Advertisement

By Polls: ವಿಧಾನ ಪರಿಷತ್‌ ಉಪಚುನಾವಣೆ: ಅಂತಿಮ ಕಣದಲ್ಲಿ ನಾಲ್ವರು ಅಭ್ಯರ್ಥಿಗಳು

06:06 PM Oct 07, 2024 | Team Udayavani |

ಮಂಗಳೂರು: ವಿಧಾನ ಪರಿಷತ್‌ಗೆ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ನಡೆಯುವ ಉಪಚುನಾವಣೆಗೆ ನಾಲ್ಕು ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಮುಹಮ್ಮದ್ ರಿಯಾಝ್ (ಪಕ್ಷೇತರ) ತಮ್ಮ ನಾಮಪತ್ರ ಹಿಂಪಡೆದಿದ್ದಾರೆ.

Advertisement

ಚುನಾವಣಾ ಕಣದಲ್ಲಿ ಅಂತಿಮವಾಗಿ ಕಿಶೋರ್ ಬಿ.ಆರ್ (ಬಿಜೆಪಿ), ರಾಜು ಪೂಜಾರಿ (ಕಾಂಗ್ರೆಸ್), ಅನ್ವರ್ ಸಾದತ್ ಎಸ್. (ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮತ್ತು ದಿನಕರ ಉಳ್ಳಾಲ್ (ಪಕ್ಷೇತರ) ಇದ್ದಾರೆ. ನಾಮಪತ್ರ ಹಿಂಪಡೆಯಲು ಸೋಮವಾರ (ಅ.7) ಕೊನೆಯ ದಿನವಾಗಿತ್ತು. ಉಪ ಚುನಾವಣೆಯು ಅ. 21ರಂದು ನಡೆಯಲಿದೆ ಎಂದು ಚುನಾವಣಾಧಿಕಾರಿಯವರ ಪ್ರಕಟಣೆ ತಿಳಿಸಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆ: 
ದಕ್ಷಿಣ ಕನ್ನಡ ಸ್ಥಳೀಯಾಡಳಿತ ಪ್ರಾಧಿಕಾರ ಕ್ಷೇತ್ರದ ವ್ಯಾಪ್ತಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸೇರಿದೆ. ಹೀಗಾಗಿ ಈ ಉಪ ಚುನಾವಣೆಯಲ್ಲಿ ಎರಡು ಜಿಲ್ಲೆಗಳ ಸ್ಥಳೀಯಾಡಳಿತಗಳ ಮತದಾರರು ಮತ ಚಲಾಯಿಸಲಿದ್ದಾರೆ. ಒಟ್ಟು 392 ಮತಗಟ್ಟೆಗಳಿದ್ದು, 6,037 ಮಂದಿ ಮತದಾರರಿದ್ದಾರೆ. ದಕ್ಷಿಣ ಕನ್ನಡದಲ್ಲಿ 234 ಮತಗಟ್ಟೆ, 3,551 ಮತದಾರರು, ಉಡುಪಿಯಲ್ಲಿ 158 ಮತಗಟ್ಟೆ, 2,486 ಮತದಾರರಿದ್ದಾರೆ.

ಈ ಉಪ ಚುನಾವಣೆಯಲ್ಲಿ ದಕ್ಷಿಣ ಕನ್ನಡದಲ್ಲಿ ಗ್ರಾಮ ಪಂಚಾಯ್ತಿ, ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ, ವಿಧಾನಸಭಾ ಸದಸ್ಯರು, ಲೋಕಸಭಾ ಸದಸ್ಯರು, ವಿಧಾನ ಪರಿಷತ್‌ ಸದಸ್ಯರು ಸೇರಿ 234 ಸ್ಥಳೀಯ ಸಂಸ್ಥೆಗಳಲ್ಲಿ 3,580 ಮಂದಿ ಇದ್ದಾರೆ. ಅವರಲ್ಲಿ 3,551 ಮಂದಿ ಪ್ರಸ್ತುತ ಸದಸ್ಯರಿದ್ದಾರೆ. 29 ಸ್ಥಾನಗಳು ಖಾಲಿ ಇವೆ. ಉಡುಪಿಯಲ್ಲಿ ಗ್ರಾಮ ಪಂಚಾಯ್ತಿ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ, ವಿಧಾನಸಭಾ ಸದಸ್ಯರು, ಲೋಕಸಭಾ ಸದಸ್ಯರು ಹಾಗೂ ವಿಧಾನ ಪರಿಷತ್‌ ಸದಸ್ಯರು ಸೇರಿ 158 ಸ್ಥಳೀಯ ಸಂಸ್ಥೆಗಳಲ್ಲಿ 2,490 ಮಂದಿಯಲ್ಲಿ ಪ್ರಸ್ತುತ 2,486 ಮಂದಿ ಇದ್ದಾರೆ. 4 ಸ್ಥಾನಗಳು ಖಾಲಿ ಇವೆ.

ಈ ಕ್ಷೇತ್ರವು ದ್ವಿಸದಸ್ಯ ಕ್ಷೇತ್ರವಾಗಿದ್ದು, 2021ರಲ್ಲಿ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್‌ನಿಂದ ಮಂಜುನಾಥ ಭಂಡಾರಿ ಗೆಲುವು ಸಾಧಿಸಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ  ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಗೆಲುವು ಸಾಧಿಸಿದ ಕಾರಣ ಈಗ ಉಪಚುನಾವಣೆ ನಡೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next