Advertisement

ಸ್ಕೋಲಿಯೋಸಿಸ್‌ ಎಂದರೇನು?

06:00 AM Dec 17, 2017 | |

ಸ್ಕೋಲಿಯೋಸಿಸ್‌ ಅಥವಾ ಗೂನುಬೆನ್ನು ಅಂದರೆ ಬೆನ್ನೆಲುಬು ಅಸಹಜವಾಗಿ ಒಂದು ಪಕ್ಕಕ್ಕೆ ಬಾಗುವುದು. ಈ ರೀತಿ ಬೆನ್ನೆಲುಬು ಪಕ್ಕಕ್ಕೆ ಬಾಗಿದಾಗ ಬೆನ್ನಿನ ಹಿಂಭಾಗದ ಆ ಭಾಗವು ಕಾಣಿಸುತ್ತದೆ. ಸುಮಾರು 2-3% ನಷ್ಟು ಹದಿಹರೆಯದವರನ್ನು ಅವರ ಬೆಳವಣಿಗೆಯ ಅಂತಿಮ ಹಂತದಲ್ಲಿ ಸ್ಕೋಲಿಯೋಸಿಸ್‌ ಬಾಧಿಸುತ್ತದೆ. ಬೆನ್ನು ಸಾಧಾರಣ ರೀತಿಯಲ್ಲಿ ವಕ್ರವಾದರೆ ಅಥವಾ ತಿರುಚಿಕೊಂಡರೆ ಸಾಮಾನ್ಯವಾಗಿ ಅದರಿಂದ ಯಾವ ತೊಂದರೆಯೂ ಆಗದು. ಪ್ರತಿ 1,000 ಹದಿಹರೆಯದವರಲ್ಲಿ 3-5 ಜನರ ವಕ್ರತೆಯ ತೊಂದರೆಗೆ ಚಿಕಿತ್ಸೆಯ ಅಗತ್ಯವಿರುತ್ತದೆ. ಸ್ಕೋಲಿಯೋಸಿಸ್‌ಗೆ  ಚಿಕಿತ್ಸೆ ನೀಡದೆ ಹಾಗೆಯೇ ಬಿಟ್ಟರೆ, ಸಮಸ್ಯೆ ಗಂಭೀರವಾಗಬಹುದು. ವ್ಯಕ್ತಿಯ ಚಲನವಲನಕ್ಕೆ ತೊಂದರೆಯಾಗಬಹುದು, ಬೆನ್ನು ನೋವು ಬರಬಹುದು, ಬೆನ್ನಿನ ವಕ್ರತೆಯ ಕಾರಣದಿಂದಾಗಿ ಸಂಧಿವಾತ ಹಾಗೂ ಕಶೇರುಖಂಡದ ಕಾಯಿಲೆಗಳು ಉಂಟಾಗಬಹುದು. ಕೆಲವು ರೀತಿಯ ಗಂಭೀರ ಸಂದರ್ಭಗಳಲ್ಲಿ ಶ್ವಾಸಕೋಶ ಹಾಗೂ ಹೃದಯದ ಚಟುವಟಿಕೆಗಳಿಗೂ ಸಹ ತೊಂದರೆಯಾಗಬಹುದು.

Advertisement

ಸ್ಕೋಲಿಯೋಸಿಸ್‌ ಅನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದೇ ಈ ಕಾಯಿಲೆಯು ಬೆಳೆಯದಂತೆ ತಡೆಗಟ್ಟಬಹುದಾದ ಉಪಾಯವಾಗಿದೆ. ರೂಢಿಯ ದೈಹಿಕ ಪರೀಕ್ಷೆಯ ಭಾಗವಾಗಿಯೂ ಸಹ ಸ್ಕೋಲಿಯೋಸಿಸ್‌ ಅನ್ನು ಪತ್ತೆ ಮಾಡಬಹುದು. ಮಕ್ಕಳ ನಿಯಮಿತ ಆರೋಗ್ಯ ತಪಾಸಣಾ ಸಂದರ್ಭದಲ್ಲಿ ಅವರ ಪ್ರಾಥಮಿಕ ಆರೋಗ್ಯ ಆರೈಕೆದಾರರ ಮೂಲಕ ಅವರಿಗೆ ಸ್ಕೋಲಿಯೋಸಿಸ್‌ ಅಪಾಯವಿದೆಯೇ ಎಂದು ತಪಾಸಣೆ ಮಾಡಲು ಸೂಚನೆಯನ್ನು ನೀಡಲಾಗುತ್ತದೆ.


