Advertisement

ನಮ್ಮನ್ನು ರಕ್ಷಿಸುವ ಶಕ್ತಿ ಯಾವುದು?

10:43 AM Oct 13, 2018 | |

ಸುಕೃತವೆಂದರೆ, ನಾವು ಮಾಡುವ ಉತ್ತಮ ಕರ್ಮಗಳು. ಅಂದರೆ, ಒಳ್ಳೆಯ ಕಾರ್ಯಗಳು. ಹಾಗಾಗಿ, ಯಾವೊತ್ತಿಗೂ ನಾವು ಮಾಡುವ ಸತ್ಕಾರ್ಯಗಳು ಅಥವಾ ಪಾಪರಹಿತ ಕರ್ಮಗಳೇ ನಮ್ಮ ಸಂಕಷ್ಟಗಳಿಗೆ ವಿರೋಧಾಸ್ತ್ರವಾಗಿ ನಮ್ಮನ್ನು ಕಾಪಾಡುತ್ತವೆ.

Advertisement

ಜಗತ್ತು ಎಷ್ಟೇ ಮುಂದುವರಿದರೂ ಪ್ರತಿಯೊಬ್ಬನಲ್ಲಿಯೂ, ಬದುಕಿನಲ್ಲಿ ಒಮ್ಮೆಯಾದರೂ, ನನ್ನನ್ನು ಸಂಕಷ್ಟದಿಂದ ಪಾರು ಮಾಡುವ ಶಕ್ತಿ ಯಾವುದು? ಹೇಗೆ? ಎಂಬ ಪ್ರಶ್ನೆ ನುಸುಳದೇ ಇರುವುದಿಲ್ಲ. ಯಾಕೆಂದರೆ, ಮಾನವನ ನಶ್ವರವಾದ ಬದುಕಿನಲ್ಲಿ ನೋವು ನಲಿವಿನ ಕ್ಷಣಗಳು ಸೂರ್ಯ ಚಂದ್ರರ ಉದಯಾಸ್ತೋಪಾದಿಯಲ್ಲಿ ಹಾದು ಹೋಗುತ್ತಲೇ ಇರುತ್ತವೆ. ಅದು ಜೀವನ ವಿಧಾನವೂ ಇರಬಹುದು, ಸಹಜವಾದುದೂ ಇರಬಹುದು ಅಥವಾ ಸ್ವಯಂಕೃತವೇ ಇದ್ದಿರಬಹುದು. ಒಂದು ನೋವಿನ ಕ್ಷಣಕ್ಕೆ ಮೂರು ದಿನದ ನಲಿವನ್ನೂ ಕೊಲ್ಲುವ ಶಕ್ತಿ ಇದೆ ಎಂತಲೇ ಭಾವಿಸಿದ್ದೇವೆ. ಆದರೆ ವಾಸ್ತವಿಕವಾಗಿ ನಾವು ನಲಿವನ್ನು ಮರೆತಷ್ಟು ಬೇಗ ನೋವನ್ನು ಮರೆಯುವುದಿಲ್ಲ. ಹಾಗಾಗಿ, ಈ ನೋವುಗಳಿಗೆ ಕೊನೆಯಿಲ್ಲವೇ? ಈ ನೋವುಗಳಿಂದ ನಮ್ಮನ್ನು ಪಾರುಮಾಡುವವರು, ಕಷ್ಟಗಳಿಂದ ಕಾಪಾಡುವವರು ಯಾರೂ ಇಲ್ಲವೇ ಎಂಬ ಪ್ರಶ್ನೆಗಳು ಕಾಡುವುದು ಸಹಜ. ಎಲ್ಲ ಕಷ್ಟಗಳಿಂದಲೂ ನಮ್ಮನ್ನು ಪಾರು ಮಾಡುವ ಶಕ್ತಿ ನಮ್ಮ ಜೊತೆಗೇ ಇದೆ ಎಂಬುದನ್ನು, ಧರ್ಮ ಸಾರುತ್ತಲೇ ಬಂದಿದೆ. ಧರ್ಮ, ನಮ್ಮ ಕರ್ಮಗಳನ್ನು ನಿರ್ಣಯಿಸುತ್ತದೆ. ಅದರ ಫ‌ಲವೂ ಕರ್ಮದ ಮೇಲೆಯೇ ನಿಂತಿದೆ. ಸರಳವಾಗಿ ಹೇಳುವುದಾದರೆ, ಬೇವು ನೆಟ್ಟು ಮಾವು ಬೇಕೆಂದು ಕಾದರೆ ಅದು ಸಾಧ್ಯವೇ? ಎಂಬಂತೆ ಬದುಕುವ ದಾರಿಯೇ ನೋವು ನಲಿವುಗಳ ಪ್ರಮಾಣವನ್ನು ನಿರ್ಧರಿಸುವ ಮುಖ್ಯ ಸಂಗತಿ. ಹಾಗಾಗಿ, ಧರ್ಮದ ಹಾದಿ ತೊರೆಯಬಾರದು.

