ಮೈಸೂರು: ಸಾಮೆ, ಸಜ್ಜೆ, ನವಣೆ ಸೇರಿದಂತೆ ನೂರು ಸಾವಯವ ತಳಿಗಳು ನಮ್ಮಲ್ಲಿದ್ದು, ಅವುಗಳನ್ನು ಉಳಿಸಿ-ಬೆಳೆಸಿಕೊಂಡು ಹೋಗುವ ಕೆಲಸವಾಗಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೀಜಮಾತೆ ಪಾಪಮ್ಮ ಹೇಳಿದರು.
ಸಹಜ ಸಮೃದ್ಧ ಸಂಸ್ಥೆ ನಬಾರ್ಡ್ ಸಹಯೋಗದೊಂದಿಗೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿರುವ ಮೂರು ದಿನಗಳ ಮುಂಗಾರು ಬೀಜ ಮೇಳಕ್ಕೆ ರಾಶಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
30 ವರ್ಷದಿಂದ ಸಾವಯವ ಕೃಷಿ: ನಾನು ಕಳೆದ 30 ವರ್ಷಗಳಿಂದ ಸಾವಯವ ಕೃಷಿ ಮಾಡಿಕೊಂಡು ಬರುತ್ತಿದ್ದೇನೆ. ನನ್ನ ಕೃಷಿ ಚಟುವಟಿಕೆ ಗಮನಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿತು. ನನಗೆ ಪ್ರಶಸ್ತಿಗಿಂತ ರಾಸಾಯನಿಕ ಗೊಬ್ಬರ ಬಳಸದಂತೆ ಮಾಡಿ ಸಾವವಯ ಗೊಬ್ಬರ ಬಳಸುವಂತೆ ಮಾಡಬೇಕು. ನನ್ನ ಮೊಮ್ಮಗ ರಾಜಸ್ಥಾನದಲ್ಲಿ ಸಾವಯವ ವಿಚಾರದಲ್ಲೇ ಪಿಎಚ್.ಡಿ ಮಾಡುತ್ತಿದ್ದಾನೆ ಎಂದರು.
ಪ್ರೋತ್ಸಾಹ: ಜಂಟಿ ಕೃಷಿ ನಿರ್ದೇಶಕ ಡಾ.ಮಹಾಂತೇಶಪ್ಪ ಮಾತನಾಡಿ, ಯುವದಸರಾ, ಯುವಸಂಭ್ರಮಕ್ಕೆ ಸಿಗುವ ಪ್ರತಿಕ್ರಿಯೆ ದೇಸೀ ಸಂಸ್ಕೃತಿ, ದೇಸಿ ತಳಿಗಳನ್ನು ಉಳಿಸುವ ಮೇಳಕ್ಕೆ ಸಿಗಲ್ಲ. ಹೈಬ್ರಿಡ್ ತಳಿಗಳ ಹಾವಳಿಯಿಂದಾಗಿ ದೇಸಿ ತಳಿಗಳು ಕಣ್ಮರೆಯಾಗದಂತೆ ನೋಡಿಕೊಳ್ಳಬೇಕು. ಕೃಷಿ ಇಲಾಖೆಯು ಅದಕ್ಕೆ ತಕ್ಕಂತೆ ಬೆಂಬಲ,ಪ್ರೋತ್ಸಾಹ ಕೊಟ್ಟುಕೊಂಡು ಬರುತ್ತಿದೆ ಎಂದರು.
ಬರ ನಿರೋಧಕ ಗುಣ: ಸಹಜ ಸಮೃದ್ಧ ನಿರ್ದೇಶಕ ಜಿ.ಕೃಷ್ಣ ಪ್ರಸಾದ್ ಮಾತನಾಡಿ, ಹೈಬ್ರಿಡ್ ಮತ್ತು ಕುಲಾಂತರಿ ಬೀಜಗಳು ರೈತರ ಬೀಜ ಸ್ವಾತಂತ್ರಕ್ಕೆ ಸವಾಲಾಗಿವೆ. ಇಳುವರಿಯೇ ಮೂಲ ಮಂತ್ರವಾಗಿ, ದೇಸಿ ತಳಿಗಳ ರುಚಿ, ಸ್ವಾದ, ಸೊಗಡು, ಬರ ನಿರೋಧಕ ಗುಣ ವಿಶೇಷತೆಗಳೆಲ್ಲಾ ಮೂಲೆ ಗುಂಪಾಗಿದೆ. ಬೀಜ ಸಂಸ್ಕೃತಿ ಕೊನೆಯುಸಿರೆಳೆಯುತ್ತಿದೆ. ರೈತ ಸಮುದಾಯ ಬೀಜ ವೈವಿಧ್ಯವನ್ನು ಜೋಪಾನ ಮಾಡಿ, ಅಭಿವೃದ್ಧಿಗೊಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಉದ್ದೇಶದಿಂದ ಈ ಬೀಜ ಮೇಳ ಆಯೋಜಿಸಲಾಗಿದೆ ಎಂದರು.
ರಾಜ್ಯದ 30ಕ್ಕೂ ಹೆಚ್ಚಿನ ಬೀಜ ಸಂರಕ್ಷಕರ ಗುಂಪುಗಳು ಬೀಜಮೇಳದಲ್ಲಿ ಪಾಲ್ಗೊಂಡಿದ್ದು, ವಿವಿಧ ಬಗೆಯ ದೇಸಿ ಭತ್ತ , ಸಿರಿಧಾನ್ಯ , ತರಕಾರಿ ಬೀಜ, ಗೆಡ್ಡೆ ಗೆಣಸು ಮತ್ತು ಹಣ್ಣು ಹಂಪಲಿನ ಗಿಡಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಿದ್ದಾರೆ.
ಬೇಡಿಕೆಯಷ್ಟು ದೇಸಿ ಬಿತ್ತನೆ ಬೀಜ ಇಲ್ಲ: ಜೈವಿಕ್ ಕೃಷಿಕ್ ಸೊಸೈಟಿ ಗೌರವಾಧ್ಯಕ್ಷ ಡಾ.ರಾಮಕೃಷ್ಣಪ್ಪ ಮಾತನಾಡಿ, ರಾಜ್ಯದಲ್ಲಿ 1.50 ಲಕ್ಷ ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಚಟುವಟಿಕೆ ನಡೆಯುತ್ತಿದ್ದು, 2.50 ಲಕ್ಷ ರೈತರು ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇಷ್ಟು ರೈತರಿಗೆ 1250ರಿಂದ 1300 ಟನ್ ಸಾವಯವ ಬಿತ್ತನೆ ಬೀಜ ಬೇಕು. ಆದರೆ, ದೇಸಿಯ ಬಿತ್ತನೆಬೀಜ, ತಳಿ ಸಿಗದಂತಾಗಿದೆ. ಅದಕ್ಕಾಗಿ ದೇಸಿಯ ಬೀಜಗಳನ್ನು ನಾಟಿ ಮಾಡಿ ಸಂರಕ್ಷಿಸಬೇಕು. ದೇಸಿಯ ತಳಿಗಳ ವಂಶಾಭಿವೃದ್ಧಿ ಮಾಡಿದರೆ ಉತ್ತಮವಾಗಲಿದೆ ಎಂದು ತಿಳಿಸಿದರು.