ಚಿತ್ರದುರ್ಗ: ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು ವೇತನ ನೀಡಲು ಉದಾಸೀನ ಏಕೆ, ನಗರಸಭೆಯಲ್ಲೇ ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ಮಾಡುವವರಿದ್ದರೆ ಪೌರ ಕಾರ್ಮಿಕರು ಮಾತ್ರ. ಅವರಿಗೆ ಯಾವುದೇ ಲಂಚ ಸಿಗುವುದಿಲ್ಲ. ವೇತನ ನೀಡದಿದ್ದರೆ ಬೀದಿಯಲ್ಲಿನ ಕಸ ತಿನ್ನಬೇಕೆ ಎಂದು ನಗರಸಭೆ ಸದಸ್ಯ ಕೆ. ಮಲ್ಲೇಶಪ್ಪ, ಪೌರಾಯುಕ್ತರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಇಲ್ಲಿನ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ತುರ್ತು ಸಭೆಯಲ್ಲಿ ನಡೆಯಿತು.
ಕಳೆದ ನಾಲ್ಕು ತಿಂಗಳುಗಳಿಂದ ವೇತನ ನೀಡಿಲ್ಲ.ಜಿಲ್ಲಾಧಿಕಾರಿಗಳ ಮನೆ ಮುಂದೆಯೂ ಧರಣಿ ಮಾಡಲಾಗಿದೆ. ಆದರೂ ಸಮಸ್ಯೆ ಇತ್ಯರ್ಥ ಮಾಡುವುದಿಲ್ಲ ಎಂದರೆ ಹೇಗೆ, ಪ್ರತಿ ತಿಂಗಳು ಅವರಿಗೆ ವೇತನ ನೀಡುವ ವ್ಯವಸ್ಥೆ ಆಗಬೇಕು ಎಂದು ತಾಕೀತು ಮಾಡಿದರು. ಪೌರಾಯುಕ್ತ ಸಿ. ಚಂದ್ರಪ್ಪ ಮಾತನಾಡಿ, ಫೆಬ್ರವರಿ ತನಕ ವೇತನ ನೀಡಲಾಗಿದೆ.
ಹೊರಗುತ್ತಿಗೆ ನೌಕರರನ್ನು ಕಾಯಂ ಮಾಡುವ ಪ್ರಕ್ರಿಯೆ ನಡೆದಿದ್ದರಿಂದ ಮತ್ತು ವೇತನವನ್ನು ನೇರವಾಗಿ ಕಾರ್ಮಿಕರ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಜಾರಿಯಲ್ಲಿದ್ದಿದ್ದರಿಂದ ವಿಳಂಬವಾಗಿದೆ. ಧರಣಿ ಮಾಡಿದ ಮೇಲೆ ವೇತನದ ಚೆಕ್ ಸಿದ್ಧವಾಗಿದ್ದು ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಕೂಡಲೇ ವೇತನ ನೀಡುವುದಾಗಿ ಭರವಸೆ ನೀಡಿದರು.
ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು 17 ಸಾವಿರ ರೂ. ವೇತನ ನೀಡಲಾಗುತ್ತದೆ. ಇದನ್ನು ಗುತ್ತಿಗೆ ಏಜೆನ್ಸಿ ಮೂಲಕ ನೀಡದೆ ನೇರವಾಗಿ ಕಾರ್ಮಿಕರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ನಮ್ಮ ವಾರ್ಡ್‌ನ ಬಹುತೇಕ ಬೀದಿಗಳಲ್ಲಿ ದೀಪಗಳಿಲ್ಲ. ವಾರ್ಡ್ ನಿವಾಸಿಗಳು ಚಪ್ಪಲಿ ಸೇವೆ ಮಾಡುವುದೊಂದೇ ಬಾಕಿ ಇದೆ. ಕಳೆದ ಐದು ವರ್ಷಗಳಿಂದ ಕೇವಲ 5 ಬೀದಿದೀಪಗಳನ್ನು ನನ್ನ ವಾರ್ಡ್‌ಗೆ ನೀಡಲಾಗಿದೆ. ನಗರಸಭೆಗೆ ಎಷ್ಟು ಬೀದಿದೀಪ ತರಿಸಲಾಗಿತ್ತು, ಯಾವ ಯಾವ ವಾರ್ಡ್‌ಗಳಿಗೆ ಎಷ್ಟೆಷ್ಟು ಹಂಚಿಕೆ ಮಾಡಲಾಗಿದೆ ಎಂಬುದರ ಸಮಗ್ರ ತನಿಖೆಯಾಗಬೇಕು ಎಂದು ಸದಸ್ಯೆ ಶಾಮಲಾ ಶಿವಪ್ರಕಾಶ್, ಅನುರಾಧಾ ಮತ್ತಿತರರು ಪಟ್ಟು ಹಿಡಿದರು. ಪ್ರಭಾರಿ ಅಧ್ಯಕ್ಷೆ ಶಾಂತಕುಮಾರಿ ಬೀದಿದೀಪ, ಕುಡಿಯುವ ನೀರು ಎರಡನ್ನೂ ನೀಡುವುದಾಗಿ ಆಶ್ವಾಸನೆ ನೀಡಿದರು.
