Advertisement
“ಏನ್ರೀ ವಿಶೇಷ ಇದ್ಯಾ? ಬೇಗ ಪ್ಲಾನ್ ಮಾಡ್ತಾ ಇದ್ದೀರಾ?’ ಎಂದು ನೆರೆಮನೆಯಾಕೆ ನನ್ನನ್ನು ಕೇಳಿದಳು. ನನ್ನ ಮಗರಾಯನಿಗೆ ಆಗ ಇನ್ನೂ ಒಂದೂವರೆ ವರ್ಷ. ಊರಿಗೆ ಹೋದಾಗಲೆಲ್ಲ ಎಲ್ಲರೂ, “ಸಣ್ಣಕ್ಕಾಗಿದಿಯಲ್ಲೇ ಯಾಕೆ?’ ಎಂದು ಕೇಳುತ್ತಿದ್ದರು. ಇವರಿಗೆ ನನ್ನ ಹೊಟ್ಟೆ ದೊಡ್ಡದಾಗಿ ಕಾಣಿಸಿತೇ ಎಂದು ಯೋಚಿಸತೊಡಗಿದೆ. ಸ್ವಲ್ಪ ಲೂಸು ಬಟ್ಟೆ ಹಾಕಿದ್ದ ನನ್ನ ಚೂಡಿದಾರ ಗಾಳಿಗೆ ಹಾರಿ ಹೊಟ್ಟೆಯ ಬಳಿ ಸ್ವಲ್ಪ ದೊಡ್ಡದಾಗಿ ಕಂಡಿತ್ತು. ಹಾಗೇನೂ ಇಲ್ಲ ಎಂದು ಹೇಳಿ ಬಂದೆ.
Related Articles
Advertisement
ಈಗಿನ ಮಕ್ಕಳಂತೂ ತುಂಬಾ ಚೂಟಿ, ತುಂಬಾ ತೀಟೆ ಕೂಡ. ಅವರನ್ನು ಸಾಕಿ ಸಲಹುವುದೇ ತಂದೆ ತಾಯಿಯರಿಗೆ ಸಾಕೋ ಸಾಕು ಅನಿಸುತ್ತಿದೆ. ನೋಡಿದ್ದೆಲ್ಲ ಬೇಕು, ಇನ್ನೊಬ್ಬರೊಂದಿಗೆ ಏನನ್ನೂ ಶೇರ್ ಮಾಡಲಾರೆವು ಎಂಬುದು ಅವರ ಅಳಲು. ಹಠಮಾರಿಗಳೂ ಕೂಡ. ನನ್ನ ಮಗನಂತೂ ಅವನ ಬಳಿ ಸೈಕಲ್ ಇದ್ದರೂ ಬೇರೆಯವರ ಸೈಕಲ್ ಚೆಂದವೆಂದು ಅದರ ಹಿಂದೆ ಓಡುತ್ತಾನೆ. ಅವನ ಹಿಂದೆ ಓಡಿ ನನಗೆ ಕಾಲು ನೋವು. ಗೆಳತಿಯರ ಮಕ್ಕಳದೂ ಅದೇ ಗೋಳು. ಟಿ.ವಿ. ರಿಮೋಟ್, ಮೊಬೈಲ್ ಅವರ ಕೈಯಲ್ಲಿ, ನಮಗದು ಸಿಗುವುದು ಅವರು ಮಲಗಿದ ಮೇಲೆ. ತಂಟೆಗೇ ಸೋತು, ಸುಸ್ತಾದ ತಾಯಂದಿರಿಗೆ, ಎರಡನೆಯದು ಬೇಕಾ ಎಂಬ ಪ್ರಶ್ನೆ ಈಟಿಯಂತೆ ಎದುರಾಗುತ್ತದೆ.
ಈಗಿನ ಶಿಕ್ಷಣವೂ ಬಲು ದುಬಾರಿ. ಮಗುವಿನ ಅಪ್ಪ-ಅಮ್ಮ, ತಮ್ಮ ಇಡೀ ಶಿಕ್ಷಣಕ್ಕೆ ಮಾಡಿದಷ್ಟು ಹಣ, ಈಗ ಮಗನ ನರ್ಸರಿ ಅಡ್ಮಿಶನ್‌ಗೆ ಖರ್ಚಾಗುತ್ತದೆ. ಅವರ ತಿಂಗಳ ಫೀಸು, ಬೇಕೆಂದು ಹಠ ಮಾಡಿದಾಗೆಲ್ಲಾ ಕೊಡಿಸಿದ ಆಟಿಕೆ, ನಾವು ಇಷ್ಟ ಪಟ್ಟು ಕೊಂಡ ಆಟಿಕೆ, ಚಾಕೊಲೇಟ್, ಅವರ ಬರ್ತ್‌ಡೇ ಪಾರ್ಟಿ ಹೀಗೆ ಖರ್ಚಿನ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕೆಲವು ಗೆಳತಿಯರಂತೂ ಆ ಖರ್ಚನ್ನು ಕಂಡೇ ಎರಡನೆಯದು ಖಂಡಿತಾ ಬೇಡವೆಂದು ಖಚಿತವಾಗಿ ಹೇಳುತ್ತಾರೆ.ಮೊದಲ ಸಲ ಬಸುರಿಯೆಂದು ತಿಳಿದ ಸ್ವಲ್ಪ ದಿನದಲ್ಲೇ ಶುರುವಾದ ವಾಂತಿ, ಹಸಿವು, ಬಾಯಾರಿಕೆ, ಬೆನ್ನುನೋವು… ಇವುಗಳನ್ನೆಲ್ಲ ಮರೆಯಲು ಸಾಧ್ಯವೇ? ಸಿಸೇರಿಯನ್ ಆದ ನಂತರದ ಬೆನ್ನುನೋವನ್ನು ಕೆಲವರು ನೆನಪಿಸಿಕೊಂಡರೆ, ಮಗುವಿನೊಂದಿಗೆ ಕಳೆದ ನಿದ್ರೆಯಿಲ್ಲದ ರಾತ್ರಿಗಳನ್ನೂ, ಚಂಡಿ ಹಿಡಿದು ಅಳುವ ಅದರ ಅಳುವನ್ನೂ ನೆನೆಸಿಕೊಳ್ಳುವವರು ಕೆಲವರು.
ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಯಾರಾದರೂ ಇದ್ದರೆ, ಎರಡನೇ ಮಗುವಾದರೆ ಸಂಭಾಳಿಸಬಹುದು ಎಂಬುದು ಕೆಲವರ ಅನಿಸಿಕೆ. ಮಗು ಒಂದನೇ ತರಗತಿಗೆ ಹೋದಾಗ ಎರಡನೇ ಮಗುವನ್ನು ನೋಡಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತದೆ ಎನ್ನುವುದು ಗೆಳತಿ ನೀರಜಾಳ ಅನಿಸಿಕೆ. ಕಸಿನ್ಸ್ಗಳು ಸಿಬ್ಲಿಂಗ್ಸ್ (ಒಡಹುಟ್ಟಿದವರು) ಆಗಲು ಸಾಧ್ಯವಿಲ್ಲ. ಮಗುವಿನ ಅಂತರ ಮೂರರಿಂದ ಹನ್ನೆರಡು ವರ್ಷಗಳವರೆಗಾದರೂ, ಎರಡನೇ ಮಗುವಿರಲಿ ಎಂಬುದು ಹೆಲ್ತ್‌ಕೇರ್‌ನಲ್ಲಿ ಕೆಲಸ ಮಾಡುವ ಗೆಳತಿ ಸವಿತಾಳ ಸಲಹೆ. ನನಗೆ ತಂಗಿ ಹುಟ್ಟಿದರೆ ತಂಗಿಯನ್ನು ನಾನು ಊಟ ಮಾಡಿಸುತ್ತೀನಿ, ಮಲಗಿಸುತ್ತೀನಿ ಎಂದು ಧೈರ್ಯ ಹೇಳುವ ಮಗರಾಯ. “ಒಬ್ಬ ಮಗನ ಯಾಕ ಹಡೆದೆ ನನ್ನವ್ವ’ ಎನ್ನುವ ಜನಪದ, “ಮಕ್ಕಳಿರಲ್ಲವ್ವ ಮನೆ ತುಂಬ’ ಎಂದೂ ಹಾಡುತ್ತದೆ. “ಆರತಿಗೊಬ್ಬಳು, ಕೀರ್ತಿಗೊಬ್ಬ’ ಎಂಬಂತೆ, ನಾವಿಬ್ಬರು ನಮಗಿಬ್ಬರು ಸಾಕು ಎಂದು ಸರಕಾರ ಕರೆ ನೀಡುತ್ತದೆ. “ಹೆಣ್ಣಾಗಲಿ, ಗಂಡಾಗಲಿ… ನಮಗೊಬ್ಬರಿದ್ದರೆ ಸಾಕು’ ಎಂಬಂತಾಗಿದೆ ಇಂದಿನ ಕೆಲವರ ಪರಿಸ್ಥಿತಿ. ಯಾರೇನೇ ಹೇಳಲಿ, ನಿರ್ಧಾರ ನಿಮ್ಮದು…
ಉಳಿದವರು ಏನೇ ಹೇಳಲಿ, ನಿಮ್ಮ ಬದುಕಿನ ಬಗ್ಗೆ ನೀವೇ ಆಲೋಚಿಸಿ ಒಂದು ನಿರ್ಧಾರಕ್ಕೆ ಬನ್ನಿ. ಒಂದನ್ನು ನಿಭಾಯಿಸುವ ನೀವು ಎರಡನ್ನು ನಿಭಾಯಿಸುವ ಸೂಪರ್ ಪೇರೆಂಟ್ ಆಗಬಹುದು. ಮೊದಲನೇ ಮಗುವೇ ಎರಡನೆಯದನ್ನು ನೋಡಿ ಮು¨ªಾಡಿ, ಅದರ ತುಂಟಾಟವನ್ನು ಕಡಿಮೆ ಮಾಡಬಹುದು. ಮೊದಲ ಮಗುವಿನ ದುಬಾರಿ ಆಟಿಕೆಗಳೇ ಎರಡನೇ ಮಗುವಿಗೂ ಬಳಕೆ ಆಗಬಹುದು. ಆದರೂ, ಎರಡನೇ ಮಗು ಬೇಕೇ ಬೇಡವೇ ಎಂದು ನಿರ್ಧರಿಸಬೇಕಾದವರು ನೀವೇ. ಸಾವಿತ್ರಿ ಶ್ಯಾನುಭಾಗ