ಮಹಾತ್ಮರೊಬ್ಬರು ಧರ್ಮಪ್ರಚಾರ ಮಾಡುತ್ತ ಊರಿಂದೂರಿಗೆ ಸಂಚರಿಸುತ್ತಿದ್ದರು. ಊರೂರಿನಲ್ಲಿ ಕೆಲವು ಶ್ರೀಮಂತರು ಭೋಜನ ಕೂಟವನ್ನೇರ್ಪಡಿಸಿ, ಸತ್ಕರಿಸಿ, ಆಶೀರ್ವಾದ ಪಡೆಯುತ್ತಿದ್ದರು. ಒಮ್ಮೆ ಸಂತರ್ಪಣೆಯಲ್ಲಿ ಭಾಗವಹಿಸಿದ್ದ ಬಡ ಗೃಹಸ್ಥನೊಬ್ಬನಿಗೂ, ಆ ಮಹಾತ್ಮರನ್ನು ಮನೆಗೆ ಕರೆದು, ಅನ್ನಸಂತರ್ಪಣೆ ಮಾಡಿ, ಆಶೀರ್ವಾದ ಪಡೆಯಬೇಕೆಂಬ ಆಸೆಯಾಯಿತು. ಮಹಾತ್ಮರನ್ನು ಆಹ್ವಾನಿಸಿ ಅನ್ನಸಂತರ್ಪಣೆ ಏರ್ಪಡಿಸಿದ. ಮಹಾತ್ಮರು ಆ ರಾತ್ರಿ ಅಲ್ಲಿಯೇ ವಿಶ್ರಾಂತಿ ಪಡೆದರು.
ಗೃಹಸ್ಥ ಬೆಳಗ್ಗೆ ಎದ್ದು ನೋಡಿದರೆ, ಮಹಾತ್ಮರ ಪತ್ತೆಯೇ ಇರಲಿಲ್ಲ. ಆತಂಕಗೊಂಡ ಆತ, ಮಹಾತ್ಮರನ್ನು ಹುಡುಕುತ್ತಾ ಹೊರಟ. ಅನತಿ ದೂರದಲ್ಲಿ ಮಹಾತ್ಮರು ಹಸು-ಕರುವಿನೊಂದಿಗೆ ಅವಸರದಿಂದ ಬರುತ್ತಿದ್ದರು. ಅವರು ಗೃಹಸ್ಥನ ಬಳಿ ಬಂದು- “ಅಮ್ಮಾ, ಈ ಹಸು- ಕರುಗಳು ನಿನ್ನವು. ನಿನ್ನೆ ರಾತ್ರಿ ಇವುಗಳನ್ನು ಕದ್ದೊಯ್ದಿದ್ದೆ. ನನ್ನ ಅಪರಾಧವನ್ನು ಮನ್ನಿಸು’ ಎಂದು ಪ್ರಾರ್ಥಿಸಿದರು. ಅದಕ್ಕೆ ಗೃಹಸ್ಥನು- “ಮಹಾತ್ಮರೇ, ನೀವು ಕೇಳಿದ್ದರೆ ನಾನೇ ನಿಮಗೆ ತಲುಪಿಸುತ್ತಿದ್ದೆನಲ್ಲ’ ಎಂದ.
ಆಗ ಮಹಾತ್ಮರು- “ನನ್ನಲ್ಲಿ ಯಾವತ್ತೂ ಕಳ್ಳತನ ಮಾಡುವ ದುರ್ಬುದ್ಧಿ ಉಂಟಾಗಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಏಕೆ ಕದಿಯುವ ಮನಸ್ಸಾಯ್ತೋ ತಿಳಿಯುತ್ತಿಲ್ಲ. ಏನೋ ಜನ್ಮಾಂತರದ ಕರ್ಮವಿರಬಹುದು. ಆದರೂ ನಿನ್ನನ್ನೊಂದು ಪ್ರಶ್ನೆ ಕೇಳುತ್ತೇನೆ. ತಪ್ಪು ತಿಳಿದುಕೊಳ್ಳಬೇಡ. ನನಗೆ ನಿನ್ನೆ ಬಡಿಸಿದ ಆಹಾರ ಪದಾರ್ಥಗಳನ್ನು ಹೇಗೆ ಸಂಗ್ರಹಿಸಿದೆ? ನಿಜ ಹೇಳು’ ಎಂದರು.
ತಬ್ಬಿಬ್ಟಾದ ಗೃಹಸ್ಥ, “ನಿಮ್ಮ ಸತ್ಕಾರಕ್ಕೆ ನನ್ನ ಬಳಿ ಏನೂ ಇರಲಿಲ್ಲ. ಸಾಮಗ್ರಿಗಳನ್ನು ಶ್ರೀಮಂತರೊಬ್ಬರ ಮನೆಯಲ್ಲಿ ಕದ್ದು ತಂದಿದ್ದು’ ಎಂದು ಒಪ್ಪಿಕೊಂಡ. ಆಗ ಮಹಾತ್ಮರಿಗೆ, ತಾನೇಕೆ ಹಸು ಕರುವನ್ನು ಕದ್ದೆ ಎಂದು ಅರಿವಾಯಿತು. ಕಳ್ಳತನದ ಸಂಸ್ಕಾರ, ತಿಂದ ಆಹಾರದಲ್ಲಿ ಸೇರಿಕೊಂಡಿತ್ತು. ಆದರೆ, ಅದು ಜೀರ್ಣವಾದ ನಂತರ ಮಹಾತ್ಮರ ಮೂಲ ಸಂಸ್ಕಾರ ಜಾಗೃತವಾಗಿ, ಹಸು-ಕರುವನ್ನು ಹಿಂದಿರುಗಿಸಲು ಬಂದಿದ್ದರು.
ಗೃಹಸ್ಥನಿಗೆ ತನ್ನ ತಪ್ಪಿನ ಅರಿವಾಗಿ, ಮಹಾತ್ಮರಲ್ಲಿ ಕ್ಷಮೆ ಯಾಚಿಸಿದನು. ಜೀವ ಹೋಗುವ ಸಂದರ್ಭವೊಂದನ್ನು ಬಿಟ್ಟು, ಉಳಿದಂತೆ ಕಳ್ಳತನದಿಂದ ಸಂಪಾದಿಸಿದ ಆಹಾರ ಸೇವಿಸಬಾರದು. ದ್ರವ್ಯ ಶುದ್ಧಿ, ಅರ್ಥ ಶುದಿಟಛಿ ಇದ್ದರೆ ಮಾತ್ರವೇ, ಆಹಾರ ಶುದಿಟಛಿ. ಶುದಟಛಿವಾದ ಆಹಾರ ಸೇವನೆಯು ಸನ್ನಡತೆ ಮತ್ತು ಭಗವತಾøಪ್ತಿಗೆ ಪೋಷಕವಾಗುತ್ತದೆ ಎಂಬ ಶ್ರೀರಂಗ ಮಹಾಗುರುಗಳ ಮಾತು ಸ್ಮರಣೀಯ.
* ರತ್ನಾವತಿ ಸುರೇಶ್, ಅಧ್ಯಾತ್ಮ ಚಿಂತಕಿ ಅಷ್ಟಾಂಗಯೋಗ ವಿಜ್ಞಾನಮಂದಿರಂ