ಗೋದಾವರಿ : ಸಾಮಾನ್ಯವಾಗಿ ಒಂದು ಕೆಜಿ ಮೀನಿನ ಬೆಲೆ ಎಷ್ಟಿರಬಹುದು.. ದುಬಾರಿ ಅಂದ್ರು 850 ರಿಂದ 1000 ಇರಬಹುದು. ಆದ್ರೆ ಇಲ್ಲೊಂದು ಜಾತಿಯ ಮೀನಿಗೆ 5 ಸಾವಿರದಿಂದ 17 ಸಾವಿರದವರೆಗೂ ಬೆಲೆ ಕಟ್ಟಲಾಗುತ್ತದೆ ಅಂದ್ರೆ ಒಂಚೂರ ನಂಬಲು ಕಷ್ಟ ಆಗುತ್ತದೆ ಅಲ್ವಾ.. ಆದ್ರೂ ಕೂಡ ನಂಬಬೇಕು.. ಯಾಕಂದ್ರೆ ಈ ಮೀನುಗಳೇ ಅಪರೂಪ.
ಹೌದು ಆಂಧ್ರ ಪ್ರದೇಶದ ಗೋದಾವರಿ ನದಿಯಲ್ಲಿ ಮುಂಗಾರಿನಲ್ಲಿ ಸಿಗುವ ಪುಲಸಾ (Pulasa) ಹೆಸರಿನ ಈ ಮೀನು ತುಂಬಾ ದುಬಾರಿ. ಆಂಧ್ರದಲ್ಲಿ ಒಂದು ಮಾತಿದೆ. ಏನಂದ್ರೆ ಈ ಮೀನನ್ನು ತಿನ್ನಲು ಹೆಂಡತಿಯ ತಾಳಿಯನ್ನೇ ಅಡ ಇಡುತ್ತಾರಂತೆ. ಇಲ್ಲೇ ಗೊತ್ತಾಗುತ್ತದೆ ನೋಡಿ ಈ ಮೀನಿನ ಬೆಲೆ ಎಷ್ಟಿದೆ ಅಂತಾ…
ಮುಂಗಾರಿನ ಈ ಸಮಯದಲ್ಲಿ ಈ ಪುಲಸ ಮೀನಿಗೆ ಭಾರೀ ಡಿಮ್ಯಾಂಡು. ಒಂದು ಕೆಜಿ ಮೀನನ್ನು 5 ಸಾವಿರದಿಂದ 17 ಸಾವಿರದವರೆಗೂ ಮಾರಾಟ ಮಾಡಲಾಗುತ್ತದೆ (ಬೇಡಿಕೆಗೆ ಅನುಗುಣವಾಗಿ). ರಾಜಕೀಯ ನಾಯಕರು ಮತ್ತು ಸಿನಿಮಾ ತಾರೆಯರಿಗೆ ಈ ಮೀನು ಅಂದ್ರೆ ಅಚ್ಚು ಮೆಚ್ಚು. ತಮ್ಮ ನಾಯಕರನ್ನು ಖುಷಿ ಪಡಿಸಲು ಕೆಲವರು ಈ ಮೀನುಗಳನ್ನು ಗಿಫ್ಟ್ ಮಾಡುವ ರೂಡಿ ಕೂಡ ಇದೆ.
ಮಾರುಕಟ್ಟೆಯ ಮಾಹಿತಿ ಪ್ರಕಾರ ಈ ಪುಲಸಾ ಮೀನು ನಿತ್ಯ 50 ಕೆಜಿಯವರೆಗೆ ಮಾರಾಟವಾಗುತ್ತದೆಯಂತೆ. ಇದನ್ನು ಹಿಸ್ಲಾ ಮೀನು ಅಂತಾ ಕೂಡ ಕರೆಯುತ್ತಾರೆ. ಕೇವಲ ಆಂಧ್ರದಲ್ಲಿ ಮಾತ್ರವಲ್ಲದೆ ತೆಲಂಗಾಣ, ತಮಿಳುನಾಡು, ಕರ್ನಾಟಕದಲ್ಲಿಯೂ ಇದರ ಮಾರಾಟವಿದೆ.
ಸೌಧೆಯ ಕೆಂಡದಲ್ಲ ಹದವಾಗಿ ಮಾಡುವ ಪುಲಸಾ ಮೀನಿನ ಕರ್ರಿಯು ತಿನ್ನಲು ನಾಲಿಗೆಗೆ ಹಿತವಾಗಿರುತ್ತದೆ ಅಂತಾರೆ ಸ್ಥಳೀಯರು. ಗೋದಾವರಿ ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ಪುಲಸಾ ಮೀನಿನ ಕರ್ರಿಯನ್ನು ಮಾಡಲಾಗುತ್ತದೆ. ಇಲ್ಲಿನ ಮೀನು ಊಟ ಎಲ್ಲಾ ಕಡೆ ತುಂಬಾ ಹೆಸರುವಾಸಿಯಾಗಿದೆ.