ಮಣಿಪಾಲ: ಸರಕಾರ ವಿವಿಧ ಯೋಜನೆಯಡಿ ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ನೀಡುವ ಅನುದಾನಗಳನ್ನುಸಮರ್ಪಕವಾಗಿ ಬಳಸಿಕೊಂಡು ಶೇ. ನೂರರಷ್ಟು ಅನುಷ್ಠಾನಗೊಳಿಸಬೇಕು ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿ.ಪಂ.ನ ಡಾ| ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಸೂಚನೆ ನೀಡಿದರು.
ಕರಾವಳಿ ಭಾಗದ ಸ್ಥಳೀಯ ಸಂಸ್ಥೆಗಳು ಇತರ ಜಿಲ್ಲೆಗಳಿಗೆ ಹೋಲಿಸಿದ್ದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸರಕಾರ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಯಥಾವತ್ತಾಗಿ ಸರಕಾರದ ಮಾರ್ಗಸೂಚಿಯನ್ವಯ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುವುದರೊಂದಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ ರಾಜ್ಯಕ್ಕೆ ಮಾದರಿಯಾಗಬೇಕು ಎಂದರು.
ಆಸ್ತಿ ತೆರಿಗೆ ವಸೂಲಾತಿಯಲ್ಲಿ ಬೈಂದೂರು, ಕುಂದಾಪುರ ಸ್ಥಳೀಯ ಸಂಸ್ಥೆಗಳು ಹಿಂದಿವೆ. ಇಲ್ಲಿ ಆದ್ಯತೆ ಮೇರೆಗೆ ತೆರಿಗೆ ವಸೂಲಿ ಆಗಬೇಕು. ಮಾಲಕರು ಮನೆ ನಿರ್ಮಾಣ ಮಾಡಿದ ಸಂದರ್ಭದಲ್ಲಿ ಇರುವ ಕಟ್ಟಡಕ್ಕೆ ತೆರಿಗೆಯನ್ನು ಮೊದಲೇ ಎರಡು-ಮೂರು ವರ್ಷಗಳ ಕಾಲ ಕಟ್ಟಿರುತ್ತಾರೆ. ಅನಂತರದಲ್ಲಿ ಅವುಗಳನ್ನು ವಿಸ್ತರಿಸಿ 1ನೇ, 2ನೇ ಮಹಡಿ ಕಟ್ಟಿದರೂ ಹಳೆಯ ತೆರಿಗೆಯನ್ನೇ ಪಾವತಿ ಮಾಡುತ್ತಿರುತ್ತಾರೆ. ಇದರಿಂದ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ವಂಚನೆ ಉಂಟಾಗುತ್ತದೆ. ಈ ಬಗ್ಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಪರಿಶೀಲಿಸಿ, ಕಟ್ಟಡದ ವಿಸ್ತೀರ್ಣಕ್ಕೆ ಅನುಗುಣವಾಗಿ ತೆರಿಗೆ ವಸೂಲಿ ಮಾಡಬೇಕು ಎಂಬ ಸೂಚನೆ ನೀಡಿದರು.
ಪಾರಂಪರಿಕ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಪ್ರಾರಂ ಭಿಸಲು ಸ್ಥಳೀಯ ಸಂಸ್ಥೆಗಳಿಗೆ ಅನುದಾನ ನೀಡಿದೆ. ಇದಕ್ಕೆ ಅಗತ್ಯವಿರುವ ಭೂಮಿಯನ್ನು ಗುರುತಿಸಿ, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಕರೆದು ವಿಲೇವಾರು ಘಟಕದ ಕಾಮಗಾರಿ ಪ್ರಾರಂಭಿಸಿ, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಗೆ ಮುಂದಾಗಬೇಕು ಎಂದರು.
15ನೇ ಹಣಕಾಸಿನಲ್ಲಿ ಬಂದಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಕಾಪು, ಕಾರ್ಕಳ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಅಮೃತ್ ಯೋಜನೆಯಡಿ ಕುಡಿಯುವ ನೀರು ಸೌಲಭ್ಯ ಕಲ್ಪಿಸುವ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಬೈಂದೂರು ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಅನುಷ್ಠಾನ ತುಂಬಾ ಹಿಂದಿದೆ. ಆದ್ಯತೆಯ ಮೇಲೆ ಇದನ್ನು ಸರಿಪಡಿಸಬೇಕು. ಉದ್ದಿಮೆದಾರರಿಗೆ ಸ್ಥಳೀಯ ಸಂಸ್ಥೆಗಳು 5 ವರ್ಷಕ್ಕೊಮ್ಮೆ ಪರವಾನಿಗೆ ನೀಡಲು ಸರಕಾರದ ಆದೇಶ ನೀಡಿದೆ. ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಮಾಹಿತಿಯನ್ನು ಅವರಿಗೆ ನೀಡಬೇಕು. ವರ್ಷಕ್ಕೊಮ್ಮೆ ಪರವಾನಿಗೆ ನವೀಕರಣ ಮಾಡುವುದನ್ನು ಬಿಡಬೇಕು.
ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಜಿ.ಪಂ.ಸಿಇಒ ಪ್ರತೀಕ್ ಬಾಯಲ್, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಲಿಕಟ್ಟಿ, ಆಪ್ತ ಕಾರ್ಯದರ್ಶಿ ಡಾ| ಕೆ.ಮುರುಳೀಧರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರವೀಂದ್ರ, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.