Advertisement

ಎಸ್‌ಪಿ ಸುಧೀರ್‌ ರೆಡ್ಡಿ ವರ್ಗಾವಣೆಗೆ ಕಾರಣ ಕೊಡಿ

11:20 AM Jan 23, 2018 | |

ಮಹಾನಗರ: ದಕ್ಷ ಅಧಿಕಾರಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ರೆಡ್ಡಿ ಅವರ ವರ್ಗಾವಣೆ ವಿರೋಧಿಸಿ ಸಾಮಾಜಿಕ ತಾಣ ಟ್ವೀಟರ್‌ನಲ್ಲಿ ಸರಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. “ವರ್ಗಾವಣೆಗೆ ಕಾರಣ ನೀಡಿ’ ಎಂದು ಟ್ವೀಟಿಗರು ಸಿಎಂ ಸಿದ್ಧರಾಮಯ್ಯ, ಗೃಹ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರನ್ನೇ ನೇರವಾಗಿ ಪ್ರಶ್ನಿಸುತ್ತಿದ್ದಾರೆ. ಈ ಸಂಬಂಧ ಸರಕಾರದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಸುಧೀರ್‌ ರೆಡ್ಡಿ ಅವರನ್ನು ಜಿಲ್ಲೆಯಲ್ಲೇ ಉಳಿಸಿಕೊಳ್ಳಲು ಜನಬೆಂಬಲ ಪಡೆಯುವ ಪ್ರಯತ್ನ ಟ್ವಿಟ್ಟರ್‌ನಲ್ಲಿ ನಡೆಯತ್ತಿದ್ದು, “ಕಾರಣ ನೀಡದಿದ್ದರೆ, ಮುಂದಿನ
ವಿಧಾನಸಭೆ ಚುನಾವಣೆಯಲ್ಲಿ ನಿಮ್ಮನ್ನೇ ಮನೆಗೆ ಕಳುಹಿಸುತ್ತೇವೆ’ ಎಂದು ಎಚ್ಚರಿಸಲಾಗುತ್ತಿದೆ.

Advertisement

ಜೈ ತುಳುನಾಡು ಸಂಘಟನೆಯ ನೇತೃತ್ವದಲ್ಲಿ “ವಿ ವಾಂಟ್‌ ಸುಧೀರ್‌ರೆಡ್ಡಿ’ ಎಂಬ ಹ್ಯಾಶ್‌ಟ್ಯಾಗ್‌ ಅಡಿ “ಸೇವ್‌ ತುಳುನಾಡು’ ಭಾನುವಾರದಿಂದ ಆನ್‌ಲೈನ್‌ ಅಭಿಯಾನ ಪ್ರಾರಂಭಿಸಿದೆ. ಎರಡು ದಿನಗಳಲ್ಲಿ ಈ ಅಭಿಯಾನಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಜತೆಗೆ ಈ ಟ್ವೀಟ್‌ಗಳನ್ನು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಟ್ಯಾಗ್‌ ಮಾಡಲಾಗುತ್ತಿದೆ. ಸರಕಾರದಿಂದ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಮಂಗಳವಾರವೂ ಅಭಿಯಾನ ಮುಂದುವರಿಯಲಿದೆ. ಇದಕ್ಕೂ ಸರಕಾರ ಉತ್ತರಿಸದಿದ್ದರೆ, ಬೇರೆ ರೀತಿಯ ಪ್ರತಿಭಟನೆ ಹಮ್ಮಿಕೊಳ್ಳೂವುದಾಗಿ ಅಭಿಯಾನದ ಸಂಘಟಕ ಅಶ್ವತ್‌ “ಸುದಿನ’ಕ್ಕೆ ತಿಳಿಸಿದ್ದಾರೆ. “ಓರ್ವ ಅಧಿಕಾರಿಯನ್ನು ಒಂದೆಡೆ ಸರಿಯಾಗಿ ಕೆಲಸ ಮಾಡಲು ಬಿಡದ ಆಡಳಿತ ವರ್ಗ, ರಾಜ್ಯದಲ್ಲಿ ಅದೆಂತ ಅಭಿವೃದ್ಧಿಯನ್ನು 
ಮಾಡಬಹುದು’, “ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಗಳಾದರೆ ಅವರಿಗೆ ಭಡ್ತಿ ನೀಡುತ್ತೀರಿ; ಆದರೆ ಪ್ರಾಮಾಣಿಕವಾಗಿ ಯಾವುದೇ ಪ್ರಭಾವಕ್ಕೆ ಜಗ್ಗದೆ ಕೆಲಸ ಮಾಡಿದರೆ ಎತ್ತಂಗಡಿ ಮಾಡುತ್ತೀರಿ’ ಎಂದು ಸರಕಾರದ ವಿರುದ್ಧ ಟ್ವೀಟಿಗರು ಆಕ್ರೋಶ ತೋರ್ಪಡಿಸಿದ್ದಾರೆ. “ಪೊಲೀಸ್‌ ವರಿಷ್ಠಾಧಿಕಾರಿಯವರು ಪ್ರಾಮಾಣಿಕತೆಯನ್ನು ಮಾರಿಕೊಳ್ಳದ್ದಕ್ಕೆ ಈ ಶಿಕ್ಷೆಯೇ’ ಎಂದು ನೇರವಾಗಿ ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದ್ದಾರೆ ಟ್ವೀಟಿಗರು. “ನಮಗೆ ಸರಕಾರದ ಬಿಟ್ಟಿ ಭಾಗ್ಯಗಳು ಬೇಡ; ದಕ್ಷ ಅಧಿಕಾರಿಗಳು ಬೇಕು’ ಎಂಬುದಾಗಿ ಆಗ್ರಹಿಸಿದ್ದಾರೆ. 

