Advertisement
ಕೇಂದ್ರವೇಕೆ ಅಕ್ಕಿ ಕೊಡಲಿಲ್ಲ?ಸದ್ಯ ಕೇಂದ್ರ ಸರಕಾರ ಆಹಾರ ಭದ್ರತಾ ಕಾಯ್ದೆಯಡಿ ದೇಶದ 80 ಕೋಟಿ ಜನರಿಗೆ ಪ್ರತೀ ತಿಂಗಳು ತಲಾ 5 ಕೆ.ಜಿ.ಯಂತೆ ಉಚಿತವಾಗಿ ಅಕ್ಕಿ ನೀಡುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವು ಈ 5 ಕೆ.ಜಿ. ಅಕ್ಕಿ ಜತೆಗೆ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿ ಕೊಡಲು ನಿರ್ಧರಿಸಿದೆ. ಇದಕ್ಕಾಗಿ ಕೇಂದ್ರ ಸರಕಾರದ ಭಾರತ ಆಹಾರ ನಿಗಮದ ಮುಂದೆ ಅಹವಾಲು ಸಲ್ಲಿಕೆ ಮಾಡಿತ್ತು. ಆದರೆ ರಾಜ್ಯದ ಬೇಡಿಕೆಯಾದ ಹೆಚ್ಚುವರಿ ಅಕ್ಕಿಯನ್ನು ನೀಡಲು ಭಾರತ ಆಹಾರ ನಿಗಮ ತಿರಸ್ಕರಿಸಿತು. ದೇಶದ ಹಣದುಬ್ಬರವನ್ನು ಕಾಪಿಟ್ಟುಕೊಳ್ಳುವ ಸಲುವಾಗಿ ನಾವು ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಇರಿಸಿಕೊಂಡಿದ್ದೇವೆ. ಕರ್ನಾಟಕವಷ್ಟೇ ಅಲ್ಲ, ಬೇರೆ ರಾಜ್ಯಗಳ ಬೇಡಿಕೆಯನ್ನೂ ತಿರಸ್ಕರಿಸಲಾಗಿದೆ ಎಂದು ಆಹಾರ ನಿಗಮ ಹೇಳಿದೆ. ಅಲ್ಲದೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಖರೀದಿಸುವಂತೆ ಸೂಚಿಸಿದೆ.
ಓಪನ್ ಮಾರ್ಕೆಟ್ ಸೇಲ್ ಸ್ಕೀಮ್(ಒಎಂಎಸ್‌ಎಸ್) ಅಂದರೆ ಮುಂಗಾರು ಮತ್ತು ಹಿಂಗಾರು ಋತುವಿನಲ್ಲಿ ಭಾರತೀಯ ಆಹಾರ ನಿಗಮ ಮತ್ತು ರಾಜ್ಯ ಆಹಾರ ಸಂಸ್ಥೆಗಳು ಭತ್ತ ಮತ್ತು ಗೋಧಿಯನ್ನು ಖರೀದಿ ಮಾಡಿ ಸಂಗ್ರಹಿಸಿ ಕೇಂದ್ರದ ಸಂಗ್ರಹಾಗಾರದಲ್ಲಿ ಇರಿಸಿಕೊಳ್ಳುತ್ತವೆ. ರೈತರಿಂದ ಕನಿಷ್ಠ ಬೆಂಬಲ ಬೆಲೆ ಆಧಾರದಲ್ಲಿ ಈ ಧಾನ್ಯಗಳನ್ನು ಖರೀದಿ ಮಾಡಲಾಗುತ್ತದೆ. ಕೇಂದ್ರದ ಸಂಗ್ರಹಾಗಾರದಿಂದ ಕೇಂದ್ರ ಸರಕಾರವು ದೇಶದ 80 ಕೋಟಿ ಪಡಿತರ ಫಲಾನುಭವಿಗಳಿಗೆ ಅಕ್ಕಿ ಮತ್ತು ಗೋಧಿಯನ್ನು ನೀಡುತ್ತದೆ. ಇದಕ್ಕಾಗಿಯೇ ಕೇಂದ್ರ ಸಂಗ್ರಹಾಗಾರದಲ್ಲಿ ಭಾರೀ ಪ್ರಮಾಣದಲ್ಲಿಯೇ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಇರಿಸಿಕೊಳ್ಳಲಾಗುತ್ತದೆ. ಓಪನ್ ಮಾರ್ಕೆಟ್ ಸೇಲ್ ಸ್ಕೀಮ್ ಅಥವಾ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಂತೆ, ಕೇಂದ್ರ ಪೂಲ್‌ನಿಂದ, ಭಾರತೀಯ ಆಹಾರ ನಿಗಮವು ಹೆಚ್ಚುವರಿಯಾಗಿ ಉಳಿದ ಭತ್ತ ಮತ್ತು ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಇಲ್ಲಿ ವ್ಯಾಪಾರಿಗಳು, ಹೆಚ್ಚಾಗಿ ಖರೀದಿಸುವ ಗ್ರಾಹಕರು, ಚಿಲ್ಲರೆ ಮಾರಾಟಗಾರರು ಮೊದಲೇ ನಿಶ್ಚಯಿಸಿದ ದರದಂತೆ ಖರೀದಿ ಮಾಡುತ್ತಾರೆ. ಆಹಾರ ನಿಗಮವು ಇ ಹರಾಜಿನ ಮೂಲಕ ಓಪನ್ ಮಾರ್ಕೆಟ್‌ನಲ್ಲಿ ಮಾರಾಟ ಮಾಡುತ್ತದೆ. ಇಲ್ಲಿ ಯಾರು ಬೇಕಾದರೂ ಬಿಡ್ ಮಾಡಬಹುದು. ಅಲ್ಲದೆ ಎಷ್ಟು ಧಾನ್ಯವನ್ನು ಮಾರಾಟ ಮಾಡಬೇಕು ಎಂಬ ಬಗ್ಗೆ ಮೊದಲೇ ನಿರ್ಧರಿಸಲಾಗಿರುತ್ತದೆ. ಸಾಮಾನ್ಯವಾಗಿ ರಾಜ್ಯಗಳು ಇ-ಹರಾಜಿನಲ್ಲಿ ಭಾಗವಹಿಸದೇ ನೇರವಾಗಿ ಇಲ್ಲಿಂದ ಭತ್ತ ಮತ್ತು ಗೋಧಿಯನ್ನು ಖರೀದಿಸಬಹುದಾಗಿದೆ. ಅಂದರೆ ಕೇಂದ್ರ ಸರಕಾರ ನೀಡುವ ಪಡಿತರ ಧಾನ್ಯಕ್ಕಿಂತ ಹೆಚ್ಚುವರಿಯಾಗಿ ನೀಡಲು ಈ ರೀತಿ ಪಡೆಯಬಹುದು. ಮುಕ್ತ ಮಾರುಕಟ್ಟೆ ಕಾರ್ಯಾಚರಣೆ ಹೇಗೆ?
ಬಿತ್ತನೆ ನಡುವಿನ ಸಂದರ್ಭದಲ್ಲಿ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ನಡೆಯುತ್ತದೆ. ಅಂದರೆ ದೇಶೀಯವಾಗಿ ಪೂರೈಕೆಯನ್ನು ಹೆಚ್ಚಳ ಮಾಡುವುದು ಮತ್ತು ಧಾನ್ಯಗಳ ಸಂಗ್ರಹವನ್ನು ಸುಧಾರಣೆ ಮಾಡುವ ಸಲುವಾಗಿ ಈ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಷ್ಟೇ ಅಲ್ಲ, ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಇಳಿಸುವ ಸಲುವಾಗಿಯೂ ಓಪನ್ ಮಾರ್ಕೆಟ್ ಸೇಲ್ ಸ್ಕೀಮ್‌ನಲ್ಲಿ ಬಿಡಲಾಗುತ್ತದೆ. ಇದರ ಪ್ರಮುಖ ಉದ್ದೇಶವೇ ಹಣದುಬ್ಬರ ಇಳಿಸುವುದಾಗಿದೆ. ಈ ವರ್ಷ ಜನವರಿಯಲ್ಲಿ ಗೋಧಿಯನ್ನು ಎಫ್ಸಿಐ ಮಾರಾಟ ಮಾಡಲು ಆರಂಭಿಸಿತ್ತು. ಮಾ.15ರ ವರೆಗೆ ಇ ಹರಾಜಿನ ಮೂಲಕ ಮಾರಾಟ ಮಾಡಿತ್ತು. ಇದರಿಂದಾಗಿ ಗೋಧಿ ಬೆಲೆ ಶೇ.19ರಷ್ಟು ಕಡಿಮೆಯಾಗಿತ್ತು. ಈಗ ಮತ್ತೂಂದು ಸುತ್ತಿನ ಇ ಹರಾಜು ನಡೆದಿದ್ದು, ಗೋಧಿಯನ್ನು ಮಾರಾಟ ಮಾಡಲಾಗುತ್ತಿದೆ. ಜತೆಗೆ ಸದ್ಯದಲ್ಲೇ ಅಕ್ಕಿಯ ಮಾರಾಟವೂ ಶುರುವಾಗಲಿದೆ. ಸದ್ಯ ಗೋಧಿ ಬೆಲೆ ಪ್ರತೀ ಕ್ವಿಂಟಾಲ್‌ಗೆ 2,150 ಇದ್ದರೆ, ಅಕ್ಕಿ ದರ ಪ್ರತೀ ಕ್ವಿಂಟಾಲ್‌ಗೆ 3,100 ರೂ. ನಿಗದಿ ಮಾಡಲಾಗಿದೆ.