 ಹೀಗೊಂದು ಶ್ಲೋಕವಿದೆ;
ವನೇ ರಣೇ ಕ್ಷತ್ರು ಜಲಾಗ್ನಿ ಮಧ್ಯೇ|
ಮಹಾರ್ಣವೇ ಪರ್ವತ ಮಸ್ತಕೇಪಿವಾ |
ಸುಪ್ತಂ ಪ್ರಮತ್ತಂ ವಿಷಮಸ್ಥಿತಂ ವಾ |
ರಕ್ಷಂತಿ ಪುಣ್ಯಾನಿ ಪುರಾಕೃತಾನಿ ||
ವನದಲ್ಲಿ, ಯುದ್ಧದಲ್ಲಿ, ಶತ್ರುವಿನಿಂದ, ಜಲ, ಅಗ್ನಿ, ಮಹಾಸಮುದ್ರ, ಪರ್ವತ, ನಿದ್ರಾವಸ್ಥೆ, ಅಜಾಗ್ರತೆ ಸಂಕಟಮಯ ಈ ಎಲ್ಲಾ  ಕಾಲದಲ್ಲಿಯೂ ಕೇವಲ ನಾವು ಮಾಡಿದ ಸುಕೃತವೇ ನಮ್ಮನ್ನೇ ರಕ್ಷಿಸುತ್ತದೆ. ಅಂದರೆ, ನಮ್ಮೆಲ್ಲ ಕಷ್ಟಗಳನ್ನು ಪರಿಹರಿಸುವ ಶಕ್ತಿಯೆಂದರೆ ಸುಕೃತ. ಇಲ್ಲಿ ಹೇಳಿದ ಸಮಯದಲ್ಲಿ ಉಂಟಾಗುವ ತೊಂದರೆಗಳು ಬಹಳ ಅಪಾಯಕಾರಿಯಾದುದು. ವನದಲ್ಲಿ ಅಂದರೆ, ಘೋರಕಾನನದಲ್ಲಿ ಸಿಕ್ಕಿ ಹಾಕಿಕೊಂಡರೆ, ನೀರು ಬೆಂಕಿಯಿಂದಾಗುವ ಅನಾಹುತಗಳು, ನಿದ್ರೆಯಲ್ಲಿ ಏನೂ ಬೇಕಾದರೂ ಆಗಬಹುದು ಅಂಥ ಅಪಾಯಗಳು, ಅಜಾಗರೂಕತೆಯಿಂದಾಗುವ ಅನಾಹುತಗಳು ಇವೆಲ್ಲವೂ ವಿಪರೀತ ಪರಿಣಾಮವನ್ನುಂಟು ಮಾಡುವ ಮತ್ತು ಆ ಕೂಡಲೇ ತಪ್ಪಿಸಿಕೊಳ್ಳಲಾಗದ ಪರಿಸ್ಥಿತಿಯನ್ನು ತಂದೊಡ್ಡುವಂಥವು. ಇಂತಹ ಸಂಕಷ್ಟದಲ್ಲಿಯೂ ನಮ್ಮನ್ನು ರಕ್ಷಿಸುವುದಿದ್ದರೆ ಅದು ಸುಕೃತ.

ಸುಕೃತ ಎಂದರೇನು?
 ಸುಕೃತವೆಂದರೆ, ನಾವು ಮಾಡುವ ಉತ್ತಮ ಕರ್ಮಗಳು. ಅಂದರೆ, ಒಳ್ಳೆಯ ಕಾರ್ಯಗಳು. ಹಾಗಾಗಿ, ಯಾವೊತ್ತಿಗೂ ನಾವು ಮಾಡುವ ಸತ್ಕಾರ್ಯಗಳು ಅಥವಾ ಪಾಪರಹಿತ ಕರ್ಮಗಳೇ ನಮ್ಮ ಸಂಕಷ್ಟಗಳಿಗೆ ವಿರೋಧಾಸ್ತ್ರವಾಗಿ ನಮ್ಮನ್ನು ಕಾಪಾಡುತ್ತವೆ. ಇದನ್ನು, ಇನ್ನೂ ಸರಳವಾಗಿ ಹೇಳಬಹುದಾದರೆ-ಇವತ್ತು ನಾವು ಒಬ್ಬನಿಗೆ ಒಳಿತನ್ನು ಮಾಡಿದರೆ ಮುಂದೆ ಇನ್ನಾರೋ ನಮಗೆ ಅಗತ್ಯವಿದ್ದಾ ಗ ನಮ್ಮ ಸಹಾಯಕ್ಕಾಗುತ್ತಾರೆ. ಇದು ಎಂದೆಂದಿಗೂ ಸತ್ಯ.

ಬದುಕಿನಲ್ಲಿ ಕರ್ಮದ ಮೂಲಕ ಕಷ್ಟವನ್ನು ತಂದುಕೊಳ್ಳುವವರೂ ನಾವೇ; ಅದರಿಂದ ಪಾರುಮಾಡುವುದೂ ನಾವು ಮಾಡುವ ಸುಕೃತದ ಫ‌ಲವೇ ಆಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next