Advertisement
ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಸದಾನಂದ ಗೌಡ ಮೂರನೇ ಬಾರಿಗೆ ಪಕ್ಷದ ಒಲವು-ನಿಲುವುಗಳ ಬಗ್ಗೆ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. 11 ಜನ ಸಂಸದರಿಗೆ ಈ ಬಾರಿ ಟಿಕೆಟ್ ಇಲ್ಲ ಎಂಬ ಸುದ್ದಿಯನ್ನು ಪಕ್ಷದಿಂದಲೇ ಹರಿಬಿಡಲಾಗಿದೆ ಎಂದು ಪತ್ರಿಕಾಗೋಷ್ಠಿ ಕರೆದು ಕಿಡಿಕಾರಿದ್ದರು. ಇದಾದ ಬಳಿಕ ಪಕ್ಷದ ಕೋರ್ ಕಮಿಟಿ ಸಭೆಯಲ್ಲೇ ವರಿಷ್ಠರ ನಿರ್ಧಾರಗಳ ಬಗ್ಗೆ ಪ್ರಶ್ನಿಸಿದ್ದರು.ಹಾಗೆ ನೋಡಿದರೆ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ನೇಮಕ ವಿಳಂಬದ ಬಗ್ಗೆ ಮೊದಲ ಬಾರಿಗೆ ಧ್ವನಿ ಎತ್ತಿದ್ದೇ ಸದಾನಂದ ಗೌಡ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಮ್ಮುಖದಲ್ಲೇ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ಅವರು, ಕೋರ್ ಕಮಿಟಿಗೆ ಯಾವ ಮಹತ್ವವಿದೆ? ಕೋರ್ ಕಮಿಟಿ ತೆಗೆದುಕೊಂಡ ಎಷ್ಟು ನಿರ್ಧಾರಗಳಿಗೆ ಹೈಕಮಾಂಡ್ ಮನ್ನಣೆ ನೀಡಿದೆ ಎಂದು ಪ್ರಶ್ನಿಸಿದ್ದರು. ಇದಾದ ಬಳಿಕ ಮೈತ್ರಿ ವಿಚಾರದಲ್ಲಿ ತಮ್ಮನ್ನು ಹೊರಗಿಟ್ಟು ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಆಕ್ಷೇಪಕ್ಕೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಹೊಸ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬಹುದೆಂಬ ವದಂತಿಯೇ ಕಾರಣ ಎಂಬ ಮಾತುಗಳು ಕೇಳಿ ಬಂದಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಾದರೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಬಹುತೇಕ ಅಂತಿಮವಾಗಿದೆ. ಹೀಗಾಗಿ ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಬೆಂಗಳೂರು ಉತ್ತರಕ್ಕೆ ವಲಸೆ ಬರುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಪಕ್ಷದಲ್ಲಿ ಚರ್ಚೆಗಳು ಪ್ರಾರಂಭವಾಗಿವೆ. ಆಗ ಸದಾನಂದ ಗೌಡರಿಗೆ ಟಿಕೆಟ್ ಕೈ ತಪ್ಪುತ್ತದೆ. ಪಕ್ಷದಲ್ಲಿ ಇಷ್ಟೆಲ್ಲ ಪ್ರಕ್ರಿಯೆಗಳು ನಡೆಯುತ್ತಿದ್ದರೂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬುದೇ ಈ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಬಿಜೆಪಿ ಮೂಲಗಳ ಪ್ರಕಾರ ವಿಧಾನಸಭಾ ಚುನಾವಣೆಯ ರೀತಿ ಲೋಕಸಭಾ ಚುನಾವಣೆಯಲ್ಲೂ ಪಕ್ಷ ಕೆಲವು ಬದಲಾವಣೆಗಳಿಗೆ ಕೈ ಹಾಕಲಿದೆ. ಸುದೀರ್ಘ ಅವಧಿಗೆ ಅಧಿಕಾರ ಅನುಭವಿಸಿದ ಹಿರಿಯರಿಗೆ ನೇಪಥ್ಯಕ್ಕೆ ಸರಿಯುವ ಸೂಚನೆಯನ್ನು ವರಿಷ್ಠರೇ ನೀಡಲಿದ್ದಾರೆ. ಆದರೆ ಚುನಾವಣೆಯ ಹೊಸ್ತಿಲಲ್ಲಿ ಇಂಥ ಸಂದೇಶ ಕಳುಹಿಸುವುದರ ಬದಲು ಮುಂಚಿತವಾಗಿಯೇ “ಮಾನಸಿಕವಾಗಿ ಸಿದ್ಧ’ರಾಗಿ ಎಂಬ ಸೂಚನೆಯನ್ನು ಬೇರೆ ಬೇರೆ ಮಾರ್ಗಗಳಿಂದ ಹಿರಿಯರಿಗೆ ನೀಡಲಾಗುತ್ತಿದೆ. ಸದಾನಂದ ಗೌಡರ ನಿರ್ಲಕ್ಷ್ಯವೂ ಒಂದು ಸಂದೇಶ ಎಂದು ಹೇಳಲಾಗುತ್ತಿದೆ.
Related Articles
ಇದೆಲ್ಲದರ ಮಧ್ಯೆ ಬೆಂಗಳೂರು ನಗರದ ಮೂರು ಲೋಕಸಭಾ ಕ್ಷೇತ್ರಗಳ ಬಗ್ಗೆ ಪಕ್ಷದಿಂದ ಸಮೀಕ್ಷೆ ನಡೆಸಲಾಗುತ್ತಿದೆ. ಮತದಾರರ ಮನದಾಳವನ್ನು ಅರಿಯುವುದಕ್ಕಾಗಿ ಪಕ್ಷ ಈ ಕ್ರಮಕ್ಕೆ ಮುಂದಾಗಿದೆ. ಅದೇ ರೀತಿ ಜೆಡಿಎಸ್ ಕೂಡ ತಾನು ಅಪೇಕ್ಷೆ ಪಟ್ಟಿರುವ ಕ್ಷೇತ್ರಗಳ ಬಗ್ಗೆ ಸಮೀಕ್ಷೆ ಪ್ರಾರಂಭಿಸಿದೆ. ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಇದರ ಆಧಾರದ ಮೇಲೆ ಹಳೆ ಮೈಸೂರು ಭಾಗದಲ್ಲಿ ಸ್ಥಾನ ಹಂಚಿಕೆ ಬಗ್ಗೆ ಮಾತುಕತೆ ನಡೆಯಲಿದೆ ಎಂದು ತಿಳಿದು ಬಂದಿದೆ.
Advertisement