ಲಕ್ಷಣಗಳೇನು?
– ಒಂದು ಭುಜವು ಇನ್ನೊಂದು ಭುಜಕ್ಕಿಂತ ತುಸು ಎತ್ತರಕ್ಕಿರುವುದು.
– ಒಂದು ಭುಜದ ಪಾರ್ಶ್ವವು ಮತ್ತೂಂದಕ್ಕಿಂತ ಎತ್ತರದಲ್ಲಿರುವುದು ಅಥವಾ ಎದ್ದು ಕಾಣಬಹುದು.
– ಕೈಗಳು ಬದಿಗಳಲ್ಲಿ ಸಡಿಲವಾಗಿ ಜೋತುಬೀಳಬಹುದು, ದೇಹದ ಒಂದು ಬದಿಯ ಕೈ ಹಾಗೂ ದೇಹದ ನಡುವೆ ಬಹಳ ಅಂತರವಿರಬಹುದು.
– ಒಂದು ಬದಿಯ ಸೊಂಟವು ಇನ್ನೊಂದು ಬದಿಯ ಸೊಂಟಕ್ಕಿಂತ ಎತ್ತರಕ್ಕಿರಬಹುದು ಅಥವಾ ಎದ್ದು ಕಾಣಬಹುದು.
– ತಲೆಯು ಪೆಲ್ವಿಸ್‌ ಕೇಂದ್ರದಲ್ಲಿರದಿರುವುದು
– ರೋಗಿಯನ್ನು ಹಿಂಭಾಗದಿಂದ ಪರೀಕ್ಷೆ ಮಾಡುವಾಗ ಮುಂದಕ್ಕೆ ಬಾಗಲು ಹೇಳಿದರೆ, ಬೆನ್ನು ಮೂಳೆಯು ನೇರವಾಗಿರುವಷ್ಟು ಹೊತ್ತು ಬೆನ್ನಿನ ಒಂದು ಬದಿಯು ಇನ್ನೊಂದಕ್ಕಿಂತ ಎತ್ತರವಿರುವಂತೆ ಕಾಣುತ್ತದೆ.

ಕಾರಣಗಳೇನು?
– 80-85% ಪ್ರಕರಣಗಳಲ್ಲಿ, ಸ್ಕೋಲಿಯೋಸಿಸ್‌ಗೆ ನಿಖರ ಕಾರಣಗಳು ಏನೆಂಬುದು ಪತ್ತೆಯಾಗುವುದಿಲ್ಲ. ಈ ಸ್ಥಿತಿಗೆ ಈಡಿಯೋಪ್ಯಾಥಿಕ್‌ ಸ್ಕೋಲಿಯೋಸಿಸ್‌ ಎಂದು ಹೆಸರು.
– ಜನ್ಮಜಾತ ಊನಗಳ ಕಾರಣದಿಂದಲೂ, ಹೆಳವತನದ ಕಾರಣದಿಂದಲೂ ಅಥವಾ ಆಘಾತಗಳ ಕಾರಣದಿಂದಲೂ ಸ್ಕೋಲಿಯೋಸಿಸ್‌ ಉಂಟಾಗಬಹುದು. ವಂಶಪಾರಂಪರ್ಯವಾಗಿಯೂ ಕಾಣಿಸಿಕೊಳ್ಳುವ ಈ ಕಾಯಿಲೆಯು, ಹೆಣ್ಣು ಮಕ್ಕಳಲ್ಲಿ ಹೆಚ್ಚು ಕಂಡುಬರುತ್ತದೆ. 
– ಹದಿಹರೆಯದವರಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಈ ಕಾಯಿಲೆಯು ಅವರ ಬೆಳವಣಿಗೆಯಲ್ಲಿ ಪ್ರಧಾನವಾಗಿರುವ ಕೊನೆಯ ಹಂತದಲ್ಲಿಯೇ ಕಾಣಿಸಿಕೊಳ್ಳುವುದು ಹೆಚ್ಚು.