ವರ್ಗಾವಣೆ ಭಾಗ್ಯ ವಿವಿಧ ಭಾಗ್ಯಗಳನ್ನು ನೀಡುತ್ತಿರುವ ಸರಕಾರದಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ವರ್ಗಾವಣೆ ಭಾಗ್ಯ ದೊರೆಯುತ್ತಿದೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ನಿರಂತರವಾಗಿ ವರ್ಗಾಯಿಸುವುದನ್ನು ನಿಲ್ಲಿಸಬೇಕೆಂದೂ ಟ್ವೀಟಿಗರು ಆಗ್ರಹಿಸುತ್ತಿದ್ದಾರೆ. ಕರಾವಳಿಯಲ್ಲಿ ಶಾಂತಿ-ಸಾಮರಸ್ಯ ಪುನಃ ಸ್ಥಾಪನೆಯಾಗಲು ಸುಧೀರ್‌ ರೆಡ್ಡಿ ಅವರಂಥ ಖಡಕ್‌ ಅಧಿಕಾರಿಗಳು ಅವಶ್ಯ. ಆದರೆ ಅಂಥವರನ್ನು ನೇಮಿಸಿ ಐದಾರೇ ತಿಂಗಳಲ್ಲಿ ಬೇರೆಡೆಗೆ ವರ್ಗಾಯಿಸಲಾಗುತ್ತದೆ. ಇದರಿಂದ ಅವರ ಕಾರ್ಯನಿಷ್ಠೆ ಮತ್ತು ಕರಾವಳಿಯ ಒಟ್ಟಾರೆ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. 

ಹಲವು ಅಧಿಕಾರಿಗಳ ವರ್ಗಾವಣೆ
ಐದಾರು ವರ್ಷದಲ್ಲಿ 5 ಪೊಲೀಸ್‌ ವರಿಷ್ಠಾಧಿಕಾರಿಗಳು, ಐವರು ಜಿಲ್ಲಾಧಿಕಾರಿಗಳು ಹಾಗೂ ನಾಲ್ವರು ನಗರ ಪೊಲೀಸ್‌ ಆಯುಕ್ತರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ವರ್ಗಾಯಿಸಲಾಗಿದೆ. ಈಗ, ಸುಧೀರ್‌ ಕುಮಾರ್‌ ರೆಡ್ಡಿ ಅವರನ್ನು ಆರೇ ತಿಂಗಳಲ್ಲಿ ವಿನಾಕಾರಣವಿಲ್ಲದೆ ವರ್ಗಾವಣೆ ಮಾಡಿದೆ. ಬೆಳಗಾವಿ ಎಸ್‌ಪಿ ರವಿಕಾಂತೇಗೌಡರಿಗೆ ಸ್ಥಳಾವಕಾಶ ಮಾಡಿಕೊಡಬೇಕು ಎಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ವತಃ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರೇ ಹೇಳಿದ್ದಾರೆ. ಹಾಗಾದರೆ, ದಕ್ಷ ಅಧಿಕಾರಿ ಸುಧೀರ್‌ ರೆಡ್ಡಿಯನ್ನು ದಕ್ಷಿಣ
ಕನ್ನಡದಲ್ಲೇ ಉಳಿಸಿಕೊಂಡು, ರವಿಕಾಂತೇಗೌಡರಿಗೆ ಬೇರೆ ಜಿಲ್ಲೆಯಲ್ಲಿ ಸ್ಥಳಾವಕಾಶ ಮಾಡಿಕೊಡಬೇಕಿತ್ತೆಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಏಕೆಂದರೆ, ಸುಧೀರ್‌, ಜಿಲ್ಲೆಗೆ ಬಂದು ಆರೇ ತಿಂಗಳಲ್ಲಿ ಸ್ಥಳೀಯ ತುಳು ಭಾಷೆ ಕಲಿತು ಜಿಲ್ಲೆಯ ಬಗ್ಗೆ ಪ್ರೀತಿ ಗೌರವ ಬೆಳೆಸಿ ಕೊಂಡಿದ್ದರು. ಇಂಥ ಅಧಿಕಾರಿಯನ್ನು ಕಾರಣವಿಲ್ಲದೆ ವರ್ಗಾಯಿಸಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ. 

ನಿಮ ಅಭಿಪ್ರಾಯ ಕಳುಹಿಸಿ
ಎಸ್‌ಪಿ ಸುಧೀರ್‌ ರೆಡ್ಡಿ ದಿಢೀರ್‌ ವರ್ಗಾವಣೆ ಸಂಬಂಧ ನಿಮ್ಮ ಅಭಿಪ್ರಾಯಗಳನ್ನು ಸಂಕ್ಷಿಪ್ತವಾಗಿ ವಿಳಾಸ ಮತ್ತು ಭಾವಚಿತ್ರದೊಂದಿಗೆ “ಸುದಿನ’ಕ್ಕೆ ಕಳುಹಿಸಿ.
ವಾಟ್ಸಾಪ್‌ ಸಂಖ್ಯೆ: 9900567000

Advertisement
Advertisement

Udayavani is now on Telegram. Click here to join our channel and stay updated with the latest news.

Next