ಅಂಚೆ ಕಚೇರಿ ಹಿಂಭಾಗದ ವಾರ್ಡ್‌ಗೆ ಸರಿಯಾಗಿ ಅನುದಾನ ನೀಡಿಲ್ಲ. ತಾರತಮ್ಯ ಮಾಡಲಾಗಿದೆ. ಅಲ್ಲಿನ ಜನರಿಗೆ
ಇಂದಿಗೂ ಶೌಚಾಲಯವಿಲ್ಲ. ಅವರೆಲ್ಲ ರಸ್ತೆ ಬದಿಯಲ್ಲೇ ಬಯಲು ಶೌಚ ಮಾಡುತ್ತಿದ್ದಾರೆ. ಒಂದು ಸಾಮೂಹಿಕ ಶೌಚಾಲಯ ನಿರ್ಮಿಸಿ ಕೊಡಿ ಎಂದು ಸಾಕಷ್ಟು ಸಲ ಕೋರಿಕೊಂಡರೂ ಅಧಿಕಾರಿಗಳು ಕ್ಯಾರೆ ಎಂದಿಲ್ಲ. ಇಂತಹ
ತಾರತಮ್ಯ ಸಹಿಸಲು ಸಾಧ್ಯವಿಲ್ಲ ಎಂದು ಸದಸ್ಯ ಭೀಮರಾಜ್ ಗುಡುಗಿದರು.
ನಗರದ 27ನೇ ವಾರ್ಡ್‌ಗೆ ಕಳೆದ ಐದು ವರ್ಷಗಳಿಂದ ಒಂದು ರೂ. ಅನುದಾನ ಕೊಟ್ಟಿಲ್ಲ. ಅವರು ಕಂದಾಯ ಕಟ್ಟುವುದಿಲ್ಲವೇ, ಕೋಟ್ಯಂತರ ರೂ.ಗಳ ಹಗರಣಗಳು ಕಣ್ಮುಂದೆ ನಡೆಯುತ್ತಿವೆ. ನನ್ನ ವಾರ್ಡ್‌ಗೆ ಅನುದಾನ
ನೀಡದಿದ್ದರೆ ಸಮಗ್ರ ತನಿಖೆ ಮಾಡಿಸುವಂತೆ ದೂರು ನೀಡುತ್ತೇನೆ ಎಂದು ಸದಸ್ಯ ರವಿಶಂಕರಬಾಬು ಬೆದರಿಕೆ ಹಾಕಿದರು.
ವಿಷಯ ಸೂಚಿಯಲ್ಲಿದ್ದ ವಾಣಿವಿಲಾಸ ಸಾಗರ, ಶಾಂತಿಸಾಗರ ನೀರು ಸರಬರಾಜು ವಾರ್ಷಿಕ ನಿರ್ವಹಣೆ, ದುರಸ್ತಿ ಕಾರ್ಯ, 35 ವಾರ್ಡ್‌ಗಳಿಗೆ ಹೊರಗುತ್ತಿಗೆ ಮೂಲಕ ವಾಲ್‌ಮೆನ್‌ಗಳ ನೇಮಕ, 2018-19ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸಲು ಅನುಮೋದನೆ ನೀಡಲಾಯಿತು.