Advertisement

ನಿನ್ನನ್ನು ಸಂಪರ್ಕಿಸುವ ಮಾರ್ಗ ಯಾವುದು?

09:22 AM Jul 31, 2019 | Lakshmi GovindaRaj |

ನೀನು ಪತ್ರದೊಂದಿಗೆ ನನಗಾಗಿ ಎರಡು ಸಾಲುಗಳ ಕವನವನ್ನು ಗೀಚತೊಡಗಿದಾಗ, ನಾನು ಸುಮ್ಮನಾಗಲಿಲ್ಲ. ಅದಕ್ಕೆ ಉತ್ತರವೆಂಬಂತೆ, ನಿನಗಾಗಿ ಕವಿತೆ ಬರೆದೆ. ಪ್ರೀತಿಯ ಇವನೇ, ನಿನ್ನಂತೆ ಪ್ರೇಮಪತ್ರದ ಅಂಕಣವನ್ನು ಹವ್ಯಾಸಕ್ಕಾಗಿ ಬರೆಯುತ್ತಿದ್ದವಳು, ನಿನ್ನಪತ್ರಗಳನ್ನು ಓದಿ ಮನಸೋತೆ. ಅಂದಿನಿಂದ ನಾನು ಬರೆಯುವ ಪ್ರೇಮ ಪತ್ರಗಳು ನಿನಗಾಗೇ ಮೀಸಲಾದವು. ನೀನು ಕೂಡ ಅದಕ್ಕೆ ಸಮ್ಮತಿಯೆಂಬಂತೆ ಮುಂಚಿಗಿಂತ ಹೆಚ್ಚು ಅಂದವಾಗಿ ಪತ್ರಗಳನ್ನು ಬರೆಯಲು ಶುರು ಮಾಡಿದೆ.

Advertisement

ಎಲ್ಲಕ್ಕಿಂತ ಭಿನ್ನವೆಂಬಂತೆ ನಮ್ಮ ಪ್ರೀತಿ, ಪತ್ರದಲ್ಲೇ ಸಾಗಲು ಶುರುವಾಯಿತು. ಒಬ್ಬರನ್ನೊಬ್ಬರು ಕಾಣದೆ, ಭೇಟಿಯಾಗದೆ ನಮ್ಮದೇ ಕಲ್ಪನೆಯೆಂಬಂತೆ ಇಬ್ಬರೂ ಪತ್ರ ಬರೆಯತೊಡಗಿದೆವು. ನನ್ನ ಸ್ನೇಹಿತೆಯರ ಮುಂದೆ ನಮ್ಮ ಪ್ರೀತಿಯ ಬಗ್ಗೆ ಹೇಳಿದಾಗ ಅವರಿಗೇನೋ ಹೊಟ್ಟೆಕಿಚ್ಚು. ಆದರೂ, “ಎಷ್ಟು ಲಕ್ಕಿ ನೀನು, ಇಷ್ಟು ಚೆನ್ನಾಗಿ ಪತ್ರ ಬರೆಯೋ ಹುಡುಗ ಇನ್ನು ನಿನ್ನನ್ನು ಎಷ್ಟು ಪ್ರೇಮಿಸಬಹುದು’ ಎಂದೆಲ್ಲ ಹೇಳತೊಡಗಿದರು.

ನೀನು ಪತ್ರದೊಂದಿಗೆ ನನಗಾಗಿ ಎರಡು ಸಾಲುಗಳ ಕವನವನ್ನು ಗೀಚತೊಡಗಿದಾಗ, ನಾನು ಸುಮ್ಮನಾಗಲಿಲ್ಲ. ಅದಕ್ಕೆ ಉತ್ತರವೆಂಬಂತೆ, ನಿನಗಾಗಿ ಕವಿತೆ ಬರೆದೆ. ಪತ್ರದಲ್ಲೇ ನಾವಿಬ್ಬರೂ ಮೊದಲು ಭೇಟಿಯಾಗಿ, ಮದುವೆಯಾಗಿ, ಪ್ರೀತಿ ಲಹರಿ ಸಾಗುವ ಭಾವನೆಗಳು ಪ್ರಕಟವಾದವು.ರೇಖಾಗಣಿತ, ವಿಜ್ಞಾನ, ಪ್ರಕೃತಿ, ಕನ್ನಡಾಂಬೆ, ಸಿನಿಮಾತಾರೆ,ಆಭರಣಗಳು, ಪುಸ್ತಕ, ಗಣಕಯಂತ್ರ, ಅಡುಗೆ, ಕ್ರಿಕೆಟ್‌ ಹೀಗೆ ನಾನಾ ವಿಷಯಗಳನ್ನಿಟ್ಟುಕೊಂಡು ಪ್ರೇಮಪತ್ರ ಬರೆಯುತ್ತ, ಹರಿಯುತ್ತ ಸಾಗಿತ್ತು ನಮ್ಮ ಪ್ರೀತಿಯ ಕಾವ್ಯಧಾರೆ. ನಿನ್ನ ಹೆಸರು, ಹವ್ಯಾಸ, ಇತ್ಯಾದಿ ವಿಷಯಗಳನ್ನು ಬರೆಯುತ್ತಿದ್ದ ಎರಡು ಸಾಲುಗಳಲ್ಲಿ ಅಡಗಿಸಿ, ಪದಬಂಧ ಬಿಡಿಸುವುದನ್ನು ಕಲಿಸಿದೆ ನನಗೆ.

ಹೀಗೆ ಸಾಗುತ್ತಿದ್ದ ನಮ್ಮ ಪತ್ರ ವ್ಯವಹಾರ, ನಾಲ್ಕು ವಾರಗಳಿಂದ ನಿಂತಿದೆಯಲ್ಲ ಗೆಳೆಯ? ಪ್ರತಿ ಬಾರಿ ನಿನ್ನ ಪತ್ರ ಓದಲು ಹಾತೊರೆಯುತ್ತಿದ್ದ ಮನಸ್ಸು ಈಗ ಪತ್ರವಿಲ್ಲದೇ ಕಂಗಾಲಾಗಿದೆ. ನಿನ್ನನ್ನು ಸಂಪರ್ಕಿಸುವ ಬೇರೆ ವಿಧಾನವೇ ತಿಳಿಯದಾಗಿದೆ. ನಿನ್ನ ನಿಜವಾದ ಹೆಸರು, ವಿಳಾಸ, ಫೇಸ್‌ಬುಕ್‌ ಐಡಿ, ಇ ಮೇಲ್‌, ವಾಟ್ಸಾಪ್‌ ನಂಬರ್‌ ಯಾವುದನ್ನೂ ನಾನು ಅರಿಯೆ. ನಾನು ಬರೆದ ಹಿಂದಿನ ಎರಡು ಪತ್ರದಲ್ಲಿ ನನ್ನ ಮೊಬೈಲ್‌ ಸಂಖ್ಯೆಯನ್ನು ಕವನದ ಸಾಲಲ್ಲಿ ಅಡಗಿಸಿದ್ದೇನೆ. ಸಾಧ್ಯವಾದರೆ, ಒಂದು ಕರೆ ಮಾಡು.

ಇಂತಿ ನಿನ್ನ ಕರೆಗಾಗಿ ಕಾಯುತ್ತಿರುವ,
ಉಲೂಚಿ
* ಸಾವಿತ್ರಿ ಶ್ಯಾನುಭಾಗ

Advertisement
Advertisement

Udayavani is now on Telegram. Click here to join our channel and stay updated with the latest news.

Next