ತಪಾಸಣೆ ಹೇಗೆ?
– ಸ್ಕೋಲಿಯೋಸಿಸ್‌ ಲಕ್ಷಣಗಳು ಗೋಚರಿಸಿದರೆ, ದೈಹಿಕ ಪರೀಕ್ಷೆಯ ಸಂದರ್ಭದಲ್ಲಿ ವೀಕ್ಷಣೆ (ಗಮನಿಸುವಿಕೆ) ಅಥವಾ ಸ್ಕೋಲಿಯೋಮೀಟರ್‌ನ ಉಪಯೋಗದಿಂದ ಈ ಕಾಯಿಲೆಯ ಸಂದೇಹಾಸ್ಪದ ಇರುವಿಕೆ ಪತ್ತೆಯಾಗಬಹುದು. ಸ್ಕೋಲಿಯೋಮೀಟರ್‌ ಎಂಬುದು ಎಷ್ಟರ ಮಟ್ಟಿಗೆ ಬೆನ್ನೆಲುಬು ವಕ್ರವಾಗಿದೆ ಎಂದು ಅಂದಾಜು ಮಾಡುವ ಒಂದು ಸಾಧನ. 
– ಬೆನ್ನೆಲುಬು ಪಕ್ಕಕ್ಕೆ ಬಾಗಿರುವ ಪ್ರಮಾಣವನ್ನು ಆಧರಿಸಿಕೊಂಡು, ವೈದ್ಯರು ಬೆನ್ನಿನ ಎಕ್ಸ್‌-ರೇ ತೆಗೆಯಲು ಸೂಚಿಸಬಹುದು. ಸ್ಕೋಲಿಯೋಸಿಸ್‌ ರಿಸರ್ಚ್‌ ಸೊಸೈಟಿಯ ವಿವರಣೆಯ ಪ್ರಕಾರ ಸ್ಕೋಲಿಯೋಸಿಸ್‌ ಅಂದರೆ ಬೆನ್ನೆಲುಬು 10 ಡಿಗ್ರಿ ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಾಗಿರುವಂತೆ ಎಕ್ಸ್‌-ರೇಯಲ್ಲಿ ಗೋಚರಿಸುವುದು.

ಚಿಕಿತ್ಸೆ ಹೇಗೆ?
– ಸ್ಕೋಲಿಯೋಸಿಸ್‌ಗೆ ಕೊಡಬಹುದಾದ ಚಿಕಿತ್ಸೆಗಳು ಅಂದರೆ ಗಮನಿಸುವುದು  ಮತ್ತು ಬೆನ್ನಿನ ವಕ್ರತೆ ಹೆಚ್ಚುತ್ತಿಲ್ಲ ಅನ್ನುವುದನ್ನು ಖಚಿತಪಡಿಸಿಕೊಳ್ಳಲು, ಪ್ರತಿ 4-6 ತಿಂಗಳಿಗೆ ಮತ್ತೆ ಪರೀಕ್ಷೆ ಹಾಗೂ ಗಮನಿಸುವಿಕೆಯನ್ನು ಪುನರಾವರ್ತಿಸುವುದು.
– 25-40 ಡಿಗ್ರಿಗಳಷ್ಟು ಬಾಗಿರುವ ಬೆನ್ನಿನ ವಕ್ರತೆಯನ್ನು ಸರಿಪಡಿಸಲು ಅಥವಾ ಆಧಾರ ನೀಡಲು ಬ್ರೇಸಿಂಗ್‌ ಅನ್ನು ಉಪಯೋಗಿಸಬಹುದು. ಬೆನ್ನು 40 ಡಿಗ್ರಿಗಿಂತಲೂ ಹೆಚ್ಚು ಬಾಗಿದ್ದರೆ ಹಾಗೂ ಬ್ರೇಸಿಂಗ್‌ನಿಂದ ಬೆನ್ನಿನ ವಕ್ರತೆಯು ಹೆಚ್ಚುವುದನ್ನು ನಿಧಾನಗೊಳಿಸುವಲ್ಲಿ ಬ್ರೇಸಿಂಗ್‌ ವಿಫ‌ಲವಾದರೆ, ಆಗ ಬೆನ್ನಿನ ವಕ್ರತೆಯನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ಅಗತ್ಯ ಎನಿಸಬಹುದು.
– ನಿಮ್ಮ ಮಗು ಹಾಗೂ ಸ್ಕೋಲಿಯೋಸಿಸ್‌ ಬಗ್ಗೆ ನಿಮಗೇನಾದರೂ ಕಳವಳ ಹಾಗೂ ಸಂದೇಹಗಳು ಇದ್ದರೆ, ಅಥವಾ ಕಳೆದ ವರ್ಷಗಳಲ್ಲಿ ನಿಮ್ಮ ಮಗುವಿನ ದೈಹಿಕ ಪರೀಕ್ಷೆಯನ್ನು ಮಾಡಿಸಿಲ್ಲವಾಗಿದ್ದರೆ, ತ್ವರಿತವಾಗಿ ಈ ಬಗ್ಗೆ ನಿಮ್ಮ ವೈದ್ಯರ ಬಳಿ ಒಂದು ದೈಹಿಕ ಪರೀಕ್ಷೆಯನ್ನು ಮಾಡಿಸಿಕೊಳ್ಳಿ ಎಂಬುದು ನಮ್ಮ ಸಲಹೆ.

Advertisement

– ಡಾ| ಈಶ್ವರ ಕೀರ್ತಿ
ಬೆನ್ನುಹುರಿ ತಜ್ಞರು, ಕೆ.ಎಂ.ಸಿ. ಆಸ್ಪತ್ರೆ,
ಡಾ| ಅಂಬೇಡ್ಕರ್‌ವೃತ್ತ, ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next