ನಟೋರಿಯಸ್‌ ಸರ ಚೋರ
ಅಚ್ಯುತ್‌ಕುಮಾರ್‌, ಬವೇರಿಯಾ ಗ್ಯಾಂಗ್‌ನ ರಾಮ್‌ಸಿಂಗ್‌ ಸೇರಿ 20ಕ್ಕೂ ಹೆಚ್ಚು ರೌಡಿಗಳಿಗೆ ಬಂದೂಕಿನ ಮೂಲಕವೇ ಉತ್ತರ ನೀಡಿ ಹೆಡೆಮುರಿ ಕಟ್ಟಿದ್ದಾರೆ.

 ಮೋಹನ್‌ ಭದ್ರಾವತಿ/ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next