Advertisement

Karnataka Govt. ಗ್ಯಾರಂಟಿ ಬಿಟ್ಟರೆ ಬೇರೇನಿದೆ ಸಾಧನೆ: ಎಚ್‌ಡಿಕೆ ಪ್ರಶ್ನೆ

11:05 PM May 20, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಒಂದು ವರ್ಷದಿಂದ ಅಭಿವೃದ್ಧಿ ಎನ್ನುವುದು ಸಂಪೂರ್ಣ ಸ್ಥಗಿತವಾಗಿದ್ದು ಗ್ಯಾರಂಟಿ, ಸಿಎಸ್‌ಆರ್‌ ನಿಧಿಯ ಹೆಸರು ಹೇಳಿಕೊಂಡು ವರ್ಗಾವಣೆ ದಂಧೆ ಮಾಡಿದ್ದನ್ನು ಬಿಟ್ಟು ಬೇರ್ಯಾವ ಸಾಧನೆಯನ್ನೂ ಮಾಡಿಲ್ಲ. ಪೆನ್‌ಡ್ರೈವ್‌ ಪ್ರಕರಣದಲ್ಲಿ ಏನು ಸಾಧನೆ ಮಾಡಿದ್ದಾರೆ? ಜನರೆ ತೆರಿಗೆ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವ ಜಾಹೀರಾತಿನ ಸರಕಾರವಿದು ಎಂದುಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಾಗ್ಧಾಳಿ ನಡೆಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ನಾಡಿನ ಅಭಿವೃದ್ಧಿಗೆ ಪೂರಕವಾದ ಒಂದೇ ಒಂದು ಯೋಜನೆಯನ್ನೂ ಈ ಸರಕಾರ ಮಾಡಿಲ್ಲ. ಹಿಂದಿನ ಸರಕಾರ ಮಂಜೂರು ಮಾಡಿದ್ದ ಕಾಮಗಾರಿಗಳನ್ನು ಮುಂದುವರಿಸಿದ್ದು ಬಿಟ್ಟರೆ ಹೊಸದಾಗಿ ಯಾವ ಕಾಮಗಾರಿಯನ್ನೂ ಕೈಗೆತ್ತಿಕೊಂಡಿಲ್ಲ ಎಂದು ಹರಿಹಾಯ್ದರು.

ಗ್ಯಾರಂಟಿ ಯೋಜನೆಗಳ ಹೆಸರು ಹೇಳುವುದು ಬಿಟ್ಟರೆ ಒಂದೇ ಒಂದು ಅಭಿವೃದ್ಧಿ ಕಾಮಗಾರಿ ಮಾಡಿಲ್ಲ. ವರ್ಗಾವಣೆ ದಂಧೆಯನ್ನಂತೂ ಕೇಳುವವ ರಿಲ್ಲ. ವರ್ಗಾವಣೆಗೆ ಹೊಸದಾಗಿ ಸಂಕೇತಗಳನ್ನು ಬೇರೆ ಕೊಟ್ಟುಕೊಂಡಿದ್ದಾರೆ. ಸಿಎಸ್‌ಆರ್‌ ನಿಧಿಯನ್ನು ವರ್ಗಾವಣೆಗೆ ಸಂಜ್ಞೆಯಾಗಿ ಬಳಸುತ್ತಿದ್ದು, ಗುತ್ತಿಗೆದಾರರನ್ನು ಕೇಳಿದರೆ ಎಲ್ಲ ಸತ್ಯಗಳೂ ಹೊರಬರುತ್ತವೆ. ಈ ರೀತಿಯ ಸಾಧನೆಗಳನ್ನು ಬಿಟ್ಟರೆ ನಾಡಿನ ಬದುಕಿನ ಜತೆ ಚೆಲ್ಲಾಟ ಆಡುತ್ತಿದೆ. ರಾಜ್ಯದ ನೀರಾವರಿ ಯೋಜನೆಗಳ ಗತಿ ಏನಾಗಿದೆ? ರಸ್ತೆಗಳ ಪರಿಸ್ಥಿತಿ ಏನಾಗಿದೆ? ಮಳೆಯಿಂದಾಗಿ ಮನೆಗಳು ಕುಸಿದು ಬೀಳುತ್ತಿವೆ. ಬಹು ಅಂತಸ್ತಿನ ಕಟ್ಟಡಗಳು ಸೋರುತ್ತಿವೆ, ಮದ್ಯದ ಬಾಟಲಿ ಬಿದ್ದಿವೆ. ವಾಸಕ್ಕೆ ಯೋಗ್ಯವಾಗಿಲ್ಲ. ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. 8 ಪ್ರಮುಖ ಇಲಾಖೆಗಳಲ್ಲಿ 35,471 ಕಡತಗಳು ವಿಲೇವಾರಿಯಾಗದೆ ಉಳಿದಿವೆ. ಒಟ್ಟಾರೆ 365 ಮೌಲ್ಯಯುತ ದಿನಗಳನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದರು.

ಈಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬೆಂಗಳೂರು ನಗರ ಪ್ರದಕ್ಷಿಣೆ ಮಾಡುತ್ತಿದ್ದಾರೆ. ಕಳೆದ ಬಾರಿಯೂ ಪ್ರದಕ್ಷಿಣೆ ಮಾಡಿದ್ದರು. ಎಷ್ಟು ಸಮಸ್ಯೆಗಳಿಗೆ ಪರಿಹಾರ ಕೊಟ್ಟರು? ವಿಶ್ವಾದ್ಯಂತ ವಿದ್ಯುತ್‌ ಸಂಚಲನ ಮೂಡಿಸಿದ ಪೆನ್‌ಡ್ರೈವ್‌ ಪ್ರಕರಣದಲ್ಲಿ ಏನು ಕ್ರಮ ಕೈಗೊಂಡಿದ್ದಾರೆ? ಈ ಮಾಹಿತಿಯನ್ನೂ ಸಿಎಂ ಸಿದ್ದರಾಮಯ್ಯ ಸಾಧನೆ ಎಂದು ಹೇಳಿಕೊಳ್ಳಬೇಕಿತ್ತು. ಈ ಸರಕಾರ ರಾಜ್ಯದ ಜನರ ತೆರಿಗೆಯನ್ನು ಯಾವ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದು ಗೊತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next