Advertisement

ಬಗೆ ಬಗೆ ಗಣೇಶ ಮೂರ್ತಿ ಸಂಗ್ರಹವೇ ಇವರ ಹವ್ಯಾಸ

11:27 AM Aug 21, 2017 | |

ಬೆಂಗಳೂರು: ಒಬ್ಬೊಬ್ಬರಿಗೂ ಒಂದೊಂದು ಹವ್ಯಾಸ. ಕೆಲವರು ವಿವಿಧ ದೇಶಗಳ ಕರೆನ್ಸಿ, ನಾಣ್ಯ ಸಂಗ್ರಹಿಸಿದರೆ, ಹಲವರಿಗೆ ಅಂಚೆ ಚೀಟಿಗಳನ್ನು ಕೂಡಿಡುವ ಹವ್ಯಾಸ. ಸಿಲಿಕಾನ್‌ ಸಿಟಿಯ ತ್ಯಾಗರಾಜನಗರ ನಿವಾಸಿ ವಿಜಯಲಕ್ಷ್ಮಿ ಅವರಿಗೆ ವಿಶಿಷ್ಟ ಗಣೇಶ ವಿಗ್ರಹಗಳನ್ನು ಸಂಗ್ರಹಿಸುವ ಮತ್ತು ಪ್ರತೀ ವರ್ಷವೂ ವಿಭಿನ್ನವಾಗಿ ತಯಾರಿಸಿದ ಗಣೇಶ ವಿಗ್ರಹಗಳನ್ನು ಪೂಜಿಸುವ ಹವ್ಯಾಸಿವಿದೆ.

Advertisement

ಕಳೆದ 30 ವರ್ಷಗಳಿಂದಲೂ ಅದನ್ನು ಪಾಲಿಸಿಕೊಂಡು ಬಂದಿರುವ ಅವರ ಬಳಿ ಸುಮಾರು 47ಕ್ಕೂ ಹೆಚ್ಚು ವಿಭಿನ್ನ ಗಣೇಶ ವಿಗ್ರಹಗಳಿವೆ. ತೆಂಗಿನ ಕಾಯಿ ಬಳಸಿ ಮಾಡಲಾಗಿರುವ ತೆಂಗಿನ ಗಣೇಶ, ಕೊಬ್ಬರಿ ಗಣೇಶ, ಅಡಿಕೆ ಗಣೇಶ, ತಾಮ್ರದ ಗಣೇಶ, ರೇಡಿಯಂ ಗಣೇಶ, ಗಾಂಧಿ ಗಣೇಶ, ಬಾಂಬೆ ಗಣೇಶ, ಆನೆಗುಡ್ಡ ಗಣೇಶ, ಚಕ್ಕೆ ಗಣೇಶ, ಚಿನ್ನದ ಗಣೇಶ, ಬೆಳ್ಳಿ ಗಣೇಶ, ಹರಳು ಗಣೇಶ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. 

ಪವಿತ್ರ ಧಾರ್ಮಿಕ ಕ್ಷೇತ್ರಗಳೂ ಸೇರಿದಂತೆ ಹೋದ ಕಡೆಗಳಲ್ಲೆಲ್ಲ ವಿಶಿಷ್ಠ, ವಿಭಿನ್ನವಾದ ಗಣೇಶ ಕಣ್ಣಿಗೆ ಕಂಡೊಡನೆ ಅದನ್ನು ತಮ್ಮೊಂದಿಗೆ ತೆಗೆದುಕೊಂಡು ಬರುವ ಅವರು, ತಮ್ಮ ಸಂಗ್ರಹದಲ್ಲಿರುವ ಗಣೇಶ ಮೂರ್ತಿಗಳ ಸಂಖ್ಯೆಯನ್ನು ಹೆಚ್ಚುಸುತ್ತಲೇ ಇದ್ದಾರೆ. ಅವರಿಗೆ ಈ ವಿಷಯದಲ್ಲಿ ಹೆಮ್ಮೆ ಇದೆಯೇ ಹೊರತು, ಗಣೇಶ ವಿಗ್ರಹ ಸಂಗ್ರಹಣೆ ಎಂದಿಗೂ ಬೇಸರ ತರಿಸಿಲ್ಲ ಎಂಬುದೇ ವಿಶೇಷ. 

ಬಿದಿರು ಗಣೇಶ
ಕಳೆದ ವರ್ಷ ಪಾತ್ರೆಗಳನ್ನು ಬಳಸಿ ಗಣೇಶ ವಿಗ್ರಹ ಮಾಡಿದ್ದ ವಿಜಯಲಕ್ಷ್ಮಿಅವರು, ಈ ಬಾರಿ ಬಿದಿರಿನಿಂದ ತಯಾರಿಸಿದ ವಸ್ತುಗಳನ್ನು ಉಪಯೋಗಿಸಿಕೊಂಡು ಬಿದಿರು ಗಣೇಶನನ್ನು ಮಾಡಿದ್ದಾರೆ. ಮೊರದಿಂದ ಗಣೇಶನ ಅಗಲವಾದ ಕಿವಿಗಳು, ಸಣ್ಣ ಬುಟ್ಟಿಗಳಿಂದ ಕಿರೀಟ, ದೊಡ್ಡ ಬುಟ್ಟಿಗಳಿಂದ ಮುಖ, ಹೊಟ್ಟೆ ಮಾಡಿದ್ದಾರೆ. ಜತೆಗೆ ಅಡಿಗೆ ಹಾಳೆಗಳ ತಟ್ಟೆಗಳನ್ನು ಇದರಲ್ಲಿ ಬಳಸಿಕೊಂಡಿದ್ದು, ಬಿದಿರು ಗಣೇಶ ಸುಮಾರು 4 ಅಗಲ, 5.5 ಅಡಿ ಎತ್ತರ ಇರುವುದು ವಿಶೇಷ. 