Related Articles
ಕೇಂದ್ರ ಸರಕಾರ ಆಗಾಗ ಎಷ್ಟು ಧಾನ್ಯವನ್ನು ಮಾರಾಟ ಮಾಡಬೇಕು? ಮತ್ತು ಯಾವ ದರಕ್ಕೆ ಮಾರಾಟ ಮಾಡಬೇಕು ಎಂಬ ಬಗ್ಗೆ ನಿರ್ಧರಿಸುತ್ತದೆ. ಈ ಮೊದಲು ಕೇಂದ್ರ ಪ್ರತಿಯೊಬ್ಬ ಖರೀದಿದಾರನಿಗೆ 3,000 ಮೆಟ್ರಿಕ್ ಟನ್‌ನಷ್ಟು ಧಾನ್ಯ ನೀಡುತ್ತಿತ್ತು. ಆದರೆ ಈಗ ಇದನ್ನು 10ರಿಂದ 100 ಮೆಟ್ರಿಕ್ ಟನ್‌ಗಳಿಗೆ ಇಳಿಕೆ ಮಾಡಲಾಗಿದೆ.
Advertisement
ಸಣ್ಣ ಮತ್ತು ಪುಟ್ಟ ಖರೀದಿದಾರರಿಗೆ ಅನುಕೂಲವಾಗಲಿ ಮತ್ತು ಈ ಯೋಜನೆ ಸಾಕಷ್ಟು ಜನರಿಗೆ ತಲುಪಲಿ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದೆ. ಸಣ್ಣ ಪುಟ್ಟ ಖರೀದಿದಾರರು ಇಲ್ಲಿಂದ ಅಕ್ಕಿ ಗೋಧಿ ಖರೀದಿ ಮಾಡಿದರೆ, ನೇರವಾಗಿ ಜನರನ್ನು ತಲುಪುತ್ತದೆ ಎಂಬ ಯೋಚನೆ ಕೇಂದ್ರದ್ದು. ರಷ್ಯಾ-ಉಕ್ರೇನ್ ಯುದ್ಧ, ದೇಶದಲ್ಲಿ ಅತಿವೃಷ್ಟಿ , ಅನಾವೃಷ್ಟಿಯಿಂದ ಸರಿಯಾದ ಪ್ರಮಾಣದಲ್ಲಿ ಆಹಾರ ಧಾನ್ಯ ಉತ್ಪಾದನೆಯಾಗುತ್ತಿಲ್ಲ.
ಈ ಮಧ್ಯೆ ಜೂ.13ರಂದು ಹೊರಡಿಸಿದ ಆದೇಶದಲ್ಲಿ ರಾಜ್ಯ ಸರಕಾರಗಳಿಗೆ ಅಕ್ಕಿ ಮತ್ತು ಗೋಧಿ ಕೊಡದಿರಲು ನಿಲ್ಲಿಸಿದೆ. ಅಲ್ಲದೆ ಖಾಸಗಿಯವರೂ, ರಾಜ್ಯ ಸರಕಾರಗಳಿಗೆ ಮಾರಾಟ ಮಾಡದಂತೆ ನಿರ್ಬಂಧ ವಿಧಿಸಿದೆ.