ಹುಬ್ಬಳ್ಳಿ: “ಹೊರಟ್ಟಿಯವರೇ, 35 ವರ್ಷಗಳ ನಿಮ್ಮ ರಾಜಕೀಯ ಜೀವನದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ನೀಡಿದ ಕೊಡುಗೆಯಾದರೂ ಏನು?’
-ಹೀಗೆಂದು ಪ್ರಶ್ನಿಸಿದವರು ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹೊರಟ್ಟಿಯವರು ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಲಿ, ತಮ್ಮ ಘನತೆಗೆ ತಕ್ಕಂತೆ ಮಾತನಾಡಲಿ. ಅವರು ನನ್ನ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದಾರೆ. ಹಿಂದಿನಿಂದಲೂ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಏಕೆ ಎಂಬುದನ್ನು ಬಹಿರಂಗಪಡಿಸಲಿ. ನನ್ನ ಕಾರ್ಯ ವೈಖರಿಯನ್ನು ಕಂಡಿದ್ದೀರಿ. ಆದರೆ ಮಾಧ್ಯಮಗಳಲ್ಲಿ ನೀವು ಕೆಲಸವಿಲ್ಲದ ಸ್ವಾಮಿ ಎಂದಿದ್ದೀರಿ. ನನ್ನ ಸೇವೆ ಏನು, ನಿಮ್ಮ ಸೇವೆ ಏನೆಂಬುದನ್ನು ನಾಡು ಪರಿಗಣಿಸಿದೆ’ ಎಂದರು.
ಒಂದು ಸಮಾಜವನ್ನು ಒಡೆಯಲು ಪಕ್ಷಭೇದ ಮರೆತು ನಿಂತ ರಾಜಕಾರಣಿಗಳು ಏಕೆ ಈ ಭಾಗದ ಜನರ ಬೇಡಿಕೆಗೆ ಕಿವಿಗೊಡುತ್ತಿಲ್ಲ. ಲಿಂಗಾಯತ ಧರ್ಮ ಇಬ್ಭಾಗಿಸಲು ಪಕ್ಷಾತೀತ ಹೋರಾಟ ಮಾಡಿದವರು ಉತ್ತರ ಕರ್ನಾಟಕ ಅಭಿವೃದ್ಧಿಗೇಕೆ ಪಕ್ಷಾತೀತವಾಗಿ ಹೋರಾಟ ಮಾಡುತ್ತಿಲ್ಲ, ಆಡಳಿತರೂಢ ಸರ್ಕಾರದ ಮಲತಾಯಿ ಧೋರಣೆಯೇ ಪ್ರತ್ಯೇಕ ರಾಜ್ಯದ ಕೂಗಿಗೆ ಕಾರಣ. ಪ್ರತ್ಯೇಕತೆಯ ಕೂಗು ನನ್ನದೊಬ್ಬನದ್ದಲ್ಲ. ಉತ್ತರ ಕರ್ನಾಟಕ ಭಾಗದ ಜನರ ಕೂಗಾಗಿದೆ. ಅದಕ್ಕೆ ನನ್ನ ಬೆಂಬಲವೂ ಇದೆ ಎಂದರು.