ಬಿದಿರು ಗಣೇಶನ ಸೃಷ್ಟಿಗೆ ಹೊಸ ಬಿದಿರಿನ ಮೊರ, ಬುಟ್ಟಿ (ಕುಕ್ಕೆ), ಅಡಿಕೆ ಹಾಳೆಯಿಂದ ತಯಾರಿಸಿದ ತಟ್ಟೆಗಳು, ಹೂವಿನ ಬುಟ್ಟಿ, ನಾರಿನ ಹಳ್ಳಗಳನ್ನು ಬಳಸಿದ್ದು, ಗಣೇಶ ಹಬ್ಬದ ನಂತರ ಇವೆಲ್ಲವನ್ನೂ ಬಿಚ್ಚಿ ಪುನಃ ಗೃಹೋಪಯೋಗಕ್ಕೆ ಬಳಸುತ್ತೇವೆ. ಮಣ್ಣಿನ ಗಣೇಶ ವಿಗ್ರಹವಾಗಿದ್ದರೆ, ನೀರಿಗೆ ವಿಸರ್ಜನೆ ಮಾಡಬಹುದಿತ್ತು. ಆದರೆ, ಬಿದಿರಿನಿಂದ ಮಾಡಿದ್ದರಿಂದ ಸುಡಬೇಕಾಗುತ್ತದೆ. ಆದ್ದರಿಂದ ಮನೆ ಬಳಕೆಗೆ ಅದನ್ನು ಉಪಯೋಗಿಸಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ವಿಜಯಲಕ್ಷ್ಮೀ. 

Advertisement

ದೀಪ ಕಂಬದ ಗೌರಿ-ಗಣೇಶ
ದೀಪದ ಕಂಬಗಳನ್ನು ಬಳಸಿ  ಇವರು ಗಣೇಶ ಮತ್ತು ಗೌರಿಯನ್ನು ತಯಾರಿಸಿದ್ದಾರೆ. ದೀಪದ ಕಂಬಗಳಿಗೆ ಗಣೇಶ ಮತ್ತು ಗೌರಿಯ ಮುಖಗಳನ್ನು ಹಾಕಿದ್ದು, ವಿಶೇಷ ಅಲಂಕಾರದಿಂದ ಕಲಾತ್ಮಕವಾಗಿ ಸೃಷ್ಟಿಸಿದ್ದಾರೆ. ಈ ಬಾರಿಯ ಗೌರಿ-ಗಣೇಶ ಹಬ್ಬದಲ್ಲೀ ಈ ಮೂರ್ತಿಗಳಿಗೂ ವಿಶೇಷ ಪೂಜೆ ಸಲ್ಲಲ್ಲಿದೆ. 

ಗಣೇಶ ಹಬ್ಬದಂದು ಮಣ್ಣಿನಿಂದ ತಯಾರಿಸಿದ ಮೂಲ ಗಣೇಶನಿಗೆ ಪೂಜೆ ಸಲ್ಲಿಸಿ ನಂತರ ವಿಸರ್ಜನೆ ಮಾಡುತ್ತೇವೆ. ಮುತ್ತೈದೆಯರು ಪ್ರತಿ ಮನೆಗೆ ಹೋಗಿ 21 ಗಣೇಶ ದರ್ಶನ ಮಾಡುವ ಸಂಪ್ರಾದಾಯವಿದೆ. ಆದರೆ, ನಮ್ಮ ಮನೆಯಲ್ಲಿ 50ಕ್ಕೂ ಹೆಚ್ಚು ಗಣೇಶನ ದರ್ಶನ ಭಾಗ್ಯ ಲಭಿಸಲಿದೆ. ಗಣೇಶ ವಿಗ್ರಹ ಸಂಗ್ರಹ ಮತ್ತು ವಿಶಿಷ್ಟ ಗಣೇಶ ವಿಗ್ರಹಗಳ ಪೂಜೆಗೆ ಪತಿ ರಿಗ್ರೆಟ್‌ ಅಯ್ಯರ್‌ ಅವರ ಸಹಕಾರವಿದೆ.
-ವಿಜಯಲಕ್ಷ್ಮಿ ರಿಗ್ರೆಟ್‌ ಅಯ್ಯರ್‌

Advertisement

Udayavani is now on Telegram. Click here to join our channel and stay updated with the latest news.

Next